ಕಾವೇರಿ ವನ್ಯಧಾಮದಲ್ಲಿ ಗುಂಡಿಟ್ಟು ಆನೆ ಹತ್ಯೆ, ದಂತ ಕಳವು

7
ಅಧಿಕಾರಿಗಳಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ?

ಕಾವೇರಿ ವನ್ಯಧಾಮದಲ್ಲಿ ಗುಂಡಿಟ್ಟು ಆನೆ ಹತ್ಯೆ, ದಂತ ಕಳವು

Published:
Updated:
Prajavani

ಚಾಮರಾಜನಗರ: ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ಸುಮಾರು 50 ವರ್ಷದ ಸಲಗವನ್ನು ನಾಡ ಬಂದೂಕಿನಿಂದ ಗುಂಡಿಕ್ಕಿ ಕೊಂದು, ಎರಡೂ ದಂತಗಳನ್ನು ಕಳವು ಮಾಡಲಾಗಿದೆ.

15 ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಫೆಬ್ರುವರಿ 4ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಇದರಿಂದಾಗಿ 2015ರಿಂದ ಇಲ್ಲಿಯವರೆಗೆ ಒಟ್ಟು ಐದು ಗಂಡಾನೆಗಳು ದಂತಕ್ಕಾಗಿ ಕಳ್ಳಬೇಟೆಗೆ ಬಲಿಯಾದಂತಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಹನೂರು ತಾಲ್ಲೂಕಿನ ಕೊತ್ತನೂರು ವನ್ಯಜೀವಿ ವಲಯದ ಚಿಕ್ಕಲ್ಲೂರು ಗಸ್ತಿನಲ್ಲಿ ಈ ದುಷ್ಕೃತ್ಯ ಎಸಗಲಾಗಿದೆ. ವೃತ್ತಿನಿರತ ಬೇಟೆಗಾರರೇ ದಂತಗಳಿಗಾಗಿ ಆನೆಯನ್ನು ಬೇಟೆಯಾಡಿರುವುದು ಸ್ಪಷ್ಟವಾಗಿದೆ.

ಆನೆಯ ದೇಹದಲ್ಲಿ ಗುಂಡು ಹೊಕ್ಕಿರುವ ಗುರುತುಗಳು ಕಂಡು ಬಂದಿವೆ. ಹತ್ಯೆ ಮಾಡಿದ ಬಳಿಕ ಆ್ಯಸಿಡ್‌ ಬಳಸಿ ಎರಡೂ ದಂತಗಳನ್ನು ಕೀಳಲಾಗಿದೆ. 

‘ಕೊತ್ತನೂರು ವಲಯದಲ್ಲಿ ಎರಡು ವಾರಗಳ ಹಿಂದೆ ಘಟನೆ ನಡೆದಿದೆ’ ಎಂದು ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ ಲಾಲ್‌ ಮೀನಾ ತಿಳಿಸಿದರು.

ಜಿಲ್ಲೆಯ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ಸಂದರ್ಭದಲ್ಲಿ ಕಾವೇರಿ ನದಿಯನ್ನು ದಾಟಿ ಕಾಡು ರಸ್ತೆಯಲ್ಲಿ ಬರುತ್ತಿದ್ದ ಭಕ್ತರ ಗುಂಪಿನಲ್ಲಿ ಬಂದಿದ್ದವರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯನ್ನು ಅರಣ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಮುಚ್ಚಿ ಹಾಕುವ ಯತ್ನ: ಘಟನೆ ನಡೆದು 15 ದಿನಗಳ ನಂತರ ಇದು ಗೊತ್ತಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  ಭಕ್ತರು ಸಂಜೆಯೊಳಗೆ ಕಾಡಿನಿಂದ ಹೊರಹೋಗುತ್ತಾರೆ. ಈ ವಿಷಯ ಗೊತ್ತಿದ್ದರೂ ತನಿಖೆಯ ದಿಕ್ಕು ತಪ್ಪಿಸಲು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ವನ್ಯಜೀವಿಪ್ರಿಯರು ಆರೋಪಿಸಿದ್ದಾರೆ.

ಸಹಜ ಸಾವು ಎಂದು ಆನೆಯ ಕಳೇಬರವನ್ನು ಸುಟ್ಟು ಹಾಕಲು ಕೆಳಹಂತದ ಅಧಿಕಾರಿಗಳು ಯತ್ನಿಸಿದ್ದರು. ಆದರೆ ಕೆಲ ವನ್ಯಜೀವಿ ಕಾರ್ಯಕರ್ತರ ಮನವಿಯ ಮೇರೆಗೆ ಹಿರಿಯ ಅಧಿಕಾರಿಗಳು ಲೋಹಶೋಧಕದಿಂದ ತನಿಖೆ ನಡೆಸಿದಾಗ ದೇಹದಲ್ಲಿ ಗುಂಡಿನ ತುಣುಕು ಪತ್ತೆಯಾದವು.

ಮರಗಳಿಗೂ ಬಿದ್ದಿತ್ತು ಕೊಡಲಿ

ಕಾವೇರಿ ವನ್ಯಜೀವಿ ವಲಯದಲ್ಲಿ ಕಳೆದ ವರ್ಷದ ಸೆಪ್ಟೆಂಬರ್‌ನ ಮೊದಲ ವಾರದಲ್ಲಿ ನಾಲ್ಕು ಕರಾಚಿ (ಕಮರಿ) ಮರಗಳನ್ನು ಕಡಿಯಲಾಗಿತ್ತು. ಈ ವಲ ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಆಗಿರುವ ಅಂಕರಾಜು ಅವರೇ ಮರ ಕಡಿಸಿ, ಇಲಾಖೆಯ ಜೀಪಿನಲ್ಲಿ ಸಾಗಿಸಿದ್ದರು ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಸುರೇಶ್‌ ಗೌಡ ಎಂಬುವವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ನೀಡಿದ್ದರು. ಇಲಾಖೆ ಮಟ್ಟದಲ್ಲಿ ತನಿಖೆಯೂ ನಡೆದಿತ್ತು.

ಘಟನೆ ಬಗ್ಗೆ ಕೊತ್ತನೂರು ವಲಯ ಅರಣ್ಯಾಧಿಕಾರಿ ಫರಾನ್‌ ವನ್ಯಧಾಮದ ಆರ್‌ಎಫ್‌ಒಗೆ ವರದಿ ನೀಡಿದ್ದರು. ‘ಅಂಕ ರಾಜು ಅವರೇ ಮರ ಕಡಿಸಿ, ಇಲಾಖೆ ವಾಹನದಲ್ಲಿಯೇ ಸಾಗಿಸಿದ್ದರು’ ಎಂದು ವರದಿಯಲ್ಲಿ ಹೇಳಲಾಗಿತ್ತು.

ಈ ಪ್ರಕರಣದ ನಂತರ ಅಂಕರಾಜು ಅವರು ಆರ್‌ಎಫ್‌ಒ ಫರಾನ್‌ ಅವರಿಗೆ ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಇದರಿಂದ ಬೇಸತ್ತ ಫರಾನ್‌ ಡಿಸೆಂಬರ್‌ ತಿಂಗಳ ಕೊನೆ
ಯಲ್ಲಿ ರಜೆ ಹಾಕಿ ತೆರಳಿದ್ದಾರೆ. ಆ ಬಳಿಕ ಕೊತ್ತನೂರು ವಲಯದ ಹೊಣೆಯನ್ನು ಪಕ್ಕದ ಹನೂರು ವಲಯ ಅರಣ್ಯಾಧಿಕಾರಿ ರಾಜಶೇಖರಪ್ಪ ಅವರಿಗೆ ನೀಡಲಾಗಿತ್ತು. ಈ ವಲಯದಲ್ಲೇ ಹತ್ಯೆ ನಡೆದಿದೆ.

Tags: 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !