ಎಲಿವೇಟೆಡ್‌ ಕಾರಿಡಾರ್‌: 1,130 ಕಟ್ಟಡಗಳಿಗೆ ಆಪತ್ತು?

ಬುಧವಾರ, ಮಾರ್ಚ್ 27, 2019
26 °C

ಎಲಿವೇಟೆಡ್‌ ಕಾರಿಡಾರ್‌: 1,130 ಕಟ್ಟಡಗಳಿಗೆ ಆಪತ್ತು?

Published:
Updated:

ಬೆಂಗಳೂರು: ನಗರದಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದ 3,821 ಮರಗಳಿಗೆ ಮಾತ್ರವಲ್ಲ, ಸುಮಾರು 1,130 ಕಟ್ಟಡಗಳಿಗೂ ಕುತ್ತು ಬರಲಿದೆ.

209 ವಸತಿ ಕಟ್ಟಡಗಳು, 576 ವಾಣಿಜ್ಯ ಉದ್ದೇಶದ ಕಟ್ಟಡಗಳು ಹಾಗೂ ವಸತಿ ಹಾಗೂ ವಾಣಿಜ್ಯ ಉದ್ದೇಶಗಳೆರಡಕ್ಕೂ ಬಳಕೆಯಾಗುತ್ತಿರುವ 21 ಕಟ್ಟಡಗಳು ಈ ಯೋಜನೆಯಿಂದಾಗಿ ನೆಲೆ ಕಳೆದುಕೊಳ್ಳಲಿವೆ. ಒಂಬತ್ತು ಸರ್ಕಾರಿ ಕಟ್ಟಡಗಳು, ಒಂದು ಆಸ್ಪತ್ರೆ, ಒಂದು ಸಭಾಂಗಣ ಸೇರಿದಂತೆ 13 ಸರ್ಕಾರಿ ಕಟ್ಟಡಗಳ ಅಸ್ತಿತ್ವಕ್ಕೂ ಧಕ್ಕೆ ಉಂಟಾಗಲಿದೆ. ಈ ಯೋಜನೆಯ ವಿಸ್ತೃತ ಕಾರ್ಯಸಾಧ್ಯತಾ ವರದಿಯಲ್ಲಿ (ಡಿಎಫ್‌ಆರ್‌) ಈ ಕುರಿತ ವಿವರಗಳಿವೆ. ಕಟ್ಟಡಗಳ ನಿಖರ ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಹೆಬ್ಬಾಳದ ಬ್ಯಾಪ್ಟಿಸ್ಟ್‌ ಆಸ್ಪತ್ರೆ ಬಳಿಯಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ ನಿರ್ಮಾಣಗೊಳ್ಳಲಿರುವ ಉತ್ತರ ದಕ್ಷಿಣ ಕಾರಿಡಾರ್ ಸಲುವಾಗಿ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳು ಸೇರಿದಂತೆ ಒಟ್ಟು 295 ಕಟ್ಟಡಗಳನ್ನು ಕೆಡವಬೇಕಾಗುತ್ತದೆ. ಆವರಣ ಗೋಡೆ, ಶೆಡ್‌ ಹಾಗೂ ಕೊಠಡಿಯಂತಹ 62 ರಚನೆಗಳನ್ನು ಕೆಡವಬೇಕಾಗುತ್ತದೆ.

ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಶಾಂತಿನಗರ ಬಸ್‌ ನಿಲ್ದಾಣದಿಂದ ಆಡುಗೋಡಿ ಮುಖ್ಯರಸ್ತೆವರೆಗಿನ ಪಥವು ಅತ್ಯಂತ ಕಗ್ಗಂಟಿನ ಪ್ರದೇಶವಾಗಿದೆ. ಇಲ್ಲಿ ಸುಮಾರು 155 ಕಟ್ಟಡಗಳನ್ನು ಕೆಡವಬೇಕಾಗುತ್ತದೆ. 

ಕೆ.ಆರ್‌.ಪುರ ಬಳಿಯ ಭಟ್ಟರಹಳ್ಳಿಯಿಂದ ಗೊರಗುಂಟೆಪಾಳ್ಯದವರೆಗೆ ನಿರ್ಮಾಣಗೊಳ್ಳಲಿರುವ ಪೂರ್ವ–ಪಶ್ಚಿಮ ಕಾರಿಡಾರ್‌–1ರ ಕಾಮಗಾರಿ ಸಲುವಾಗಿ 255 ಕಟ್ಟಡಗಳನ್ನು ಬೀಳಿಸಬೇಕಾಗುತ್ತದೆ. ಇವುಗಳಲ್ಲಿ ವಾಣಿಜ್ಯ ಕಟ್ಟಡಗಳ ಸಂಖ್ಯೆಯೇ (155) ಹೆಚ್ಚು. 42 ಸಣ್ಣ ಪುಟ್ಟ ರಚನೆಗಳೂ ನೆಲಕ್ಕುರುಳಲಿವೆ.

ವರ್ತೂರು ಕೋಡಿಯಿಂದ ದೀಪಾಂಜಲಿನಗರದವರೆಗೆ ನಿರ್ಮಾಣಗೊಳ್ಳುವ ಪೂರ್ವ–ಪಶ್ಚಿಮ ಕಾರಿಡಾರ್‌–2ರಲ್ಲಿ ಅತಿ ಹೆಚ್ಚು ಸಂಖ್ಯೆಯ ಕಟ್ಟಡಗಳಿಗೆ (543) ಹಾನಿ ಉಂಟಾಗಲಿದೆ. ಇವುಗಳಲ್ಲಿ 339 ವಾಣಿಜ್ಯ ಕಟ್ಟಡಗಳು. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆವರಣ ಗೋಡೆ ಹಾಗೂ ಸಣ್ಣ ಶೆಡ್‌ಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಸೇಂಟ್‌ ಜಾನ್ಸ್‌ ಆಸ್ಪತ್ರೆಯಿಂದ ಅಗರವರೆಗೆ ನಿರ್ಮಾಣಗೊಳ್ಳಲಿರುವ ಸಂಪರ್ಕ ಕಾರಿಡಾರ್‌–1ರಲ್ಲಿ ಎರಡು ಆವರಣಗೋಡೆಗಳನ್ನು ಮಾತ್ರ ಕೆಡವಬೇಕಾಗುತ್ತದೆ. ಇಲ್ಲಿ ಕಾಮಗಾರಿ ಸಲುವಾಗಿ ಯಾವುದೇ ಕಟ್ಟಡವನ್ನು ಕೆಡವಬೇಕಾಗಿಲ್ಲ.

ಹಲಸೂರಿನಿಂದ ಡಿಸೋಜ ವೃತ್ತದವರೆಗೆ ನಿರ್ಮಾಣಗೊಳ್ಳುವ ಸಂಪರ್ಕ ಕಾರಿಡಾರ್‌ –2ರ ಸಲುವಾಗಿ ನಾಲ್ಕು ವಸತಿ ಕಟ್ಟಡಗಳೂ ಸೇರಿದಂತೆ 13 ಕಟ್ಟಡಗಳು ದಾರಿ ಬಿಟ್ಟುಕೊಡಬೇಕಾಗುತ್ತದೆ.

ಕಲ್ಯಾಣ ನಗರದಿಂದ ಪೂರ್ವ ಪಶ್ಚಿಮ ಕಾರಿಡಾರ್–1ಕ್ಕೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ ಸಲುವಾಗಿ 52 ಕಟ್ಟಡಗಳು ನೆಲಕ್ಕುರುಳಲಿವೆ. ಈ ಪೈಕಿ 33 ವಾಣಿಜ್ಯ, 4 ವಸತಿ ಕಟ್ಟಡಗಳು ಸೇರಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 

ಯೋಜನೆಗೆ ಬೇಕು 57 ಹೆಕ್ಟೇರ್‌ ಜಾಗ: ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ಒಟ್ಟು 56.89 ಹೆಕ್ಟೇರ್‌ ಜಾಗ ಬಳಕೆ ಆಗಲಿದೆ.

ಮೊದಲ ಹಂತಕ್ಕೆ 12.93 ಹೆಕ್ಟೇರ್‌, ಎರಡನೇ ಹಂತಕ್ಕೆ 35.78 ಹೆಕ್ಟೇರ್‌, ಮೂರನೇ ಹಂತಕ್ಕೆ 0.57 ಹೆಕ್ಟೇರ್‌, ನಾಲ್ಕನೇ ಹಂತಕ್ಕೆ 4.10 ಹೆಕ್ಟೇರ್‌ ಹಾಗೂ ಐದನೇ ಹಂತಕ್ಕೆ 3.50 ಹೆಕ್ಟೇರ್‌ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.

 

12 ದೇವಸ್ಥಾನ, 3 ಮಸೀದಿ, 1 ಚರ್ಚ್‌ ಅಸ್ತಿತ್ವಕ್ಕೆ ಧಕ್ಕೆ 

ಈ ಯೋಜನೆಗೆ 12 ದೇವಸ್ಥಾನಗಳು, 10 ಪ್ರಾರ್ಥನಾ ಮಂದಿರಗಳು, ಮೂರು ಮಸೀದಿಗಳು ಹಾಗೂ ಒಂದು ಚರ್ಚ್‌, ಒಂದು ಕ್ರೈಸ್ತ ಪ್ರಾರ್ಥನಾ ಮಂದಿಗಳು ಸೇರಿದಂತೆ ಒಟ್ಟು 32 ಧಾರ್ಮಿಕ ಕಟ್ಟಡಗಳ ಅಸ್ತಿತ್ವಕ್ಕೆ ಈ ಯೋಜನೆಯಿಂದಾಗಿ ಧಕ್ಕೆ ಉಂಟಾಗಲಿದೆ. 

ಈ ಪೈಕಿ ಪೂರ್ವ–ಪಶ್ಚಿಮ ಕಾರಿಡಾರ್‌–2ರಲ್ಲಿ 14, ಪೂರ್ವ–ಪಶ್ಚಿಮ ಕಾರಿಡಾರ್‌–1ರಲ್ಲಿ ಎಂಟು ಹಾಗೂ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಆರು ಧಾರ್ಮಿಕ ಕಟ್ಟಡಗಳ ಜಾಗವನ್ನು ಈ ಯೋಜನೆಗಾಗಿ ಬಳಸಿಕೊಳ್ಳಬೇಕಾಗುತ್ತದೆ.

 

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !