ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ ‘ಕೈ’ ಅಭ್ಯರ್ಥಿ ಕೃಷ್ಣಮೂರ್ತಿ ಜೊತೆ ಸುದ್ದಿಗೋಷ್ಠಿ: ಬಾಲರಾಜ್ ಗೈರು

Last Updated 14 ಏಪ್ರಿಲ್ 2023, 9:27 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಎ.ಆರ್.ಕೃಷ್ಣಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದಕ್ಕೆ ಮುನಿಸಿಕೊಂಡಿದ್ದ ಇನ್ನಿಬ್ಬರು ಆಕಾಂಕ್ಷಿಗಳಾದ ಎಸ್.ಜಯಣ್ಣ ಹಾಗೂ ಎಸ್.ಬಾಲರಾಜ್ ಅವರನ್ನು ಮನವೊಲಿಸುವ ಯತ್ನವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಸಲಹೆಯ ಮೇರೆಗೆ ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಜಿ.ಎನ್. ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪಿ.ಮರಿಸ್ವಾಮಿ ಸೇರಿದಂತೆ ಮುಖಂಡರು ಸುದ್ದಿಗೋಷ್ಠಿ ಶುಕ್ರವಾರ ಸುದ್ದಿಗೋಷ್ಠಿ‌ ನಡೆಸಿದರು. ಆದರೆ, ಎಸ್.ಬಾಲರಾಜ್ ಗೋಷ್ಠಿಗೆ ಬರಲಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ‌ ಮಾಡುವುದಕ್ಕಾಗಿ ಬೆಂಗಳೂರಿಗೆ ಹೋಗಿದ್ದಾರೆ ಎಂದು ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಹೇಳಿದರೆ, 'ಖಾಸಗಿ ಕೆಲಸದ ಕಾರಣಕ್ಕೆ ಅವರು ಬಂದಿಲ್ಲ. ಮುಂದೆ ನಮ್ಮ ಜೊತೆ ಸೇರಿಕೊಳ್ಳುತ್ತಾರೆ' ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಹೇಳಿದರು.

ಮೈಸೂರಿನಲ್ಲಿ ಗುರುವಾರ ಸಂಜೆ ಆಕಾಂಕ್ಷಿಗಳಾಗಿದ್ದ ಎಸ್.ಜಯಣ್ಣ, ಎಸ್.ಬಾಲರಾಜ್, ಮುಖಂಡ ಜಿ.ಎನ್.ನಂಜುಂಡಸ್ವಾಮಿ ಅವರನ್ನು ಕರೆದು ಮಾತನಾಡಿದ್ದ ಸಿದ್ದರಾಮಯ್ಯ, ಅವರ ಮನವೊಲಿಸುವ ಯತ್ನ ಮಾಡಿದ್ದರು. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕೃಷ್ಣಮೂರ್ತಿ ಪರವಾಗಿ ಕೆಲಸ ಮಾಡುವಂತೆ ಸೂಚಿಸಿದ್ದರು.

'ಸಿದ್ದರಾಮಯ್ಯ ಜೊತೆ ‌ಮಾತುಕತೆಯ ನಂತರ ಜಯಣ್ಣ, ಕೃಷ್ಣಮೂರ್ತಿ ಅವರ ಪರ ಪ್ರಚಾರ ನಡೆಸಲು ಒಪ್ಪಿದರು. ಬಾಲರಾಜ್ ಅವರು ಸಮಾಧಾನಗೊಂಡಿಲ್ಲ. ಅದಕ್ಕೆ ಪತ್ರಿಕಾಗೋಷ್ಠಿಗೆ ಗೈರಾಗಿದ್ದಾರೆ' ಎಂದು ಮೂಲಗಳು ತಿಳಿಸಿವೆ.

ತಪ್ಪು ತಿದ್ದಿಕೊಳ್ಳಲಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಜಯಣ್ಣ, ' ಟಿಕೆಟ್ ಘೋಷಿಸುವ ಮೊದಲು ವರಿಷ್ಠರು ನಮ್ಮ ಜೊತೆ ಮಾತನಾಡಬೇಕಿತ್ತು ಎಂಬ ಬೇಸರ ಇತ್ತು. ಗುರುವಾರ ಸಿದ್ದರಾಮಯ್ಯ ಕರೆದು ಮಾತನಾಡಿದ್ದಾರೆ. ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. ಅವರು ನನಗೆ ಭರವಸೆಗಳನ್ನು ನೀಡಿದ್ದಾರೆ. ನಾನು ಯಾವತ್ತೂ ಪಕ್ಷಕ್ಕೆ ನಿಷ್ಠನಾದವನು. ನಾಯಕತ್ವವನ್ನು‌ ಮೀರಿ ಹೋಗಿಲ್ಲ. ನಾನು ಕಾಯಾ ವಾಚಾ ಮನಸಾ ಕೃಷ್ಣಮೂರ್ತಿ ಅವರ ಪರವಾಗಿ ಕೆಲಸ ಮಾಡುತ್ತೇನೆ. ಆದರೆ, ಕೃಷ್ಣಮೂರ್ತಿಯವರು ಕೂಡ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಆರು ಬಾರಿ ಸೋಲಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ಅದನ್ನು ಸರಿ ಪಡಿಸಿ ಚುನಾವಣೆಯಲ್ಲಿ ಗೆಲ್ಲಲು ಶ್ರಮಿಸಬೇಕು' ಎಂದು ಹೇಳಿದರು.

ಮತಭಿಕ್ಷೆ ನೀಡಿ: ಅಭ್ಯರ್ಥಿ ಕೃಷ್ಣಮೂರ್ತಿ ಮಾತನಾಡಿ, 'ಪಕ್ಷದ ವರಿಷ್ಠರು ನನಗೆ ಈ ಬಾರಿ ಅವಕಾಶ ನೀಡಿದ್ದಾರೆ. ಎರಡು ಬಾರಿ ಶಾಸಕನಾಗಿ ಒಂದು ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ‌ ಕೆಲಸ‌ಮಾಡಿದ್ದೇನೆ. 2004ರಲ್ಲಿ ಒಂದು ಮತದಿಂದ ಸೋತಿದ್ದೇನೆ. ಅದರ ನೋವು ನನಗೆ ಗೊತ್ತು. ಈ ಬಾರಿ ಜನರ ಸೇವೆ ಮಾಡಲು ನಾನು ಕ್ಷೇತ್ರದ ಮತದಾರರಲ್ಲಿ ಮತ ಭಿಕ್ಷೆ ಕೇಳುತ್ತಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT