ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ನಗರಗಳಲ್ಲಿ ನಟ ರಕ್ಷಿತ್‌ ಶೆಟ್ಟಿಯ ‘777 ಚಾರ್ಲಿ’ ಪ್ರೀಮಿಯರ್‌

Last Updated 16 ಮೇ 2022, 11:23 IST
ಅಕ್ಷರ ಗಾತ್ರ

ನಟ ರಕ್ಷಿತ್‌ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್‌ನಡಿ ಮೂಡಿಬಂದಿದ್ದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ, ರಿಲೀಸ್‌ಗೂ ಮುನ್ನವೇ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿತ್ತು. ಚಿತ್ರ ಬಿಡುಗಡೆಗೆ ಎರಡು ದಿನ ಮುನ್ನವೇ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಪ್ರೀಮಿಯರ್‌ ಶೋಗಳನ್ನು ಆಯೋಜಿಸಿದ್ದೇ ಇದಕ್ಕೆ ಕಾರಣವಾಗಿತ್ತು. ಜೂನ್‌ 10ರಂದು ಬಿಡುಗಡೆಯಾಗಲಿರುವ ‘777 ಚಾರ್ಲಿ’ ಸಿನಿಮಾಗೂ ಇದೇ ಕಾರ್ಯತಂತ್ರವನ್ನು ರಕ್ಷಿತ್‌ ಶೆಟ್ಟಿ ರೂಪಿಸಿದ್ದಾರೆ.

ದೇಶದ 21 ಪ್ರಮುಖ ನಗರಗಳಲ್ಲಿ ಚಿತ್ರದ ಪ್ರೀಮಿಯರ್‌ ಪ್ರದರ್ಶನವಿರಲಿದ್ದು, ರಿಲೀಸ್‌ಗು ಮುನ್ನವೇ ಚಿತ್ರದ ಬಗ್ಗೆ ಜನರೇ ಅಭಿಪ್ರಾಯ ಹಂಚಿಕೊಳ್ಳುವಂತೆ ಚಿತ್ರತಂಡ ಚತುರೋಪಾಯ ರೂಪಿಸಿದೆ. ಸೋಮವಾರ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಕ್ಷಿತ್‌ ಶೆಟ್ಟಿ, ‘ನಮಗೆ ಸಿನಿಮಾ ಬಗ್ಗೆ ಎಷ್ಟು ನಂಬಿಕೆ ಇದೆ ಎಂದರೆ, ದೇಶದಾದ್ಯಂತ ಸಿನಿಮಾ ಬಿಡುಗಡೆಗೆ ಮುನ್ನವೇ 21 ನಗರಗಳಲ್ಲಿ ಪ್ರಿಮಿಯರ್‌ ಶೋಗಳನ್ನು ಆಯೋಜಿಸುತ್ತಿದ್ದೇವೆ. ಕನಿಷ್ಠ 400–500 ಜನ ಇಲ್ಲಿ ಸಿನಿಮಾ ನೋಡಲಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ನಾವು ಈ ರೀತಿಯ ಪ್ರಚಾರವನ್ನು ಪ್ರಯತ್ನಿಸಿದ್ದೆವು. ನಮಗೆ ಆ ಸಿನಿಮಾ ಮೇಲೆ ನಂಬಿಕೆ ಇತ್ತು. ಹೀಗಾಗಿ ಜನರೇ ಸಿನಿಮಾ ಕುರಿತು ಮಾತನಾಡಲಿ ಎಂದು ಎರಡು ದಿನ ಮೊದಲೇ ಪ್ರೀಮಿಯರ್‌ ಆಯೋಜಿಸಿದ್ದೆವು. ಈ ಪ್ರಯೋಗವನ್ನು ‘777 ಚಾರ್ಲಿ’ ಮೂಲಕ ನಾವು ಇದೀಗ ದೇಶವ್ಯಾಪಿ ಮಾಡುತ್ತಿದ್ದೇವೆ’ ಎಂದರು.

‘ಮೊದಲ ಮೂರು ದಿನ ಚಿತ್ರಮಂದಿರಗಳು ತುಂಬಲು ಎಷ್ಟು ಪ್ರಚಾರ ಬೇಕೋ ಅಷ್ಟು ಮಾಡುತ್ತಿದ್ದೇವೆ. ಮುಂದೆ ಸಿನಿಮಾವೇ ಮುನ್ನಡೆಸಲಿದೆ. ಜನರು ಎಲ್ಲ ಸಿನಿಮಾಗಳಿಗೆ ಚಿತ್ರಮಂದಿರಗಳಿಗೆ ಬರುವುದಿಲ್ಲ. ಚಿತ್ರದಲ್ಲಿ ಏನಾದರೂ ವಿಶೇಷತೆ, ಅನುಭವ ಇದ್ದರಷ್ಟೇ ಬರುತ್ತಾರೆ. ಇಲ್ಲದೇ ಇದ್ದರೆ ‘ಒಟಿಟಿಯಲ್ಲಿ ಬರುತ್ತದೆ ಅಲ್ಲವೇ ಅಲ್ಲೇ ನೋಡೋಣ’ ಎಂದುಕೊಂಡು ಸುಮ್ಮನಿರುತ್ತಾರೆ. ಈ ಸಿನಿಮಾದಲ್ಲಿ ಖಂಡಿತವಾಗಿಯೂ ಒಂದು ಭಾವನಾತ್ಮಕ ಪಯಣವಿದೆ’ ಎಂದರು ರಕ್ಷಿತ್‌.

‘ನನ್ನ ಸಿನಿಮಾಗಳೇ ಹಲವು ಇದೆ’: ಕಳೆದ ಆರು ವರ್ಷದಲ್ಲಿ ಎರಡೇ ಸಿನಿಮಾ ಮಾಡಿದ್ದೇನೆ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಳಿಕ ತಮಿಳು, ತೆಲುಗು ಚಿತ್ರರಂಗದಿಂದಲೂ ನನಗೆ ಆಫರ್‌ಗಳು ಬಂದಿವೆ. ಆದರೆ ಯಾವ ಯಾವ ಸಿನಿಮಾಗಳನ್ನು ಮಾಡಬೇಕು ಎನ್ನುವ ಲೈನ್‌ಅಪ್‌ ನನಗೆ ಗೊತ್ತು. ‘777 ಚಾರ್ಲಿ’ ರಿಲೀಸ್‌ಗೆ ಸಿದ್ಧವಾಗಿದ್ದು, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರೀಕರಣ ನಡೆಯುತ್ತಿದೆ. ಇದಾದ ಬಳಿಕ, ‘ರಿಚರ್ಡ್‌ ಆ್ಯಂಟನಿ’, ‘ಕಿರಿಕ್‌ ಪಾರ್ಟಿ–2’ ಹಾಗೂ ‘ಪುಣ್ಯಕೋಟಿ’ ಸಿನಿಮಾ ಕೈಗೆತ್ತಿಕೊಳ್ಳಲಿದ್ದೇನೆ. ಇದನ್ನು ಬಿಟ್ಟರೆ ಬೇರೆ ಯಾವ ಸಿನಿಮಾಗಳನ್ನೂ ಮಾಡುವುದಿಲ್ಲ. ಬೇರೆ ಆಫರ್‌ಗಳು ಬಂದಾಗ ಕಥೆಯನ್ನೂ ಕೇಳುವುದಿಲ್ಲ. ಏಕೆಂದರೆ ಕಥೆ ಇಷ್ಟವಾದರೂ ಸಿನಿಮಾ ಮಾಡಲು ಸಮಯವಿಲ್ಲ. ಕಳೆದ 10 ವರ್ಷದಲ್ಲಿ ಸಿನಿಮಾ ನಿರ್ದೇಶನ ಮಾಡಿಲ್ಲ. ಬೇಗನೇ ಡೈರೆಕ್ಟರ್‌ ಸೀಟಿನಲ್ಲಿ ಕುಳಿತುಕೊಳ್ಳಬೇಕು. ಒಮ್ಮೆ ಕುಳಿತರೆ ಮತ್ತೆ ಏಳುವುದಿಲ್ಲ’ ಎಂದರು ರಕ್ಷಿತ್‌.

‘777 ಚಾರ್ಲಿ’ ಚಿತ್ರದ ಕನ್ನಡ ಆವೃತ್ತಿಯ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಪ್ರಸಾರದ ಹಕ್ಕನ್ನು ಕಲರ್ಸ್‌ ಕನ್ನಡ ಹಾಗೂ ವೂಟ್‌ ಪಡೆದುಕೊಂಡಿದೆ. ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಸ್ವತಃ ರಕ್ಷಿತ್‌ ಶೆಟ್ಟಿ ಡಬ್ಬಿಂಗ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT