ಅಶಿಕ್ಷಿತರ ಪಾಲಿನ ‘ನಿಜ ಸರಸ್ವತಿ’

7

ಅಶಿಕ್ಷಿತರ ಪಾಲಿನ ‘ನಿಜ ಸರಸ್ವತಿ’

Published:
Updated:
Deccan Herald

ಚಿತ್ರ: ಸಾವಿತ್ರಿಬಾಯಿ ಫುಲೆ

ನಿರ್ಮಾಪಕರು: ಬಸವರಾಜ ವಿ. ಭೂತಾಳಿ

ನಿರ್ದೇಶನ: ವಿಶಾಲ್‌ ರಾಜ್

ತಾರಾಗಣ: ತಾರಾ, ಸುಚೇಂದ್ರಪ್ರಸಾದ್‌

ಹತ್ತೊಂಬತ್ತನೆ ಶತಮಾನದಲ್ಲಿಯೇ ಶೂದ್ರರು ಮತ್ತು ಹೆಣ್ಣುಮಕ್ಕಳಿಗೆ ಅಕ್ಷರಲೋಕದ ಹೆಬ್ಬಾಗಿಲು ತೆರೆದಿದ್ದು, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಹೆಗ್ಗಳಿಕೆ. ಆದರೆ, ಆಧುನಿಕಯುಗದಲ್ಲಿ ಮಹಿಳೆಯರು ಸಮಾಜದ ಹಲವಾರು ಕಟ್ಟುಪಾಡುಗಳ ಬಿಗಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಸಂಪೂರ್ಣವಾಗಿ ಸಾಕ್ಷರತೆ ಸಾಧಿಸುವಲ್ಲಿ ಹಿಂದುಳಿದಿದ್ದಾರೆ. ಮಹಿಳಾ ಶಿಕ್ಷಣದ ಮಹತ್ವ ಸಾರಿದ ಭಾರತದ ಪ್ರಥಮ ಶಿಕ್ಷಕಿಯ ಬದುಕನ್ನು ‘ಸಾವಿತ್ರಿಬಾಯಿ ಫುಲೆ’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಶಾಲ್‌ ರಾಜ್. ಇದು ಡಾ.ಸರಜೂ ಕಾಟ್ಕರ್‌ ಅವರ ಕಾದಂಬರಿ ಆಧಾರಿತ ಚಿತ್ರ.

ಸತಿಸಹಗಮನ ಪದ್ಧತಿ, ವೈದಿಕಶಾಹಿಯ ಷಡ್ಯಂತ್ರದ ವಿರುದ್ಧ ಸೆಟೆದು ನಿಂತಾಗ ಫುಲೆ ದಂಪತಿ ಎದುರಿಸಿದ ಎಣೆಯಿಲ್ಲದ ಸಂಕಷ್ಟಗಳ ಕಥೆಯನ್ನು ಸೊಗಸಾಗಿ ದೃಶ್ಯರೂಪಕ್ಕಿಳಿಸಿದ್ದಾರೆ. ಜೀವನದ ರಹಸ್ಯ ಮಂತ್ರದಲ್ಲಿ ಇಲ್ಲ, ಮಾನವೀಯ ಮೌಲ್ಯದಲ್ಲಿ ಅಡಗಿದೆ ಎನ್ನುವ ಸಾವಿತ್ರಿಬಾಯಿ ಫುಲೆ ಅವರ ಮಾತುಗಳು ಚಿತ್ರದುದ್ದಕ್ಕೂ ಧ್ವನಿಸುತ್ತವೆ. 

ಈ ಚಿತ್ರದಲ್ಲಿ ಒಂದು ದೃಶ್ಯವಿದೆ. ಸಾವಿತ್ರಿಬಾಯಿ ಫುಲೆ ಹೆಣ್ಣುಮಕ್ಕಳ ಶಾಲೆ ತೆರೆದು ಪಾಠ ಮಾಡಲು ಹೋಗುತ್ತಾರೆ. ವೈದಿಕರಿಗೆ ಇದನ್ನು ಸಹಿಸಲಾಗುವುದಿಲ್ಲ. ದಾರಿಗೆ ಅಡ್ಡವಾಗಿ ನಿಂತು ಅವರ ಮೇಲೆ ಸಗಣಿ ಎಸೆದು ಅಪಮಾನ ಮಾಡುತ್ತಾರೆ. ಕಲ್ಲುಗಳನ್ನು ತೂರಿ ಭಯಗೊಳಿಸಲು ಯತ್ನಿಸುತ್ತಾರೆ. ‘ಬುಟ್ಟಿಯಲ್ಲಿನ ಸಗಣಿ ಖಾಲಿಯಾಗುತ್ತದೆಯೇ ಹೊರತು ನನ್ನ ಸಾಧನೆಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ’ ಎಂದು ಸಾವಿತ್ರಿಬಾಯಿ ಫುಲೆ ದೃಢ ನಿರ್ಧಾರ ತಳೆಯುತ್ತಾರೆ. ಪಟ್ಟಭದ್ರ ವ್ಯವಸ್ಥೆಯು ತನ್ನ ಅನುಕೂಲಕ್ಕಾಗಿ ಹೆಣ್ಣುಮಕ್ಕಳನ್ನು ಹೇಗೆ ಶಿಕ್ಷಣದಿಂದ ವಂಚಿತಗೊಳಿಸುತ್ತದೆ ಎನ್ನುವುದನ್ನು ನಿರ್ದೇಶಕರು ಸೂಚ್ಯವಾಗಿ ಹೇಳಿದ್ದಾರೆ.

ಶಿಕ್ಷಣ ವಂಚಿತರಾದರೆ ಮೂಢನಂಬಿಕೆಗಳು ಹಿಡಿತ ಸಾಧಿಸುತ್ತವೆ. ಇದಕ್ಕೆ ಮೊದಲು ಬಲಿಯಾಗುವುದೇ ಮಹಿಳೆಯರು ಎನ್ನುವ ಸತ್ಯ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಶ್ರೇಷ್ಠತೆಯ ವ್ಯಸನಕ್ಕೆ ಸಿಲುಕಿ ದಮನಿತರನ್ನು ಶೋಷಣೆಯ ಕೂಪಕ್ಕೆ ದೂಡಿದ ವ್ಯವಸ್ಥೆ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ. 

‘ಸಮಾಜದ ಎಲ್ಲ ಕೆಡುಕುಗಳ ನಿವಾರಣೆಗೆ ಶಿಕ್ಷಣವೇ ಅಸ್ತ್ರ’ ಎನ್ನುವ ಫುಲೆ ದಂಪತಿಯ ಆಶಯ ಪರದೆಯಿಂದ ಹರಿದು ನೋಡುಗರಿಗೂ ಸೋಕಿದ ಅನುಭವವಾಗುತ್ತದೆ. ಸಾವಿತ್ರಿಬಾಯಿ ಫುಲೆಯ ಪಾತ್ರಕ್ಕೆ ತಾರಾ ಜೀವ ತುಂಬಿದ್ದಾರೆ. ಜ್ಯೋತಿಬಾ ಫುಲೆಯಾಗಿ ಸುಚೇಂದ್ರಪ್ರಸಾದ್‌ ಇಷ್ಟವಾಗುತ್ತಾರೆ. ಆಗಿನ ಕಾಲಘಟ್ಟವನ್ನು ನೋಡುಗರಿಗೆ ತಲುಪಿಸುವ ನಿರ್ದೇಶಕರ ಹಂಬಲಕ್ಕೆ ನಾಗರಾಜ ಅದೋನಿ ಅವರ ಛಾಯಾಗ್ರಹಣ ಸಮರ್ಥವಾಗಿ ಸ್ಪಂದಿಸಿದೆ. ಶಿರೀಷ ಜೋಶಿ ಅವರ ಸಂಭಾಷಣೆ ಚಿತ್ರಕ್ಕೆ ಗಟ್ಟಿತನ ಒದಗಿಸಿದೆ. ಸಂಗೀತಾ ಕಟ್ಟಿ ಕುಲಕರ್ಣಿ ಅವರ ಸಂಗೀತ ಸಂಯೋಜನೆಯ ಹಾಡುಗಳು ಚಿತ್ರದ ಮೆರುಗನ್ನು ಹೆಚ್ಚಿಸಿವೆ.  

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !