ಸೇತುವೆಯಿಂದ ‘ಕಬ್ಬನ್‌’ ಮರಗಳಿಗೂ ಕುತ್ತು

ಸೋಮವಾರ, ಮಾರ್ಚ್ 25, 2019
21 °C
ಕಬ್ಬನ್‌ ಉದ್ಯಾನದ ಪಾರ್ಶ್ವಭಾಗದಲ್ಲಿ ಹಾದು ಹೋಗಲಿದೆ ಎಲಿವೇಟೆಡ್‌ ಕಾರಿಡಾರ್‌

ಸೇತುವೆಯಿಂದ ‘ಕಬ್ಬನ್‌’ ಮರಗಳಿಗೂ ಕುತ್ತು

Published:
Updated:
Prajavani

ಬೆಂಗಳೂರು: ಉತ್ತರ–ದಕ್ಷಿಣ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದ ನಗರದ ಕಬ್ಬನ್‌ ಉದ್ಯಾನದ ಬರೋಬ್ಬರಿ 120 ಮರಗಳಿಗೆ ಕೊಡಲಿ ಬೀಳಲಿದೆ. ಭಾರಿ ಪ್ರಮಾಣದ ಹಸಿರು ನಾಶವಾಗಲಿದ್ದು, ಎಂ.ಜಿ.ವೃತ್ತದ ಸೌಂದರ್ಯಕ್ಕೂ ಕುತ್ತು ಬರಲಿದೆ.

ಯೋಜನೆಯ ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ವರೆಗೂ ಕಾರಿಡಾರ್‌ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ. ಉದ್ಯಾನದ ಬಲ ಭಾಗದ ಮಿನ್ಸ್ಕ್ ಚೌಕದಿಂದ ಹಡ್ಸನ್‌ ವೃತ್ತದವರೆಗಿನ ಕಡೆಯ ಭಾಗ ಸೇತುವೆಗೆ ಬಳಕೆಯಾಗಲಿದೆ. ಇದರಿಂದ ದಟ್ಟವಾಗಿ ಬೆಳೆದು ನಿಂತು, ಹಸಿರಿನ ಮೇಲ್ಛಾವಣಿ ಸೃಷ್ಟಿಸಿ ಗಮನ ಸೆಳೆಯುತ್ತಿರುವ ಮರಗಳು ಇತಿಹಾಸದ ಪುಟ ಸೇರಲಿವೆ.

‘ಕ್ವೀನ್ಸ್‌ ರಸ್ತೆ, ಕಸ್ತೂರಬಾ ರಸ್ತೆ ಮತ್ತು ಉದ್ಯಾನದ ಒಂದು ಪಾರ್ಶ್ವದಲ್ಲಿ ಸೇತುವೆ ಹಾದು ಹೋಗಲಿದೆ. ಇದು ಕರ್ನಾಟಕ ಉದ್ಯಾನ, ಆಟದ ಮೈದಾನ ಮತ್ತು ಮುಕ್ತ ಜಾಗಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗುತ್ತದೆ’ ಎಂದು ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ನ (ಇಎಸ್‌ಜಿ) ಲಿಯೊ ಸಲ್ದಾನ ತಿಳಿಸಿದರು.

‘ಉದ್ಯಾನದ ಒಳಗಡೆ ಅದರ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯ
ಗಳನ್ನು ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಅದಕ್ಕಾಗಿ ಮೆಟ್ರೊ ಮಾರ್ಗ ನಿರ್ಮಾಣ ವೇಳೆ ಸುರಂಗ ಕೊರೆಯಲಾಗಿತ್ತು. ಇಷ್ಟೆಲ್ಲ ಗೊತ್ತಿದ್ದರೂ ಸರ್ಕಾರ ಉದ್ಯಾನದಗುಂಟ ಸೇತುವೆ ನಿರ್ಮಿಸಲು ಮುಂದಾಗಿದೆ’ ಎಂದು ಅವರು ಹೇಳಿದರು.

‘ಈ ಯೋಜನೆ ನಗರದ ಚಹರೆಯನ್ನು ನಾಶಪಡಿಸಲಿದೆ. ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಕುರಿತು ಸಲ್ಲಿಸಿರುವ ವರದಿಯಲ್ಲಿ ಮರಗಳ ನಾಶದ ಕುರಿತು ತಿಳಿಸಲಾಗಿದೆ. ಮರಗಳನ್ನು ಕಡೆಯುವುದು ಅನಿವಾರ್ಯ ಎಂದು ಹೇಳಲಾಗಿದೆ’ ಎಂದು ವಿವರಿಸಿದರು.

‘ಅರಣ್ಯ ಸಂರಕ್ಷಣಾ ಕಾಯ್ದೆ–1980ರ ಪರಿಹಾರ ಅರಣ್ಯೀಕರಣ ನೀತಿಯ ಪ್ರಕಾರ ಒಂದು ಮರ ಕಡಿದರೆ, ಅದಕ್ಕೆ ಪರಿಹಾರವಾಗಿ ನೂರು ಗಿಡ ನಡಬೇಕು. ಸಾಧ್ಯವಾದಲ್ಲಿ, ಮರಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು’ ಎಂದು ಹೇಳಿದರು.

‘ಬೆಂಗಳೂರು, ಹಸಿರಿನೊಂದಿಗೆ, ಅದರಲ್ಲಿಯೂ ಕಬ್ಬನ್‌ ಉದ್ಯಾನದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಶೀಘ್ರದಲ್ಲಿ ಉಪನಗರ ರೈಲು ಯೋಜನೆಯ ಕಾಮಗಾರಿ ಪ್ರಾರಂಭವಾಗಲಿದೆ. ಹೀಗಿರುವಾಗ ಉದ್ಯಾನವನ್ನು ಹಾಳು ಮಾಡಿ ಸೇತುವೆಯನ್ನು ನಿರ್ಮಿಸುವ ಅಗತ್ಯವೇನಿದೆ’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು (ಸಿಎಫ್‌ಬಿ) ಸಂಸ್ಥೆಯ ಶ್ರೀನಿವಾಸ್‌ ಅಲವಿಲ್ಲಿ ಪ್ರಶ್ನಿಸಿದರು.

‘ಮಾಲಿನ್ಯ ಹೇಗೆ ತಡೆಗಟ್ಟುತ್ತೀರಿ’

ರಸ್ತೆಬದಿ ಮರಗಳನ್ನು ಕಳೆದು ಕೊಂಡರೆ, ಮಾಲಿನ್ಯವನ್ನು ಹೇಗೆ ತಡೆಗಟ್ಟುತ್ತೀರಿ? ಯೋಜನೆ ಪರಿ ಣಾಮವನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಲಾಗಿದೆ. ಇದರಿಂದ ಎಂ.ಜಿ.ರಸ್ತೆ ಭೀಕರ ಪರಿಣಾಮವನ್ನು ಎದುರಿಸಲಿದೆ.

-ಶ್ರೀನಿವಾಸ್‌, ಬಸ್‌ ಪ್ರಯಾಣಿಕರ ವೇದಿಕೆ ಪ್ರತಿನಿಧಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !