ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ: ತರೂರ್‌ ವಿಶ್ವಾಸ

Last Updated 9 ಏಪ್ರಿಲ್ 2023, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸರಗೊಂಡಿರುವ ರಾಜ್ಯದ ಜನರು ‌ಕಾಂಗ್ರೆಸ್ ಕಡೆ ಒಲವು ತೋರುತ್ತಿದ್ದಾರೆ. ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ನಾನು ಎರಡು ದಿನಗಳಿಂದ ರಾಜ್ಯದಲ್ಲಿದ್ದು, ಯುವಮತದಾರರ ಜತೆ ಮಾತುಕತೆ ನಡೆಸಿದ್ದೇನೆ. ಶಿಕ್ಷಕರ ಜತೆಯಲ್ಲೂ ಚರ್ಚೆ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರವನ್ನು ಜನರು ಬಯಸುತ್ತಿರುವುದು ಗೊತ್ತಾಗಿದೆ’ ಎಂದರು.

‘ಬೆಂಗಳೂರು ಅತಿ ಹೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿತ್ತು. ಆದರೆ, ಮೂರ್ನಾಲ್ಕು ವರ್ಷಗಳಲ್ಲಿ ಬಂಡವಾಳ ಹೂಡಿಕೆ ಬೇರೆ ರಾಜ್ಯಗಳ ಪಾಲಾಗುತ್ತಿವೆ. ಇದು ದುರಾಡಳಿತಕ್ಕೆ ಸಾಕ್ಷಿ. ರಾಜ್ಯದಲ್ಲಿ ಬದಲಾವಣೆ ಅಗತ್ಯವಾಗಿದ್ದು, ಈ ಬಾರಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಆದರೆ, ಬಿಜೆಪಿಯ ಆಪರೇಷನ್ ಕಮಲ ಎಂಬ ಕೆಟ್ಟ ಸಂಪ್ರದಾಯಕ್ಕೆ ಅವಕಾಶ ಕೊಡಬಾರದು’ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಮುಖ್ಯಮಂತ್ರಿ ಆಗುವರೇ ಎಂದು ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮೊದಲು ಮುಖ್ಯಮಂತ್ರಿ ಘೋಷಿಸುವ ಸಂಪ್ರದಾಯವಿಲ್ಲ. ಮೊದಲು ಚುನಾವಣೆಯಲ್ಲಿ ಗೆಲ್ಲಬೇಕು, ನಂತರ ಈ ವಿಚಾರವಾಗಿ ಚರ್ಚೆ ಮಾಡಬಹುದು’ ಎಂದರು.

ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಶಾಸಕರ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ತರೂರ್‌, ‘ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಲ್ಲಿ ಐವರು ಶಾಸಕರು, ಇಬ್ಬರು ಪರಿಷತ್‌ ಸದಸ್ಯರು, 11 ಮಾಜಿ ಶಾಸಕರು, ನಾಲ್ವರು ಮಾಜಿ ಪರಿಷತ್‌ ಸದಸ್ಯರು, ಒಬ್ಬ ಮಾಜಿ ಸಂಸದರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT