ಶುಕ್ರವಾರ, ನವೆಂಬರ್ 15, 2019
20 °C
ಧಾನಮಂತ್ರಿ ಆವಾಸ್ ಯೋಜನೆಯ ಅಕ್ರಮಗಳ ತನಿಖೆಗೆ ಆದೇಶ

ಎಲಿವೇಟೆಡ್ ಕಾರಿಡಾರ್ ಟೆಂಡರ್ ರದ್ದು: ಪ್ರಧಾನಮಂತ್ರಿ ಆವಾಸ್ ಯೋಜನೆ ಅಕ್ರಮದ ತನಿಖೆ

Published:
Updated:

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಕೃಷಿ ಹೊಂಡ, ವೈಟ್ ಟಾಪಿಂಗ್ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಆದೇಶಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಗ ಎಲಿವೇಟೆಡ್ ಕಾರಿಡಾರ್‌ಗೆ ಕರೆದಿದ್ದ ಟೆಂಡರ್ ರದ್ದುಪಡಿಸಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದಾರೆ.

ಕಾರಿಡಾರ್: ಬೆಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆ ಪರಿಹರಿಸುವ ಸಲುವಾಗಿ ಎಲಿವೇಟೆಡ್ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಆಹ್ವಾನಿಸಿದ್ದ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆದೇಶಿಸಲಾಗಿದೆ. ವಾಸ್ತವ ಅಂದಾಜು ಮೊತ್ತದ ಕ್ರಿಯಾ ಯೋಜನೆಯನ್ನು ಹೊಸದಾಗಿ ತಯಾರಿಸುವಂತೆ ಮುಖ್ಯಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಮೂಲಕ ಈ ಯೋಜನೆ ಜಾರಿಗೊಳಿಸಲಾಗಿತ್ತು. 87.87 ಕಿ.ಮೀ ಉದ್ದದ ಕಾರಿಡಾರ್ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಿದ್ದು, ಯೋಜನೆಯ ಮೊದಲ ಹಂತದಲ್ಲಿ 21.54 ಕಿ.ಮೀ ನಿರ್ಮಿಸಲು ಯೋಜಿಸಲಾಗಿತ್ತು. ₹6855 ಕೋಟಿ ಮೊತ್ತದಲ್ಲಿ ಯೋಜನೆ ಅನುಷ್ಠಾನಗೊಳಿಸಲು, ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು.

ಈ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ಹಾಗೂ ಕ್ರಿಯಾ ಯೋಜನೆ ತಯಾರಿಸುವಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಲಾಗಿದೆ.

ಮನೆ ನೀಡುವಲ್ಲೂ ಅಕ್ರಮ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ‘ಎಲ್ಲರಿಗೂ ಸೂರು’ ಎಂಬ ಗುರಿಯೊಂದಿಗೆ ಆರಂಭಿಸಿದ ವಸತಿ ಯೋಜನೆಯಲ್ಲೂ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ತನಿಖೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಲಾಗಿದೆ.

2017–2018ನೇ ಸಾಲಿನಲ್ಲಿ 49,368 ಮನೆಗಳನ್ನು ₹2661 ಕೋಟಿ ವೆಚ್ಚದಲ್ಲಿ ನಿರ್ಮಿಸಲು 2017 ಸೆಪ್ಟೆಂಬರ್ 12ರಂದು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.

ಕಸ ಸಂಗ್ರಹ ಡಬ್ಬ: ಬೆಂಗಳೂರು ನಗರ ವ್ಯಾಪ್ತಿಯಲ್ಲಿ 2016–17ರಲ್ಲಿ ₹55.27 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದ ತ್ಯಾಜ್ಯ ಸಂಗ್ರಹ, ಸಾಗಣೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ತನಿಖೆಗೆ ಸೂಚಿಸಲಾಗಿದೆ.

ಆಯ್ದ 200 ಸ್ಥಳಗಳಲ್ಲಿ ತಲಾ ಎರಡರಂತೆ ಕಸ ಸಂಗ್ರಹ ಡಬ್ಬಗಳ ಅಳವಡಿಕೆ, ಈ ಡಬ್ಬಗಳಲ್ಲಿ ಸಂಗ್ರಹವಾದ ತ್ಯಾಜ್ಯ ಸಾಗಣೆ ಮಾಡಲು ಕ್ರೇನ್‌ಗಳನ್ನು ಒಳಗೊಂಡ 8 ಟ್ರಕ್ ಬಳಕೆ, ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಸಾಗಣೆ ಹಾಗೂ 60 ತಿಂಗಳ ನಿರ್ವಹಣೆ ಮಾಡುವ ಗುತ್ತಿಗೆ ನೀಡಲಾಗಿತ್ತು. 2017ರಲ್ಲಿ ಕಾರ್ಯಾದೇಶ ನೀಡಲಾಗಿತ್ತು.

ಈ ಯೋಜನೆ ಗಮನಿಸಿದರೆ ನಗರದ ಶೇ 10ರಷ್ಟು ಸ್ಥಳಗಳಲ್ಲೂ ಕಸ ಸಂಗ್ರಹ ಡಬ್ಬಗಳನ್ನು ಅಳವಡಿಸದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ತನಿಖೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಲಾಗಿದೆ.

ಪ್ರತಿಕ್ರಿಯಿಸಿ (+)