ಮುಗಾಬೆ ನಂತರದ ಜಿಂಬಾಬ್ವೆ: ಚುನಾವಣೆ ಗೆದ್ದ ಎಮ್ಮರ್‌ಸನ್, ಫಲಿತಾಂಶಕ್ಕೆ ವಿರೋಧ

7

ಮುಗಾಬೆ ನಂತರದ ಜಿಂಬಾಬ್ವೆ: ಚುನಾವಣೆ ಗೆದ್ದ ಎಮ್ಮರ್‌ಸನ್, ಫಲಿತಾಂಶಕ್ಕೆ ವಿರೋಧ

Published:
Updated:
ಎಮ್ಮರ್‌ಸನ್ ನನ್‌ಗಾಗುವಾ – ರಾಯಿಟರ್ಸ್‌ ಚಿತ್ರ

ಹರಾರೆ: ಅಧ್ಯಕ್ಷ ಎಮ್ಮರ್‌ಸನ್ ನನ್‌ಗಾಗುವಾ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಜಿಂಬಾಬ್ವೆ ಚುನಾವಣಾ ಆಯೋಗ ತಿಳಿಸಿದೆ.

ದೇಶದ ಹತ್ತೂ ಪ್ರಾಂತ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಜೆಎಎನ್‌ಯು–ಪಿಎಫ್‌ (ಜಿಂಬಾಬ್ವೆ ಆಫ್ರಿಕನ್‌ ನ್ಯಾಷನಲ್‌ ಯೂನಿಯನ್‌–ಪೇಟ್ರಿಯಾಟಿಕ್‌ ಫ್ರಂಟ್‌) ಪಕ್ಷದ ನನ್‌ಗಾಗುವಾ ಅವರು ಶೇ. 50.8 ರಷ್ಟು ಮತ ಪಡೆದಿದ್ದಾರೆ. ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಎಂಡಿಸಿ–ಟಿ (ಮೂವ್‌ಮೆಂಟ್‌ ಫಾರ್‌ ಡೆಮಾಕ್ರಿಟಿಕ್‌ ಚೇಂಜ್‌) ನೆಲ್ಸನ್‌ ಛಾಮಿಸಾ ಅವರಿಗೆ ಶೇ. 44.3 ರಷ್ಟು ಮತಗಳು ದೊರೆತಿವೆ ಎಂದು ಆಯೋಗ ಮಾಹಿತಿ ನೀಡಿದೆ.

ಚುನಾವಣಾ ಆಯೋಗವು ಪ್ರಕಟಿಸಿದ ಫಲಿತಾಂಶವನ್ನು ನಿರಾಕರಿಸಿ, ಆಯೋಗದ ಕಚೇರಿಯಲ್ಲಿಯೇ ಪ್ರತಿಭಟಿಸಿದ ವಿರೋಧ ಪಕ್ಷದ ನಾಯಕರನ್ನು ಪೊಲೀಸರು ಹೊರಹಾಕಿದರು. ಮತ ಏಣಿಕೆಯು ಸರಿಯಾಗಿ ಪರಿಶೀಲನೆಯಾಗಿಲ್ಲ ಎಂದು ಛಾಮಿಸಾ ಟೀಕಿಸಿದ್ದಾರೆ. ಇದನ್ನು ಅಲ್ಲಗಳೆದಿರು ನನ್‌ಗಾಗುವಾ ‘ಫಲಿತಾಂಶದಲ್ಲಿ ಅಕ್ರಮವೆಸಗಲು ಪ್ರಯತ್ನಿಸಲಾಗಿದೆ. ಅದಕ್ಕೆಲ್ಲ ನಾವು ಅವಕಾಶ ನೀಡುವುದಿಲ್ಲ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.‌


ವಿರೋಧ ಪಕ್ಷದ ನಾಯಕ ನೆಲ್ಸನ್‌ ಛಾಮಿಸಾ  –ಎಎಫ್‌ಪಿ ಚಿತ್ರ

ಆದರೆ ಚುನಾವಣಾ ಆಯೋಗ, ‘ಇದರಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

ಫಲಿತಾಂಶವನ್ನು ನಿರಾಕರಿಸಿ ವಿರೋಧ ಪಕ್ಷದ ಬೆಂಬಲಿಗರು ಹರಾರೆಯಲ್ಲಿ ಬುಧವಾರ ನಡೆಸಿದ ಪ್ರತಿಭಟನೆ ವೇಳೆ 6 ಜನರು ಮೃತಪಟ್ಟಿದ್ದರು. ಹೀಗಾಗಿ ರಕ್ಷಣಾ ಪಡೆಗಳು ನಗರರಾದ್ಯಂತ ಗುರುವಾರ ನಿಗಾ ಇರಿಸಿದ್ದವು.

