ವೃದ್ಧೆ ಸಾವು: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

7
ಆನೆ ದಾಳಿ: ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಮಿತಿ ಸಚಿವರು ಬರಬೇಕು, ₹20 ಲಕ್ಷ ಪರಿಹಾರಕ್ಕೆ ಪಟ್ಟು

ವೃದ್ಧೆ ಸಾವು: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

Published:
Updated:
Prajavani

ಸಂತೇಮರಹಳ್ಳಿ: ಚಾಮರಾಜನಗರ ತಾಲ್ಲೂಕಿನ ಮಹಾಂತಾಳಪುರ ಗ್ರಾಮದಲ್ಲಿ ಶನಿವಾರ ಸಂ‍ಜೆ ಕಾಡಾನೆ ದಾಳಿಗೆ ಗ್ರಾಮದ ನಿವಾಸಿ ಶಿವಮ್ಮ (75) ಮೃತಪಟ್ಟಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.

ಬೆಳಿಗ್ಗೆ ವಿಷಯ ಗೊತ್ತಾದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರೂ ಅವರು ಬರುವುದು ತಡವಾಗಿದ್ದಕ್ಕೆ ಸ್ಥಳೀಯರು ಕೋಪಗೊಂಡು ಮಹಾಂತಾಳಪುರ ಗೇಟ್‌ ಬಳಿ ರಾಷ್ಟ್ರೀಯ ಹೆ‌ದ್ದಾರಿ 209ಕ್ಕೆ ಅಡ್ಡಲಾಗಿ ಮರದ ದಿಮ್ಮಿಗಳನ್ನು ಇಟ್ಟು ದಿಢೀರ್‌ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಪೊಲೀಸರು, ಪ್ರತಿಭಟನಾಕಾರರ ಮನವೊಲಿಸಿ ಮರದ ದಿಮ್ಮಿಗಳನ್ನು ತೆರವುಗಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆ ಬಳಿಕ ಶವದ ಬಳಿ ಪ್ರತಿಭಟನೆ ಆರಂಭಿಸಿದರು.

ಘಟನೆ ನಡೆದಿದ್ದು ಹೇಗೆ?: ಮೂರು ದಿನಗಳಿಂದ ಯಳಂದೂರು ಮತ್ತು ಸಂತೇಮರಹಳ್ಳಿ ಭಾಗದಲ್ಲಿ ಮೂರು ಆನೆಗಳು ಕಾಣಿಸಿಕೊಂಡಿದ್ದವು. ಅವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂದ ದಾರಿಯಲ್ಲೇ ವಾಪಸ್‌ ಕಳುಹಿಸಲು ಯತ್ನಿಸುತ್ತಿದ್ದರು. ಇದರ ಅರಿವು ಇಲ್ಲದ ಶಿವಮ್ಮ ಶನಿವಾರ ಮುಸ್ಸಂಜೆ ಬಹಿರ್ದೆಸೆಗಾಗಿ ಬಂದಿದ್ದಾಗ, ಆನೆಯ ತುಳಿತಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ.

ಭಾನುವಾರ ಬೆಳಿಗ್ಗೆ ಹಾಲು ತೆಗೆದುಕೊಂಡು ಹೋಗುವವರು ಶವವನ್ನು ನೋಡಿ ಊರಿನವರಿಗೆ ತಿಳಿಸಿದ್ದಾರೆ. ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಬಂದು ಪರಿಶೀಲಿಸಿದಾಗ ಮೃತಪಟ್ಟವರು ಶಿವಮ್ಮ ಎಂಬುದು ದೃಢಪಟ್ಟಿದೆ. 

ಅಧಿಕಾರಿಗಳಿಗೆ ತರಾಟೆ: ಸ್ಥಳಕ್ಕೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಡಾ.ಪಿ.ಶಂಕರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜು, ವಲಯ ಅರಣ್ಯಾಧಿಕಾರಿ ಮಹದೇವಯ್ಯ ಹಾಗೂ ಇತರೆ ಸಿಬ್ಬಂದಿ ಬಂದಾಗ ರೈತಸಂಘದ ಕಾರ್ಯಕರ್ತರು ಸೇರಿದಂತೆ ಪ್ರತಿಭಟನಾಕಾರರು ಸುತ್ತುವರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

‘ಕಾಡಲ್ಲಿರುವ ಆನೆಗಳು ನಾಡಿಗೆ ಬರಲು ಹೇಗೆ ಸಾಧ್ಯ?, ನಿಮ್ಮ ಉದಾಸೀನದಿಂದಲೇ ಈ ಘಟನೆ ನಡೆದಿದೆ. ಆನೆಗಳ ದಾಳಿಯಿಂದ ಈ ಭಾಗದ ರೈತರ ಫಸಲು ಹಾಳಾಗಿದೆ. ಮೃತಳ ಕುಟುಂಬಕ್ಕೆ ₹ 20 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕೊಡಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಂಕರ್‌, ‘ಈ ಘಟನೆ ಆಕಸ್ಮಿಕವಾಗಿ ನಡೆದಿದೆ. ಈ ಆನೆಗಳು ಬಿಆರ್‌ಟಿ ವನ್ಯಧಾಮದ್ದಲ್ಲ. ಇವು ಮಳವಳ್ಳಿ ಕಡಯಿಂದ ದಾರಿ ತಪ್ಪಿ ಬಂದಿವೆ. ಇಲಾಖೆಯ ವತಿಯಿಂದ ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಬಹುದು. ಉದ್ಯೋಗ ನೀಡುವುದಕ್ಕೆ ನಮ್ಮಲ್ಲಿ ಅವಕಾಶ ಇಲ್ಲ. ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗಾಗಿ ಪಟ್ಟು:  ಅರಣ್ಯ ಅಧಿಕಾರಿಗಳಲ್ಲದೆ, ಚಾಮರಾಜನಗರ ತಾಲ್ಲೂಕು ತಹಶೀಲ್ದಾರ್‌ ಪುರಂದರ್‌ ಅವರು ಕೂಡ ಸ್ಥಳಕ್ಕೆ ಬಂದು ಪ್ರತಿಭಟನೆ ನಡೆಸುತ್ತಿದ್ದವರ ಮನವೊಲಿಸಲು ಯತ್ನಿಸಿದರು. ಆದರೆ, ಗ್ರಾಮಸ್ಥರು ಇದಕ್ಕೆ ಕಿವಿಗೊಡಲಿಲ್ಲ.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಸ್ಥಳಕ್ಕೆ ಬರುವವರೆಗೂ ಶವವನ್ನು ಎತ್ತುವುದಿಲ್ಲ ಎಂದು ಪಟ್ಟು ಹಿಡಿದರು. 

ಸಂಸದ ಆರ್‌.ಧ್ರುವನಾರಾಯಣ ಅವರು ಸ್ಥಳಕ್ಕೆ ಭೇಟಿ ನೀಡಿ ಶಿವಮ್ಮ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗ್ರಾಮಸ್ಥರನ್ನು ಸಮಾಧಾನಗೊಳಿಸಿದರು. 

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್‌.ಬಾಲರಾಜು, ಬಿಜೆಪಿ ನಾಯಕಿ ನಾಗಶ್ರೀ, ರೈತ ಮುಖಂಡರಾದ ಚನ್ನಬಸಪ್ಪ, ಮಹದೇವಸ್ವಾಮಿ, ಸ್ಥಳೀಯ ಮುಖಂಡರಾದ ಕೆ.ಎಂ.ಮಹದೇವಸ್ವಾಮಿ, ಪ್ರಭುಸ್ವಾಮಿ, ಜಯಣ್ಣ, ಕುಮಾರ್, ಚಂದ್ರಪ್ಪ, ಜಯಶಂಕರ್, ಕೃಷ್ಣ, ಶಿವಣ್ಣ, ರಾಜು ಇದ್ದರು.

ಸ್ಥಳಕ್ಕೆ ಉಸ್ತುವಾರಿ ಸಚಿವರ ಭೇಟಿ, ಭರವಸೆ
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ರಾಮನಗರದ ಬಳಿಯ ರೆಸಾರ್ಟ್‌ನಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಅಲ್ಲಿಂದ ಹೊರಟು ಮಹಾಂತಾಳಪುರಕ್ಕೆ ಬಂದರು. ಅದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರೂ ಬಂದರು.

ಸಚಿವರು ಶಿವಮ್ಮ ಕುಟುಂಬದವರಿಗೆ ವೈಯಕ್ತಿಕ ಪರಿಹಾರ ನೀಡಿದರು. ಅಲ್ಲದೆ, ಸರ್ಕಾರದಿಂದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ತಾತ್ಕಾಲಿಕ ಕೆಲಸ ಕೊಡಿಸುವ ಭರವಸೆಯನ್ನು ನೀಡಿದರು.

ಜಿಲ್ಲೆಯಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸಚಿವರ ಭರವಸೆಯ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ನಿಲ್ಲಿಸಿ, ಶವ ಎತ್ತಲು ಅನುವು ಮಾಡಿದರು.

ಚಾಮರಾಜನಗರ ಬಳಿ ಬೀಡು ಬಿಟ್ಟ ಆನೆಗಳು
ಚಾಮರಾಜನಗರ:
ಯಳಂದೂರು ಮತ್ತು ಸಂತೇಮರಹಳ್ಳಿ ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ಮೂರು ಕಾಡಾನೆಗಳು ಸದ್ಯ ಚಾಮರಾಜನಗರ ತಾಲ್ಲೂಕಿನ ಮರಿಯಾಲ ಗ್ರಾಮದ ಸಮೀಪದ ಮಾಲೆಗೆರೆಯ ಬಳಿ ಬೀಡು ಬಿಟ್ಟಿದೆ.

ಕೆರೆಯ ಏರಿಯ ಪಕ್ಕದಲ್ಲಿರುವ ಜಾಲಿಮುಳ್ಳಿನ ಪೊದೆಗಳ ಒಳಗೆ ಭಾನುವಾರ ಬೆಳಿಗ್ಗೆಯಿಂದ ಸಂಜೆಯ ತನಕ ಇದ್ದವು. ರಾತ್ರಿ ಏಳು ಗಂಟೆಯ ನಂತರ ಅರಣ್ಯ ಸಿಬ್ಬಂದಿ ಅವುಗಳನ್ನು ಓಡಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಅವು ಇನ್ನೂ ಸ್ಥಳ ಬಿಟ್ಟು ಕದಲಿಲ್ಲ. 

ಸಂತೇಮರಹಳ್ಳಿ ಬಳಿ ಶನಿವಾರ ಕಂಡು ಬಂದಿದ್ದ ಆನೆಗಳನ್ನು ಸಿಬ್ಬಂದಿ ಓಡಿಸಿದ್ದರು. ಆದರೆ, ಅವು ಅಲ್ಲಿಂದ ಚಾಮರಾಜನಗರದತ್ತ ಹೊರಟಿದ್ದವು. ಶನಿವಾರ ರಾತ್ರಿಯೇ ಅವು ಮಾಲೆಗೆರೆಗೆ ಬಂದಿವೆ. ಸಮೀಪದ ಕೃಷಿ ಜಮೀನಿಗೂ ದಾಳಿ ಮಾಡಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !