ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸೃಜನಶೀಲತೆ ಮರುಹುಟ್ಟು

Last Updated 26 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಕ ನ್ನಡ ಸೃಜನಶೀಲ ಚಲನಚಿತ್ರಗಳಿಗೆ ಶುಕ್ರದೆಸೆ ಆರಂಭವಾಗಿರುವಂತಿದೆ.

ಹನ್ನೊಂದನೆಯ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶಿತವಾಗುತ್ತಿರುವ ಕನ್ನಡದ ಸೃಜನಶೀಲ ಚಲನಚಿತ್ರಗಳೆಲ್ಲವೂ ತುಂಬಿದ ಗೃಹ ಪ್ರದರ್ಶನಗಳನ್ನು ಕಾಣುತ್ತಿವೆ. ಕಳೆದ ಸಿನಿಮೋತ್ಸವಗಳಿಗೆ ಹೋಲಿಸಿದರೆ ಈ ವರ್ಷದ ಪ್ರತಿಕ್ರಿಯೆ ಮತ್ತಷ್ಟು ಸ್ಪಷ್ಟ. ಈ ಬೆಳವಣಿಗೆ ಸಿನಿಮಾ ವಿಮರ್ಶಕರ ದೃಷ್ಟಿಯಲ್ಲಿ ಸೃಜನಶೀಲ ಚಲನಚಿತ್ರಗಳ ಮರುಹುಟ್ಟು.

‘ಸಿನಿಮೋತ್ಸವ ಆರಂಭವಾದ ದಿನದಿಂದಲೂ ಪ್ರತಿನಿತ್ಯ ಭಾಗವಹಿಸುತ್ತಿದ್ದೇನೆ. ಈ ಸಲ ಸೃಜನಶೀಲ ಚಲನಚಿತ್ರಗಳಿಗೆ ಅಭೂತಪೂರ್ವ ಜನಸ್ಪಂದನೆ ಸಿಕ್ಕಿದೆ. ಪ್ರತಿಯೊಂದು ಹಾಲ್‍ನ ಹೊರಗಡೆ 150-200 ಜನ ಈ ಚಿತ್ರಗಳ ವೀಕ್ಷಣೆ ಸಾಧ್ಯವಾಗದೇ ನಿಂತಿದ್ದು ಅಚ್ಚರಿಯ ವಿಷಯ,’ ಎಂದು ಅನುತ್ತರ ಚಿತ್ರದ ನಿರ್ಮಾಪಕ- ನಟ ನಿಡಸಾಲೆ ಎಂ ಪುಟ್ಟಸ್ವಾಮಯ್ಯ ಹೇಳುತ್ತಾರೆ.

‘ಸೃಜನಶೀಲ ಚಲನಚಿತ್ರಗಳಿಗೆ ಪ್ರೇಕ್ಷಕರೇ ಇಲ್ಲ ಎಂಬ ವಾದವನ್ನು ಅಲ್ಲಗಳೆಯುವ ಬೆಳವಣಿಗೆ ಇದು. ಇಂಥ ಚಿತ್ರಗಳನ್ನು ನೋಡಲು ಕಾತರಿಸುವವರು ಸಾಕಷ್ಟಿದ್ದಾರೆ. ಅನುತ್ತರ ತುಂಬಿದ ಗೃಹಗಳಲ್ಲಿ ಎರಡು ಪ್ರದರ್ಶನ ಕಂಡಿದೆ. ಆಯೋಜಕರಿಗೆ ಈ ಚಿತ್ರದ ಮೂರನೇ ಪ್ರದರ್ಶನಕ್ಕೆ ಮನವಿ ಮಾಡಿಕೊಂಡಿದ್ದೇನೆ’ ಎಂಬುದು ಅವರ ವಿವರಣೆ.

ಸಿನಿಮೋತ್ಸವದ ಕಲಾ ನಿರ್ದೇಶಕ ಎನ್.ವಿದ್ಯಾಶಂಕರ್‌ ಪ್ರಕಾರ, ‘ಕಳೆದ ಮೂರು ಆವೃತ್ತಿಗಳಲ್ಲಿಯೂ ಈ ಪ್ರಕಾರದ ಚಿತ್ರಗಳಿಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ವರ್ಷದಲ್ಲಿ ಅದು ಮತ್ತಷ್ಟು ಹೆಚ್ಚಿದೆ. ಬೇಡಿಕೆಯ ಕಾರಣ ಈ ಚಿತ್ರಗಳ ಎರಡನೇ ಪ್ರದರ್ಶನವನ್ನು ಚಾಮರಾಜಪೇಟೆಯ ಡಾ. ರಾಜಕುಮಾರ ಕಲಾವಿದರ ಸಂಘದಲ್ಲಿ ಆಯೋಜನೆ ಮಾಡಿದ್ದೇವೆ. ಇಂಥ ಚಿತ್ರಗಳು ಹೆಚ್ಚಿನ ಜನರನ್ನು ತಲುಪಬೇಕು’ ಎನ್ನುವುದು ಅವರ ನಿಲುವು.

ಈ ಬೆಳವಣಿಗೆಯನ್ನು ಬೇರೊಂದು ದೃಷ್ಟಿಕೋನದಿಂದ ನೋಡುವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ , ‘ಈ ರೀತಿಯ ಸ್ಪಂದನೆ ಸೃಜನಶೀಲ ಚಲನಚಿತ್ರಗಳನ್ನು ಸೃಷ್ಟಿ ಮಾಡಬಯಸುವವರಿಗೆ ಹುಮ್ಮಸ್ಸು ತುಂಬುತ್ತದೆ. ಇದು ಕನ್ನಡದ ಸಂಸ್ಕೃತಿಯ ಆಯಾಮಗಳನ್ನು ವಿಸ್ತರಿಸುವುದರಲ್ಲಿ ಸಂಶಯವೇ ಇಲ್ಲ’ ಎಂದು ಪ್ರತಿಪಾದಿಸುತ್ತಾರೆ.

ನಿತ್ಯ 20 ಸಾವಿರ ಪ್ರೇಕ್ಷಕರು

ಪ್ರತಿದಿನ ಸುಮಾರು 20,000 ಪ್ರೇಕ್ಷಕರು ಸಿನಿಮೋತ್ಸವಕ್ಕೆ ಭೇಟಿ ನೀಡುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಈ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಸುಮಾರು ಶೇ 60ರಷ್ಟು ಪ್ರೇಕ್ಷಕರು ಹಿರಿಯ ನಾಗರಿಕರು. 20-35 ವಯೋಮಾನದವರ ಪ್ರಮಾಣ ಶೇ 20ರಷ್ಟಿದೆ. 30-35 ವಯೋಮಿತಿಯವರ ಪ್ರಮಾಣ

ಶೇ 20. ಈ ವರ್ಗದ ಪ್ರೇಕ್ಷಕರು ಉದ್ಯೋಗಸ್ಥರಾಗಿರುವುದರಿಂದ ಅವರಿಗೆ ಆಸಕ್ತಿಯಿದ್ದರೂ ಸಿನಿಮೋತ್ಸವಕ್ಕೆ ಬರಲಾಗುತ್ತಿಲ್ಲ ಎಂಬುದು ಆಯೋಜಕರ ವಿವರಣೆ. ಹನ್ನೊಂದನೆಯ ಆವೃತ್ತಿಯ ಡೆಲಿಗೇಟ್ಸ್ ಸಂಖ್ಯೆ 7,000. ಮೊದಲನೆಯ ಆವೃತ್ತಿಯ ಡೆಲಿಗೇಟ್ಸ್ ಸಂಖ್ಯೆ 600. ಮೈಸೂರಿನಲ್ಲಿ ನಡೆದ ಸಿನಿಮೋತ್ಸವದಲ್ಲಿ ಅತಿ ಹೆಚ್ಚು ಡೆಲಿಗೇಟ್ಸ್ ಭಾಗವಹಿಸಿದ್ದರು. ಅವರ ಸಂಖ್ಯೆ 9,000.

ಕನ್ನಡ ಸಿನಿಮಾಸ್ಪರ್ಧೆಯಲ್ಲಿರುವ ಚಿತ್ರಗಳು

ಅನಂತು v/s ನುಸ್ರುತ್, ಅನುತ್ತರ, ಅಟ್ಟಯ್ಯವ ಹಂದಿ ಕಾಯೋಳು, ಬೆಳಕಿನ ಕನ್ನಡಿ, ಕಾನೂರಾಯಣ, ನಾತಿಚರಾಮಿ, ನೀರು, ಒಂದಲ್ಲಾ ಎರಡಲ್ಲಾ, ರಾಮನ ಸವಾರಿ, ಸಾವಿತ್ರಿಬಾಯಿ ಫುಲೆ, ಸ್ಮಶಾನ ಮೌನ, ಸಮಾನತೆಯ ಕಡೆಗೆ ಹಾಗೂ ವಿಶ್ವ ಮಾನವ

ಕನ್ನಡ ಜನಪ್ರಿಯ ಮನೋರಂಜನಾತ್ಮಕ ಸಿನಿಮಾ ಸ್ಪರ್ಧೆಯಲ್ಲಿರುವ ಚಿತ್ರಗಳು: ಸ.ಹಿ.ಪ್ರಾ. ಶಾಲೆ ಕಾಸರಗೋಡು, ಕೆಜಿಎಫ್ ಚಾಪ್ಟರ್-1, ಅಯೋಗ್ಯ, ದಿ ವಿಲನ್, ಹಂಬಲ್ ಪೋಲಿಟಿಷಿಯನ್ ನೋಗರಾಜ್, ರ‍್ಯಾಂಬೋ-2, ರಾಜೂ ಕನ್ನಡ ಮೀಡಿಯಂ ಹಾಗೂ ಟಗರು.

***

ಕನ್ನಡ ಸೃಜನಶೀಲ ಚಲನಚಿತ್ರಗಳಿಗೆ ಉತ್ತಮ ಸ್ಪಂದನೆ ಇರುವುದು ನಿಜ. ಆದರೇ ಈ ಪ್ರೇಕ್ಷಕರು ಕಳೆದ ಆವೃತ್ತಿಗೆ ಬಂದವರೇ ಆಗಿದ್ದಾರೆ. ಇಂಟರ್‍ನೆಟ್‍ನಲ್ಲಿ ಚಿತ್ರ ನೋಡಿದವರೋ ಅಥವಾ ಪಾಸ್ ಸಿಕ್ಕಿದೆ ಎಂಬ ಕಾರಣಕ್ಕೋ ಬಂದವರೋ ಆಗಿರುವ ಸಾಧ್ಯತೆಯಿದೆ. ಹೊಸ ಪ್ರೇಕ್ಷಕರನ್ನು ಸೃಷ್ಟಿಸಲು ನಾವೇನು ಮಾಡಿದ್ದೇವೆಂಬುದನ್ನು ವಿಮರ್ಷಿಸಲು ಇದು ಸಕಾಲ. ಇಂತಹ ಚಿತ್ರಗಳ ಉಳಿವಿನ ದೃಷ್ಟಿಯಿಂದ ಸಿನಿಮೋತ್ಸವ ಬಹುದೊಡ್ಡ ಕಾರ್ಯ ಮಾಡಿದೆ. ಹೊಸ ಅಲೆಯ ಚಿತ್ರಗಳು ರಾಜ್ಯ ಬೇರೆಡೆ ಹಾಗೂ ಇಡೀ ವರ್ಷ ಪ್ರದರ್ಶನಗೊಳ್ಳುವಂತಾಗಬೇಕು. ಆಗ ಮಾತ್ರ ಹೊಸ ಪ್ರೇಕ್ಷಕರ ಸೃಷ್ಟಿಸಾಧ್ಯ.

–ಮಂಸೋರೆ, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT