ಶನಿವಾರ, ಆಗಸ್ಟ್ 17, 2019
27 °C

ನವಾಜುದ್ದೀನ್‌– ತಮನ್ನಾ ಮೊದಲ ಬಾರಿ ಜೋಡಿ

Published:
Updated:

‘ಬೋಲೆ ಚೂಡಿಯಾ’ ಸಿನಿಮಾದಿಂದ ಹೊರನಡೆದ ನಟಿ ಮೌನಿ ರಾಯ್‌ ಸ್ಥಾನಕ್ಕೆ ತಮನ್ನಾ ಭಾಟಿಯಾ ಆಯ್ಕೆಯಾಗಿದ್ದಾರೆ. 

ನವಾಜುದ್ದೀನ್‌ ಸಿದ್ಧಿಕಿ ನಾಯಕನಾಗಿರುವ ಈ ಚಿತ್ರಕ್ಕೆ ಆರಂಭದಲ್ಲಿ ನಾಯಕಿಯಾಗಿ ಮೌನಿ ರಾಯ್‌ ಆಯ್ಕೆಯಾಗಿದ್ದರು. ‘ವೃತ್ತಿಪರತೆಯ ಕೊರತೆ ಮತ್ತು  ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ’ ಎಂದೆಲ್ಲ ನಿರ್ಮಾಪಕ ರಾಜೇಶ್ ಭಾಟಿಯಾ ಆರೋಪಿಸಿದ್ದರಿಂದ ಮೌನಿ ಸಿನಿಮಾದಿಂದ ಹೊರನಡೆದಿದ್ದರು. 

ಈಗ ತಿಂಗಳ ನಂತರ ಚಿತ್ರದ ಶೂಟಿಂಗ್‌ ಉತ್ತರಪ್ರದೇಶದಲ್ಲಿ ನಡೆಯುತ್ತಿದೆ. ರಾಜೇಶ್‌ ಭಾಟಿಯಾ ಹಾಗೂ ಕಿರಣ್‌ ಝವೇರಿ ಭಾಟಿಯಾ ನಿರ್ಮಾಣದ ಈ ಚಿತ್ರಕ್ಕೆ ನವಾಜುದ್ದೀನ್‌ ಸಿದ್ಧಿಕಿ ಸಹೋದರ ಶಮ್ಸ್‌ ನವಾಬ್‌ ಸಿದ್ಧಿಕಿ ನಿರ್ದೇಶಕ. 

ಈಚೆಗೆ ಸಂದರ್ಶನವೊಂದರಲ್ಲಿ ನಟಿ ತಮನ್ನಾ ಭಾಟಿಯಾ ತಾವು ‘ಬೋಲೆ ಚೂಡಿಯಾ’ ಸಿನಿಮಾ ಆಯ್ಕೆ ಮಾಡಿಕೊಂಡ ಬಗ್ಗೆ ಮತ್ತು ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದರು.

‘ಬಾಲಿವುಡ್‌ ಸಿನಿಮಾವೊಂದರಲ್ಲಿ ಬಹು ಆಯಾಮಗಳಿರುವ ಪಾತ್ರವನ್ನು ಇದೇ ಮೊದಲ ಬಾರಿಗೆ ಮಾಡುತ್ತಿದ್ದೇನೆ. ಚಿತ್ರಕತೆ ನನ್ನನ್ನು ಆಕರ್ಷಿಸಿತು. ಇತ್ತೀಚಿನ ಸಮಾಜದ ಬೆಳವಣಿಗೆಗಳ ಬಗ್ಗೆಯೇ ಕಥಾಹಂದರವಿದೆ. ಈ ಪಾತ್ರ ನನ್ನ ಮಟ್ಟಿಗೆ ಪ್ರಯೋಗಾತ್ಮಕ’ ಎಂಬ ಅವರ ಮಾತುಗಳು ಚಿತ್ರದ ಬಗ್ಗೆ ಕುತೂಹಲ ಮೂಡಿಸಿವೆ. 

ಇದೇ ಮೊದಲ ಬಾರಿಗೆ ನವಾಜುದ್ದೀನ್‌ ಹಾಗೂ ತಮನ್ನಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಬೋಲೆ ಚೂಡಿಯಾ ಪಾತ್ರಕ್ಕೆ ತಮನ್ನಾ ಪರ್ಫೆಕ್ಟ್‌’ ಎಂದು ನವಾಜುದ್ದೀನ್‌ ಹೇಳಿದ್ದಾರೆ. 

ಬಳೆಗಾರ ಹಾಗೂ ಹಳ್ಳಿ ಹುಡುಗಿಯ ನಡುವಿನ ಪ್ರೇಮಕತೆ ಸಿನಿಮಾದ ಪ್ರಮುಖ ವಸ್ತು. ಇದರಲ್ಲಿ ರಾಜ್‌ಪಾಲ್‌ ಯಾದವ್‌, ಆದಿತ್ಯ ಶ್ರೀವಾಸ್ತವ, ಕಬೀರ್‌ ದುಹಾನ್‌ ಸಿಂಗ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರು ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ 2020ಕ್ಕೆ ಬಿಡುಗಡೆಯಾಗಲಿದೆ.

Post Comments (+)