ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ್‌ ಮತ್ತು ಅದೃಷ್ಟ

Last Updated 10 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಅಮ್ಮನ ಬಣ್ಣ, ಅಪ್ಪನ ಮುಖಚರ್ಯೆ, ಅಜ್ಜನ ವೃತ್ತಿಪರತೆ, ಹುಡುಗಿಯರ ಹಾರ್ಟ್‌ಬೀಟ್‌ ಹೆಚ್ಚಿಸುವ ಯಂಗ್‌ ಆ್ಯಂಡ್‌ ಎನರ್ಜೆಟಿಕ್‌ ಬ್ಯಾಚುಲರ್‌... ದಗ್ಗುಬಾಟಿ–ಅಕ್ಕಿನೇನಿ ಕುಟುಂಬದ ಯುವರಾಜ,ತೆಲುಗಿನ ಸುಂದರಾಂಗ ನಟ, ಅಖಿಲ್‌ ಅಕ್ಕಿನೇನಿಯ ಬಯೋಡೇಟಾ ಹೀಗೂ ಬರೆಯಬಹುದು.

ನಟಿಸಿದ ಸಿನಿಮಾಗಳ ಗ್ರಾಫ್‌ ಬಗ್ಗೆ ಮಾತನಾಡಿದರೆ ಇಳಿಮುಖವೇ. ಆದರೂ ‘ಮಿಸ್ಟರ್‌ ಮಜ್ನು’ಗೆ 2019ರ ಮೇಲೆ ಅತೀವ ನಿರೀಕ್ಷೆ. ಸೋಲಿನಿಂದಲೇ ಗೆಲುವಿನ ಓಟ ಶುರುವಾಗೋದು ಎಂಬುದು ಅಖಿಲ್‌ ನಂಬಿಕೆ. ‘ಮಿಸ್ಟರ್ ಮಜ್ನು’ ಹಿಟ್‌ ಚಿತ್ರಗಳ ಸಾಲಿಗೆ ಸೇರಲಿಲ್ಲ. ಆದರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಂತೂ ನಿಜ. ಹಾಗಾಗಿ ಈ ಮಜ್ನು ಅಲ್ಪತೃಪ್ತರಾಗಿ ಮಂದಹಾಸ ಬೀರಿದ್ದಾರೆ.

‘ಮಿ ಮಜ್ನು’ನಲ್ಲಿ ಹೆಣ್ಮಕ್ಕಳ ಕಣ್ಮಣಿಯಾದ ಕುದಿಹರೆಯದ ತರುಣನ ಪಾತ್ರಕ್ಕೆ ಅಖಿಲ್‌ ಉತ್ತಮವಾಗಿಯೇ ಜೀವ ತುಂಬಿದ್ದರು. ಯಾಕೆಂದರೆ ಅದು ಅವರ ನಿಜಜೀವನಕ್ಕೆ ಹತ್ತಿರವಾದ ಕ್ಯಾರೆಕ್ಟರ್‌! ಎಲ್ಲೇ ಹೋದರೂ ಗೋಪಿಕಾಸ್ತ್ರೀಯರ ನಡುವೆ ಮಿಂಚಿನ ಸಂಚಾರ ಹರಿಸುವ ಗೋಪಿಲೋಲನಂತೆ ಈ ಮಜ್ನು ಹೆಣ್ಮಕ್ಕಳ ಮನಗೆದ್ದುಬಿಡುತ್ತಾರೆ.

ಅಮ್ಮ ಅಮಲಾ, ಅಪ್ಪ ಅಕ್ಕಿನೇನಿ ನಾಗಾರ್ಜುನ, ಅಜ್ಜ ಅಕ್ಕಿನೇನಿ ನಾಗೇಶ್ವರ ರಾವ್‌ ದಕ್ಷಿಣ ಮತ್ತು ಉತ್ತರ ಭಾರತದ ಚಿತ್ರರಂಗಗಳಲ್ಲಿ ದಿಗ್ಗಜರೆನಿಸಿಕೊಂಡವರು. ಹಾಗಾಗಿ ನಟನೆಯೂ ರಕ್ತದಲ್ಲೇ ಬಳುವಳಿಯಾಗಿ ಬಂದಿದೆ ಎನ್ನಬಹುದು. ಮತ್ತೊಂದೆಡೆ ದಗ್ಗುಬಾಟಿ–ಅಕ್ಕಿನೇನಿ ಕುಟುಂಬದ ವರ್ಚಸ್ಸು ಈ ಯುವಕನ ಮೇಲೆ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರವೂ ತಪ್ಪಾಗಿದೆ. ‘ಸ್ಟಾರ್‌ ಕಿಡ್‌’ ಎಂಬ ಹೆಗ್ಗಳಿಕೆಯಾಗಲಿ, ಪ್ರತಿಭೆಯಾಗಲಿ ಅಖಿಲ್‌ ಕೈಹಿಡಿಯಲಿಲ್ಲ. ಅದೃಷ್ಟವೂ ಕೈಹಿಡಿಯಲಿಲ್ಲ.

‘ಅಮ್ಮನ ಮಗ’ ಅಲ್ಲ!

ಅಖಿಲ್‌, ಅಮ್ಮನ ಮಗ (ಅಮಲಾ) ಎಂದು ಸ್ನೇಹಿತರು ಮತ್ತು ಆಪ್ತರು ಗೇಲಿ ಮಾಡುವುದುಂಟು. ಆದರೆ ಅಪ್ಪನ (ನಾಗಾರ್ಜುನ ಅಕ್ಕಿನೇನಿ) ಮುದ್ದಿನ ಕೂಸೂ ಆಗಿರುವ ಕಾರಣ ಅಮ್ಮನಿಗಷ್ಟೇ ರೇಟಿಂಗ್ ಕೊಡುವುದನ್ನು ಅವರು ಒಪ್ಪುವುದಿಲ್ಲ.

‘ಅಮ್ಮನ ಅಮ್ಮ ಅಂದರೆ ನನ್ನಜ್ಜಿ ಐರಿಶ್‌ ಮೂಲದವರು. ಹಾಗಾಗಿ ಅವರ ಚರ್ಮದ ಬಣ್ಣ ಬಂದಿದೆ. ಆದರೆ ಮುಖಚರ್ಯೆ ಅಪ್ಪನ ಯಥಾ ನಕಲು. ಹಾಗಾಗಿ ನಾನು ಅವರಿಬ್ಬರಿಗೂ ಸಮಾನ ರೇಟಿಂಗ್ ಕೊಡುತ್ತೇನೆ. ಅವರಿಬ್ಬರ ಪ್ರೀತಿಗೂ ಈ ರೇಟಿಂಗ್‌ ಅನ್ವಯ. ಕ್ಯಾಮೆರಾ ಮುಂದೆ ನಿಂತಾಗ ಅಜ್ಜ (ಅಕ್ಕಿನೇನಿ ನಾಗೇಶ್ವರ ರಾವ್‌) ಮತ್ತು ಅಪ್ಪನ ವೃತ್ತಿಪರತೆ ಬಂದುಬಿಡುತ್ತದೆ’ ಎಂದು ಅಖಿಲ್ ಹೇಳುತ್ತಾರೆ.

ಆದರೂ ‘ಮಿ ಮಜ್ನು’ ಸ್ವಲ್ಪ ಮಟ್ಟಿಗೆ ತಾರಾ ವರ್ಚಸ್ಸು ತಂದುಕೊಟ್ಟಿದ್ದು ನಿಜ. ಹೊಸ ಸಿನಿಮಾಗಳ ಅವಕಾಶಗಳು ಕೈಯಲ್ಲಿರಲಿ ಇಲ್ಲದಿರಲಿ, ಫಿಟ್‌ನೆಸ್‌ ಬಗ್ಗೆ ಅಖಿಲ್‌ ರಾಜಿ ಮಾಡಿಕೊಳ್ಳುವುದಿಲ್ಲ. ‘ಪ್ರತಿದಿನ ವ್ಯಾಯಾಮ ಮಾಡುವುದು ಅಪ್ಪನಿಂದ ಕಲಿತ ಶಿಸ್ತು. ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಅವರು ಯಾವುದಾದರೊಂದು ವ್ಯಾಯಾಮ ಮಾಡುತ್ತಾರೆ. ಅದನ್ನು ನೋಡುತ್ತಾ ನೋಡುತ್ತಾ ನಾನೂ ಫಿಟ್‌ನೆಸ್‌ ಫ್ರೀಕ್‌ ಆಗಿಬಿಟ್ಟಿದ್ದೇನೆ’ ಎಂದು ಹೇಳುತ್ತಾರೆ.

ಭಾಸ್ಕರ್‌ ಕ್ಯಾಂಪ್‌ನಲ್ಲಿ...

ತೆಲುಗಿನ ನಿರ್ದೇಶಕ ಬೊಮ್ಮರಿಲ್ಲು ಭಾಸ್ಕರ್‌ ಅವರ ಹೊಸ ಚಿತ್ರದಲ್ಲಿ ಅಖಿಲ್‌ ನಾಯಕನಟನಾಗಿ ನಟಿಸುವುದು ಬಹುತೇಕ ಖಚಿತವಾಗಿದೆ. ಗ್ಲಾಮರ್ ಗೊಂಬೆ ಕಿಯಾರಾ ಅಡ್ವಾಣಿ ಅಖಿಲ್‌ ಜೊತೆ ಡುಯೆಟ್‌ ಹಾಡಲಿದ್ದಾರೆ. ಕೌಟುಂಬಿಕ ಕಥಾ ವಸ್ತುವುಳ್ಳ ಈ ಚಿತ್ರ ಇಷ್ಟರಲ್ಲೇ ಸೆಟ್ಟೇರಲಿದೆ.

ಏಪ್ರಿಲ್‌ ಎಂಟರಂದು ಅಖಿಲ್‌ 25ಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷದ ಭವಿಷ್ಯವಾಣಿಗಳು ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆಯುತ್ತವೆಯೇ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT