ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ನೋಟಿನ ಕಥೆ...

Last Updated 2 ಮೇ 2019, 16:00 IST
ಅಕ್ಷರ ಗಾತ್ರ

ಎರಡು ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುದ್ರಣ ಮಾಡಿದಾಗ, ಅದನ್ನು ಆಧರಿಸಿಕೊಂಡು ಒಂದು ಸಿನಿಮಾ ಸಿದ್ಧವಾಗುತ್ತದೆ ಎಂದು ಆಲೋಚಿಸಿತ್ತೋ ಇಲ್ಲವೋ... ಆದರೆ, ಕನ್ನಡದಲ್ಲಿ ಅದೇ ನೋಟನ್ನು ಕೇಂದ್ರವಾಗಿ ಇರಿಸಿಕೊಂಡು ‘ಆ ಒಂದು ನೋಟು’ ಎನ್ನುವ ಸಿನಿಮಾ ಸಿದ್ಧವಾಗಿದೆ.

ಈ ಚಿತ್ರದಲ್ಲಿ ಎರಡು ಸಾವಿರ ರೂಪಾಯಿ ಮೌಲ್ಯದ ನೋಟೇ ಪ್ರಧಾನ ಪಾತ್ರ! ಅಂದಹಾಗೆ, ಈ ಚಿತ್ರದ ನಿರ್ದೇಶನ ರತ್ನಾತನಯ್ ಅವರದ್ದು. ಚಿತ್ರಕ್ಕೆ ಬಂಡವಾಳ ಹೂಡಿರುವವರು ಎಂ.ಕೆ. ಜಗದೀಶ್ ಮತ್ತು ಜಿ. ಪ್ರೇಮನಾಥ್. ಚಿತ್ರದ ಬಗ್ಗೆ ಮಾಹಿತಿ ನೀಡಲು ಸಿನಿಮಾ ತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು.

‘ನಾನು ಹಿಂದೆ ಪುಟಾಣಿ ಸಫಾರಿ ಎನ್ನುವ ಸಿನಿಮಾ ನಿರ್ಮಿಸಿದ್ದೆ. ಈಗ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಮಾಣಪತ್ರಕ್ಕಾಗಿ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ನೀಡಬೇಕಿದೆ’ ಎಂದರು ಮೊದಲು ಮಾತನಾಡಿದ ಜಗದೀಶ್.

ಹಣ ಎಲ್ಲರಿಗೂ ಅನಿವಾರ್ಯ. ಒಂದು ನೋಟು ಯಾವೆಲ್ಲ ವ್ಯಕ್ತಿಗಳ ಕೈಸೇರುತ್ತದೆ, ಅವರು ಅದನ್ನು ಹೇಗೆಲ್ಲ ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಸಿನಿಮಾ ಹೂರಣ. ಈ ನೋಟು ಒಬ್ಬ ವ್ಯಕ್ತಿಯ ಕೈಯಿಂದ ಇನ್ನೊಬ್ಬ ವ್ಯಕ್ತಿಯ ಕೈಗೆ ದಾಟಿದಂತೆಲ್ಲ, ಆ ವ್ಯಕ್ತಿಯ ವ್ಯಕ್ತಿತ್ವದ ಅನಾವರಣ ಆಗುತ್ತದೆ ಎಂದರು. ಆ ಮೂಲಕ ಈ ಚಿತ್ರದ ನಿರೂಪಣಾ ತಂತ್ರ ಏನಿರಬಹುದು ಎಂಬುದರ ಗುಟ್ಟನ್ನು ಚಿಕ್ಕದಾಗಿ ಬಿಟ್ಟುಕೊಟ್ಟರು.

ಈ ಚಿತ್ರದಲ್ಲಿ ಸ್ಟಾರ್‌ ನಟರು ಇಲ್ಲ. ಯಾವ ಪಾತ್ರವೂ ಇಲ್ಲಿ ಅನಗತ್ಯವಲ್ಲ. ಜನರನ್ನು ಮನಸ್ಸಿನಲ್ಲಿ ಇರಿಸಿಕೊಂಡು ಕಥೆ ಹೊಸೆಯಲಾಗಿದೆ ಎನ್ನುವುದು ಅವರ ಅಂಬೋಣ.

ನಿರ್ಮಾಪಕರಿಂದ ಮೈಕ್ ತೆಗೆದುಕೊಂಡ ರತ್ನಾತನಯ್ ಚಿತ್ರದ ನಾಯಕನ ಬಗ್ಗೆ ಹೇಳಲು ಆರಂಭಿಸಿದರು. ‘ಸಿನಿಮಾ ಯಾರ ಸುತ್ತ ಸುತ್ತುತ್ತದೆಯೋ ಅವನೇ ಚಿತ್ರದ ನಾಯಕ. ಈ ಸಿನಿಮಾ ಕಥೆ ಸುತ್ತುವುದು ಎರಡು ಸಾವಿರ ರೂಪಾಯಿಯ ನೋಟಿನ ಸುತ್ತ. ಹಾಗಾಗಿ, ಈ ಸಿನಿಮಾದಲ್ಲಿ ನೋಟೇ ಹೀರೊ’ ಎಂದರು ರತ್ನಾತನಯ್.

ಸಾಕ್ಷಿ, ಬಲ ರಾಜವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಉಷಾ ರವಿಶಂಕರ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT