ಹುಬ್ಬಳ್ಳಿ: ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಆಗಬೇಕಾಗಿದ್ದ ಯೋಜನೆಯೊಂದು 47 ವರ್ಷಗಳಿಂದಲೂ ಕಡತಗಳಲ್ಲಿಯೇ ಉಸಿರಾಡುತ್ತಿದೆ. ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ನೂರಾರು ಗ್ರಾಮಗಳಲ್ಲಿ ಎರಡು ತಲೆಮಾರುಗಳೇ ದಾಟಿ ಹೋಗಿವೆ. ಆದರೂ ಮಹದಾಯಿಯ ನೀರು ಸಿಕ್ಕಿಯೇ ಇಲ್ಲ.
2002ರಲ್ಲಿ ಕಳಸಾ–ಬಂಡೂರಿ ನಾಲಾ ತಿರುವು ಯೋಜನೆಯ ಹೆಸರಿನಲ್ಲಿ ಆಗಿನ ನೀರಾವರಿ ಸಚಿವ ಎಚ್.ಕೆ. ಪಾಟೀಲರು ಈ ಯೋಜನೆಗೆ ಮರುಜೀವ ಕೊಟ್ಟರು. ಆ ಬಳಿಕ ಕುಡಿಯುವ ನೀರಿನ ಸಮಸ್ಯೆಯೊಂದು ರಾಜಕೀಯ ಪಕ್ಷಗಳಿಗೆ ಮತ ಗಳಿಕೆಯ ದಾಳವಾಗುತ್ತಲೇ ಇದೆ.
ನಾಲ್ಕು ಜಿಲ್ಲೆಗಳ ಒಂಬತ್ತು ತಾಲ್ಲೂಕುಗಳಿಗೆ ಕುಡಿಯುವ ನೀರಿನ ಯೋಜನೆಯಾಗಿ ಇದನ್ನು ಪರಿಚಯಿಸಿದ್ದು ಎಚ್.ಕೆ.ಪಾಟೀಲರು. ಕಳಸಾ–ಬಂಡೂರಿ ನಾಲೆಗಳಿಂದ ನದಿ ತಿರುವು ಯೋಜನೆ ಮಾಡಿ ಕುಡಿಯುವ ನೀರಿಗೆ ವ್ಯವಸ್ಥೆ ಆಗುವುದು ಎಂಬ ಪ್ರಸ್ತಾಪವಿರಿಸಿದ್ದರು. ಎಸ್.ಎಂ. ಕೃಷ್ಣ ಸರ್ಕಾರ ಇದಕ್ಕೆ ಒಪ್ಪಿಗೆಯನ್ನೂ ನೀಡಿತ್ತು. ಕೇಂದ್ರ ಸರ್ಕಾರವೂ ಅನುಮೋದನೆ ನೀಡಿತ್ತು.
ಆದರೆ ಪಶ್ಚಿಮಘಟ್ಟದ ನದಿಗಳ ತಿರುವು ಯೋಜನೆಯಿಂದಾಗಿ ಅಲ್ಲಿಯ ಸಸ್ಯ ಸಂಕುಲ, ಜೀವವೈವಿಧ್ಯಕ್ಕೆ ಧಕ್ಕೆ ಯಾಗುವುದು ಎಂದು ಗೋವಾ ಸರ್ಕಾರ ನದಿ ತಿರುವಿನ ಹರಿವಿಗೆ ಒಡ್ಡು ಕಟ್ಟಿತು. ಆಗ ಗೋವಾ ಸರ್ಕಾರದ ವಿರುದ್ಧ ಸಮರ ವೀರರಂತೆ ಕಂಕಣ ಕಟ್ಟಿದ ಜೆಡಿಯುನ ಸಿ.ಸಿ. ಪಾಟೀಲ ಮತ್ತು ಬಸವರಾಜ ಬೊಮ್ಮಾಯಿ ಹೋರಾಟವನ್ನು ತೀವ್ರಗೊಳಿಸಿದರು. 2004ರಲ್ಲಿ ಇವರು ಬಿಜೆಪಿ ಸೇರ್ಪಡೆಯಾದರು. ಅಲ್ಲಿಂದ ಇದನ್ನು ಜನಾಂದೋಲನವಾಗಿ ಬೆಳೆಸಿದರು. 69 ದಿನಗಳ ಸತತ ಹೋರಾಟವಾಯಿತು. ಪಾದಯಾತ್ರೆ ನಡೆಸಿದರು. ರಕ್ತದಲ್ಲಿ ಮನವಿಪತ್ರ ಬರೆದರು.
ಕುಡಿಯುವ ನೀರಿಗಾಗಿ ಬಂಡೆದ್ದ ಈ ನಾಯಕರು ಮತ್ತೆ ವಿಧಾನಸೌಧಕ್ಕೆ ಹೋದರು. ಹೋರಾಟ ತಣ್ಣಗಾಯಿತು. ಮತ್ತೊಂದು ಚುನಾವಣೆ ಬರುವವರೆಗೂ ಕಡತಗಳಲ್ಲಿಯೇ ಓಡಾಟವಾಗುತ್ತಿತ್ತು.
ಇಷ್ಟೇ ಅಲ್ಲ, 2007ರಲ್ಲಿ ಗೋವಾದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕರ್ನಾಟಕದವರಿಗೆ ಒಂದು ಹನಿ ನೀರೂ ಕೊಡೆವು ಎಂದು ಘೋಷಿಸಿದರು. ಅಲ್ಲಿ ಚುನಾವಣೆ ಇತ್ತು. ಆಗ ವೇಗ ಪಡೆದ ಯೋಜನೆಗೆ 2008ರಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ
ಎಚ್.ಡಿ. ಕುಮಾರಸ್ವಾಮಿ ಅಡಿಗಲ್ಲು ಹಾಕಿದರು. ಇದೂ ಯೋಜನೆಗೆ ವೇಗ ತರಲಿಲ್ಲ.
2010ರಲ್ಲಿ ಮತ್ತೆ ಜನಾಂದೋಲನ ರೂಪಿತ
ವಾಯಿತು. ಈ ಸಲ ರೈತ ಸಂಘದವರೂ ಕೈಜೋಡಿಸಿ ದರು. ಎಲ್ಲ ನಾಯಕರನ್ನೂ ತರಾಟೆಗೆ ತೆಗೆದುಕೊಳ್ಳುವಂಥ ಹೋರಾಟ ಆರಂಭವಾಯಿತು. 2013 ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿತು. ಈಗ ಎರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯ ಅವರೇ ಆಗ ಮುಖ್ಯಮಂತ್ರಿಯಾಗಿದ್ದರು.
ಟ್ರಿಬ್ಯುನಲ್‌ನಲ್ಲಿ ವಿಚಾರಣೆ, ವಾದ–ಪ್ರತಿವಾದ ಮುಗಿಯುವಾಗ ಕರ್ನಾಟಕದಲ್ಲಿ ಮತ್ತೆ 2018ರಲ್ಲಿ ಚುನಾವಣೆಯ ಕಾವು ಹೊತ್ತಿ ಉರಿಯುತ್ತಿತ್ತು. ನ್ಯಾಯಾಧೀ ಕರಣದ ತೀರ್ಪು ಅದೇ ವರ್ಷ ಹೊರ ಬಂದಿತು. ಆದರೆ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ ಮಾತ್ರ ಗೆಜೆಟ್ ನೋಟಿಫಿಕೇಷನ್ ಮಾಡಲು ಭರ್ತಿ ಎರಡು ವರ್ಷ ತೆಗೆದುಕೊಂಡಿತು.
ಕರ್ನಾಟಕ ರಾಜ್ಯ ರೈತಸೇನಾ ಅಧ್ಯಕ್ಷ, ಪ್ರಸ್ತುತ ಗದಗ ಜಿಲ್ಲೆ ನರಗುಂದ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರೈತ ನಾಯಕ ವೀರೇಶ ಸೊಬರದಮಠ, ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ನಾಯಕರು ಮಹದಾಯಿ ಕುರಿತು ಪ್ರಶ್ನಿಸುತ್ತಲೇ ಇದ್ದರು. ಈ ತೀರ್ಪು ಆಚೆ ಬಂದಾಗ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. 2019 ರಲ್ಲಿ ಆಪರೇಷನ್ ಕಮಲದ ನಂತರ ಅಧಿಕಾರವನ್ನು ಸುಭದ್ರಗೊಳಿಸುವಲ್ಲಿ ನಿರತವಾಯಿತು. ಇದೇ ಕಾವಿನಲ್ಲಿ 2020ರಲ್ಲಿ ಗೆಜೆಟ್ ನೋಟಿಫಿಕೇಷನ್ ಮಾಡಿದರು. ಗೆಲುವಿನ ನಂತರ ಮತ್ತೆ ಮಹದಾಯಿ ನೆನಪಿಗೆ ಬರಲಿಲ್ಲ. ತೀರ್ಪಿನ ಬಳಿಕ 24 ಗಂಟೆಗಳಲ್ಲಿ ನೀರು ಹರಿಸುವುದಾಗಿ ಅಶ್ವಾಸನೆ ನೀಡಿದ್ದ, ರಕ್ತದಲ್ಲಿ ಬರೆದು ಕೊಡುವೆನೆಂದು ಪ್ರಮಾಣ ಮಾಡಿದವರು ತಮ್ಮ ಮಾತು ಮರೆತರು.
2022ರ ಅಂತ್ಯದಲ್ಲಿ ಕಾಂಗ್ರೆಸ್ ಮತ್ತೆ ಮಹದಾಯಿ ವಿಷಯಕ್ಕಾಗಿ ಜಲ ಆಂದೋಲನ ರೂಪಿಸುವ ತಯಾರಿಯಲ್ಲಿದ್ದಾಗ, ಕಡತಗಳೆಲ್ಲ ದೂಳು ಕೊಡವಿಕೊಂಡವು. ಆದೇಶವಾಗಿ ಆರು ತಿಂಗಳವರೆಗೂ ಅರಣ್ಯ ಇಲಾಖೆಯ ಅನುಮತಿ ಪಡೆಯದ ಸರ್ಕಾರ, ಇದ್ದಕ್ಕಿದ್ದಂತೆ ಮೈಕೊಡವಿಕೊಂಡು ಎದ್ದಿತು.
‘ಡಬಲ್ ಎಂಜಿನ್’ ಸರ್ಕಾರದ ಚಮತ್ಕಾರ ಎಂದು ಬಿಂಬಿಸುತ್ತ ಡಿಪಿಆರ್ ಅನುಮೋದನೆ ಪಡೆಯಿತು. ಗೋವಾದಲ್ಲಿಯೂ ತಮ್ಮದೇ ಪಕ್ಷ, ಮಹಾರಾಷ್ಟ್ರದ ಆಡಳಿತದಲ್ಲಿಯೂ ಪಾಲುದಾರ ಪಕ್ಷವಾಗಿದೆ ಎಂಬುದು ಮರೆತಂತೆ ವರ್ತಿಸಿತು.
ಈ ಮಾತುಗಳಿಗೆ ಸಡ್ಡುಹೊಡೆದಂತೆ ತೊಡೆ ತಟ್ಟಿ, ಭುಜ ತಟ್ಟಿ ‘ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ನಾನು ಕಾರಜೋಳ ಅಲ್ಲ’ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತಮ್ಮ ಹೆಸರನ್ನೆ ಬದಲಿಸುವುದಾಗಿ ಸವಾಲು ಹಾಕಿದರು.
ನವಲಗುಂದದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ‘ನುಡಿದಂತೆ ನಡೆದಿದ್ದೇವೆ. ನೀರು ತರಲು ಅನುಮತಿ ಪಡೆದೇ ಮತ ಕೇಳುತ್ತಿದ್ದೇವೆ’ ಎನ್ನುತ್ತಿದ್ದಾರೆ. ಹೋರಾಟದಲ್ಲಿ ಪರಿಶ್ರಮಿಸಿದ ವಿಜಯ ಕುಲಕರ್ಣಿ ಸಹ ಇವರಿಗೆ ಬೆಂಬಲ ಸೂಚಿಸಿದ್ದಾರೆ.
ಅನುಮತಿ ನೀಡಿದ 72 ಗಂಟೆಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಪಣ ತೊಟ್ಟಿದ್ದ ಬಿಜೆಪಿ 2023ರ ಆರಂಭದಲ್ಲಿ ಯುವ ಜನೋತ್ಸವ, ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋಗಳಲ್ಲಿ ಮಿಂದೆದ್ದರು.
ನೀತಿ ಸಂಹಿತೆ ಘೋಷಿಸಲು ಅರ್ಧ ಗಂಟೆಗೆ ಮೊದಲು ಟೆಂಡರ್ ಕರೆಯಲಾಯಿತು. ಅಲ್ಲಿಗೆ ಮತ್ತೆ ಮಹದಾಯಿ ಜೀವತಳೆದಳು. ಇಲ್ಲಿ ಪಶ್ಚಿಮಘಟ್ಟ ಅರಣ್ಯ ವಲಯ, ಹುಲಿ ಸಂರಕ್ಷಿತ ಪ್ರದೇಶದ ಅನುಮತಿ ದೊರೆತಿಲ್ಲ ಎಂಬುದು ಕಾಂಗ್ರೆಸ್‌ನವರ ಆರೋಪ. ಶ್ವೇತಪತ್ರ ಹೊರಡಿಸಿ ಎನ್ನುವುದೂ ಅವರ ಆಗ್ರಹ. ಜಲ ಯೋಜನೆಯ ಅಶ್ವಾಸನೆಯ ಮೇಲೆ ಅಧಿಕಾರಕ್ಕೆ ಬರುವ ಇವರು ಜನರಿಗೆ ಸೂಕ್ತ ಮಾಹಿತಿ ನೀಡಲಿ ಎಂದು ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ, ಕಾಂಗ್ರೆಸ್ ನಾಯಕ ಎನ್.ಎಚ್. ಕೋನರೆಡ್ಡಿ ಅವರು ಒತ್ತಾಯಿಸುತ್ತಲೇ ಇದ್ದಾರೆ.
ಮತ್ತದೇ ಸಮಸ್ಯೆ, ಮತ್ತದೇ ವಾದ–ಪ್ರತಿವಾದ, ಅವರೇ ನಾಯಕರು ಅಧಿಕಾರದ ಮೋಹದೊಂದಿಗೆ.. ಮತದಾರರಲ್ಲಿ ಮೂರನೆಯ ತಲೆಮಾರು ಬಂದಿರುತ್ತದೆ. ತೀರದ ದಾಹದೊಂದಿಗೆ...
ಸತ್ಯಾಸತ್ಯತೆ ಏನು?
ಯೋಜನೆಯನ್ನು ಅನುಷ್ಠಾನಕ್ಕೆ ತರುವುದರಿಂದ ಹುಲಿ ವಲಯದ ಅಭಯಾರಣ್ಯಕ್ಕೆ ಸಾಕಷ್ಟು ಹಾನಿಯಾಗಲಿದೆ. 450 ಹೆಕ್ಟೇರ್‌ನಷ್ಟು ಕಾಡು ನಾಶವಾಗಲಿದೆ. ಪರಿಹಾರಾತ್ಮಕವಾಗಿ ಅಥಣಿಯಲ್ಲಿ ಕಾಡು ಬೆಳೆಸುವುದಾಗಿ ಹೇಳಿದೆ. ಆದರೆ ಪಶ್ಚಿಮಘಟ್ಟದ ಸೆರಗನ್ನು ಬಿಟ್ಟು ಶುಷ್ಕ ಭೂಮಿಯಲ್ಲಿ ಕಾಡು ಬೆಳೆಸುವುದು ಅವೈಜ್ಞಾನಿಕವಾಗಿದೆ.
ತರಾತುರಿಯಲ್ಲಿ ಅರಣ್ಯ ಸಮಿತಿಯ ಅನುಮತಿ ಪಡೆದು, ದಾಪುಗಾಲಿಟ್ಟಿರುವ ಈ ಯೋಜನೆಗೆ ₹957 ಕೋಟಿ ಮೊತ್ತದ ಟೆಂಡರ್ ಕೂಗಲು ₹6 ಕೋಟಿಯಷ್ಟು ಹಣ ಮೊದಲಿಗೆ ಕಟ್ಟಬೇಕಿದೆ. ಅರಣ್ಯ ಇಲಾಖೆಯಿಂದ ಅನುಮೋದನೆ ಇಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ ಆಗಿರುವುದರಿಂದ ಯಾರೂ ಇದಕ್ಕೆ ಮುಂದೆ ಬರುವುದಿಲ್ಲ ಎನ್ನುವುದು ಕಾಂಗ್ರೆಸ್ಸಿಗರ ಮತ್ತು ಹೋರಾಟಗಾರರ ಆರೋಪವಾಗಿದೆ.
ವೆಚ್ಚಗಳಲ್ಲಿ ಏರಿಳಿತ
2002ರಲ್ಲಿ ಮೊದಲ ಅನುಮೋದನೆ ದೊರೆತಾಗ ಯೋಜನಾ ವೆಚ್ಚ ₹93 ಕೋಟಿಯಾಗಿತ್ತು. ಆದರೆ ಆಗ ಗೋವಾ ಸರ್ಕಾರ ತಡೆ ಒಡ್ಡಿತು. ನಂತರ 2013ರಲ್ಲಿ ನ್ಯಾಯಮಂಡಳಿ ವಿಚಾರಣೆ ಕೈಗೆತ್ತಿಕೊಂಡಿತು. 2018ರಲ್ಲಿ ಗೆಜೆಟ್‌ನಲ್ಲಿ ಪ್ರಸ್ತಾಪವಾಯಿತು. 2019ರಲ್ಲಿ ಯೋಜನಾ ವೆಚ್ಚ ₹ 986 ಕೋಟಿಗೆ ಏರಿಕೆಯಾಗಿತ್ತು. 2020ರಲ್ಲಿ ಡಿಪಿಆರ್ ಅನುಮೋದನೆಗೆ ಕಳುಹಿಸಿದಾಗ ಈ ವೆಚ್ಚ ₹1,677 ಕೋಟಿಗೆ ಹೆಚ್ಚಳವಾಯಿತು.
ಇದೀಗ ಪರಿಷ್ಕೃತ ಯೋಜನೆಯನ್ನು ಕಳುಹಿಸಿದ ನಂತರ ಯೋಜನಾ ವೆಚ್ಚ ₹1,300 ಕೋಟಿಗೆ ಇಳಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.