ನಿಷ್ಕಲ್ಮಶ ಮನಸ್ಸುಗಳ ಭಾವನಾತ್ಮಕ ಬೆಸುಗೆ ‘ಸ್ನೇಹ’

7
ಆಗಸ್ಟ್‌ ತಿಂಗಳ ಮೊದಲ ಭಾನುವಾರ ‘ಫ್ರೆಂಡ್‌ಶಿಪ್‌ ಡೇ’; ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಕ್ರೇಜ್‌..!

ನಿಷ್ಕಲ್ಮಶ ಮನಸ್ಸುಗಳ ಭಾವನಾತ್ಮಕ ಬೆಸುಗೆ ‘ಸ್ನೇಹ’

Published:
Updated:
Deccan Herald

ವಿಜಯಪುರ:  ‘ಸ್ನೇಹ’ ಎಂಬ ಎರಡಕ್ಷರದ ಶಕ್ತಿ ಅಪಾರ. ಅವಿನಾಭಾವ ಸಂಬಂಧದ ದ್ಯೋತಕ. ನಿಷ್ಕಲ್ಮಶ ಮನಸ್ಸುಗಳ ಬೆಸುಗೆ ಗೋಚರಿಸುವುದು ‘ಚಡ್ಡಿ ದೋಸ್ತ್‌’ಗಳಲ್ಲಿ. ಅದೂ 15–16ನೇ ವಯಸ್ಸಿನೊಳಗೆ. ಪ್ರತಿಯೊಬ್ಬರಿಗೂ ಚಡ್ಡಿ ದೋಸ್ತ್‌ ಇರ್ತಾರೆ. ಚಡ್ಡಿ ದೋಸ್ತ್‌ಗಳ ನಡುವಿನ ಬಾಂಧವ್ಯ ಎಂದೆಂದೂ ಹಚ್ಚಹಸಿರು...

ಪ್ರತಿಯೊಬ್ಬರೂ ತಮ್ಮ ಬಾಲ್ಯದಿಂದ ಹಿಡಿದು ಮುಪ್ಪಿನವರೆಗೂ ದೋಸ್ತರನ್ನು ಹೊಂದಿರುತ್ತಾರೆ. ಬಾಲ್ಯದ ಸ್ನೇಹ ಅಚ್ಚಳಿಯದು. ಅದರಲ್ಲೂ ಗಲ್ಲಿಯೊಳಗಿನ ಹುಡುಗರು–ಹುಡುಗಿಯರದ್ದು ನಿಕಟ ಬಾಂಧವ್ಯ. ನಿಷ್ಕಲ್ಮಶ ಮನಸ್ಸಿನದ್ದು.

ಪ್ರೌಢಶಾಲೆ ಹಂತದಲ್ಲೇ ಶಾಲಾ ದೋಸ್ತಿ ಆರಂಭ. ಕಾಲೇಜು ದಿನಗಳಲ್ಲಿ ಈ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಕಾಲೇಜಿನ ಹಂತ ದಾಟಿದ ನಂತರ ದುಡಿಮೆಯ ದೋಸ್ತಿ. ಮುಪ್ಪಿನಲ್ಲಿ ಮತ್ತೆ ಊರು ಸೇರಿ ಹಳೆಯ ಬಾಲ್ಯದ ಗೆಳೆಯನ ಒಡನಾಟ. ಒಬ್ಬೊಬ್ಬರ ಅಗಲುವಿಕೆ...

‘ಸ್ನೇಹ’ ಎಂಬುದಕ್ಕೆ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ನಾನು ಎಂಬ ಅಹಂ ತೊರೆದು ನಾವು ಎಂಬುದು ಎಲ್ಲಿ ಮೊಳೆಯುತ್ತದೆ, ಚಿಗುರುತ್ತದೆ ಅಲ್ಲಿ ಸ್ನೇಹವಿರುತ್ತದೆ. ಪರಸ್ಪರ ಗೌರವ, ನಂಬಿಕೆ, ವಿಶ್ವಾಸವೇ ಇದರ ಜೀವಾಳ. ಮುಂದೊಂದು–ಹಿಂದೊಂದು ಮಾತು ಎಂದೆಂದೂ ‘ದೋಸ್ತಿ’ ಗಟ್ಟಿಗೊಳಿಸಲ್ಲ. ಸ್ವಾರ್ಥ ಬಯಸುವ ಮನಸ್ಸಿಗೆ ನಿಷ್ಕಲ್ಮಶ ಸ್ನೇಹ ಎಂದೆಂದೂ ದೊರಕದು. ತಮ್ಮ ತಮ್ಮಲ್ಲಿನ ಮನಸ್ಥಿತಿಗೆ ತಕ್ಕಂತೆ, ಸ್ನೇಹಿತರಾಗಿ ಬೆಸೆದುಕೊಳ್ಳುವವರೇ ಹೆಚ್ಚು.

ಮಕ್ಕಳಲ್ಲೇ ಆಚರಣೆ ಹೆಚ್ಚು:

‘ಈಚೆಗಿನ ವರ್ಷಗಳಲ್ಲಿ ಹೊಸ ವರ್ಷಾಚರಣೆ, ಸಂಕ್ರಾಂತಿ, ಯುಗಾದಿ, ದೀಪಾವಳಿ ಸೇರಿದಂತೆ ಇನ್ನಿತರೆ ಹಬ್ಬಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನದಾಗಿ; ಫ್ರೆಂಡ್‌ಶಿಪ್‌ ಡೇ, ವ್ಯಾಲಂಟೈನ್‌ ಡೇ ಆಚರಣೆಯ ಕ್ರೇಜ್‌ ಮಕ್ಕಳು, ಯುವ ಸಮೂಹದಲ್ಲಿ ಹೆಚ್ಚುತ್ತಿದೆ’ ಎನ್ನುತ್ತಾರೆ ವಿಜಯಪುರದ ಪಲ್‌ ಪಲ್‌ ಗಿಫ್ಟ್‌ ಸೆಂಟರ್‌ನ ಮಾಲೀಕ ಪ್ರವೀಣ್‌ ಜೈನ್‌.

‘ಫ್ರೆಂಡ್‌ಶಿಪ್‌ ಡೇ ಎಂದೊಡನೆ ಮಕ್ಕಳಲ್ಲಿ ಕುತೂಹಲ. ಗಿಫ್ಟ್‌ ಸೆಂಟರ್‌ಗೆ ದಾಂಗುಡಿಯಿಟ್ಟು ತನ್ನ ನೆಚ್ಚಿನ ಸ್ನೇಹಿತರ ಕೈಗೆ ಬ್ಯಾಂಡ್‌ ಕಟ್ಟಲು ಮುಗಿಬೀಳುವವರೇ ಹೆಚ್ಚು. ನಮ್ಮಲ್ಲಿ ₹ 10ರ ಧಾರಣೆಯಿಂದ ₹ 100 ಮೌಲ್ಯದ ಬ್ಯಾಂಡ್‌, ಗ್ರೀಟಿಂಗ್ಸ್‌ಗಳಿವೆ. ಗ್ರೀಟಿಂಗ್ಸ್‌ಗಿಂತ ಬ್ಯಾಂಡ್‌ ಖರೀದಿಸುವವರೇ ಹೆಚ್ಚು’ ಎಂದು ಜೈನ್‌ ತಿಳಿಸಿದರು.

‘ಹೈದರಾಬಾದ್‌, ಕೊಲ್ಹಾಪುರದಿಂದ ಫ್ರೆಂಡ್‌ಶಿಪ್‌ ಡೇ ಗಾಗಿಯೇ ಕೆಲ ಉತ್ಪನ್ನ ತಂದಿರುವೆ. ಮಹಾರಾಷ್ಟ್ರದಲ್ಲಿ ಮರಾಠಿಗರ ಪ್ರತಿಭಟನೆಯ ಕಾವು ಹೆಚ್ಚಿದ್ದರಿಂದ, ಮುಂಬೈಗೆ ಖರೀದಿಗೆ ಹೋಗಲಾಗಿಲ್ಲ. ಇದರ ಜತೆಗೆ ಲಾರಿ ಮುಷ್ಕರ ಸಹ ಈ ಬಾರಿಯ ಸ್ನೇಹಿತರ ದಿನಾಚರಣೆಯನ್ನು ಕಳೆಗುಂದಿಸಿದೆ. ಮಾರುಕಟ್ಟೆಗೆ ತರಹೇವಾರಿ ಉತ್ಪನ್ನ ಬಂದಿಲ್ಲ’ ಎಂದು ನೈಸ್ ಗಿಫ್ಟ್‌ ಸೆಂಟರ್‌ನ ಮಾಲೀಕ ಶ್ರೀಕಾಂತ ಮೆಂಡೆಗಾರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !