ಸೋಮವಾರ, ಸೆಪ್ಟೆಂಬರ್ 16, 2019
21 °C

ಮೂಕಪ್ರೇಕ್ಷಕ!

Published:
Updated:
Prajavani

ಚಿತ್ರ: ಮೂಕವಿಸ್ಮಿತ

ನಿರ್ಮಾಣ ಮತ್ತು ನಿರ್ದೇಶನ: ಗುರುದತ್‌ ಶ್ರೀಕಾಂತ್‌

ತಾರಾಗಣ: ಸಂದೀಪ್‌ ಮಲಾನಿ, ಗುರುದತ್‌ ಶ್ರೀಕಾಂತ್‌, ಚಂದ್ರಕೀರ್ತಿ, ವಾಣಿಶ್ರೀ ಭಟ್‌, ಮಾವಳ್ಳಿ ಕಾರ್ತಿಕ್‌, ಶುಭಾ ರಕ್ಷಾ, ರಾಜೇಶ್‌ ಎಸ್‌. ರಾವ್‌, ಪುಷ್ಪಾ ರಾಘವೇಂದ್ರ, ಡಾ.ಕೃಪಾ

ಪದ್ಯ, ಗದ್ಯ ನಾಟಕಗಳ ಮೂಲಕ  ‘ಕಂಗ್ಲಿಷ್‌’ ಶೈಲಿಯ ಹಾಸ್ಯ ಪರಿಚಯಿಸಿದವರು ಟಿ.ಪಿ. ಕೈಲಾಸಂ. ಅವರ ಪ್ರಸಿದ್ಧ ನಾಟಕಗಳಲ್ಲಿ ಒಂದೆನಿಸಿದ ‘ಟೊಳ್ಳುಗಟ್ಟಿ’ಯನ್ನು ತೆರೆಯ ಮೇಲೆ ತರುವ ಸಾಹಸ ಮಾಡಿದ್ದಾರೆ ಯುವ ನಿರ್ದೇಶಕ ಶ್ರೀಕಾಂತ್‌ ಗುರುದತ್‌. ಆದರೆ, ಆ ನಾಟಕವನ್ನು ತೆರೆಗೆ ಒಗ್ಗಿಸುವಲ್ಲಿ ಕೊಂಚ ಎಡವಿದ್ದಾರೆ. ಬಹಳ ಜಾಣ್ಮೆ, ಎಚ್ಚರಿಕೆ ತೋರದಿದ್ದರೆ ಪ್ರೇಕ್ಷಕಪ್ರಭುವಿನ ಪಾಡು ‘ಮೂಕಪ್ರೇಕ್ಷಕ’!.

1950ರ ದಶಕದಲ್ಲಿನ ಮಧ್ಯಮ ವರ್ಗದ ಅವಿಭಕ್ತ ಮಾಧ್ವ ಬ್ರಾಹ್ಮಣ ಕುಟುಂಬವೊಂದರಲ್ಲಿ ನಡೆಯುವ ‘ಹಾಳು ಸಂಸಾರದ ಗೋಳು’ ಕೇಂದ್ರವಾಗಿಟ್ಟುಕೊಂಡು, ಸಂಬಂಧಗಳೊಳಗೆ ಎಣಿಸುವ ಭೇದಭಾವಕ್ಕೆ ಕನ್ನಡಿ ಹಿಡಿಯಲು ಕೈಲಾಸಂ ಹೆಣೆದ ನಾಟಕವೇ ಟೊಳ್ಳುಗಟ್ಟಿ. 

ಕುಟುಂಬದ ಯಜಮಾನ ಹಿರಿಯಣ್ಣಗೆ (ಸಂದೀಪ್‌ ಮಲಾನಿ) ಇಬ್ಬರು ಗಂಡು ಮಕ್ಕಳು. ಹಿರಿಮಗ ಪುಟ್ಟು ಮೇಲೆ ಭಾರೀ ಮಮತೆ. ಕಿರಿಮಗ ಮಾಧು ಮೇಲೆ ಸಿಕ್ಕಾಪಟ್ಟೆ ಅಸಹನೆ, ತಿರಸ್ಕಾರ. ಮುಪ್ಪು ಅಡರಿ ಮೊಮ್ಮಕ್ಕಳನ್ನು ಆಡಿಸಬೇಕಾದಾಗ ಪುತ್ರಿ ಸಂತಾನ ಪ್ರಾಪ್ತಿ. ಬಾಣಂತನಕ್ಕೂ ಬಿಡದೆ ಕಾಡುವ ಕಾಯಿಲೆಗೆ ಹಾಸಿಗೆ ಹಿಡಿದು ಹೈರಾಣಾಗುವ ಹಿರಿಯಣ್ಣನ ಪತ್ನಿ. ಇಬ್ಬರು ಗಂಡುಮಕ್ಕಳಿಗೆ ಲಗ್ನವಾಗಿಯೂ, ಅವರ ವಿದ್ಯಾಭ್ಯಾಸ ಮುಂದುವರಿಕೆ. ಹಿರಿಮಗ ಬಿ.ಎ ಪಾಸಾಗಿದ್ದಕ್ಕೆ ಅಪ್ಪನಿಗೆ ಹಿರಿಹಿರಿ ಹಿಗ್ಗು. ಕಿರಿಮಗ ಎಸ್ಸೆಸ್ಸೆಲ್ಲಿ ಫೇಲಾಗಿದ್ದಕ್ಕೆ ಆತನನ್ನು ಅಪ್ಪನೇ ಒದ್ದು ಹೊರಹಾಕುವುದು ಬಹಳಷ್ಟು ಮನೆಗಳ ಗೋಳು. ಯಾವ ಮಗ ಟೊಳ್ಳು, ಯಾವ ಮಗ ಗಟ್ಟಿ ಎನ್ನುವ ಕುತೂಹಲ ಮಾತ್ರ ಕ್ಲೈಮ್ಯಾಕ್ಸ್‌ನಲ್ಲಿ ತಣಿಯುತ್ತದೆ.

ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರದು ರಂಗಭೂಮಿಯ ಹಿನ್ನೆಲೆ. ಇದರಿಂದಲೋ ಅಥವಾ ‘ಟೊಳ್ಳುಗಟ್ಟಿ’ಯೂ ಹೇಳಿಕೇಳಿ ನಾಟಕವಾಗಿರುವುದರಿಂದಲೋ ಸಂಭಾಷಣೆಯಲ್ಲೂ, ಅಭಿನಯದಲ್ಲೂ ರಂಗಭೂಮಿಯ ಛಾಪು ಕಾಣಿಸುತ್ತದೆ. ಸಿನಿಮಾ ನೋಡುತ್ತಿದ್ದೇವೆ ಎನ್ನುವುದಕ್ಕಿಂತ, ಒಮ್ಮೊಮ್ಮೆ ಡಾಕ್ಯುಮೆಂಟರಿ ನೋಡುತ್ತಿರುವಂತೆ ಅನಿಸುತ್ತದೆ. ನಿರ್ದೇಶಕರು ‘ಟೊಳ್ಳುಗಟ್ಟಿ’ ಕಥೆ ಹೇಳಲು ಹೊರಟಿದ್ದಾರೊ ಅಥವಾ ತಾನು ಏನಾಗಿದ್ದೀನಿ, ಮುಂದೇನಾಗುತ್ತೀನಿ ಎನ್ನುವುದನ್ನು ಹೇಳಲು ಹೊರಟಿದ್ದಾರೊ ಎನ್ನುವ ಗೊಂದಲದಲ್ಲಿ ಪ್ರೇಕ್ಷಕರನ್ನು ಬೀಳಿಸುತ್ತದೆ. ಸಿನಿಮಾದೊಳಗೆ ಮತ್ತೊಂದು ಸಿನಿಮಾ ತೋರಿಸಲು ಮಾಡಿರುವ ಪ್ರಯತ್ನ, ಸಿನಿಮಾ ಮಾಡಲು ಪಟ್ಟಪಾಡನ್ನು ನಿರ್ದೇಶಕರು ಸ್ವಗತದಂತೆ ಚಿತ್ರಕಥೆಯೊಂದಿಗೆ ಹೇಳಲು ಹೋಗಿ, ಆ ಭಾರವನ್ನು ಪ್ರೇಕ್ಷಕರು ಸಹಿಸಿಕೊಳ್ಳುವಂತೆ ಮಾಡಿದ್ದಾರೆ. 

ಕೈಲಾಸಂ ಸಾಹಿತ್ಯ ಓದಿಕೊಂಡವರು ಈ ಸಿನಿಮಾದಲ್ಲಿ ಹಾಸ್ಯ, ಮನರಂಜನೆ, ರೊಮ್ಯಾಂಟಿಕ್‌ ದೃಶ್ಯ ನಿರೀಕ್ಷಿಸಿದರೆ ನಿರಾಸೆ‌ ಖಚಿತ. ಹಾಗಾಗಿಯೇ ‘ಟೊಳ್ಳು ನಿರೀಕ್ಷೆ, ಸಿನಿಮಾ ಗಟ್ಟಿ’ ಎಂಬ ಅಡಿಬರಹವನ್ನು ಸಿನಿಮಾಕ್ಕೆ ಕೊಟ್ಟುಕೊಂಡು, ನಿರೀಕ್ಷಣಾ ಜಾಮೀನು ಪಡೆದಿರಬಹುದು. ಆದರೆ, ಒಂದು ಮಾತಂತು ನಿಜ; ಸಿನಿಮಾ ನೀರಸವಾಗುವುದನ್ನು ತಾಯಿ ಭಾಗೀರತಮ್ಮ ಮತ್ತು ಕಿರಿಮಗ ಮಾಧು ನಡುವಿನ ಸೆಂಟಿಮೆಂಟ್‌ ದೃಶ್ಯಗಳು ತಪ್ಪಿಸಿವೆ. ಹಿರಿಯಣ್ಣನಾಗಿ ಬಹುಭಾಷಾ ನಟ ಸಂದೀಪ ಮಲಾನಿ, ಪುಟ್ಟನಂತಹ ಪೆಕ್ಯೂಲರ್‌ ಕ್ಯಾರೆಕ್ಟರ್‌ ಅಹವಾಹಿಸಿಕೊಂಡಂತಿರುವ ಕಾರ್ತಿಕ್‌ ಮಾವಳ್ಳಿ, ಮಾಧುವಾಗಿ ಚಂದ್ರಕೀರ್ತಿ, ಮುಗ್ಧ ಸೊಸೆ ಸಾತುವಾಗಿ ವಾಣಿಶ್ರೀ ಭಟ್‌, ಸೋಮಾರಿ ಸೊಸೆ ಪಾತುವಾಗಿ ಶುಭಾ ರಕ್ಷಾ, ಹಿರಿಯಣ್ಣನ ಪತ್ನಿ ಭಾಗಿರತಮ್ಮನಾಗಿ ಪುಷ್ಪಾ ರಾಘವೇಂದ್ರ ಅವರ ಅಭಿನಯ ಕಣ್ಣಿಗೆ, ಮನಸಿಗೆ ಒಂದಿಷ್ಟು ಹಿತಾನುಭವ ನೀಡುತ್ತದೆ.

ಪರಿಕಲ್ಪನೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನದ ನೊಗ ಹೊರುವ ಜತೆಗೆ ನಟನೆಯ ಭಾರವನ್ನು ಶ್ರೀಕಾಂತ್‌ ಗುರುದತ್‌ ಹೆಗಲಿಗೆ ಹಾಕಿಕೊಂಡ ಪರಿಣಾಮವೇನೊ, ಸಿನಿಮಾ ಓಡುವ ಬದಲು, ತೆವಳುತ್ತಾ ಸಾಗುತ್ತದೆ. ಪ್ರೇಕ್ಷಕರಿಗೆ ತಾಳ್ಮೆ ಇದ್ದರೆ ಮಾತ್ರ ಸಿನಿಮಾದೊಳಕ್ಕೆ ಇಳಿಯಬಹುದು, ಚಿತ್ರದ ಕಥೆಯೂ ‘ರಾಮನಾಮ’ ಹಾಡಿನಂತೆ ಮನದೊಳಗೆ ಇಳಿಯಲೂಬಹುದು.

ಡಾ.ಚಿನ್ಮಯ ಎಂ. ರಾವ್‌ ಸಂಗೀತ ನಿರ್ದೇಶನವಿರುವ ನಾಲ್ಕು ಹಾಡುಗಳ ಪೈಕಿ, ‘ರಾಮನಾಮ ಅತಿಮಧುರ, ಮನದಲ್ಲಿ ಮೂಡಿದೆ ಮಂದಿರ...’ ಕೇಳಲು ಮಧುರವಾಗಿದೆ. ಲಾಂದ್ರ (ಲಾಟೀನು), ಚಿಮಣಿ ಬುಡ್ಡಿ, ಕಂಬಳಿ... ವಸ್ತ್ರವಿನ್ಯಾಸದಿಂದಿಡಿದು ಪ್ರತಿ ದೃಶ್ಯವೂ 50ರ ದಶಕದ ಕೌಟುಂಬಿಕ ಪರಿಸರದ ಚಿತ್ರಣ ಕಟ್ಟಿಕೊಡುತ್ತದೆ. ಸಿದ್ದು ಜಿ.ಎಸ್‌. ಅವರ ಕ್ಯಾಮೆರಾ ಕೈಚಳಕದಿಂದ ದೃಶ್ಯಗಳು ಕಣ್ಣಿಗೆ ಹಿಡಿಸುತ್ತವೆ. 

ಸಿನಿಮಾ ಶೀರ್ಷಿಕೆ ‘ಮೂಕವಿಸ್ಮಿತ’ಕ್ಕೂ ಸಿನಿಮಾದ ಕಥೆಗೂ ನೇರ ಸಂಬಂಧ ಇಲ್ಲ; ಆದರೆ, ಸಂಬಂಧ ಕಲ್ಪಿಸಿಕೊಳ್ಳಬೇಕಾದರೆ ಸಿನಿಮಾವನ್ನು ಕೊನೆವರೆಗೂ ನೋಡಲೇಬೇಕು.

Post Comments (+)