ಎಳ್ಳಮಾವಾಸ್ಯೆ ಸಂಭ್ರಮಕ್ಕೆ ಬರದ ಬರೆ

7
2018ರಲ್ಲಿ ಬೆಂಬಿಡದೆ ಕಾಡಿದ ಬರ; ನಿರಾಸೆಯಲ್ಲೂ ಸಂಪ್ರದಾಯ ಪಾಲನೆಗೆ ಸಿದ್ಧತೆ

ಎಳ್ಳಮಾವಾಸ್ಯೆ ಸಂಭ್ರಮಕ್ಕೆ ಬರದ ಬರೆ

Published:
Updated:

ವಿಜಯಪುರ: ‘ಎಳ್ಳಮಾವಾಸ್ಯೆ’ ರೈತ ಸಮುದಾಯದ ಸಂಭ್ರಮದ ಹಬ್ಬ. ಒಕ್ಕಲುತನ ನಡೆಸುವ ಪ್ರತಿ ರೈತ ಕುಟುಂಬವೂ ಶ್ರದ್ಧಾ ಭಕ್ತಿಯಿಂದ ಜಮೀನುಗಳಲ್ಲಿ ಈ ಹಬ್ಬ ಆಚರಿಸಲಿದೆ.

ಶನಿವಾರ (ಜ.5) ಎಳ್ಳಮಾವಾಸ್ಯೆ. ಆದರೆ ರೈತ ಸಮುದಾಯದಲ್ಲಿ ಸಂಭ್ರಮ ಗೋಚರಿಸುತ್ತಿಲ್ಲ. ತಲೆತಲಾಂತರಗಳಿಂದಲೂ ನಡೆಸಿಕೊಂಡು ಬಂದಿರುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಬಾರದು ಎಂಬ ಏಕೈಕ ಕಾರಣಕ್ಕೆ ಇದೀಗ ಆಚರಣೆಗೆ ಮುಂದಾಗಿದೆ.

2018 ಜಿಲ್ಲೆಯ ರೈತಾಪಿ ವರ್ಗದ ಪಾಲಿಗೆ ಪರಮ ಕಹಿ ನೀಡಿದ ವರ್ಷ. ಮುಂಗಾರು–ಹಿಂಗಾರು ಎರಡೂ ಬೆಳೆಗಳು ಕೈ ಸುಟ್ಟಿದ್ದು, ವರ್ಷದ ತುತ್ತು ಬಹುತೇಕ ರೈತ ಕುಟುಂಬಗಳಿಗೆ ಸಿಗದ ವರ್ಷವಾಗಿದೆ. ಎಲ್ಲಿಯೂ ಹಬ್ಬದ ಸಂಭ್ರಮ ಗೋಚರಿಸಿಲ್ಲ. ಸಂಪ್ರದಾಯದ ಆಚರಣೆಗೆ ಸಿದ್ಧತೆ ನಡೆದಿರುವ ಚಿತ್ರಣ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಕಂಡು ಬಂತು.

ಹಿಂದಿನ ವರ್ಷದುದ್ದಕ್ಕೂ ರೈತರ ಸರಣಿ ಸಂಕಷ್ಟ ತಪ್ಪದಾಯ್ತು. ನಿರೀಕ್ಷೆಗಳೆಲ್ಲ ಕಮರಿದವು. ನಿರಾಸೆಯ ಕಾರ್ಮೋಡದ ನಡುವೆಯೇ ಸಂಪ್ರದಾಯ ಪಾಲನೆಗೆ ಸಿದ್ಧತೆ ನಡೆದಿವೆ. ಹಿರಿಯರು ತಲೆಮಾರಿನಿಂದ ಪಾಲಿಸಿಕೊಂಡು ಬಂದ ಧಾರ್ಮಿಕ ಸಂಪ್ರದಾಯಕ್ಕೆ ಕೊಂಚವೂ ಚ್ಯುತಿಯಾಗದಂತೆ ಅನೂಚಾನಾಗಿ ಪಾಲಿಸುವ ನಿಟ್ಟಿನಲ್ಲಿ ರೈತ ಸಮೂಹ ಇದೀಗ ಎಳ್ಳಮಾವಾಸ್ಯೆ ಆಚರಣೆಗೆ ಮುಂದಾಗಿದೆ.

ಹೊಲದಲ್ಲಿ ಫಸಲಿಲ್ಲ: ಭೀಕರ ಬರದ ನಡುವೆಯೂ ತೊಗರಿ ರಾಶಿ ಮುಗಿದಿದೆ. ಕೊಯ್ಲಾದ ಉತ್ಪನ್ನಕ್ಕೆ ಬೆಲೆ ಸಿಗದಾಗಿದೆ. ಹಿಂಗಾರಿ ಜೋಳ, ಕಡಲೆ, ಗೋಧಿ ಮಳೆಯ ಅಭಾವದಿಂದ ಬಾಡಿವೆ. ರೈತರು ಯಾವ ಹೊಲಕ್ಕ ಚರಗ ಚೆಲ್ಲಬೇಕು ಎಂಬುದೇ ತೋಚದಂತಾಗಿದ್ದಾರೆ.

‘ವರ್ಷವಿಡಿ ಮಳೆ ಕೈಕೊಟ್ಟಿದ್ದರಿಂದ, ಕೆರೆ–ಕಟ್ಟೆ ತುಂಬದಿದ್ದರಿಂದ ಅಂತರ್ಜಲ ಬತ್ತಿದೆ. ಇದರ ಪರಿಣಾಮ ಒಂದು ಕೊಳವೆ ಬಾವಿ ನೀರೆತ್ತುವುದನ್ನು ಸಂಪೂರ್ಣ ನಿಲ್ಲಿಸಿತು. ವಿಧಿಯಿಲ್ಲದೆ ತೋಟದಲ್ಲಿದ್ದ ದ್ರಾಕ್ಷಿ ಬೆಳೆ ರಕ್ಷಿಸಿಕೊಳ್ಳಲು ಮತ್ತೊಂದು ಕೊಳವೆಬಾವಿ ಕೊರೆಸಿದೆ. ಇದರಲ್ಲಿ ಸಿಗುತ್ತಿರುವ ನೀರಿನ ಆಸರೆಯಿಂದ ದ್ರಾಕ್ಷಿ ಪಡ ಉಳಿಸಿಕೊಳ್ಳುತ್ತಿರುವೆ.

ಹೊಲದಲ್ಲಿ ಹಿಂಗಾರು ಬಿತ್ತನೆಯನ್ನೇ ನಡೆಸಲಿಲ್ಲ. ಖಾಲಿ ಖಾಲಿ ಹೊಲವಿದೆ. ಆದರೂ ಹಿರಿಯರ ಸಂಪ್ರದಾಯ ಪಾಲನೆಗಾಗಿ ಇಲ್ಲಿಯೇ ಪ್ರತಿ ವರ್ಷದಂತೆ ಎಳ್ಳಮಾವಾಸ್ಯೆ ಆಚರಿಸಲು ಕುಟುಂಬ ವರ್ಗ ಸಿದ್ಧತೆ ನಡೆಸಿಕೊಂಡಿದೆ’ ಎಂದು ಬಸವನಬಾಗೇವಾಡಿಯ ವೈದ್ಯ ಕರುಣಾಕರ ಚೌಧರಿ ತಿಳಿಸಿದರು.

‘ಹೊಲದಲ್ಲಿನ ಜೋಳ, ಕಡಲೆ ಕಮರಿವೆ. ಹುಡುಕಾಡಿದರೂ ಪೈರು ಸಿಗದು. ಇದು ನನ್ನೊಬ್ಬನ ಕತೆಯಲ್ಲ. ಜಿಲ್ಲೆಯ ರೈತ ಸಂಕುಲದ ವ್ಯಥೆ. ಭೀಕರ ಬರ ಎಂದು ನಮ್ಮ ಪೂರ್ವಿಕರು ಆಚರಿಸುತ್ತಿದ್ದ ಆಚರಣೆ ಕೈಬಿಡಲಾಗಲ್ಲ. ಎಂದಿನಂತೆಯೇ ಸಂಬಂಧಿಕರು, ಸ್ನೇಹಿತರಿಗೆ, ಆತ್ಮೀಯ ಒಡನಾಡಿಗಳಿಗೆ ಹೊಲಕ್ಕೆ ಊಟಕ್ಕೆ ಬರಲು ಆಹ್ವಾನ ನೀಡಿದ್ದೇನೆ.

ಶನಿವಾರ ಹೊಲದಲ್ಲಿ ಎಲ್ಲರೂ ಒಟ್ಟಾಗಿ ಕಲೆತು, ಬನ್ನಿ ಗಿಡ ಸೇರಿದಂತೆ, ಇದ್ದ ಬೆಳೆಗೆ ಪೂಜೆ ಸಲ್ಲಿಸಿ, ಎಳ್ಳಮಾವಾಸ್ಯೆ ಆಚರಿಸಲಿದ್ದೇವೆ’ ಎಂದು ಬಸವನಬಾಗೇವಾಡಿಯ ಮುದಕಪ್ಪ ಕುಳಗೇರಿ, ಕಣಕಾಲದ ರಾಜಶೇಖರ ಹುಲ್ಲೂರ ಹೇಳಿದರು.

*
ಬರದ ಸಂಕಷ್ಟದಲ್ಲೂ ತೊಗರಿ ಬೆಳೆದು ಕೊಯ್ಲು ನಡೆಸಿ ರಾಶಿ ಮಾಡಿದೆ. ಮಾರಲು ಬೆಲೆಯೇ ಇಲ್ಲ. ಸರ್ಕಾರದವ್ರೂ ಇನ್ನೂ ಕೊಳ್ತಿಲ್ಲ. ಕಿಸೆಯಲ್ಲಿ ರೊಕ್ಕವೇ ಇಲ್ಲ. ಆದ್ರೂ ಹಬ್ಬ ಮಾಡ್ಬೇಕು.
–ಜಟ್ಟೆಪ್ಪ ಕುರುಬತ್ತಹಳ್ಳಿ, ಬಂಥನಾಳ ಗ್ರಾಮದ ರೈತ

*
ಬಿತ್ತಿದ ಬೀಜವೂ ಕೈ ಸೇರಲಿಲ್ಲ. ಸಂಪ್ರದಾಯ ಪಾಲಿಸಲೇಬೇಕು. ಬನ್ನಿ ಪೂಜೆ ನಡೆಸುವೆ. ಈ ಬಾರಿ ಬೀಗರಿಗೆ ಆಮಂತ್ರಣ ನೀಡಿಲ್ಲ. ಭೂರಿ ಭೋಜನದ ತಯಾರಿಯನ್ನು ನಡೆಸಿಲ್ಲ. ಅಮಾವಾಸ್ಯೆ ಪೂಜೆಯನ್ನಷ್ಟೇ ಮಾಡುವೆ.
–ಅಂಬವ್ವ ನಾಗರಳ್ಳಿ, ತಾಂಬಾ ಗ್ರಾಮದ ರೈತ ಮಹಿಳೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !