ಆಸ್ಕರ್‌ ಅಂಗಳದಲ್ಲಿ ಭಾರತದ ಪ್ಯಾಡ್‌ಮ್ಯಾನ್‌ ಪ್ರಭಾವ, ಋತುಮತಿಗಳ ಚಿತ್ರಣ

7
ಡಾಕ್ಯುಮೆಂಟರಿ ವಿಭಾಗದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ

ಆಸ್ಕರ್‌ ಅಂಗಳದಲ್ಲಿ ಭಾರತದ ಪ್ಯಾಡ್‌ಮ್ಯಾನ್‌ ಪ್ರಭಾವ, ಋತುಮತಿಗಳ ಚಿತ್ರಣ

Published:
Updated:

ಲಾಸ್‌ ಏಂಜಲೀಸ್‌: ಋತುಸ್ರಾವದ ಬಗ್ಗೆ ಬೇರೂರಿರುವ ಅಪನಂಬಿಕೆಗಳ ವಿರುದ್ಧ ಭಾರತೀಯ ಮಹಿಳೆಯರ ಹೋರಾಟ ಮತ್ತು ಪ್ಯಾಡ್‌ಮ್ಯಾನ್ ಖ್ಯಾತಿಯ ಅರುಣಾಚಲಂ ಮುರುಗನಂಥಮ್‌ ನೈಜ ಬದುಕನ್ನು ಹೇಳುವ ಚಿತ್ರ ’ಪಿರಿಯಡ್‌.ಎಂಡ್‌ ಆಫ್‌ ಸೆಂಟೆನ್ಸ್‌’. ಆಸ್ಕರ್‌ ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್‌ ವಿಭಾಗದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

91ನೇ ಅಕಾಡೆಮಿ ಪ್ರಶಸ್ತಿಗಳ ಡಾಕ್ಯುಮೆಂಟರಿ ವಿಭಾಗದಲ್ಲಿ ಒಟ್ಟು ಹತ್ತು ಸಿನಿಮಾಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿವೆ. ಪ್ರವೇಶ ಪಡೆದಿದ್ದ 104 ಸಿನಿಮಾಗಳ ಪೈಕಿ ಪಿರಿಯಡ್‌. ಎಂಡ್‌ ಆಫ್‌ ಸೆಂಟೆನ್ಸ್‌ ಹ‌ತ್ತರ ಪಟ್ಟಿಯಲ್ಲಿದೆ. ಲಂಚ್‌ಬಾಕ್ಸ್‌ ಮತ್ತು ಮಸಾನ್‌ನಂತಹ ಸಿನಿಮಾಗಳನ್ನು ನಿರ್ಮಿಸಿದ ಸಿಖ್ಯಾ ಎಂಟರ್‌ಟೈನ್ಮೆಂಟ್‌ ಈ ಚಿತ್ರದ ಸಹ ನಿರ್ಮಾಣ ವಹಿಸಿದೆ ಹಾಗೂ ಗುನೀತ್‌ ಮೋಂಗಾ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. 

ಆಸ್ಕರ್‌ ಅಂತಿಮ ಆಯ್ಕೆ ಪಟ್ಟಿ ಸೋಮವಾರ ಪ್ರಕಟಗೊಳ್ಳುತ್ತಿದ್ದಂತೆ ಇನ್‌ಸ್ಟಾಗ್ರಾಂನಲ್ಲಿ ಮೋಂಗಾ, ’ಅತ್ಯಂತ ಹೆಮ್ಮೆ ಮತ್ತು ರೋಮಾಂಚನವಾಗುತ್ತಿದೆ...’ ಎಂದು ಪ್ರಕಟಿಸಿಕೊಂಡಿದ್ದಾರೆ. 

ಪ್ರಶಸ್ತಿ ಪುರಸ್ಕೃತ ಇರಾನಿಯನ್–ಅಮೆರಿಕನ್‌ ನಿರ್ದೇಶಕ ರಾಯಕಾ ಖೆತಾಬ್ಚಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಲಾಸ್ ಏಂಜಲೀಸ್‌ನ ಓಕ್‌ವುಡ್ ಸ್ಕೂಲ್‌ನ ಉತ್ಸಾಹಿ ವಿದ್ಯಾರ್ಥಿಗಳ ಸಮೂಹ ಮತ್ತು ಅವರ ಶಿಕ್ಷಕರಾದ ಮೆಲಿಸ್ಸಾ ಬರ್ಟನ್‌ ಸ್ಥಾಪಿಸಿದ ಸಂಸ್ಥೆ ಪ್ಯಾಡ್‌ ಪ್ರಾಜೆಕ್ಟ್‌ ಚಿತ್ರ ನಿರ್ಮಾಣ ಕಾರ್ಯ ನಡೆಸಿದೆ. 

ಇದನ್ನೂ ಓದಿ: ಸಾಮಾನ್ಯನೊಳಗೊಬ್ಬ ಅನ್ವೇಷಕ–ಅರುಣಾಚಲಂ ಮುರಗನಂಥಮ್‌ ಜೀವನಗಾಥೆ

ಉತ್ತರ ಪ್ರದೇಶದ ಹಾಪುರದ ಗ್ರಾಮದಲ್ಲಿ ಪ್ಯಾಡ್‌ ಉತ್ಪಾದಿಸುವ ಯಂತ್ರವನ್ನು ಅಳವಡಿಸಿದ ನಂತರದಲ್ಲಿ ಅಲ್ಲಿನ ಬಾಲಕಿಯರು ಮತ್ತು ಮಹಿಳೆಯರು ಕಂಡುಕೊಂಡ ಅನುಭವಗಳನ್ನು 26 ನಿಮಿಷಗಳ ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಭಾರತದಲ್ಲಿಯೇ ಸುಲಭವಾಗಿ ದೊರೆಯುವ ಉತ್ಪನ್ನಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸುವ ಯಂತ್ರಗಳನ್ನು ರೂಪಿಸಿದ ಮುರುಗನಂಥಮ್‌ ಕಥೆಯನ್ನೂ ಚಿತ್ರ ಒಳಗೊಂಡಿರುವುದಾಗಿ ಹಾಲಿವುಡ್‌ರಿಪೋರ್ಟರ್‌.ಕಾಮ್‌ ವರದಿ ಮಾಡಿದೆ. 

ಮುರುಗನಂಥಮ್‌ ಜೀವನದಿಂದ ಪ್ರೇರಣೆ ಪಡೆದು ಈಗಾಗಲೇ ಬಾಲಿವುಡ್‌ನಲ್ಲಿ ’ಪ್ಯಾಡ್‌ ಮ್ಯಾನ್‌’ ಸಿನಿಮಾ ಸಹ ತೆರೆಕಂಡಿದೆ. ಸಣ್ಣ ಗ್ರಾಮಗಳಲ್ಲಿಯೂ ನ್ಯಾಪ್ಕಿನ್‌ ತಯಾರಿಸುವ ಯಂತ್ರಗಳನ್ನು ಅಳವಡಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಪ್ರಯತ್ನಕ್ಕೆ ಬಾರಿ ಮನ್ನಣೆ ದೊರೆತಿದೆ. ಮಹಿಳೆಯರು ಸಣ್ಣ ಉದ್ದಿಮೆ ಮೂಲಕ ಸ್ವಉದ್ಯೋಗ ಸೃಷ್ಟಿಕೊಳ್ಳುವ ಜತೆ ಆರೋಗ್ಯ ಸುಧಾರಣೆಯಲ್ಲಿಯೂ ಪರಿಣಾಮಕಾರಿಯಾಗಿದೆ. 

ವಿದೇಶಿ ಸಿನಿಮಾ ವಿಭಾಗದಲ್ಲಿ ಭಾರತದ ’ವಿಲೇಜ್ ರಾಕ್‌ಸ್ಟಾರ್‌’ ಮುಂದಿನ ಹಂತಕ್ಕೆ ತಲುಪುವುದರಿಂದ ಹಿಂದೆ ಉಳಿದಿದೆ. 2019ರ ಜನವರಿ 22ರಂದು ಆಸ್ಕರ್‌ಗೆ ನಾಮನಿರ್ದೇಶನಗೊಳ್ಳುವ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆಸ್ಕರ್‌ ಪ್ರಶಸ್ತಿ ಸಮಾರಂಭ ಫೆಬ್ರುವರಿ 24ಕ್ಕೆ ನಿಗದಿಯಾಗಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !