ಭಾನುವಾರ, ಡಿಸೆಂಬರ್ 8, 2019
21 °C
₹176 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿ ತೆರವು

ಉಪವಿಭಾಗಾಧಿಕಾರಿ–ಒತ್ತುವರಿದಾರರ ಜಟಾ‍ಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ನಗರ ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ವೇಳೆ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಹಾಗೂ ಒತ್ತುವರಿದಾರರ ನಡುವೆ ಶನಿವಾರ ಜಟಾಪಟಿ ನಡೆಯಿತು.

ಯಲಹಂಕ ಹೋಬಳಿಯ ಪುಟ್ಟೇನಹಳ್ಳಿಯಲ್ಲಿ 2 ಎಕರೆ 5 ಗುಂಟೆ ಜಾಗದಲ್ಲಿ (ಈ ಜಾಗದ ಮೌಲ್ಯ ₹50 ಕೋಟಿ) ಕೃಷ್ಣಮೂರ್ತಿ ಎಂಬುವರು ಸುಮಾರು 20 ಗುಡಿಸಲುಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದರು. ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದರು. ಸರ್ವೆಯಲ್ಲಿ ಸರ್ಕಾರಿ ಜಾಗ ಎಂಬುದು ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಲು ಮುಂದಾಯಿತು. ಈ ವೇಳೆ ಕೃಷ್ಣಮೂರ್ತಿ ಸುಮಾರು 500 ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದರು. 20ಕ್ಕೂ ಅಧಿಕ ನಿವಾಸಿಗಳನ್ನು ಮನೆಯೊಳಗೆ ಕೂರಿಸಿ ಕಾರ್ಯಾಚರಣೆಗೆ ತೊಡಕು ಉಂಟು ಮಾಡಿದರು.

ಆಗ ಎಲ್‌.ಸಿ.ನಾಗರಾಜ್‌ ಅವರು ಯಂತ್ರಗಳನ್ನು ತರಿಸಿ ಗುಡಿಸಲುಗಳ ತೆರವಿಗೆ ಸಿದ್ಧತೆ ನಡೆಸಿದರು. ಆಗ ನಾಗರಾಜ್‌ ಹಾಗೂ ಕೃಷ್ಣಮೂರ್ತಿ ನಡುವೆ ಜಟಾಪಟಿ ನಡೆಯಿತು. ‘ನಾನು ಕನ್ನಡ ಸಂಘವೊಂದರ ಅಧ್ಯಕ್ಷ. ಸಾಮಾಜಿಕ ಚಟುವಟಿಕೆ ನಡೆಸುತ್ತಿದ್ದೇನೆ’ ಎಂದು ಕೃಷ್ಣಮೂರ್ತಿ ಏರುಧ್ವನಿಯಲ್ಲಿ ಹೇಳಿದರು. ‘ಮೊದಲು ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಿ. ಮತ್ತೆ ಮಾತನಾಡಿ’ ಎಂದು ನಾಗರಾಜ್‌ ತಿರುಗೇಟು ನೀಡಿದರು. ಜಟಾಪಟಿ ತೀವ್ರ ಸ್ವರೂಪ ತಾಳುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್‌ ಮಧ್ಯಪ್ರವೇಶಿಸಿ ನಾಗರಾಜ್ ಅವರನ್ನು ಸಮಾಧಾನ ಪಡಿಸಿದರು. ಕೃಷ್ಣಮೂರ್ತಿಗೆ ಎಚ್ಚರಿಕೆ ನೀಡಿದರು. ಗುಡಿಸಲುಗಳನ್ನು ತೆರವುಗೊಳಿಸಲು ಸ್ವಲ್ಪ ಕಾಲಾವಕಾಶ ಕೋರಿದರು. ‘ಮಂಗಳವಾರದ ವರೆಗೆ ಕಾಲಾವಕಾಶ ನೀಡುತ್ತೇನೆ. ಬಳಿಕವೂ ಇಲ್ಲೇ ಇದ್ದರೆ ತೆರವು ಖಚಿತ’ ಎಂದು ನಾಗರಾಜ್‌ ಎಚ್ಚರಿಸಿದರು.

ಬೆಟ್ಟಹಲಸೂರಿನಲ್ಲಿ 2 ಎಕರೆ ಜಾಗದಲ್ಲಿ ಸುಮಾರು 40 ಮಂದಿ ಮನೆ ಕಟ್ಟಿಕೊಂಡಿದ್ದರು. ಈ ಮನೆಗಳನ್ನು ಕೆಡವಲು ಜಿಲ್ಲಾಡಳಿತ ಮುಂದಾಯಿತು. ಈ ವೇಳೆ ನಿವಾಸಿಗಳು ಮನೆ ಖಾಲಿ ಮಾಡಲು ಕಾಲಾವಕಾಶ ಕೋರಿದರು. ಅವರಿಗೂ 2 ದಿನಗಳ ಗಡುವು ನೀಡಲಾಯಿತು.

ದಾಸನಪುರ ಹೋಬಳಿಯ ಗಟ್ಟಿಸಿದ್ದನಹಳ್ಳಿ ಗ್ರಾಮದ ಸರ್ಕಾರಿ ಖರಾಬ್ ಸರ್ವೆ ನಂ. 16 ರಲ್ಲಿ 1 ಎಕರೆ 14 ಗುಂಟೆ, ಸರ್ಕಾರಿ ಗುಂಡುತೋಪು ಸರ್ವೆ ನಂ. 17 ರಲ್ಲಿ 17 ಗುಂಟೆ, ಸರ್ಕಾರಿ ಕೆರೆ ಸರ್ವೆ ನಂ. 18 ರಲ್ಲಿ 4 ಎಕರೆ 11 ಗುಂಟೆ ಸ್ವಾಧೀನಪಡಿಸಿಕೊಳ್ಳಲಾಯಿತು.

ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಾ.ಬಿ.ಆರ್‌.ಹರೀಶ್‌ ನಾಯಕ್‌ ನೇತೃತ್ವದಲ್ಲಿ ತಾವರೆಕೆರೆ ಹೋಬಳಿಯ ಹೊನ್ನಿಗನಹಟ್ಟಿ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ. 64 ರಲ್ಲಿ 6 ಎಕರೆ 32 ಗುಂಟೆಯ ಒತ್ತುವರಿ ತೆರವು ಮಾಡಲಾಯಿತು.

ಬೆಂಗಳೂರು ಪೂರ್ವ ತಾಲ್ಲೂಕಿನ ಸೋರಹುಣಸೆ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 20 ರಲ್ಲಿ 10 ಗುಂಟೆ, ಯರ್ರಪ್ಪನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ.71 ರಲ್ಲಿ 10 ಗುಂಟೆ, ಖಾಜಿಸೊನ್ನೇನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 26 ರಲ್ಲಿ 1 ಎಕರೆ 8 ಗುಂಟೆ, ಕಿತ್ತಗನೂರು ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ. 223 ರಲ್ಲಿ 33 ಗುಂಟೆ ವಶಪಡಿಸಿಕೊಳ್ಳಲಾಯಿತು.

ಆನೇಕಲ್ ತಾಲ್ಲೂಕಿನ ಗೆಂಟಿಗನಬೆಲೆ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ. 68 ರಲ್ಲಿ 5 ಎಕರೆ 32 ಗುಂಟೆ, ಹಾರಗದ್ದೆ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ. 281 ರಲ್ಲಿ 2 ಎಕರೆ 27 ಗುಂಟೆ, ಬಿಲ್ವಾರದಹಳ್ಳಿ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ. 25 ರಲ್ಲಿ 1 ಎಕರೆ 2 ಗುಂಟೆಯ ಒತ್ತುವರಿ ತೆರವು ಮಾಡಲಾಯಿತು.

‘ಐದು ತಾಲ್ಲೂಕುಗಳಲ್ಲಿ ₹176 ಕೋಟಿ ಮೌಲ್ಯದ 26 ಎಕರೆ 20 ಗುಂಟೆಯ ಒತ್ತುವರಿ ತೆರವು
ಗೊಳಿಸಲಾಯಿತು. ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)