ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಕ್ರೈಂ, ಕೌಟುಂಬಿಕ ಥ್ರಿಲ್ಲರ್‌ ‘100’ ಸಿನಿಮಾ: ರಮೇಶ್ ಅರವಿಂದ್

Last Updated 10 ನವೆಂಬರ್ 2021, 9:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಾಮಾಜಿಕ ಜಾಲತಾಣಗಳಿಂದ ವಂಚನೆಗೊಳಗಾಗುವ ಮಧ್ಯಮ ವರ್ಗದ ಕುಟುಂಬದ ಹೋರಾಟವೇ ‘100’ ಸಿನಿಮಾದ ತಿರುಳು’ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ ತಿಳಿಸಿದರು.

ನ.19ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿರುವ ಅವರ ‘100’ಚಿತ್ರದ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಸಮಾಜದ ಕೈಗನ್ನಡಿಯಂತಿರುವ ಈ ಚಿತ್ರವನ್ನು ಇಡೀ ಕುಟುಂಬ ಸಮೇತ ನೋಡಬಹುದು’ ಎಂದರು.

‘ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಇನ್‌ಸ್ಟಾಗ್ರಾಂ ಇವೆಲ್ಲ ಪ್ರಸ್ತುತ ಜನರ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಮೊಬೈಲ್ ನಮಗೆಲ್ಲರಿಗೂ ಪ್ರತ್ಯೇಕ ಜಗತ್ತು ಸೃಷ್ಟಿಸಿದೆ. ನಮಗೆ ಬೇಕಾಗಿದ್ದು, ಬೇಡವಾಗಿದ್ದು ಎಲ್ಲವೂ ಹೊರಗಿನಿಂದ ಮನೆಯೊಳಗೆ ನುಗ್ಗಿ ಬದುಕನ್ನು ಅತಿಕ್ರಮಿಸುವ ಈ ಸೋಷಿಯಲ್‌ ಮೀಡಿಯಾ ಮಾಡುವ ಅವಾಂತರಗಳೂ ನೂರಾರು. ಸೈಬರ್‌ ಅಪರಾಧಗಳ ವಿರುದ್ಧ ನಾಯಕ ಹೋರಾಡಿ ಗೆಲ್ಲುವುದೇ ಈ ಚಿತ್ರದ ವಿಶೇಷತೆ’ ಎಂದು ವಿವರಿಸಿದರು.

‘ನಾನು ಹಿಂದೆ ನೂರು ಚಿತ್ರಗಳಲ್ಲಿ ನಟಿಸಿರಬಹುದು ಆದರೆ ಅದು ಮುಖ್ಯವಲ್ಲ. ನಾಡಿದ್ದು ತೆರೆಗೆ ಬರಲಿರುವ ಹೊಸ ಚಿತ್ರವೇ ನನಗೆ ಮುಖ್ಯ. ಜನ ಮೆಚ್ಚಿದಾಗ ಈ ಚಿತ್ರಕ್ಕಾಗಿ ಎರಡೂವರೆ ವರ್ಷ ಪಟ್ಟಶ್ರಮ ಸಾರ್ಥಕ’ ಎಂದರು.

‘ಸುಸಿ ಗಣೇಶನ್‌ ಅವರ ಮೂಲ ತಮಿಳು ಚಿತ್ರವೇ ‘100’ ಸಿನಿಮಾ ಆದರೂ ಇದು ರಿಮೇಕ್‌ ಅಲ್ಲ, ಕಥೆಯನ್ನೇ ಮರುಸೃಷ್ಟಿ ಮಾಡಲಾಗಿದೆ. ಚಿತ್ರದ ಫ್ಲ್ಯಾಶ್‌ಬ್ಯಾಕ್‌ ನೈಜ ಘಟನೆ ಆಧರಿಸಿದ್ದು, ಕ್ಲೈಮ್ಯಾಕ್ಸ್‌ ಕೂಡ ಸಂಪೂರ್ಣ ಹೊಸದಾಗಿ ಸೃಷ್ಟಿಸಲಾಗಿದೆ. ಕನ್ನಡದೊಂದಿಗೆ ತೆಲುಗಿನಲ್ಲಿ ಕೂಡ ಈ ಚಿತ್ರ ಏಕಕಾಲದಲ್ಲಿ ಬಿಡುಗಡೆ ಆಗಲಿದೆ ’ ಎಂದು ತಿಳಿಸಿದರು.

ಒಟಿಟಿ ಬಹುದೊಡ್ಡ ವೇದಿಕೆ:

ಒಟಿಟಿಯಲ್ಲಿ ಚಿತ್ರಗಳು ತೆರೆಕಾಣುವ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್, ಚಿತ್ರಗಳು ಎಲ್ಲಿ ಬೇಕಿದ್ದರೂ ತೆರೆಕಾಣಲಿ, ಒಟ್ಟಿನಲ್ಲಿ ನಮಗೊಂದು ವೇದಿಕೆ ಬೇಕು. ಒಟಿಟಿ ಬಹುದೊಡ್ಡ ವೇದಿಕೆ. ಒಂದು ಚಿತ್ರಕ್ಕೆ 100ರಷ್ಟು ಶಕ್ತಿ, ಸೃಜಶೀಲತೆ ಹಾಕಿರ್ತಿವಿ. ಅದು ಜನರಿಗೆ ಸರಿಯಾದ ರೀತಿಯಲ್ಲಿ ತಲುಪಿದಾಗ ನಮ್ಮ ಶ್ರಮ ಸಾರ್ಥಕ. ಬಹಳಷ್ಟು ಹೊಸಬರ ಚಿತ್ರಗಳು ಅಲ್ಲಿ ತೆರೆಕಂಡು ಯಶಸ್ಸು ಸಿಕ್ಕಿದೆ’ಎಂದರು.

ಈ ಚಿತ್ರದ ಬಳಿಕ ಇನ್ನೊಂದು ಚಿತ್ರವನ್ನು ಕನ್ನಡ, ತೆಲುಗಿನಲ್ಲಿ ಮಾಡಲು ಉದ್ದೇಶಿಸಿದ್ದೇನೆ. ‘ಶಿವಾಜಿ ಸುರತ್ಕಲ್‌–2’ ಮಾಡುತ್ತಿದ್ದೇನೆ. 2005ರಲ್ಲ ತೆರೆಕಂಡು ಬಹಳ ಯಶಸ್ವಿಯಾಗಿದ್ದ ‘ರಾಮ,ಶಾಮ, ಭಾಮ’ ಚಿತ್ರ ಭಾಗ–2 ಮಾಡುವ ಉದ್ದೇಶವೂ ಇದೆ ಎಂದು ರಮೇಶ್ ವಿವರಿಸಿದರು.

ರಮೇಶ್ ಅರವಿಂದ ನಟಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ಪ್ರಕಾಶ್‌ ಬೆಳವಾಡಿ, ರಾಜುತಾಳಿಕೋಟೆ, ಶೋಭರಾಜ್‌ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿದ್ದಾರೆ. ಸತ್ಯ ಹೆಗಡೆ–ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.

ನಿರ್ಮಾ‍ಪಕ ಎಂ.ರಮೇಶ್‌ ರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT