ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಸಿಕ್ಕರೆ ಬಾಲಿವುಡ್‌ನಲ್ಲಿ ನಟಿಸುತ್ತೇನೆ ಎಂದ ಮಿಸ್ ಇಂಡಿಯಾ ಸಿನಿ ಶೆಟ್ಟಿ

Last Updated 19 ಜುಲೈ 2022, 5:30 IST
ಅಕ್ಷರ ಗಾತ್ರ

ಬಜಪೆ: 2022ರ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಸಿನಿ ಶೆಟ್ಟಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದರು.

ಈ ಸಂದರ್ಭ ಚೆಂಡೆ ವಾದನ ಸಹಿತ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಂಗಾರ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದ ಸಿನಿ ಶೆಟ್ಟಿ ಅವರಿಗೆ ಹೂಮಾಲೆ ಹಾಕಿ, ಹೂಗುಚ್ಛ ನೀಡುವ ಮೂಲಕ, ಕುಟುಂಬಸ್ಥರು ಆರತಿ ಬೆಳಗಿ ಬರಮಾಡಿಕೊಂಡರು.

ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಮುಂಬೈಯಲ್ಲಿಯೇ ಹುಟ್ಟಿ ಬೆಳೆದಿದ್ದು, ‘ಮಿಸ್ ಇಂಡಿಯಾ’ ಕಿರೀಟ ಅಲಂಕರಿಸಿದ ಬಳಿಕ ಮಂಗಳೂರಿಗೆ ಬಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿನಿ, ‘ನನ್ನ ಅಜ್ಜಿಯನ್ನು ಭೇಟಿಯಾಗಲು ಬಂದಿದ್ದೇನೆ. ಮಿಸ್‌ ಇಂಡಿಯಾ ಕಿರೀಟ ಗೆದ್ದ ಮೇಲೆ ಅಜ್ಜಿಯನ್ನು ಭೇಟಿಯಾ ಗುತ್ತಿರುವುದು ಹರ್ಷ ತಂದಿದೆ’ ಎಂದರು.

‘ಸೃಜನಶೀಲತೆ ಹಾಗೂ ನೃತ್ಯವನ್ನು ತುಂಬಾ ಇಷ್ಟ ಪಡುತ್ತೇನೆ. ಇನ್ನೂ ಕಲಿಯುತ್ತಿದ್ದೇನೆ. ಫೆಮಿನಾ ಮಿಸ್ ಇಂಡಿಯಾ ಒಂದು ಅದ್ಭುತ ಪಯಣವಾಗಿತ್ತು. ಆತ್ಮವಿಶ್ವಾಸಹಾಗೂ ಕುತೂಹಲವನ್ನು ಈಪ್ರಯಾಣ ಹೆಚ್ಚಿಸಿದೆ’ ಎಂದು ಅಭಿಪ್ರಾಯಪಟ್ಟರು.

ನಟನೆಯ ಆಸಕ್ತಿ

ಅವಕಾಶ ಸಿಕ್ಕರೆ ಬಾಲಿವುಡ್‌ನಲ್ಲಿ ನಟಿಸಲು ಖಂಡಿತ ಇಷ್ಟ ಪಡುತ್ತೇನೆ. ಆದರೆ ಸದ್ಯಕ್ಕೆ ಮಿಸ್ ವರ್ಲ್ಡ್‌ ತಯಾರಿಯತ್ತ ಗಮನ ಹರಿಸಿದ್ದೇನೆ. ಅಲ್ಲಿ ಉತ್ತಮ ಸ್ಪರ್ಧೆ ನೀಡುವ ಉತ್ಸಾಹದಲ್ಲಿದ್ದೇನೆ, ಒಳ್ಳೆಯ ಮಾರ್ಗದರ್ಶಕರು ಸಿಕ್ಕಿದ್ದಾರೆ. ಗುರುಗಳನ್ನು ನಂಬಿದರೆ ಗೆಲುವು ಸಿಗುತ್ತದೆ ಎನ್ನುವ ನಂಬಿಕೆಯಿದೆ.

ಹೆತ್ತವರೇ ರೋಲ್ ಮಾಡೆಲ್

‘ನನ್ನ ಹೆತ್ತವರೇ ನನ್ನ ರೋಲ್ ಮಾಡೆಲ್. ಅವರಿಂದ ಬಹಳಷ್ಟು ಕಲಿತಿದ್ದೇನೆ. ಅವರು ಆತಿಥ್ಯ ಉದ್ಯಮದಲ್ಲಿರುವುದರಿಂದ ಅವ ರಿಂದ ಬಹಳಷ್ಟು ಮೌಲ್ಯಗಳನ್ನು ಅರಿತಿದ್ದೇನೆ. ಉದಾರತೆ, ನಮ್ರತೆಯನ್ನು ಕಂಡುಕೊಂಡಿದ್ದೇನೆ’ ಎಂದರು.

ತುಳುನಲ್ಲಿ ಮಾತನಾಡಿದ ಸಿನಿ ಶೆಟ್ಟಿ ‘ಮಿಸ್ ವರ್ಲ್ಡ್‌ಗೆ ಹೋಗುತ್ತಿದ್ದೇನೆ. ಸಫಲತೆಯನ್ನು ಪಡೆಯಲು ನಿಮ್ಮೆಲ್ಲರ ಆಶೀರ್ವಾದ ಬೇಕು. ತುಳು ಸಿನಿಮಾದಲ್ಲಿ ಉತ್ತಮ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ’ ಎಂದು ಹೇಳಿದರು.

ಹೋಟೆಲ್‌ ಉದ್ಯಮಿ ಸದಾನಂದ್‌ ಶೆಟ್ಟಿ ಮತ್ತು ಹೇಮಾ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಸಿನಿ ಶೆಟ್ಟಿ, ಅಕೌಂಟಿಂಗ್‌ ಮತ್ತು ಫೈನಾನ್ಸ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಕಟೀಲಿಗೆ ಭೇಟಿ

ಸಿನಿ ಶೆಟ್ಟಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇವಳದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಶೇಷ ವಸ್ತ್ರ ನೀಡಿ ಗೌರವಿಸಿದರು. ದೇವಳದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಜಯರಾಮ ಮುಕಾಲ್ದಿ, ಮೂಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಶ್ರೀಧರ ಅಳ್ವ ಗಣೇಶ್ ಶೆಟ್ಟಿ, ವಿಜಯ ಶೆಟ್ಟಿ, ಸಾಯಿನಾಥ ಶೆಟ್ಟಿ, ಅಭಿಲಾಷ್ ಶೆಟ್ಟಿ, ವರುಣ್ ಕಟೀಲು, ಚಂದ್ರಕಲಾ ಶೆಟ್ಟಿ, ಅಮೂಲ್ಯ ಯು. ಶೆಟ್ಟಿ, ಶಾಲಿನಿ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT