90ಎಂಎಲ್‌ ಕಿಕ್!

ಸೋಮವಾರ, ಮಾರ್ಚ್ 25, 2019
28 °C

90ಎಂಎಲ್‌ ಕಿಕ್!

Published:
Updated:
Prajavani

ಹಿರಿಯ ನಟ ಚರಣ್‌ ರಾಜ್‌ ಅವರ ಹೆಸರು ಕೇಳಿದಾಕ್ಷಣ ‘ಗಂಧದ ಗುಡಿ– ಭಾಗ 2’ ಚಿತ್ರದಲ್ಲಿನ ಅವರ ಖಳನಟನ ಪಾತ್ರ ಸ್ಮೃತಿಪಟಲದಲ್ಲಿ ಥಟ್ಟನೆ ಮೂಡುತ್ತದೆ. ಚಂದನವನದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ ಅವರು ಕೊನೆಗೆ ನೆಲೆ ಕಂಡುಕೊಂಡಿದ್ದು ತಮಿಳಿನಲ್ಲಿ.

ತಮಿಳಿನಲ್ಲಿ ತೆರೆಕಂಡಿರುವ ‘90ಎಂಎಲ್‌’ ಚಿತ್ರಕ್ಕೆ ಅವರ ಪುತ್ರ ತೇಜ್‌ ರಾಜ್‌ ಅವರೇ ನಾಯಕ ನಟ. ಇದು ಅವರ ಮೊದಲ ಚಿತ್ರವೂ ಹೌದು. ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಕನ್ನಡದ ಪ್ರೇಕ್ಷಕರಿಗೆ ತನ್ನ ಪುತ್ರನನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ ಚರಣ್‌ ರಾಜ್.

‘90ಎಂಎಲ್’ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾಹಿತಿ ಹಂಚಿಕೊಂಡರು. ಅಂದಹಾಗೆ ಇದು ತಮಿಳು ಪ್ರೇಕ್ಷಕರಿಗೂ ಫುಲ್‌ ಕಿಕ್‌ ನೀಡಿದೆಯಂತೆ.

‘ನನ್ನ ವೃತ್ತಿಬದುಕು ಆರಂಭಗೊಂಡಿದ್ದು ಕನ್ನಡದಲ್ಲಿ. ಹಾಗಾಗಿ, ನನ್ನ ಮಗ ಕೂಡ ಕನ್ನಡದಲ್ಲಿಯೂ ನಟಿಸಬೇಕು ಎನ್ನುವುದು ನನ್ನಾಸೆ. ಸಾಕಷ್ಟು ತಯಾರಿ ನಡೆಸಿಯೇ ಆತ ಚಿತ್ರರಂಗ ಪ್ರವೇಶಿಸಿದ್ದಾನೆ’ ಎಂದರು ಚರಣ್‌ ರಾಜ್‌.

‘ಅವನ ಮೊದಲ ಚಿತ್ರದಲ್ಲಿನ ನಟನೆ ನೋಡಿ ತಮಿಳಿನಲ್ಲಿ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ. ಆದರೆ, ಅದಕ್ಕೂ ಮೊದಲು ಕನ್ನಡಕ್ಕೆ ಆತನನ್ನು ಪರಿಚಯಿಸುವ ಯೋಜನೆಯಿದೆ. ಗುರುದೇಶ ಪಾಂಡೆ, ಎಸ್‌. ನಾರಾಯಣ್‌ ಅವರೊಟ್ಟಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಒಳ್ಳೆಯ ಕ್ಯಾರೆಕ್ಟರ್‌ಗಾಗಿ ಹುಡುಕಾಟ ನಡೆಸಿದ್ದೇನೆ’ ಎಂದು ಮಾಹಿತಿ ನೀಡಿದರು.

90ಎಂಎಲ್‌ ಎಂದಾಕ್ಷಣ ಜನರ ತಲೆಯಲ್ಲಿ ಆಲ್ಕೋಹಾಲ್‌ ಕಲ್ಪನೆ ಮೂಡುವುದು ಸಹಜ. ಹಸಿಬಿಸಿ ಚಿತ್ರಗಳು ಸರ್ವೇ ಸಾಮಾನ್ಯ. ಮಗನ ಚಿತ್ರವನ್ನು ನೀವು ವೀಕ್ಷಿಸಿದಿರಾ? ಎನ್ನುವ ಪ್ರಶ್ನೆ ಅವರಿಗೆ ಎದುರಾಯಿತು. ‘ನಾನೊಬ್ಬ ಪ್ರೇಕ್ಷಕನಾಗಿ ಚಿತ್ರ ನೋಡಿದ್ದೇನೆ. ಆ ಪಾತ್ರಕ್ಕೆ ಆತ ನ್ಯಾಯ ಒದಗಿಸಿದ್ದಾನೆ’ ಎಂದರು.

‘ಚಿಕ್ಕ ಮಗ ಚಿತ್ರರಂಗಕ್ಕೆ ಬರುತ್ತಾನೆ ಎಂದುಕೊಂಡಿದ್ದೆ. ಆತ ಹೈದರಾಬಾದ್‌ನಲ್ಲಿ ಪೈಲಟ್‌ ತರಬೇತಿ ಪಡೆಯುತ್ತಿದ್ದಾನೆ. ದೊಡ್ಡ ಮಗ ನಟನಾ ಕ್ಷೇತ್ರಕ್ಕೆ ಬಂದಿದ್ದಾನೆ’ ಎಂದು ಹೇಳಿದರು.

ತೇಜ್‌ ರಾಜ್‌ ಅವರು ಬಾಲುಮಹೇಂದರ್‌ ಅವರ ಶಾಲೆಯಲ್ಲಿ ನಟನೆ ಕಲಿತಿದ್ದಾರಂತೆ. ‘ನಾನು ಅಪ್ಪನಂತೆಯೇ ನಟನಾಗಬೇಕೆಂದು ದೊಡ್ಡ ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಕಾಲಿಟಿದ್ದೇನೆ. ಇಲ್ಲಿ ಕಲಿಯುವುದು ಸಾಕಷ್ಟಿದೆ. ನನ್ನಪ್ಪನಿಗೆ ಪ್ರೋತ್ಸಾಹ ನೀಡಿದಂತೆ ನನಗೂ ಸಹಕಾರ ನೀಡಬೇಕು’ ಎಂದು ಕೋರಿದರು. 

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !