ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2.0’: ಭಾವನೆಗಳೇ ಇಲ್ಲ ಯಂತ್ರಗಳೇ ಎಲ್ಲಾ

Last Updated 30 ನವೆಂಬರ್ 2018, 20:06 IST
ಅಕ್ಷರ ಗಾತ್ರ

* ಚಿತ್ರ:2.O (ತಮಿಳು)
* ನಿರ್ಮಾಣ: ಸುಭಾಷ್ ಕರನ್
* ನಿರ್ದೇಶನ: ಎಸ್.ಶಂಕರ್
* ತಾರಾಗಣ: ರಜನಿಕಾಂತ್, ಆಮಿ ಜಾಕ್ಸನ್, ಅಕ್ಷಯ್ ಕುಮಾರ್, ಸುಧಾಂಶು ಪಾಂಡೆ

ಎಸ್. ಶಂಕರ್ ನಿರ್ದೇಶನದ ಸಿನಿಮಾಗಳಲ್ಲಿ ಪ್ರೇಕ್ಷಕರಿಗೆ ದೃಶ್ಯ ವೈಭವದ ಭರ್ಜರಿ ರಸದೌತಣಸಾಮಾನ್ಯ. 2010ರಲ್ಲಿ ಬಿಡುಗಡೆಗೊಂಡಿದ್ದ ಎಂದಿರನ್ ಸಿನಿಮಾದ ಮುಂದುವರಿದ ಭಾಗ 2.0 ಕೂಡ ಇದಕ್ಕೆ ಹೊರತಾಗಿಲ್ಲ. ಬಿಗ್ ಬಜೆಟ್, ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಇತರ ತಾಂತ್ರಿಕ ಅಂಶಗಳಿಂದಾಗಿ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿದ್ದ ಸಿನಿಮಾ ಇದು.

ಹಾಲಿವುಡ್ ಸಿನಿಮಾಗಳಿಗೆ ಸರಿಸಾಟಿಯಾಗಿ ನಿರ್ಮಾಣವಾಗಿರುವ ಈ ಚಿತ್ರ ವಿಎಫ್ಎಕ್ಸ್ ಮತ್ತು 3ಡಿ ತಂತ್ರಜ್ಞಾನದ ಮೂಲಕ ಪ್ರೇಕ್ಷಕರನ್ನು ಮನೋರಂಜನೆಯ ಉತ್ತುಂಗಕ್ಕೆ ಕೊಂಡೊಯ್ಯುವ ಮೂಲಕ ಅವರ ನಿರೀಕ್ಷೆಗಳನ್ನು ಹುಸಿಗೊಳಿಸಿಲ್ಲ.

ಎಂದಿರನ್ ಸಿನಿಮಾ ತಂತ್ರಜ್ಞಾನ, ದೃಶ್ಯವೈಭವದ ಜೊತೆ ನವಿರು ಪ್ರೇಮ, ಭಾವನಾತ್ಮಕ ಅಂಶಗಳಿಂದಾಗಿ ಪ್ರೇಕ್ಷಕರ ಮನ ಗೆದ್ದಿತ್ತು. ಆದರೆ ಈ ಸಿನಿಮಾದಲ್ಲಿ ಭಾವನಾತ್ಮಕ ಅಂಶಗಳನ್ನು ಶಂಕರ್ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಚಿತ್ರದುದ್ದಕ್ಕೂ ಯಂತ್ರಮಾನವರದ್ದೇ ಕಾರುಬಾರು. ಸಿನಿಮಾದ ಕಥೆ ಪೇಲವವಾಗಿದ್ದರೂ ತಂತ್ರಜ್ಞಾನದ ಅಬ್ಬರ ಅದನ್ನು ಮರೆಮಾಚಿದೆ.

ಹಾಲಿವುಡ್‌ನ 'ಟರ್ಮಿನೇಟರ್' ಸರಣಿಯ ಸಿನಿಮಾಗಳ ಛಾಯೆ ಅಲ್ಲಲ್ಲಿ ಗೋಚರವಾದರೂ ತಮ್ಮದೇ ಹೊಸ ಹೊಳಹುಗಳ ಮೂಲಕ ಶಂಕರ್ ಈ ಚಿತ್ರವನ್ನು ಇನ್ನಷ್ಟು ಪಕ್ವಗೊಳಿಸಿದ್ದಾರೆ. ತಂತ್ರಜ್ಞಾನದ ವಿಷಯದಲ್ಲಿ ಈ ಸಿನಿಮಾ ಎಂದಿರನ್‌ಗಿಂತಲೂ ಬಹಳಷ್ಟು ಮುಂದಿದೆ.

ಜನರ ಮೊಬೈಲ್ ಫೋನ್‌ಗಳು ಇದ್ದಕ್ಕಿದ್ದಂತೆ ಆಕಾಶಕ್ಕೆ ಹಾರಿ ಹೋಗುವ ಘಟನಾವಳಿಗಳಿಂದ ಸಿನಿಮಾ ಆರಂಭವಾಗುತ್ತದೆ. ಯಾವುದೋ ಚೈತನ್ಯದಿಂದ ಸೆಳೆಯಲ್ಪಡುವ ಅವುಗಳು ಮುಂದೆ ದೈತ್ಯ ಶಕ್ತಿಯಾಗಿ ಬೆಳೆದು ಜನರಿಗೆ ಕಂಟಕವಾಗುತ್ತವೆ. ಈ ಸಂದರ್ಭದಲ್ಲಿ ವಿಜ್ಞಾನಿ ಡಾ. ವಸಿಗರನ್ 'ಚಿಟ್ಟಿ' ಯಂತ್ರಮಾನವನನ್ನು ಮತ್ತೆ ಹೊರ ಜಗತ್ತಿಗೆ ತರುತ್ತಾರೆ. ಈ ಎರಡು ದೈತ್ಯ ಯಂತ್ರ ಶಕ್ತಿಗಳ ನಡುವಿನ ಕಾದಾಟವೇ ಈ ಸಿನಿಮಾದ ಕಥಾಹಂದರ.

ಚಿತ್ರದ ಮೊದಲಾರ್ಧದ ಕಥಾನಕಗಳು ಪ್ರೇಕ್ಷಕರಲ್ಲಿ ಗೊಂದಲವುಂಟು ಮಾಡಿದರೆ. ದ್ವಿತೀಯಾರ್ಧದಲ್ಲಿ ಅಕ್ಷಯ್ ಬರುವಿಕೆಯ ಬಳಿಕ ಇದಕ್ಕೆಲ್ಲ ಉತ್ತರ ಸಿಗುತ್ತದೆ. ಈ ರೀತಿಯ ಭಿನ್ನ ನಿರೂಪಣಾ ಶೈಲಿಯ ಮೂಲಕ ಕಥೆ ಸಾಗುತ್ತದೆ.

ರಜನಿಕಾಂತ್ ಅವರು ಡಾ. ವಸಿಗರನ್ ಮತ್ತು 'ಚಿಟ್ಟಿ' ಯಂತ್ರಮಾನವನ ಪಾತ್ರಗಳ ಮೂಲಕ ಎಂದಿರನ್ ಸಿನಿಮಾದಲ್ಲಿ ಮೋಡಿ ಮಾಡಿದಂತೆ ಇಲ್ಲೂ ಪ್ರೇಕ್ಷಕರ ಮನಗೆಲ್ಲುತ್ತಾರೆ. ಪಕ್ಷಿಪ್ರೇಮಿ ಹಾಗೂ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಕ್ಷಯ್ ಕುಮಾರ್ ಮನಸೂರೆಗೊಳ್ಳುತ್ತಾರೆ. ನೀಲಾ ಹೆಸರಿನ ರೋಬೊ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಮಿ ಜಾಕ್ಸನ್ ಲವಲವಿಕೆಯ ನಟನೆಯಿಂದ ಗಮನ ಸೆಳೆಯುತ್ತಾರೆ. ಖಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಧಾಂಶು ಪಾಂಡೆ ಅವರ ಪಾತ್ರ ಹೆಸರಿಗಷ್ಟೆ ಎಂಬಂತಿದೆ.

ಎ.ಆರ್ ರೆಹಮಾನ್ ಅವರ ಹಾಡುಗಳಿದ್ದರೂ ಅವುಗಳು ಅಷ್ಟು ಆಪ್ತ ಎನಿಸುವುದಿಲ್ಲ. ಮೊಬೈಲ್ ಫೋನ್‌ಗಳು ಹೇಗೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿವೆ ಮತ್ತು ಅವುಗಳ ವಿಕಿರಣ ಹೇಗೆ ಪಕ್ಷಿಗಳಿಗೆ ಮಾರಕವಾಗಿದೆ ಎಂದು ಹೇಳುವ ಮೂಲಕ ನಿರ್ದೇಶಕರು ಈ ಸಿನಿಮಾದ ಮೂಲಕ ಅತ್ಯುತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT