ಬಳ್ಳಾರಿ: ಕಾಂಗ್ರೆಸ್ ಪಕ್ಷವು ಬಳ್ಳಾರಿ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಸಂಡೂರು ಶಾಸಕ ಈ. ತುಕಾರಾಮ್ ಅವರಿಗೆ ನೀಡಲು ನಿರ್ಧರಿಸಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಈ ಹಿಂದೆ 7 ಮಂದಿಯ (ಸಚಿವ ಬಿ. ನಾಗೇಂದ್ರ, ವೆಂಕಟೇಶ್ ಪ್ರಸಾದ್, ವಿ.ಎಸ್ ಉಗ್ರಪ್ಪ, ಚೈತನ್ಯಾ(ಸೌಪರ್ಣಿಕಾ) ತುಕಾರಾಂ, ಸಚಿವ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ, ಮೊಳಕಾಲ್ಮೂರು ಶಾಸಕ ಎನ್.ವೈ ಗೋಪಾಲಕೃಷ್ಣ, ಗುಜ್ಜಲ್ ನಾಗರಾಜ್) ಹೆಸರು ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಗೆ (ಸಿಇಸಿ) ಈ. ತುಕಾರಾಮ್, ವಿ.ಎಸ್ ಉಗ್ರಪ್ಪ, ವೆಂಕಟೇಶ್ ಪ್ರಸಾದ್ ಹೆಸರುಗಳು ಮಾತ್ರ ಶಿಫಾರಸುಗೊಂಡಿದ್ದವು.
ಈ. ತುಕಾರಾಮ್ ಅವರು ತಮ್ಮ ಪುತ್ರಿಗೆ ಟಿಕೆಟ್ ಕೇಳಿದ್ದರಾದರೂ, ಪಕ್ಷದ ನಾಯಕರು ಅದಕ್ಕೆ ಒಪ್ಪಿರಲಿಲ್ಲ. ನೀವೇ ನಿಲ್ಲಿ ಎಂದು ಅವರಿಗೆ ಸೂಚಿಸಿದ್ದರು. ಇದಕ್ಕೆ ತುಕಾರಾಮ್ ನಿರಾಕರಿಸಿದ್ದರಾದರೂ, ಈಗ ಪಕ್ಷದ ನಾಯಕರು ಅವರನ್ನು ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಸಿದ್ದಾರೆ ಎನ್ನಲಾಗಿದೆ.
ಟಿಕೆಟ್ ಖಚಿತವಾದ ಹಿನ್ನೆಲೆಯಲ್ಲಿ ಬಳ್ಳಾರಿ – ವಿಜಯನಗರ ಜಿಲ್ಲೆಯ ಸಚಿವರು, ಶಾಸಕರು ಮತ್ತು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿಯಾಗಿದ್ದರು ಎನ್ನಲಾಗಿದ್ದು, ಚುನಾವಣೆ ಸಂಬಂಧ ಚರ್ಚೆ ನಡೆಸಿದರು ಎಂದು ಗೊತ್ತಾಗಿದೆ.
‘ನಾಲ್ಕು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆ ಆಗಿರುವ ಮಾಜಿ ಸಚಿವರೂ ಆಗಿರುವ ಈ. ತುಕಾರಾಮ್ ಅವರಿಗೆ ಮುಂದೆ ಉತ್ತಮ ರಾಜಕೀಯ ಭವಿಷ್ಯ ಇದೆ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು‘ ಎಂದು ಮೂಲಗಳು ತಿಳಿಸಿವೆ.