ಈ ಬಗ್ಗೆ ಮಾತನಾಡಿರುವ ಮನ್‌ಗಾಗುವಾ ‘ಫಲಿತಾಂಶಕ್ಕೆ ಸಂಬಂಧಿಸಿದಂತೆ ಮನಸ್ತಾಪವನ್ನು ತೊಡೆದು ಹಾಕುವಂತೆ ಮತ್ತು ಈ ಗಲಭೆ ಸೃಷ್ಟಿ ಹಿಂದೆ ಇರುವವರನ್ನು ಪತ್ತೆ ಹಚ್ಚಲು ಸ್ವತಂತ್ರ ತನಿಖೆಗೆ ಸಹಮತ ಸೂಚಿಸುವಂತೆ ಛಾಮಿಸಾ ಅವರೊಂದಿಗೆ ಸರ್ಕಾರ ಮಾತುಕತೆ ನಡೆಸಿದೆ’ ಎಂದು ತಿಳಿಸಿದ್ದಾರೆ.

‘ಇದು ನಮ್ಮೆಲ್ಲರ ತಾಯ್ನಾಡು. ನಾವೆಲ್ಲರು ಸಂಧಿಸಬೇಕು ಅಥವಾ ಜೊತೆಯಾಗಿ ಈಜಬೇಕಿದೆ’ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.

ಸತತ 37 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ರಾಬರ್ಟ್‌ ಮುಗಾಬೆ ಅವರನ್ನು ಕಳೆದ ನವೆಂಬರ್‌ನಲ್ಲಿ ಪದಚ್ಯುತಗೊಳಿಸಲಾಗಿತ್ತು. ಅವರ ನಂತರ ಮನ್‌ಗಾಗುವಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮುಗಾಬೆ ಅಧಿಕಾರ ಅಂತ್ಯವಾದ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿರುವುದರಿಂದ ದೇಶದ ಆಡಳಿತದಲ್ಲಿ ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.


ಪದಚ್ಯುತ ಅಧ್ಯಕ್ಷ ರಾಬರ್ಟ್‌ ಮುಗಾಬೆ  –ಎಎಫ್‌ಪಿ ಚಿತ್ರ

ಗಲಭೆಯ ಹಾದಿ...

ಜೆಎಎನ್‌ಯು–ಪಿಎಫ್‌ ಪಕ್ಷ ಗೆಲುವು ಸಾಧಿಸಿದೆ ಎಂದು ಚುನಾವಣಾ ಆಯೋಗ ಬುಧವಾರ ಘೋಷಿಸಿತ್ತು.

ಫಲಿತಾಂಶವನ್ನು ಒಪ್ಪದ ವಿರೋಧ ಪಕ್ಷ ಎಂಡಿಸಿ–ಟಿ ಬೆಂಬಲಿಗರು, ‘ಫಲಿತಾಂಶ ಪ್ರಕಟಿಸಲು ವಿಳಂಬ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ, ಬೀದಿಗಿಳಿದು ಪ್ರತಿಭಟಿಸಿದ್ದರು. ಇದನ್ನು ಖಂಡಿಸಿದ್ದ ಗೃಹ ಸಚಿವ ಒಬ್ರೆಟ್‌ ಪೋಫು, ಇಂತಹ ಪ್ರತಿಭಟನೆಗಳಿಗೆ ಅವಕಾಶ ನೀಡುವುದಿಲ್ಲ’ ಎಂದಿದ್ದರು.

ಇದಕ್ಕೆ ಪ್ರತಿಯಾಗಿ, ‘ನಮ್ಮ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ. ಅವರು ದೊಡ್ಡ ತಪ್ಪು ಮಾಡುತ್ತಿದ್ದಾರೆ ಎನಿಸುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದರು. ಇದು ಗಲಭೆ ಸೃಷ್ಟಿಗೆ ಕಾರಣವಾಯಿತು.


ಗಲಭೆ ವೇಳೆ ಬೆಂಕಿಗೆ ಆಹುತಿಯಾದ ಬಸ್‌ –ರಾಯಿಟರ್ಸ್‌ ಚಿತ್ರ

ಗಲಭೆ ಸಂದರ್ಭದಲ್ಲಿ ರಕ್ಷಣಾ ಪಡೆಗಳ ಗುಂಡಿನ ದಾಳಿಗೆ ಪ್ರತಿಭಟನಾ ನಿರತ 6 ಜನರು ಮೃತಪಟ್ಟಿದ್ದರು.

ರಕ್ಷಣಾ ಪಡೆಗಳ ಪ್ರತಿದಾಳಿಯನ್ನು ಖಂಡಿಸಿದ್ದ ಛಾಮಿಸಾ ಅವರ ವಕ್ತಾರ, ‘ಯುದ್ಧದಲ್ಲಿ ವೈರಿಗಳನ್ನು ಕೊಲ್ಲಲು ಸೈನಿಕರಿಗೆ ತರಬೇತಿ ನೀಡಲಾಗುತ್ತದೆ. ದೇಶದ ನಾಗರಿಕರು ವೈರಿಗಳೇ? ನಾವು ಕಂಡ ಈ ಕ್ರೂರ ಕೃತ್ಯಗಳಿಗೆ ಯಾವ ವಿವರಣೆಯೂ ಬೇಕಾಗಿಲ್ಲ’ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !