ಮದ್ವೆ ಹುಡ್ಗಿಯ ಬೆಳ್ಳಿಹೆಜ್ಜೆ

7

ಮದ್ವೆ ಹುಡ್ಗಿಯ ಬೆಳ್ಳಿಹೆಜ್ಜೆ

Published:
Updated:
Prajavani

‘ಹಿಂದೆಲ್ಲಾ ಮದುವೆಗೆ ತಿಂಗಳುಗಟ್ಟಲೆ ತಯಾರಿ ನಡೆಯುತ್ತಿತ್ತು. ಮನೆಯಲ್ಲಿ ಸಂಭ್ರಮ ಮೇಳೈಸಿರುತ್ತಿತ್ತು. ವಾರಪೂರ್ತಿ ಮದುವೆ ಶಾಸ್ತ್ರಗಳು ನಡೆಯುತ್ತಿದ್ದವು. ಈಗ ಎಲ್ಲರದ್ದೂ ಧಾವಂತದ ಬದುಕು. ಹಾಗಾಗಿ, ಮದುವೆ ಒಂದೇ ದಿನಕ್ಕೆ ಮೀಸಲು. ಸಾಂಪ್ರದಾಯಿಕ ಮದುವೆ ಬಗ್ಗೆ ನನಗೂ ಎಳ್ಳಷ್ಟು ಗೊತ್ತಿರಲಿಲ್ಲ. ‘ಮದ್ವೆ’ ಚಿತ್ರದಲ್ಲಿ ನಟಿಸಿದಾಗಲೇ ಮದುವೆ ಶಾಸ್ತ್ರಗಳ ಬಗ್ಗೆ ಅರಿವಾಯಿತು. ನಾನು ರಿಯಲ್‌ ಲೈಫ್‌ನಲ್ಲಿ ಸಂಪ್ರದಾಯಬದ್ಧವಾಗಿಯೇ ಮದುವೆ ಆಗಲು ನಿರ್ಧರಿಸಿದ್ದೇನೆ’ ಎಂದು ‘ಮದ್ವೆ’ಯ ಕಥೆ ಹೇಳಿದರು ನಟಿ ಆರೋಹಿ ಗೌಡ.

ಕೃಷ್ಣ ನಿರ್ದೇಶನದ ‘ಮದ್ವೆ’ ಹಳ್ಳಿ ಸೊಗಡಿನ ಚಿತ್ರ. ಟ್ರೇಲರ್‌ನಿಂದಲೇ ಈ ಚಿತ್ರ ಜನರ ಮನ ಸೆಳೆದಿತ್ತು. ಈಗಾಗಲೇ, ಈ ಸಿನಿಮಾ ಕೋಲ್ಕತ್ತ ಚಿತ್ರೋತ್ಸವದಲ್ಲಿ ಉತ್ತಮ ಕೌಟುಂಬಿಕ ಚಿತ್ರ ವಿಭಾಗದಲ್ಲಿ ಪ್ರದರ್ಶನ ಕಂಡಿದೆ. ಕ್ಯಾಲಿಫೋರ್ನಿಯಾ, ಯುಎಇ ಮತ್ತು ಕ್ಯಾಲಿಕಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲೂ ಪ್ರದರ್ಶನ ಕಂಡಿದೆ. ಸಿಂಗಪುರ ಚಿತ್ರೋತ್ಸವಕ್ಕೂ ಹಾರಲು ಸಜ್ಜಾಗಿದೆ.

ಆರೋಹಿ ಗೌಡ ಈ ಚಿತ್ರದ ನಾಯಕಿ. ಇದು ಅವರ ನಟನೆಯ ಪ್ರಥಮ ಚಿತ್ರ. ಸಿನಿಮಾಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಅವರ ನಿರೀಕ್ಷೆಯ ಭಾರ ಹೆಚ್ಚಲು ಕಾರಣವಾಗಿದೆ. ಆರೋಹಿ ಹುಟ್ಟಿದ್ದು ಕೆ.ಆರ್. ನಗರದಲ್ಲಿ‌. ಅಪ್ಪ ಬ್ಯಾಂಕ್‌ ಮ್ಯಾನೇಜರ್. ಮಗಳ ವಿದ್ಯಾಭ್ಯಾಸಕ್ಕಾಗಿ ಮೈಸೂರಿನಲ್ಲಿ ಕುಟುಂಬ ನೆಲೆನಿಂತಿದೆ. ಅನಿಮೇಷನ್‌ ವಿಷಯದಲ್ಲಿ ಬಿಎಸ್‌ಸಿ ಪದವಿ ಪೂರೈಸಿರುವ ಅವರಿಗೆ ನಟನೆ ಹೊಸದು.

ಹೈಸ್ಕೂಲ್‌ ಮೆಟ್ಟಿಲು ಹತ್ತಿದಾಗಲೇ ಅವರು ಬಣ್ಣದಲೋಕದ ಸೆಳೆತಕ್ಕೆ ಸಿಲುಕಿದರಂತೆ. ಆಗಲೇ ಅವರಿಗೆ ನಟಿಯಾಗಬೇಕೆಂಬ ಆಸೆ ಚಿಗುರೊಡೆದಿದ್ದು. ಮಗಳ ಆಸೆಗೆ ಅಪ್ಪನಿಂದ ಮೊದಮೊದಲು ಅಷ್ಟೇನೂ ಪ್ರೋತ್ಸಾಹ ಸಿಗಲಿಲ್ಲವಂತೆ. ‘ನಾನು ಸಿನಿಮಾದಲ್ಲಿ ನಟಿಸುವುದು ಅಪ್ಪನಿಗೆ ಮೊದಲಿನಿಂದಲೂ ಇಷ್ಟವಿಲ್ಲ. ಅವರ ವಿರೋಧದ ನಡುವೆಯೂ ಮದ್ವೆ ಚಿತ್ರದ ಆಡಿಶನ್‌ಗೆ ಹೋದೆ. ನಾಯಕಿಯಾಗಿಯೂ ಆಯ್ಕೆಯಾದೆ. ಶೂಟಿಂಗ್‌ ಮುಗಿಸಿ ಬಂದಾಗ ಅಪ್ಪ ಏನನ್ನೂ ಹೇಳುತ್ತಿರಲಿಲ್ಲ. ಸಿನಿಮಾ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದನ್ನು ಕೇಳಿ ಈಗ ಅಪ್ಪನಿಗೂ ಖುಷಿಯಾಗುತ್ತಿದೆ. ಮಗಳ ಸಾಧನೆ ಬಗ್ಗೆ ಅವರಿಗೂ ಹೆಮ್ಮೆ ಇದೆ. ಆದರೆ, ಅದನ್ನು ಅವರೆಂದೂ ಬಹಿರಂಗವಾಗಿ ಹೇಳುವುದಿಲ್ಲ’ ಎನ್ನುತ್ತಾರೆ ಅವರು.

ಆರೋಹಿ ಯಾವುದೇ ಶಾಲೆಗೆ ಹೋಗಿ ನಟನೆ ಕಲಿತವರಲ್ಲ. ಮದ್ವೆ ಚಿತ್ರಕ್ಕಾಗಿ ನಿರ್ದೇಶಕ ಕೃಷ್ಣ, ಆರೋಹಿಗೆ ತಿಂಗಳ ಕಾಲ ಅಭಿನಯದ ಬಗ್ಗೆ ತರಬೇತಿ ನೀಡಿದರಂತೆ. ‘ನಟನೆಯಲ್ಲಿ ನಾನಿನ್ನೂ ಹೊಸಬಳು. ಆಡಿಷನ್ ದಿನದಂದೇ ಫೇಶಿಯಲ್‌, ಐಬ್ರೋ ಮಾಡಿಸಬಾರದೆಂದು ನಿರ್ದೇಶಕರು ಷರತ್ತು ವಿಧಿಸಿದರು. ಆಗ ಕೊಂಚ ಗಲಿಬಿಲಿಗೊಂಡೆ. ಮೊದಲಿಗೆ ಇದು ನನಗೆ ಅರ್ಥವಾಗಲಿಲ್ಲ. ಚಾಚೂ ತಪ್ಪದೇ ಅವರು ನೀಡಿದ ಸೂಚನೆ ಪಾಲಿಸಿದೆ. ಸಿನಿಮಾದಲ್ಲಿ ಮೇಕಪ್ ಇಲ್ಲದೇ ನಟಿಸಿದ್ದೇನೆ. ಚಿತ್ರವೂ ಸೊಗಸಾಗಿ ಬಂದಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಮದ್ವೆ’ ಚಿತ್ರದಲ್ಲಿ ಅವರದು ಮದುಮಗಳ ಪಾತ್ರವಂತೆ. ಮದುವೆ ಶಾಸ್ತ್ರದ ಶೂಟಿಂಗ್‌ ಅವರಿಗೆ ಸಾಕಷ್ಟು ಖುಷಿ ಕೊಟ್ಟಿತಂತೆ. ‘ಮೊದಲ ದಿನ ಕ್ಯಾಮೆರಾ ಎದುರಿಸುವಾಗ ಕೊಂಚ ಕಿರಿಕಿರಿಯಾಯಿತು. ಚಿತ್ರತಂಡದ ಸದಸ್ಯರ ಪ್ರೋತ್ಸಾಹದಿಂದ ನಟನೆ ಸುಲಭವಾಯಿತು. ಹದಿನೈದು ದಿನಗಳ ಕಾಲ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೆ. ಆ ದಿನಗಳನ್ನು ಎಂದಿಗೂ ಮರೆಯಲಾರೆ’ ಎನ್ನುತ್ತಾರೆ. ಮೊದಲ ಚಿತ್ರದ ಬಳಿಕ ಅವರಿಗೆ ಚಂದನವನದಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ‘ಘಾಟಿ ಪಾತ್ರಗಳಲ್ಲಿ ನಟಿಸಲು ನನಗಿಷ್ಟ. ಸವಾಲಿನ ಪಾತ್ರಗಳೂ ಇಷ್ಟ. ಆದರೆ, ಇಂತಹದ್ದೇ ಪಾತ್ರಗಳು ಬೇಕೆಂದು ಲಕ್ಷ್ಮಣ ರೇಖೆ ಎಳೆದುಕೊಳ್ಳುವುದಿಲ್ಲ. ಸಿಕ್ಕಿದ ಪಾತ್ರಗಳನ್ನು ಸವಾಲಾಗಿ ಸ್ವೀಕರಿಸಿ ನಟಿಸುತ್ತೇನೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !