ಮನಸ್ಸಿನ ಗಾಯಕ್ಕೆ ಭಾವನಾತ್ಮಕ ಚಿಕಿತ್ಸೆ

ಸೋಮವಾರ, ಏಪ್ರಿಲ್ 22, 2019
29 °C

ಮನಸ್ಸಿನ ಗಾಯಕ್ಕೆ ಭಾವನಾತ್ಮಕ ಚಿಕಿತ್ಸೆ

Published:
Updated:
Prajavani

‘ಓದಿನಲ್ಲಿ ನಮ್ಮ ಮೊದಲನೆ ಮಗಳು ಮುಂದೆ, ಎರಡನೆಯವಳು ಹಿಂದೆ. ಆದರೆ ಹೊಂದಿಕೊಂಡು ಹೋಗ್ತಾಳೆ. ಕೆಲವೊಮ್ಮೆ ಒಬ್ಬಳೇ ಕುಳಿತು ಅಳುತ್ತಾಳೆ. ತುಂಬಾ ವೀಕು ಕೂಡ. ಅವಳದ್ದೇ ಚಿಂತೆಯಾಗಿದೆ, ಸಾರ್’ ಆಪ್ತಸಲಹಾ ಕೇಂದ್ರಕ್ಕೆ ಬಂದ ತಾಯಿ ಸುನೈನಾ ತನ್ನ ದುಃಖ ತೋಡಿಕೊಂಡಳು. ಮಗಳು ಮಂಜುಳಾ ಏಳನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಶಾಲೆಗೆ ಸರಿಯಾಗಿ ಹೋಗ್ತಾಳೆ.

ಟ್ಯೂಶನ್ ಇಷ್ಟವಿಲ್ಲ, ಒತ್ತಾಯಕ್ಕೆ ಹೋಗ್ತಿದಾಳೆ. ಹೋಂವರ್ಕ್‌ ಮುಗಿಯುವುದಿಲ್ಲ, ಕಲಿಯುವುದರಲ್ಲಿ ಆಸಕ್ತಿ ಕಡಿಮೆ. ಅವಳು ಅಸಹಾಯಕತೆಯಲ್ಲಿದ್ದಂತೆ ತೋರುತ್ತಿತ್ತು. ತಾನು ಓದಿನಲ್ಲಿ ಹಿಂದೆ, ವೀಕೆಂಬ ಹಣೆಪಟ್ಟಿಯಿಂದ ಬೇಸತ್ತಿದ್ದಳು. ಎಲ್ಲಾ ಹೇಳುತ್ತಿದಂತೆಯೇ ಅವಳ ಕಣ್ಣು ತುಂಬಿಬಂತು. ನಾನು ಶಾಂತಚಿತ್ತದಿಂದ ಆಲಿಸುತ್ತಲಿದ್ದೆ. ಕೆಲವು ಕ್ಷಣದ ನಂತರ ಆಕೆಗೆ ಸ್ವಲ್ಪ ಸಮಾಧಾನವಾಯಿತು.
‘ನಿನ್ನ ಹವ್ಯಾಸಗಳೇನು, ತೊಂದರೆಯ ನಿವಾರಣೆಗೇನು ಮಾಡುತ್ತೀಯ?’ ಎಂದು ವಿಚಾರಿಸಿದಾಗ, ತನ್ನ ಡ್ರಾಯಿಂಗ್ಸ್‌, ಭರತನಾಟ್ಯ ಕ್ಲಾಸ್ ಬಗ್ಗೆ ಹೇಳುತ್ತಾ ಹೋದಳು.

ಮುಂದಿನ ವಾರ ಮಂಜುಳಾ ನಗುಮೊಗದಿಂದ ಬಂದಳು. ಅವಳ ಅಭ್ಯಾಸ ಸುಧಾರಿಸಿದೆ, ಹೋಂವರ್ಕ್‌ ಪೂರ್ತಿ ಆಗ್ತಾಯಿದೆ, ಗೆಳತಿಯೊಂದಿಗೆ ಸೇರಿ ಅಭ್ಯಾಸ ಮಾಡುತ್ತಾಳಂತೆ. ಇಷ್ಟವಿಲ್ಲದ ಟ್ಯೂಷನ್ ಬಿಟ್ಟಿದ್ದಾಳೆ.

ಇದೆಲ್ಲಾ ಹೇಗೆ ಸಾಧ್ಯ?

ನಮ್ಮ ತಲೆಯಲ್ಲಿ ಏನು ನಡೆಯುತ್ತಿದೆ ಎನ್ನುವುದಕ್ಕಿಂತ ದೇಹದಲ್ಲಾಗುವ ಅನುಭವಗಳನ್ನು (ಭಾವನೆಗಳನ್ನು) ಏಕಾಗ್ರತೆಯಿಂದ ಹಾಗೂ ಅನುಕಂಪದ ನಿಲುವಿನಿಂದ ಗಮನಿಸುವುದರಿಂದ ನಮ್ಮೊಳಗಿನ ಬ್ರಹ್ಮಾಂಡದ ದರ್ಶನವಾಗುತ್ತದೆ. ಈ ಪ್ರಕ್ರಿಯೆಯಿಂದ ಬದಲಾವಣೆ ಸಾಧ್ಯ. ಈ ಹಂತದಲ್ಲಿ ನಮ್ಮಲ್ಲಿ ಸಾಮಾನ್ಯವಾಗಿ ಉಂಟಾಗುವ ಭಾವನೆಗಳಾದ ದುಃಖ, ಭಯ, ಕೋಪ, ಉದ್ವೇಗಗಳ ಸಂಪರ್ಕದಲ್ಲಿ ಬರುತ್ತೇವೆ. ಆ ಭಾವನೆಗಳ ಸಂಪರ್ಕದಲ್ಲಿ ಬರುವ ನಾವು ಅವುಗಳ ಕಪಿಮುಷ್ಟಿಗೆ ಸಿಲುಕದೆ, ಅವುಗಳನ್ನು ಹತೋಟಿಯಲ್ಲಿಡುವುದನ್ನು ಕಲಿಯುತ್ತೇವೆ. ಮಾತ್ರವಲ್ಲ, ನಮ್ಮಲ್ಲಿ ಬದಲಾವಣೆಯನ್ನು ಕಾಣುತ್ತೇವೆ.

ಇದರಿಂದ ನಮ್ಮ ಆತಂಕ ಅಥವಾ ದುಃಖಕ್ಕೆ ಸಂಬಂಧಿಸಿದ ಇನ್ನಿತರ ಲಕ್ಷಣಗಳು ಕಡಿಮೆಯಾಗುತ್ತವೆ; ಮಾನಸಿಕ ಗಾಯವನ್ನು ವಾಸಿ ಮಾಡುವ ಒಂದು ಉತ್ತಮ ವಿಧಾನವೆನ್ನಬಹುದು. ನಮ್ಮ ಮತ್ತು ಇತರರ ಭಾವನೆಯೊಂದಿಗೆ ಕಾರ್ಯ ನಿರ್ವಹಿಸುವ ಪಾಠವನ್ನು ಪ್ರಾಯೋಗಿಕವಾಗಿ ಕಲಿಯುತ್ತೇವೆ.

ಈ ಮಾದರಿಯು ಹೇಗೆ ಕೆಲಸ ಮಾಡುತ್ತದೆಯೆಂದು ನೋಡೋಣ. ಆಪ್ತ ಸಲಹೆಗಾರರು ಸಮಾಲೋಚನೆಯ ಅವಧಿಯಲ್ಲಿ ಚಿಕಿತ್ಸೆಗೆ ಬಂದವರ ಮೌಖಿಕ ಮತ್ತು ದೇಹಭಾಷೆಯಿಂದ ಅವನ/ ಅವಳ ಭಾವನೆಗಳನ್ನು ಮತ್ತು ದೇಹದಲ್ಲಾಗುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆಪ್ತ ಸಮಾಲೋಚಕರು ಸುಭದ್ರವಾದ, ಗೋಪ್ಯವಾದ ಪರಿಸರವನ್ನು ಒದಗಿಸಿದಾಗ ಅವರು ತಮ್ಮ ವ್ಯಕ್ತಿತ್ವದಲ್ಲಿ ಗೊತ್ತಿರದ ಅಂಶವನ್ನು ಅಥವಾ ಹೆದರಿಕೆ, ನಾಚಿಕೆ, ಅವಮಾನದಿಂದ ಉಂಟಾಗುತ್ತಿರುವ ಹಿಂಜರಿಕೆಯನ್ನು ಗುರುತಿಸಿಕೊಳ್ಳುತ್ತಾರೆ.

ಮನಸ್ಸು ಮತ್ತು ದೈಹಿಕ ಬದಲಾವಣೆಗಳನ್ನು ಗಮನಿಸುತ್ತಾ ಹೋದಂತೆ, ಭಾವನೆಗಳ ಆಳಕ್ಕಿಳಿಯುತ್ತಾರೆ. ಆಗ ಹಲವು ಭಾವನೆಗಳು ಉದಾಹರಣೆಗೆ ದುಃಖ, ಸಿಟ್ಟು ಒಮ್ಮೆಗೇ ವ್ಯಕ್ತವಾಗಬಹುದು. ಆಕೆ/ ಆತನ ಪಾಲಿಗೆ ಅವು ಕಗ್ಗಂಟಾಗಿ ತೋರುತ್ತವೆ. ಆ ಸಮಯದಲ್ಲಿ ಆಪ್ತ ಸಲಹೆಗಾರರು ಸಿಕ್ಕಾಗಿರುವ ಭಾವನೆಗಳನ್ನು ಎಳೆಎಳೆಯಾಗಿ ಬಿಡಿಸಲು ಕೈ ಜೋಡಿಸುತ್ತಾರೆ. ಆಗ ಆ ವ್ಯಕ್ತಿಗೆ ನಿಜವಾದ ಸಮಸ್ಯೆ ಎಲ್ಲಿದೆಯೆಂದು ಹೊಳೆಯುತ್ತದೆ. ಪರಿಹಾರ ಸುಲಭವಾಗುತ್ತದೆ.

ಯಾವ ರೀತಿ ತನ್ನ ಭಾವನೆಗಳನ್ನು ಅರಿಯಬೇಕು, ಅವುಗಳನ್ನು ಜೀವನಕ್ಕೆ ಪೂರಕವಾಗುವಂತೆ ಹೇಗೆ ನಿರ್ವಹಿಸಬೇಕು ಎಂಬುದನ್ನು ವ್ಯಕ್ತಿಯು ಕಲಿಯುತ್ತಾನೆ. ಮಾನಸಿಕ ಗಾಯ ವಾಸಿಗಾಗಿ ವ್ಯಕ್ತಿಯು ಭಾವನೆಗಳೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುವುದು ಅತ್ಯವಶ್ಯ. ಆದರೆ ಭಾವನೆಗಳೊಂದಿಗೆ ಸಂಪರ್ಕ ಬೆಳೆಸಲು ವ್ಯಕ್ತಿಯು ತಯಾರಿರುವುದಿಲ್ಲ. ಅಂತೆಯೇ ಮನೋಪಚಾರದ ಸಂದರ್ಭದಲ್ಲಿಯೂ ಭಾವನೆಗಳೊಂದಿಗೆ ಸಂಪರ್ಕಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ.

ಭಾವನಾತ್ಮಕ ಉಪಚಾರ

ಈ ರೀತಿಯಾಗಿ ಭಾವನೆಯನ್ನು ವ್ಯಕ್ತಪಡಿಸಲು ವಿರೋಧವುಂಟಾಗುವುದು ಸಹಜ, ಆದರೆ ಅದು ಉದ್ದೇಶ ಪೂರ್ವಕವಲ್ಲ. ಅಹಿತಕರ ಘಟನೆಯಿಂದ ಹುಟ್ಟಿದ ಭಾವನೆಗಳನ್ನು ವ್ಯಕ್ತಪಡಿಸುವಾಗ ಮನಸ್ಸಿಗೆ ನೋವಾಗುವ ಸಾಧ್ಯತೆಯಿರುವುದರಿಂದ, ಮನಸ್ಸು ತನ್ನನ್ನು ತಾನು ನೋವಿನಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆಪ್ತ ಸಮಾಲೋಚನೆ ಸಂದರ್ಭದಲ್ಲಿ ಸೃಷ್ಟಿಯಾಗುವ ಮುಕ್ತ ಹಾಗೂ ಸುಭದ್ರ ವಾತಾವರಣದಿಂದ ವಿರೋಧ ಕಡಿಮೆಯಾಗಿ ಭಾವನೆಗಳೊಂದಿಗೆ ಸಂಪರ್ಕ ಸಾಧ್ಯವಾಗುತ್ತದೆ.

ಭಾವನೆಗಳನ್ನು ಅನುಭವಿಸಿ, ಪೂರ್ಣಗೊಳಿಸುವುದು ನಿಜವಾಗಿಯೂ ಲಾಭದಾಯಕ. ಈ ಮಾದರಿಯನ್ನು ಯಾವುದೇ ಮಾನಸಿಕವಾಗಿ ಗಲಿಬಿಲಿಗೊಂಡ ವ್ಯಕ್ತಿಯು, ಮನಸ್ಸಮಾಧಾನಕ್ಕೆ ಸ್ವತಃ ಪ್ರಯೋಗ ಮಾಡಿಕೊಳ್ಳಬಹುದು. ದೇಹದಲ್ಲಾಗುವ ಅನುಭವಗಳನ್ನು ಏಕಾಂತದಲ್ಲಿ ಅನ್ಯಮನಸ್ಕರಾಗದೆ ಗಮನಿಸಿ. ಉಂಟಾಗುವ ಭಾವನೆ ಎಂಥದ್ದೆಂದು ತಿಳಿಯಲು ಭಾವನಾ ಸಮುದ್ರದಲ್ಲಿ ಮಿಂದೆದ್ದರೆ, ಸಮಸ್ಯೆ ಯಾವುದು, ಅದರ ಮೂಲ, ಆಳಗಲ, ತಾನೆಂತ ವ್ಯಕ್ತಿ, ಸಮಸ್ಯೆಯ ಸ್ಪಷ್ಟತೆ ದೊರೆಯುತ್ತದೆ. ಹಂತಹಂತವಾಗಿ ಬದಲಾವಣೆ ಕೂಡ ಸಾಧ್ಯ.

ಭಾವನೆಗಳನ್ನು ನಿರ್ವಹಣೆ ಮಾಡಿ

ಭಾವನೆಯ ಸಮರ್ಪಕ ನಿರ್ವಹಣೆಯು, ವ್ಯಕ್ತಿಯ ಆತ್ಮ ಗೌರವ, ಶಾಂತತೆ, ಆತ್ಮ ವಿಶ್ವಾಸವನ್ನು ಹೆಚ್ಚಿಸುವುದರ ಮೂಲಕ ಹೊರ ಬದುಕನ್ನು ಕೂಡ ಹಸನಾಗಿಸುತ್ತದೆ. ಮನಸ್ಸಿಗರಿಯದ ಅಡೆತಡೆಗಳು ನಿವಾರಣೆಯಾಗಿ ವ್ಯಕ್ತಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ತನ್ನ ಹಾಗೂ ಇತರರ ಬಗ್ಗೆ ಅನುಕಂಪ, ಕುತೂಹಲ, ಇತರರೊಡನೆ ಸಂಪರ್ಕ, ಅನ್ಯೋನ್ಯತೆ, ಪ್ರಾಮಾಣಿಕತೆ, ವಿಷಯಗಳ ಬಗ್ಗೆ ಸ್ಪಷ್ಟತೆ, ಒಟ್ಟಾರೆ ಚೈತನ್ಯಭರಿತ ಜೀವನಕ್ಕೆ ನಾಂದಿಯಾಗುತ್ತದೆ. 

ಆಘಾತದಿಂದುಂಟಾಗುವ ಮಾನಸಿಕ ಯಾತನೆ, ಭಾವನಾತ್ಮಕ ಪ್ರಚೋದಕಗಳಿಂದಾಗುವ ಮಾನಸಿಕ ಅಸ್ವಸ್ಥತೆ , ಖಿನ್ನತೆ, ಅತಿಯಾದ ಆತಂಕವನ್ನು ಭಾವನಾತ್ಮಕ ಉಪಚಾರದಿಂದ ಸರಿಪಡಿಸಬಹುದು. ನಮ್ಮ ಗಮನ ಸಂಕಷ್ಟಗಳಿಂದ ನಮ್ಮಲ್ಲಿರುವ ಮನೋಬಲದ ಕಡೆಗೆ ಹರಿಯುತ್ತದೆ.

(ಲೇಖಕರು ಮಂಗಳೂರಿನಲ್ಲಿ ಆಪ್ತ ಸಲಹೆಗಾರರು)

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !