ಕನ್ನಡದಲ್ಲಿ 36 ವರ್ಷಗಳ ಹಿಂದೆ ‘ಪುಷ್ಪಕ ವಿಮಾನ’ ಎಂಬ ಮೂಕಿ ಚಿತ್ರ ತೆರೆಗೆ ಬಂದಿತ್ತು. ಈಗ ‘ಮಹಾಗುರು’ ಎಂಬ ಮತ್ತೊಂದು ಪೂರ್ಣಪ್ರಮಾಣದ ಮೂಕಿ ಚಿತ್ರ ಸೆಟ್ಟೇರಿದೆ. ಫ್ಯಾಂಟಸಿ ಕಥಾಹಂದರ ಹೊಂದಿರುವ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿತು. ಮೈಸೂರು ರಮಾನಂದ್, ಮಹಿಮಾಗುಪ್ತ, ಬ್ಯಾಂಕ್ ಜನಾರ್ಧನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಕಸ್ತೂರಿ ಜಗನ್ನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ನಿರ್ದೇಶಕ ಕಸ್ತೂರಿ ಜಗನ್ನಾಥ್ ಮಾತನಾಡಿ, ‘ಸೌಂಡ್ ಎಫೆಕ್ಟ್‌ನಲ್ಲೇ ಕಥೆ ಹೇಳುತ್ತೇವೆ. ಕಾಡಿನಲ್ಲಿರುವ ಗುಪ್ತನಿಧಿಯನ್ನು ಹುಡುಕಿಕೊಂಡು ಹೋಗುವ ಮಂತ್ರವಾದಿ ಹಾಗೂ ಅದನ್ನು ಕಾಯುತ್ತಿರುವ ಯಕ್ಷಕನ್ಯೆಯ ನಡುವೆ ನಡೆಯುವ ಕಥಾಹಂದರ ಈ ಚಿತ್ರದಲ್ಲಿದೆ. ಸಾಕಷ್ಟು ಗ್ರಾಫಿಕ್ಸ್ ಇದ್ದು, ಅದನ್ನು ನಾನೇ 6 ತಿಂಗಳಿನಿಂದ ಮಾಡಿರುವೆ. ನನ್ನ ನಿರ್ದೇಶನದ ಮೂರನೇ ಚಿತ್ರವಿದು. ಬೆಂಗಳೂರಿನಲ್ಲಿ ಸೆಟ್ ಹಾಕಿದ್ದೇವೆ. ಸಕಲೇಶಪುರದ ಕಾಡಿನಲ್ಲಿ ಹೆಚ್ಚಿನ ಭಾಗವನ್ನು ಶೂಟ್‌ಮಾಡುತ್ತಿದ್ದೇವೆ’ ಎಂದರು.
ಕೇರಳಮೂಲದ ಎಡಕ್ಕಾವಿಲ್ ಫಿರೋಸ್, ಜಸ್ಸಿನಾ, ಅಶೋಕ್ ಕುಮಾರ್ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಎ.ಸಿ.ಮಹೇಂದ್ರನ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಮುಂಬೈ ಮೂಲದ ಮಹಿಮಾ ಗುಪ್ತ ಚಿತ್ರದ ನಾಯಕಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.