ಜನವರಿಯಲ್ಲಿ ಬಿ ಟೌನ್‌ ಚಿತ್ರಗಳು

7

ಜನವರಿಯಲ್ಲಿ ಬಿ ಟೌನ್‌ ಚಿತ್ರಗಳು

Published:
Updated:
Prajavani

ದೊಡ್ಡ ಪ್ರಮಾಣದ ಬಂಡವಾಳದ ಚಿತ್ರಗಳೊಂದಿಗೆ ಸಣ್ಣ ಬಂಡವಾಳದ ಚಿತ್ರಗಳೂ ಗೆದ್ದಿರುವುದು 2018ರ ವಿಶೇಷ. ಸ್ತ್ರೀ, ಬಧಾಯಿ ಹೋ, ರಾಝಿ, ಮುಲ್ಕ್‌, ಅಂಧಾಧುನ್‌ ಚಿತ್ರಗಳನ್ನು ಈ ಪಟ್ಟಿಗೆ ಸೇರಿಸಬಹುದು. ಮೆಗಾ ಚಿತ್ರಗಳೆಂದೇ ಬಿಂಬಿತವಾಗಿದ್ದ ರೇಸ್‌ 3, ಥಗ್ಸ್‌ ಆಫ್‌ ಹಿಂದೊಸ್ತಾನ್‌, ಜೀರೊ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆದರೆ ವರ್ಷದುದ್ದಕ್ಕೂ ಪ್ರೀತಿ ಪ್ರೇಮ ಪ್ರಣಯದ ಮೂಲಕವೂ ಸುದ್ದಿಯಾದ ನಟ ರಣವೀರ್‌ ಸಿಂಗ್‌ ಅಭಿನಯದ ‘ಸಿಂಬಾ’ ವರ್ಷಾಂತ್ಯದಲ್ಲಿ ಪ್ರದರ್ಶನಗೊಂಡಿತು. 

ಈ ವರ್ಷವೂ ಇದೇ ಉಮೇದು ಮುಂದುವರಿಯಲಿದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ಮುಂದಿನ ಆರು ತಿಂಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳ ಮುನ್ನೋಟ ಇಲ್ಲಿದೆ.

ಮುಂದಿನ ವಾರ ಬರಲಿದೆ ‘ಉರಿ’

ಅತಿ ನಿರೀಕ್ಷಿತ ಮತ್ತು ಭಾರತೀಯ ಚಿತ್ರರಂಗದ ಮಟ್ಟಿಗೆ ಮಹತ್ವದ ಚಿತ್ರಗಳಲ್ಲೊಂದು ‘ಉರಿ’. ಭಾರತೀಯ ಸೇನೆಯ ಸರ್ಜಿಕಲ್‌ ಸ್ಟ್ರೈಕ್‌ ಘಟನೆಯನ್ನೇ ಜೀವಾಳವಾಗಿಸಿಕೊಂಡು ನಿರ್ಮಾಣಗೊಂಡಿರುವ ಚಿತ್ರ ಎಂಬುದು ಈ ಕಾತರಕ್ಕೆ ಕಾರಣ. ವಿಕಿ ಕೌಶಲ್‌ ನಟನೆಯ ‘ಉರಿ’, ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆ, ನಮ್ಮ ಯೋಧರ ಬದುಕು, ಯುದ್ಧದ ಸನ್ನಿವೇಶಗಳನ್ನು ಈ ಚಿತ್ರದಲ್ಲಿ ಕಾಣಬಹುದು.

ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್

ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ರಾಜಕೀಯ ಬದುಕು ಮತ್ತು ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭಗಳನ್ನು ಕಟ್ಟಿಕೊಡುವ ಚಿತ್ರ ‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್’. ಜನವರಿ 11ರಂದೇ ಈ ಚಿತ್ರವೂ ‘ಉರಿ’ ಜೊತೆಗೆ ತೆರೆಗೆ ಬರಲಿದೆ.

ಸಂಜಯ್‌ ಬರು ಅವರ ಕೃತಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ವಿಜಯ್ ರತ್ನಾಕರ್‌ ಗುಟ್ಟೆ ನಿರ್ಮಿಸಿರುವ ಈ ಚಿತ್ರದಲ್ಲಿ ಹಿರಿಯ ನಟ ಅನುಪಮ್‌ ಖೇರ್‌ ಅವರು ಸಿಂಗ್ ಪಾತ್ರ ಮಾಡಿದ್ದಾರೆ. ಅಕ್ಷಯ್ ಖನ್ನಾ, ಬರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಇದೇ 25ಕ್ಕೆ ಬರಲಿದೆ ‘ಮಣಿಕರ್ಣಿಕಾ’

2018ರುದ್ದಕ್ಕೂ ಹಲವು ಕಾರಣಗಳಿಂದ ವಿವಾದ ಹುಟ್ಟಿಸುತ್ತಾ, ವಿವಾದದಾಚೆಗೂ ಸಿನಿಮಾ ಮತ್ತು ತಾರಾ ವರ್ಗದ ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದ ಚಿತ್ರ ‘ಮಣಿಕರ್ಣಿಕಾ– ದಿ ಕ್ವೀನ್ ಆಫ್ ಝಾನ್ಸಿ’. ಜನವರಿ 25ರಂದು ತೆರೆಕಾಣುವುದು ಖಚಿತವಾಗಿದೆ.

ಕಂಗನಾ ರನೋಟ್‌, ಝಾನ್ಸಿ ರಾಣಿಯ ಪಾತ್ರದಲ್ಲಿ ನಟಿಸಿರುವುದು ಮತ್ತು ಮೇಕಿಂಗ್ ಸಂದರ್ಭದ ಚಿತ್ರಗಳು ಮತ್ತು ಸುದ್ದಿಗಳು ಕಳೆದ ವರ್ಷಪೂರ್ತಿ ಭಾರಿ ಚರ್ಚೆಗೆ ಒಳಗಾಗಿದ್ದವು. ಕಂಗನಾ, ನಿರ್ದೇಶಕಿಯ ಟೋಪಿ ಧರಿಸಬೇಕಾದ ಅನಿವಾರ್ಯವೂ ಒದಗಿಬಂದಿತ್ತು. ಆದರೆ ಸವಾಲುಗಳನ್ನು ಸಮರ್ಥವಾಗಿ ಸ್ವೀಕರಿಸಿ ಗೆದ್ದಿದ್ದಾರೆ ಕಂಗನಾ. ಇದೀಗ, 160 ವರ್ಷಗಳ ಹಿಂದಿನ ಝಾನ್ಸಿ ರಾಣಿಯ ಕತೆಯನ್ನು ತೆರೆಯಲ್ಲಿ ವೀಕ್ಷಿಸುವ ಸಮಯ ಕೂಡಿಬಂದಿದೆ.

‘ಚೀಟ್‌ ಇಂಡಿಯಾ’

ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿರುವ ಚಿತ್ರ ’ಚೀಟ್‌ ಇಂಡಿಯಾ’. ಕಿಸ್ಸಿಂಗ್‌ ಹೀರೊ ಇಮ್ರಾನ್‌ ಹಶ್ಮಿ ನಾಯಕನ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ ಎಂದು ಈಗಾಗಲೇ ಟ್ರೇಲರ್‌ ಸಾಬೀತುಪಡಿಸಿದೆ. ಸೌಮಿಕ್‌ ಸೇನ್‌ ನಿರ್ದೇಶನದ ಈ ಚಿತ್ರದ ಮೊದಲ ಹಾಡಿನ ಚಿತ್ರೀಕರಣದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಹಿಟ್‌ ಹಾಡುಗಳ ಸರದಾರ ಗುರು ರಾಂಧವ ಮತ್ತು ಇಮ್ರಾನ್‌ ಹಶ್ಮಿ ಜೊತೆಯಾಗಿ ‘ದಾರು ವಾರ್ಗಿ’ ಎಂಬ ಆ ಹಾಡನ್ನು ಹಾಡಿರುವುದು ಇದಕ್ಕೆ ಕಾರಣ.

ಬೇರೆ ವಿದ್ಯಾರ್ಥಿಗಳ ಹೆಸರಿನಲ್ಲಿ ಪರೀಕ್ಷೆ ಬರೆಯುವ ಭ್ರಷ್ಟ ಯುವಕರ ತಂಡದ ನಾಯಕನ ಪಾತ್ರ ಇಮ್ರಾನ್‌ ಹಶ್ಮಿ ಅವರದ್ದು. ಜನವರಿ 25ರಂದು ಈ ಚಿತ್ರ ತೆರೆಕಾಣಲಿದೆ. 

ಠಾಕ್ರೆ ತೆರೆಗೆ

ಜೀವನಕತೆಯನ್ನಾಧರಿಸಿದ ಚಿತ್ರಗಳನ್ನು ಸಾಕಷ್ಟು ಕೊಟ್ಟಿದೆ ಬಾಲಿವುಡ್‌. ಹೊಸ ವರ್ಷವೂ ಈ ಸರಣಿ ಮುಂದುವರಿಯುವ ಲಕ್ಷಣ ಕಾಣುತ್ತಿದೆ. ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ ‘ಠಾಕ್ರೆ’ ಸಿನಿಮಾ ಅವುಗಳಲ್ಲೊಂದು. ಹಿಂದಿ ಮತ್ತು ಮರಾಠಿಯಲ್ಲಿ ಜ.25ರಂದು ತೆರೆಗೆ ಬರಲಿದೆ. ಶಿವಸೇನಾ ಮುಖ್ಯಸ್ಥ ಭಾಳ್‌ ಠಾಕ್ರೆಯಾಗಿ ನವಾಜುದ್ದೀನ್‌ ಸಿದ್ದಿಕಿ ಕಾಣಿಸಿಕೊಂಡಿರುವ ಚಿತ್ರವಿದು. ಈ ಪಾತ್ರವನ್ನು ಒಪ್ಪಿಕೊಂಡ ಕಾರಣಕ್ಕೆ ಸಿದ್ದಿಕಿ ಕೆಲವರ ವಿರೋಧವನ್ನೂ ಕಟ್ಟಿಕೊಳ್ಳಬೇಕಾಗಿ ಬಂದಿತ್ತು. ಅಭಿಜಿತ್‌ ಪನ್ಸೆ ನಿರ್ದೇಶನದ ಈ ಚಿತ್ರದಲ್ಲಿ ಅಮೃತಾ ರಾವ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !