ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ಎಂಎಂ ಸಿನಿಮಾ ವಿಮರ್ಶೆ: ತಬರ ಬಂಡೆದ್ದಾಗ...

Last Updated 16 ನವೆಂಬರ್ 2018, 10:49 IST
ಅಕ್ಷರ ಗಾತ್ರ

ಚಿತ್ರ: 8ಎಂಎಂ

ನಿರ್ಮಾಪಕರು: ನಾರಾಯಣ ಬಾಬು, ಇನ್‌ಫ್ಯಾಂಟ್‌ ಪ್ರದೀಪ್‌, ಸಲೀಂ ಶಾ

ನಿರ್ದೇಶನ: ಎಸ್. ಹರಿಕೃಷ್ಣ

ತಾರಾಗಣ: ಜಗ್ಗೇಶ್‌, ಮಯೂರಿ, ವಸಿಷ್ಠ ಸಿಂಹ, ರಾಕ್‌ಲೈನ್ ವೆಂಕಟೇಶ್‌, ಆದಿ ಲೋಕೇಶ್‌

ಜಪಾನಿ ಭಾಷೆಯ ‘ಸ್ಟ್ರೇ ಡಾಗ್’ ಚಿತ್ರ ತೆರೆಕಂಡಿದ್ದುಐವತ್ತರ ದಶಕದಲ್ಲಿ. ಇದು ವಿಶ್ವದ ಹಲವು ಭಾಷೆಗಳ ಸಿನಿಮಾಗಳಿಗೆ ಸ್ಫೂರ್ತಿಯಾಗಿದೆ. ವಯಸ್ಸಾದ ವ್ಯಕ್ತಿಯೊಬ್ಬ ವ್ಯವಸ್ಥೆಯ ವಿರುದ್ಧ ಬಂಡೇಳುವುದೇ ಈ ಚಿತ್ರದ ಹೂರಣ. ನವರಸ ನಾಯಕ ಜಗ್ಗೇಶ್‌ ಮೊದಲ ಬಾರಿಗೆ ಖಳನಟನ ಛಾಯೆಯಲ್ಲಿ ನಟಿಸಿರುವ ‘8ಎಂಎಂ’ ಚಿತ್ರಕ್ಕೂ ಇದೇ ಪ್ರೇರಣೆ.

ಐವತ್ತು ವರ್ಷ ದಾಟಿದ ವ್ಯಕ್ತಿಗಳ ಬದುಕಿನ ಸಂಘರ್ಷವನ್ನು ಈ ಚಿತ್ರದಲ್ಲಿ ಸೊಗಸಾಗಿ ದೃಶ್ಯರೂಪಕ್ಕಿಳಿಸಿದ್ದಾರೆ ನಿರ್ದೇಶಕ ಎಸ್. ಹರಿಕೃಷ್ಣ. ಕರ್ತವ್ಯದಲ್ಲಿ ಮೈಮರೆತು ಬದುಕು ಕಳೆದುಕೊಂಡ ಕೆಳಹಂತದ ನೌಕರರು ಮತ್ತು ತಂದೆ– ತಾಯಿಯ ಪೋಷಣೆ ಮರೆತು ದುಡ್ಡಿನ ಅಮಲಿನಲ್ಲಿ ಬಿದ್ದ ಹೆತ್ತ ಮಕ್ಕಳು ಚಿತ್ರದಲ್ಲಿದ್ದಾರೆ. ಬಾಳಿನ ಮುಸ್ಸಂಜೆಯಲ್ಲಿ ಇರುವ ತಂದೆಯ ಅಸಹಾಯಕತೆ, ಸೆಡವಿನ ಜೊತೆಗೆ ಆತನ ಬದುಕಿನ ಜೊತೆಗೆ ಚೆಲ್ಲಾಟವಾಡುವ ಕ್ರೂರ ಅಧಿಕಾರಶಾಹಿ ವ್ಯವಸ್ಥೆ ಈ ಸಿನಿಮಾದಲ್ಲಿದೆ.

ಶ್ರೀನಿವಾಸ್‌ ಮೂರ್ತಿ (ಜಗ್ಗೇಶ್‌) ಹೆಡ್‌ಕಾನ್‌ಸ್ಟೇಬಲ್. ಅವನಿಗೆ ಇಬ್ಬರು ಮಕ್ಕಳು. ಆತ ಕ್ಯಾನ್ಸರ್ ರೋಗಿ. ಹಿರಿಯ ಅಧಿಕಾರಿಯ ಕುತಂತ್ರದಿಂದ ಆತನ ಕೆಲಸವೂ ಕೈತಪ್ಪಿಹೋಗುತ್ತದೆ. ಭವಿಷ್ಯನಿಧಿ ಹಣಕ್ಕಾಗಿ ನಿತ್ಯವೂ ಅವನದು ತಬರನ ಪರದಾಟ. ಹಿರಿಯ ಅಧಿಕಾರಿಗಳು ಅವನಿಗೆ ಕನಿಕರ ತೋರುವುದಿಲ್ಲ. ಸಾಲಕ್ಕಾಗಿ ಬ್ಯಾಂಕ್‌ನ ಬಾಗಿಲು ತಟ್ಟುತ್ತಾನೆ. ಅಲ್ಲಿ ಸಾಲ ದೊರೆಯದಿದ್ದಾಗ ದರೋಡೆಗೆ ಇಳಿಯುತ್ತಾನೆ.

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್ ಕಾರ್ತಿಕ್‌ ಕಳೆದುಕೊಂಡ ಗನ್ ಶ್ರೀನಿವಾಸ್‌ ಮೂರ್ತಿಯ ಕೈಸೇರುತ್ತದೆ. ಈ ಗನ್‌ನಿಂದಲೇ ಸರಣಿ ಕೊಲೆಗಳನ್ನು ಮಾಡುತ್ತಾನೆ. ಆತ ಏತಕ್ಕಾಗಿ ಅಪರಾಧ ಕೃತ್ಯ ಎಸಗುತ್ತಾನೆ, ಅವನನ್ನು ಪೊಲೀಸರು ಹೇಗೆ ಪತ್ತೆಹಚ್ಚುತ್ತಾರೆ, ಕೊನೆಗೆ ಆತ ಏನಾಗುತ್ತಾನೆ ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.

ಮೂರೂವರೆ ದಶಕಗಳ ಕಾಲ ಕನ್ನಡಿಗರನ್ನು ನಗಿಸಿದ್ದ ನವರಸ ನಾಯಕನದ್ದು ಇಲ್ಲಿ ಗಂಭೀರ ನೋಟ. ಸಮಾಜದಲ್ಲಿರುವ ಅಸಹಾಯಕ ತಂದೆಯರ ಪ್ರತಿನಿಧಿಯಾಗಿ ಅವರ ಪಾತ್ರ ಕಾಡುತ್ತದೆ. ಉಳಿದಂತೆ ವಸಿಷ್ಠ ಸಿಂಹ, ರಾಕ್‌ಲೈನ್‌ ವೆಂಕಟೇಶ್‌, ಮಯೂರಿ, ಆದಿ ಲೋಕೇಶ್‌ ಅವರ ಪಾತ್ರ‍ ಪೋಷಣೆ ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತದೆ.

ವಸಿಷ್ಠ ಸಿಂಹ ಮತ್ತು ಮಯೂರಿ ಅವರ ಎರಡು ರೊಮ್ಯಾಂಟಿಕ್‌ ಹಾಡುಗಳು ಚಿತ್ರದಲ್ಲಿ ತುರುಕಿದಂತೆ ಕಾಣುತ್ತವೆ. ಎ.ಆರ್. ವಿನ್ಸೆಂಟ್‌ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT