ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲುವ ಭಯದಿಂದಾಗಿ ಬಿಜೆಪಿಯಿಂದ ಹಣ ಹಂಚಿಕೆ; ಜಗದೀಶ ಶೆಟ್ಟರ್

Published 11 ಮೇ 2023, 9:39 IST
Last Updated 11 ಮೇ 2023, 9:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಜೆಪಿಯವರು ಸೋಲುವ ಭಯದಿಂದ ಹು-ಧಾ ಸೆಂಟ್ರಲ್‌ ಕ್ಷೇತ್ರದ ಕೊಳೆಗೇರಿಗಳಲ್ಲಿ ₹500–₹1,000ವರೆಗೆ ಹಣ ಹಂಚಿದ್ದಾರೆ. ನಾನು ಬಿಜೆಪಿಯಲ್ಲಿದ್ದಾಗ ಎಂದಿಗೂ ಈ ರೀತಿ ಮಾಡಿಲ್ಲ’ ಎಂದು ಹು–ಧಾ ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರ ಮೇಲಿನ ನಂಬಿಕೆ ಇಟ್ಟು, ನಾನು ಮಾಡಿದ ಕೆಲಸಗಳ ಆಧಾರದ ಮೇಲೆ ಮತ ಕೇಳಿದ್ದೇನೆ. ಯಾವುದೇ ಆಮಿಷ ಒಡ್ಡಿಲ್ಲ. ನಾನು ಯಾವ ಚುನಾವಣೆಗಳಲ್ಲಿಯೂ ಮತದಾರರಿಗೆ ಹಣ ಹಂಚುವ ಕೆಲಸ ಮಾಡಿಲ್ಲ. ಅತ್ಯಂತ ಕಡಿಮೆ ಹಣ ಖರ್ಚು ಮಾಡಿ ಚುನಾವಣೆ ಎದುರಿಸಿದ್ದೇನೆ’ ಎಂದರು.

‘ಮತದಾನೋತ್ತರ ಸಮೀಕ್ಷೆಯಲ್ಲಿ ಸೆಂಟ್ರಲ್‌ ಕ್ಷೇತ್ರದಲ್ಲಿ ನಾನು ಜಯ ಸಾಧಿಸುತ್ತೇನೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೆ, ರಾಜ್ಯದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮುಂದಿನ ಲೋಕಸಭಾ ಚುನಾವಣೆ ಮತ್ತು ದೇಶದ ಇತರ ರಾಜ್ಯಗಳ ಮೇಲೆಯೂ ಇದರ ಪರಿಣಾಮ ಉಂಟಾಗಲಿದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ನ ಸಂಘಟಿತ ಪ್ರಯತ್ನ, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಿದ್ದರಿಂದ ಇಂದು ಕಾಂಗ್ರೆಸ್‌ಗೆ ಬಹುಮತ ಬರುವ ಹಂತಕ್ಕೆ ಬಂದಿದೆ. ಅದರ ಜತೆಗೆ ಬಿಜೆಪಿಯವರು ಲಿಂಗಾಯತರಿಗೆ ಅನ್ಯಾಯ ಮಾಡಿದ್ದಾರೆ ಎಂಬ ಅಂಶವೂ ಪರಿಣಾಮ ಬೀರಿದೆ’ ಎಂದರು.

‘ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ಇರುವ ವಾರ್ಡ್‌ಗಳಲ್ಲಿ ಶೇ 70ಕ್ಕಿಂತ ಹೆಚ್ಚು ಮತದಾನವಾಗಿದೆ. ಹೊಸ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹು–ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಈ ಹಿಂದಿನ ಚುನಾವಣೆಗಿಂತ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮುಸ್ಲಿಮರ ಮೀಸಲಾತಿ ತೆಗೆದು ಲಿಂಗಾಯತರು, ಒಕ್ಕಲಿಗರಿಗೆ ನೀಡಿರುವುದು, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಜಾರಿಯಾಗಲಿಲ್ಲ. ಕೇವಲ ಚುನಾವಣೆ ದೃಷ್ಟಿಯಿಂದ ಹೇಳಿಕೆ ನೀಡಿ, ಜನರಿಗೆ ಮೋಸ ಮಾಡಿದ್ದಾರೆ. ಇದು ಜನರಿಗೆ ಅರ್ಥ ಆಗಿದೆ’ ಎಂದು ಹೇಳಿದರು.

‘ಹು–ಧಾದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ಗೆ ಆರು ತಿಂಗಳ ಹಿಂದೆ ಮುಖ್ಯಮಂತ್ರಿ ಚಾಲನೆ ನೀಡಿದರು. ಈವರೆಗೂ ಭೂಮಿ ನೀಡಿಲ್ಲ. ಹೀಗಾದರೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಯಾವಾಗ ಆಗುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದರು.

‘ಮಹದಾಯಿ ವಿಷಯದಲ್ಲಿ ಗೋವಾಗೆ ಹೆದರಿ ಕುಳಿತುಕೊಳ್ಳುವುದು ಬೇಡ. ಸ್ಪಷ್ಟ ನಿರ್ಧಾರ ತೆಗೆದುಕೊಂಡು ಟೆಂಡರ್‌ ಕರೆಯಿರಿ ಎಂದು ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಹೇಳಿದ್ದೆ. ಈವರೆಗೂ ಏಕೆ ಟೆಂಡರ್ ಕರೆದಿಲ್ಲ ಎಂದು ಪ್ರಶ್ನಿಸಿದರು.

‘ನನ್ನ ಹಿರಿತನವನ್ನು ನೋಡಿ ಸಚಿವ ಸ್ಥಾನ ನೀಡಿದ್ದರು. ಕಾಡಿ ಬೇಡಿ, ಸಚಿವ ಸ್ಥಾನ ಪಡೆದಿರಲಿಲ್ಲ. ನನಗೆ ಪ್ರಲ್ಹಾದ ಜೋಶಿ ಅವರೇ ಸಚಿವ ಸ್ಥಾನ ಕೊಡಿಸಿದ್ದರೆ ಅಂದೇ ಹೇಳಬೇಕಿತ್ತು. ಜೋಶಿ ಅವರು ಸುಳ್ಳು ಹೇಳುವುದರಲ್ಲಿ ಎಕ್ಸ್‌ಪರ್ಟ್‌ ಆಗಿದ್ದಾರೆ’ ಎಂದು ತಿರುಗೇಟು ನೀಡಿದರು.

‘ನಾನು ಬಿ.ಎಲ್.ಸಂತೋಷ್‌ ಅವರ ಬಗ್ಗೆ ಮಾತನಾಡಿದ್ದೇನೆ. ಬ್ರಾಹ್ಮಣ ಸಮುದಾಯವನ್ನು ಎಲ್ಲಿಯೂ ಟೀಕೆ ಮಾಡಿಲ್ಲ. ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಮತ ಹಾಕಿದ್ದಾರೆ. ಇದು ಒಳ ಹೊಡೆತ’ ಎಂದರು.

‘ನನಗಾದ ಅನ್ಯಾಯವನ್ನು ಸವಾಲಾಗಿ ಸ್ವೀಕರಿಸಿ ಜನರ ಬಳಿಗೆ ಹೋಗಿದ್ದೇನೆ. ಯಾವ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಗೆದ್ದ ನಂತರ ಮನಸ್ಸಿಗೆ ಶಾಂತಿ ಸಿಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT