ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ? ಶನಿವಾರ ಪ್ರಮಾಣ ವಚನ, ಇಂದು ಶಾಸಕಾಂಗ ಪಕ್ಷದ ಸಭೆ

Published 18 ಮೇ 2023, 2:25 IST
Last Updated 18 ಮೇ 2023, 2:25 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಹೈಕಮಾಂಡ್‌ ಆಯ್ಕೆ ಮಾಡಿದ್ದು, ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಡಿ.ಕೆ ಶಿವಕುಮಾರ್‌ ಅವರು ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬುಧವಾರ ತಡರಾತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಜತೆಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಮಾತುಕತೆ ನಡೆಸಿ, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಂಡರು. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, ನಿರ್ಧಾರಕ್ಕೆ ಒಪ್ಪಿಗೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.

ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಗೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಅಧಿಕಾರ ನಡೆಸಲಿದ್ದಾರೆ. ನಂತರದ ಅವಧಿಗೆ ಡಿ.ಕೆ ಶಿವಕುಮಾರ್‌ ಮುಖ್ಯಮಂತ್ರಿಯಾಗಲಿದ್ದಾರೆ.

ಅಧಿಕಾರ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಒಮ್ಮತಕ್ಕೆ ಬರುವ ಸಲುವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಇಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಇಂದಿರಾ ಭವನದಲ್ಲಿ ಸಂಜೆ 7 ಗಂಟೆಗೆ ಸಭೆ ನಡೆಯುತ್ತಿದ್ದು, ನೂತನ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಸದರು ಹಾಜರಿರಬೇಕಾಗಿ ಸೂಚಿಸಿದ್ದಾರೆ.

ಎರಡೂವರೆ ವರ್ಷಗಳ ಬಳಿಕ ಅಧಿಕಾರ ಬಿಟ್ಟುಕೊಡುವ ವಾಗ್ದಾನವನ್ನು ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಡಬೇಕು ಎಂಬುದು ಡಿ.ಕೆ ಶಿವಕುಮಾರ್‌ ಅವರ ಷರತ್ತು ಎಂದು ಮೂಲಗಳು ಹೇಳಿವೆ.

ಈ ಸಭೆಯ ನಂತರ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಆಯ್ಕೆಯಾಗಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT