ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಕಾಲೀನ ವಿದ್ಯಮಾನಗಳಿಗೆ ವ್ಯಂಗ್ಯಚಿತ್ರಗಳು ಮುಖಾಮುಖಿ

Last Updated 14 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ವಯಸ್ಸು 76. ಬತ್ತದ ಉತ್ಸಾಹ ಮತ್ತು ಜೀವನ ಪ್ರೀತಿಯಿಂದಲೇ ವ್ಯಂಗ್ಯಚಿತ್ರಗಳ ಮೂಲಕ ಸಮಕಾಲೀನ ವಿದ್ಯಮಾನಗಳಿಗೆ ಮುಖಾಮುಖಿ. ಯುವ ಕಾರ್ಟೂನಿಸ್ಟ್‌ಗಳಿಗೆ ಸ್ಫೂರ್ತಿ.. ವ್ಯಂಗ್ಯಚಿತ್ರಕಾರರೊಬ್ಬರ ಸಾರ್ಥಕ ಯಾನವಿದು.

ಶಿಡ್ಲಘಟ್ಟದಲ್ಲಿ ಹುಟ್ಟಿದ ವ್ಯಂಗ್ಯಚಿತ್ರಕಾರ ಪಾಂಡುರಂಗರಾವ್, ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ (1965ರಲ್ಲಿ ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ). ಉದ್ಯೋಗದ ತಲಾಶೆಯಲ್ಲಿದ್ದಾಗ ಸಿಕ್ಕಿದ್ದು ಮಧ್ಯಪ್ರದೇಶದ ಬಿಲಾಯಿ ಉಕ್ಕಿನ ಕಾರ್ಖಾನೆಯ ಕೆಲಸ. ಅಲ್ಲಿಯೇ ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿ ಪದೋನ್ನತಿ ಸಿಕ್ಕಿದ ಮೇಲೆ ಅವರ ವ್ಯಂಗ್ಯಚಿತ್ರ ಹವ್ಯಾಸಕ್ಕೆ ಹೊಸ ತಿರುವು ಸಿಕ್ಕಿತು.

ಈ ಸಂದರ್ಭದಲ್ಲೇ ದೇಶ, ವಿದೇಶಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರದರ್ಶನಗೊಂಡು ಹೆಸರು ಗಳಿಸಿದವು. ಕಾರ್ಖಾನೆಯಲ್ಲೂ ಇವರ ಹವ್ಯಾಸಕ್ಕೆ ಬೆಂಬಲ ಸಿಕ್ಕಿತು. 36 ವರ್ಷಗಳ ಸುದೀರ್ಘಕಾಲ ಕೆಲಸ ಮಾಡಿ ಸೀನಿಯರ್ ಮ್ಯಾನೇಜರ್ ಹುದ್ದೆಯಲ್ಲಿ ನಿವೃತ್ತರಾದರು. ಅವರು 2001ರಿಂದ 2005ರವರೆಗೆ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷರೂ ಆಗಿದ್ದರು.

1965ರ ಕಾಲಘಟ್ಟದಲ್ಲಿ ಮೊದಲ ಬಾರಿಗೆ ‘ಸುಧಾ’ವಾರಪತ್ರಿಕೆಯಲ್ಲಿ ಪ್ರಕಟವಾದ ಅವರ ಹಾಸ್ಯಭರಿತ ಕಾರ್ಟೂನ್‌ಗಳು ಈ ಕ್ಷೇತ್ರದಲ್ಲಿ ತಳವೂರಲು ಬುನಾದಿ ಹಾಕಿ ಕೊಟ್ಟಿತು. ಪ್ರಜಾವಾಣಿ – ಡೆಕ್ಕನ್‌ ಹೆರಾಲ್ಡ್‌ ಬಳಗದಿಂದ ಗೌರವ ಧನವಾಗಿ ನೀಡಲಾದ ಕೆನರಾ ಬ್ಯಾಂಕ್‌ನ ₹20 ಚೆಕ್‌ ಅವರ ಜೀವನದ ಅವಿಸ್ಮರಣೀಯ ಘಟನೆ. ಚೆಕ್‌ ಪಡೆದು ಕುಣಿದಾಡಿದ ಯೌವ್ವನದ ದಿನಗಳನ್ನು ಕಣ್ಣು ಮುಂದೆ ತಂದುಕೊಂಡರು.

ಕೆಲಸದ ನಿಮಿತ್ತ ಅವರು ದೂರದ ಮಧ್ಯಪ್ರದೇಶದಲ್ಲಿದ್ದರೂ ವ್ಯಂಗ್ಯಚಿತ್ರಗಳ ಮೂಲಕ ಕರ್ನಾಟಕದ ಒಡನಾಟ ಇದ್ದೇ ಇತ್ತು. ಮಲ್ಲಿಗೆ, ಗೋಕುಲ, ಕಸ್ತೂರಿ, ನಗೆ ಮುಗುಳು ನಿಯತಕಾಲಿಕೆಗಳಲ್ಲಿ ಅವರ ಅಪರೂಪದ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. 76ರ ಇಳಿವಯಸ್ಸಿನಲ್ಲೂ ವ್ಯಂಗ್ಯಚಿತ್ರ ಯಾನ ಮುಂದುವರಿದಿದೆ. ಬತ್ತದ ಉತ್ಸಾಹ, ಜೀವನ ಪ್ರೀತಿಯಿಂದಲೇ ವ್ಯಂಗ್ಯಚಿತ್ರಗಳನ್ನು ಗೀಚುತ್ತಾ ಸಮಕಾಲೀನ ವಿದ್ಯಮಾನಗಳಿಗೆ ಮುಖಾಮುಖಿ ಆಗಿದ್ದಾರೆ. ಮೇಲಾಗಿ ಯುವ ಕಾರ್ಟೂನಿಸ್ಟ್‌ಗಳಿಗೆ ಸ್ಫೂರ್ತಿದಾತರು.

ನಗರದ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿರುವ ಅವರ ರಾಜಕೀಯ, ಸಾಮಾಜಿಕ, ಪರಿಸರಕ್ಕೆ ಸಂಬಂಧಿಸಿದ ಕಾರ್ಟೂನ್‌ಗಳು ವಿಷಯವೊಂದರ ಸಂದೇಶ ದಾಟಿಸುವ ವಾಹಕ ಶಕ್ತಿಗಳಾಗಿ ಬಿಂಬಿತವಾಗಿವೆ. ಬಹುತೇಕ ವ್ಯಂಗ್ಯಚಿತ್ರಗಳು ಶೀರ್ಷಿಕೆ ರಹಿತ ಎನ್ನುವುದು ವಿಶೇಷ. ಮರೆತ ಬಾಲ್ಯ ಜೀವನ, ಸಾಮಾಜಿಕ ಜಾಲಾತಾಣಗಳ ಗೀಳು, ಮೈತ್ರಿ ಸರ್ಕಾರದಲ್ಲಿ ರಾಜಕೀಯ ಜುಗಲ್‌ ಬಂದಿ, ಕುರ್ಚಿಗಾಗಿ ಕಿತ್ತಾಟ, ಮೈತ್ರಿ ಧರ್ಮಪಾಲನೆ ಸಂಕಷ್ಟ, ಭಯೋತ್ಪಾದನೆ, ಉಗ್ರವಾದ ಕೂಡ ಇವರ ಕಾರ್ಟೂನ್‌ಗಳಿಗೆ ವಿಷಯ ವಸ್ತುವಾಗಿದೆ. ಇವೆಲ್ಲವೂ ಗಂಭೀರ ಹಾಗೂ ತಿಳಿಹಾಸ್ಯವನ್ನು ಉಣಬಡಿಸುತ್ತವೆ.

ಈ ಪ್ರದರ್ಶನದ ಪ್ರಮುಖ ಆಕರ್ಷಣೆ 3ಡಿ ಇಲ್ಯುಷನ್‌ ವ್ಯಂಗ್ಯಚಿತ್ರಗಳು. (ಭ್ರಮಾತ್ಮಕ ಚಿತ್ರಗಳು) ಕಾರ್ಟೂನ್‌ ಲೋಕದಲ್ಲಿ ಇದೊಂದು ಹೊಸ ಪ್ರಯೋಗ. ನೆರಳಿನಾಟದ ಚಿತ್ರಗಳನ್ನು ನೋಡುವುದೇ ಕಣ್ಣಿಗೆ ಸೋಚಿಗ. ಇದರ ಮೂಲಕ ಪಾಂಡುರಂಗರಾವ್ ಹೊಸತನಕ್ಕೆ ತೆರೆದುಕೊಂಡಿದ್ದಾರೆ.

ಅವರ ವ್ಯಂಗ್ಯಚಿತ್ರಗಳು ಹಿಂದಿ ಭಾಷೆಯ ‘ದೈನಿಕ ಭಾಸ್ಕರ್’ ಮತ್ತು ‘ನವಭಾರತ್’ ಸೇರಿದಂತೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ 14 ಬಾರಿ,‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ನಲ್ಲಿ 10 ಬಾರಿ ಪ್ರವೇಶ ಪಡೆದು ದಾಖಲೆ ಸಾಧಿಸಿದ್ದಾರೆ. ಅವರ ವ್ಯಂಗ್ಯಚಿತ್ರಗಳು ಈಗಾಗಲೇ ನವದೆಹಲಿ, ಮುಂಬೈ, ಮೈಸೂರು, ಬೆಂಗಳೂರಿನಲ್ಲಿ ಪ್ರದರ್ಶನ ಕಂಡಿವೆ. ಇಳಿ ವಯಸ್ಸಿನಲ್ಲೂ ಷಟಲ್‌ಬ್ಯಾಡ್ಮಿಂಟನ್‌ ಆಡುತ್ತಾ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ.

ಪಾಂಡುರಂಗರಾವ್ ರಚನೆಯ ವ್ಯಂಗ್ಯಚಿತ್ರ ಪ್ರದರ್ಶನ: ಆಯೋಜನೆ, ಸ್ಥಳ–ಇಂಡಿಯನ್‌ ಕಾರ್ಟೂನ್‌ ಗ್ಯಾಲರಿ, ಮಿಡ್‌ಫೋರ್ಡ್‌ ಹೌಸ್‌, ಮಿಡ್‌ಫೋರ್ಡ್‌ ಗಾರ್ಡನ್‌, ಎಂ.ಜಿ. ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 6. ಪ್ರದರ್ಶನದ ಕೊನೆ ಮಾರ್ಚ್‌ 23ರವರೆಗೆ. ಉಚಿತ ಪ್ರವೇಶ. ಮಾಹಿತಿಗೆ 99800 91428

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT