ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌- ಅಖಾಡದಲ್ಲೊಂದು ಸುತ್ತು| ಆದಿವಾಸಿಗಳ ಸಿಟ್ಟು–ಬಿಜೆಪಿಗೆ ಇಕ್ಕಟ್ಟು

ಮೂರು ಮಹತ್ವಾಕಾಂಕ್ಷಿ ಯೋಜನೆಗಳ ವಿರುದ್ಧ ತೀವ್ರ ಪ್ರತಿಭಟನೆ l ಕಾಂಗ್ರೆಸ್‌ಗೆ ಸಿಕ್ಕ ಪ್ರಮುಖ ಅಸ್ತ್ರ
Last Updated 28 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ (ಗುಜರಾತ್‌): ನದಿಗಳನ್ನು ಜೋಡಿಸುವ, ಹೆದ್ದಾರಿ ವಿಸ್ತರಿಸುವ ಹಾಗೂ ಉದ್ಯಮಿಗಳಿಗೆ ರತ್ನಗಂಬಳಿ ಹಾಸುವ ‘ಡಬಲ್‌ ಎಂಜಿನ್‌ ಸರ್ಕಾರ’ದ ಮಹತ್ವಾಕಾಂಕ್ಷಿ ಯೋಜನೆಗಳೇ ಬಿಜೆಪಿಗೆ ಗುಜರಾತ್‌ನಲ್ಲಿ ಸಂಕಟ ತಂದೊಡ್ಡಿದೆ. ಈ ಯೋಜನೆಗಳ ವಿರುದ್ಧ ಸಮರವನ್ನೇ ಸಾರಿರುವ ಆದಿವಾಸಿಗಳನ್ನು ಓಲೈಸಿ ಪಕ್ಷದ ಮತ ಬುಟ್ಟಿಗೆ ಹಾನಿಯಾಗದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಮಂಜುನಾಥ ಹೆಬ್ಬಾರ್‌
ಮಂಜುನಾಥ ಹೆಬ್ಬಾರ್‌

ಗುಜರಾತ್‌ನ ವಿಧಾನಸಭೆಯ 182 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳು ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ 27 ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲು ಕ್ಷೇತ್ರಗಳು. ಇತರ 13 ಕ್ಷೇತ್ರಗಳಲ್ಲೂ ಆದಿವಾಸಿಗಳು ನಿರ್ಣಾಯಕರು. ಈ ಕ್ಷೇತ್ರಗಳು ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. 2017ರ ಚುನಾವಣೆಯಲ್ಲಿ ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪ್ರಚಂಡ ಮೇಲುಗೈ ಸಾಧಿಸಿತ್ತು. ‘ಕೈ’ ಪಾಳಯ 15 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದರೆ, ಭಾರತೀಯ ಟ್ರೈಬಲ್‌ ಪಾರ್ಟಿ (ಬಿಟಿಪಿ) ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಬಿಜೆಪಿಗೆ ಗೆಲುವು ಸಿಕ್ಕಿದ್ದು 9 ಕ್ಷೇತ್ರಗಳಲ್ಲಿ. ಬಳಿಕ ಕಾಂಗ್ರೆಸ್‌ನ ಮೂವರು ಶಾಸಕರನ್ನು ಕಮಲ ಪಾಳಯವು ‘ಆಪರೇಷನ್‌’ ಮಾಡಿ ತನ್ನತ್ತ ಸೆಳೆದುಕೊಂಡಿತ್ತು. ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ, ಈ ಭಾಗದ ಹಲವು ಶಾಸಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ದಶಕಗಳಿಂದ ಈ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಸಾಂಪ್ರದಾಯಿಕ ಎದುರಾಳಿಗಳು. ಪಂಜಾಬ್‌ನ ಅಭೂತಪೂರ್ವ ಗೆಲುವಿನಿಂದ ಪುಳಕಿತಗೊಂಡಿರುವ ಆಮ್ ಆದ್ಮಿ ಪಕ್ಷವುಗುಜರಾತ್‌ನಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಮೀಸಲು ಕ್ಷೇತ್ರಗಳಲ್ಲಿ ಒಂದಷ್ಟು ಸ್ಥಾನಗಳನ್ನು ಗೆಲ್ಲುವ ಮೂಲಕ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ.

ಪ್ರಮುಖ ನಾಯಕರ ಪಕ್ಷಾಂತರದಿಂದ ಸೊರಗಿರುವ ಕಾಂಗ್ರೆಸ್‌ಗೆ ಈಗ ಮೂರು ಯೋಜನೆಗಳು ಪ್ರಮುಖ ‘ಅಸ್ತ್ರ’ವಾಗಿ ಸಿಕ್ಕಿದೆ. ಚುನಾವಣಾ ಸಮಯದಲ್ಲಿ ಈ ಯೋಜನೆಗಳನ್ನೇ ಪ್ರಮುಖವಾಗಿ ಪ್ರಸ್ತಾಪಿಸಿ ಆದಿವಾಸಿಗಳ ಮತ ಕೈತಪ್ಪದಂತೆ ಶತಾಯಗತಾಯ ಪ್ರಯತ್ನಿಸುತ್ತಿದೆ. ಆದಿವಾಸಿಗಳ ಮುನಿಸು ಕಡಿಮೆ ಮಾಡಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಚಾರ ಕಣದಲ್ಲಿ ಬೆವರು ಹರಿಸುತ್ತಿದ್ದಾರೆ.

ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ, ನರೇಂದ್ರ ಮೋದಿ ಅವರು ಮೊದಲ ರ‍್ಯಾಲಿ ನಡೆಸಿದ್ದುಬುಡಕಟ್ಟು ಜನರ ಪ್ರಾಬಲ್ಯದ ವಲಸಾಡ್ ಜಿಲ್ಲೆಯ ಕಪರಾಡಾ ತಾಲ್ಲೂಕಿನಲ್ಲೇ. ಬುಡಕಟ್ಟು ಜನರ ವಿಶ್ವಾಸವನ್ನು ಗಳಿಸುವ ಪ್ರಯತ್ನ ಇದಾಗಿತ್ತು.

ಕಳೆದ ವಾರ ಈ ಭಾಗದಲ್ಲಿ ಎಂಟು ರ‍್ಯಾಲಿಗಳಲ್ಲಿ ಭಾಗವಹಿಸಿ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಆದಿವಾಸಿಗಳಿಗೆ ಉನ್ನತ ಸ್ಥಾನ ನೀಡಿದ ಪಕ್ಷ ತಮ್ಮದು ಎಂಬ ಭಾವನಾತ್ಮಕ ಬಾಣವನ್ನು ಪ್ರಧಾನಿಯವರು ಬಿಟ್ಟಿದ್ದಾರೆ. ಜತೆಗೆ, ಹಿಂದುತ್ವದ ಕಾರ್ಡ್ ಪ್ರಯೋಗಿಸಿರುವ ಕಮಲ ಪಾಳಯ, ಪ್ರತಿ ಮನೆಗೆ ನಲ್ಲಿ ನೀರು ಹಾಗೂ ಹಲವು ಕಲ್ಯಾಣ ಯೋಜನೆಗಳನ್ನು ಪ್ರಕಟಿಸುವ ಮೂಲಕ ‘ಅಭಿವೃದ್ಧಿ ಮಾದರಿ’ಯ ಮೊರೆ ಹೋಗಿದೆ. ಈ ಭಾಗದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ.

ಪಾರ್–ತಾಪಿ–ನರ್ಮದಾ ನದಿಗಳ ಜೋಡಣೆ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆ. ಮುಖ್ಯಮಂತ್ರಿಯಾಗಿದ್ದಾಗಲೇ ಈ ಯೋಜನೆಯ ಕನಸು ಬಿತ್ತಿದ್ದರು.ಈ ಯೋಜನೆಗೆ ಅನುಮೋದನೆ ನೀಡಿದ್ದು 2010ರಲ್ಲಿ. ಮಹಾರಾಷ್ಟ್ರ ಹಾಗೂ ದಕ್ಷಿಣ ಗುಜರಾತ್‌ನಲ್ಲಿ ಹರಿಯುವ ಪಶ್ಚಿಮ ಘಟ್ಟಗಳ ನದಿಗಳ ಹೆಚ್ಚುವರಿ ನೀರನ್ನು ಬರಪೀಡಿತ ಸೌರಾಷ್ಟ್ರ ಹಾಗೂ ಕಚ್‌ ಪ್ರದೇಶಕ್ಕೆ ವರ್ಗಾಯಿಸುವ ಯೋಜನೆ ಇದಾಗಿದೆ. 395 ಕಿ.ಮೀ ಕಾಲುವೆ ಹಾಗೂ ಏಳು ಅಣೆಕಟ್ಟೆಗಳನ್ನು ನಿರ್ಮಾಣ ಮಾಡುವಈ ಯೋಜನೆಯ ಮೊತ್ತ ಸುಮಾರು ₹15 ಸಾವಿರ ಕೋಟಿ. ನದಿಗಳ ಜೋಡಣೆಯಿಂದ 61 ಗ್ರಾಮಗಳು ಮುಳುಗಡೆಯಾಗಲಿವೆ ಹಾಗೂ 2,610 ಕುಟುಂಬಗಳು ನೆಲೆ ಕಳೆದುಕೊಳ್ಳಲಿವೆ. ಫಲವತ್ತಾದ ಸಾವಿರಾರು ಹೆಕ್ಟೇರ್‌ ಜಮೀನನ್ನು ಈ ಯೋಜನೆ ಆಪೋಶನ ತೆಗೆದುಕೊಳ್ಳಲಿದೆ ಎಂಬುದು ಜನರ ಆತಂಕ.

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಈ ಯೋಜನೆಯನ್ನು ಪ್ರಕಟಿಸಿದ ಬೆನ್ನಲ್ಲೇ ಆದಿವಾಸಿಗಳು, ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದರು. ಸರಣಿ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಹೋರಾಟದ ಮುಂಚೂಣಿಯಲ್ಲಿ ನಿಂತಿದ್ದುಕಾಂಗ್ರೆಸ್‌ನ ಬುಡಕಟ್ಟು ಮೋರ್ಚಾದ ನಾಯಕ ಮತ್ತು ಶಾಸಕ ಅನಂತ್ ಪಟೇಲ್‌.

ಆದಿವಾಸಿಗಳ ಹೋರಾಟಕ್ಕೆ ಮಣಿದ ಗುಜರಾತ್‌ ಸರ್ಕಾರವು, ಯೋಜನೆಯನ್ನು ಕೈ ಬಿಡುವುದಾಗಿ ಈ ವರ್ಷದ ಮೇ ತಿಂಗಳಲ್ಲಿ ಪ್ರಕಟಿಸಿತ್ತು. ಸರ್ಕಾರ ಈ ಸಂಬಂಧ ಲಿಖಿತ ಭರವಸೆ ನೀಡಬೇಕು ಎಂದು ಬುಡಕಟ್ಟು ಜನರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಗುಜರಾತ್‌ ಸರ್ಕಾರ ಒಪ್ಪಿಲ್ಲ. ‘ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ವಿಧಾನಸಭಾ ಚುನಾವಣೆಯ ಬಳಿಕ ಸರ್ಕಾರ ನದಿ ಜೋಡಣೆಯನ್ನು ಮಾಡಿಯೇ ತೀರಲಿದೆ’ ಎಂದು ಆದಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ. ‘ನದಿಗಳ ಜೋಡಣೆಗಾಗಿ ನಮ್ಮ ಭೂಮಿಯನ್ನು ಕಸಿದುಕೊಳ್ಳಲಾಗುತ್ತದೆ. ಭೂಮಿ ಹೋದರೆ ಜೀವ ಹೋದಂತೆ. ಆಡಳಿತ ನಡೆಸುವವರ ಮಾತನ್ನು ನಂಬಲು ನಾವು ತಯಾರಿಲ್ಲ’ ಎನ್ನುತ್ತಾರೆ ಆದಿವಾಸಿ ಯುವಕ ಚಂದ್ರ ಗಮಿತ್‌.

ರಾಜ್ಯ ಹೆದ್ದಾರಿ ಯೋಜನೆಗಳ ವಿರುದ್ಧವೂ ಬುಡಕಟ್ಟು ಜನರು ಧ್ವನಿ ಎತ್ತಿದ್ದಾರೆ. ವಲಸಾಡ್‌ ಹಾಗೂ ನವಸಾರಿ ಜಿಲ್ಲೆಗಳ ಬುಡಕಟ್ಟು ಪ್ರದೇಶದಲ್ಲಿ ಸಾಗಲಿರುವ ಈ ಯೋಜನೆಗೆ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಸ್ವಾಧೀನ ಮಾಡಲು ಸರ್ಕಾರ ಉದ್ದೇಶಿಸಿತ್ತು. ಈ ಯೋಜನೆಯ ವಿರುದ್ಧ ಆದಿವಾಸಿ ಜನರು ದೊಡ್ಡ ಹೋರಾಟ ಮಾಡಿದ್ದರು. ಇದಕ್ಕೆ ಬೆಂಬಲ ನೀಡಿದ್ದು ಕಾಂಗ್ರೆಸ್‌. ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಗುಜರಾತ್‌ ಸರ್ಕಾರ ಹೇಳಿದೆ. ‘ಇದು ಚುನಾವಣಾ ನಾಟಕ ಅಷ್ಟೇ’ ಎಂದು ಈ ಭಾಗದ ಜನರು ದೂರುತ್ತಾರೆ.

ದೋಸ್ವಾಡ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವೇದಾಂತದ ‘ಜಿಂಕ್‌ ಸ್ಮೆಲ್ಟರ್‌ ಘಟಕ’ದ ವಿರುದ್ಧವೂ ಜನರು ಸಿಡಿದೆದ್ದಿದ್ದಾರೆ. ಪರಿಸರಕ್ಕೆ ಹಾನಿಕಾರಕವಾಗಿರುವ ಈ ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ‘ಈ ಯೋಜನೆಯಿಂದ ನದಿ ಕಲುಷಿತಗೊಳ್ಳಲಿದೆ. 2 ಲಕ್ಷ ಬುಡಕಟ್ಟು ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಚುನಾವಣಾ ವೇಳೆ ಈ ಯೋಜನೆ ತೆರೆಮರೆಗೆ ಸರಿದಿದೆ. ಜೀವ ಹೋದರೂ ಚಿಂತೆ ಇಲ್ಲ. ಯೋಜನೆ ಜಾರಿಗೆ ಬಿಡುವುದಿಲ್ಲ’ ಎಂದು ಬುಡಕಟ್ಟು ಮುಖಂಡ ಅಮರ್ ಸಿಂಗ್ ಚೌಧರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT