‘ಅಭಿಸಾರಿಕೆ’ಯ ಕರೆ...

7

‘ಅಭಿಸಾರಿಕೆ’ಯ ಕರೆ...

Published:
Updated:

‘ಅಭಿಸಾರಿಕೆ’ ಚಿತ್ರ ಆರಂಭವಾಗಿದ್ದು ನಾಲ್ಕು ವರ್ಷಗಳ ಹಿಂದೆ. ಈಗ ಬಿಡುಗಡೆಯ ಭಾಗ್ಯ ಅದಕ್ಕೆ ದೊರೆತಿದೆ. ಹಾಗೆಂದು ಇಷ್ಟು ತಡವಾಗಿ ತೆರೆಗೆ ಬರುತ್ತಿದ್ದೇವೆ ಎಂಬ ಅಳುಕಾಗಲಿ, ಅಂಜಿಕೆಯಾಗಲಿ ಚಿತ್ರತಂಡಕ್ಕೆ ಖಂಡಿತ ಇಲ್ಲ. ‘ಒಳ್ಳೆಯ ಸಿನಿಮಾ ಮಾಡಿದ್ದೇವೆ. ಖಂಡಿತ ಗೆಲ್ಲುತ್ತದೆ‍’ ಎಂಬ ವಿಶ್ವಾಸದಲ್ಲಿಯೇ ಅವರಿದ್ದಾರೆ. ಅದೇ ಉತ್ಸಾಹದಲ್ಲಿ ಈ ವಾರ (ಆ. 13) ‘ಅಭಿಸಾರಿಕೆ’ಯನ್ನು ತೆರೆಗೆ ಕರೆತರುತ್ತಿದ್ದಾರೆ.

‘ಅಭಿಸಾರಿಕೆ ಎಂದರೆ ಗೆಳೆಯ–ಗೆಳತಿ ಸೇರುವ ಜಾಗ ಎಂಬ ಅರ್ಥವಿದೆ. ಹಾಗೆಯೇ ಇಲ್ಲಿ ಅಭಿ ಎನ್ನುವುದು ನಾಯಕನ ಹೆಸರು, ಸಾರಿಕೆ ನಾಯಕಿಯ ಹೆಸರು. ಅವರಿಬ್ಬರ ಪ್ರೇಮದ ನಡುವೆ ಇನ್ನೊಂದು ಖಳಪಾತ್ರವೂ ಇರುತ್ತದೆ’ ಎಂದು ಚಿತ್ರದ ಎಳೆಯ ಕುರಿತು ಮಾತನಾಡಿದರು ನಿರ್ದೇಶಕ ಮಧುಸೂದನ್‌. ‘ಈ ಚಿತ್ರ ನನ್ನ ಬದುಕಿನ ದೊಡ್ಡ ಮೈಲಿಗಲ್ಲು ಆಗುತ್ತದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು. ಕಾಮಿಡಿ ಮತ್ತು ಹಾರರ್ ಅಂಶಗಳನ್ನೆರಡೂ ಬಳಸಿಕೊಂಡು ಅವರು ಕಥೆಯನ್ನು ನಿರೂಪಿಸಿದ್ದಾರಂತೆ.

ಯಶ್‌ ಶೆಟ್ಟಿ ಈ ಚಿತ್ರದಲ್ಲಿ ಸೈಕೊ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಹೆಸರೇ ಸೈಕೋ ಸುನೀಲ್‌. ‘ಚಿತ್ರದ ಆರಂಭದಲ್ಲಿ ನಾನು ಕೆಟ್ಟವನೆಂಬಂತೆ ಇರುತ್ತೇನೆ. ಆದರೆ ನನ್ನ ಆ ವರ್ತನೆಗೂ ಕಾರಣ ಇರುತ್ತದೆ. ಕೊನೆಗೆ ಒಳ್ಳೆಯ ಹುಡುಗ ಎಂಬುದು ತಿಳಿಯುತ್ತದೆ’ ಎಂದು ತಮ್ಮ ಪಾತ್ರದ ಕುರಿತು ಅಸ್ಪಷ್ಟ ಚಹರೆಗಳನ್ನು ಬಿಟ್ಟುಕೊಟ್ಟರು ಯಶ್‌.

ಕರಣ್‌ ಬಿ. ಕೃಪಾ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳು ಇವೆ. ಎರಡೂ ಚೆನ್ನಾಗಿ ಬಂದಿವೆ ಎಂದರು ಅವರು.

ಇದು ಸೋನಲ್‌ ಮೊಂತೆರೊ ನಟನೆಯ ಮೊದಲ ಕನ್ನಡ ಸಿನಿಮಾ. ‘ಈ ಚಿತ್ರವನ್ನು ಒಪ್ಪಿಕೊಂಡ ಮೇಲೆ ನನಗೆ ಸಾಲು ಸಾಲು ಆಫರ್‌ಗಳು ಬರತೊಡಗಿದವು. ಆದ್ದರಿಂದ ನನ್ನ ಪಾಲಿನ ಲಕ್ಕಿ ಸಿನಿಮಾ ಇದು’ ಎಂದ ಸೋನಲ್‌, ‘ಈ ರೀತಿಯ ಸ್ಕ್ರಿಪ್ಟ್‌ ಅನ್ನು ನಾನು ಕನ್ನಡದಲ್ಲಿ ನೋಡಿಲ್ಲ. ಇದೊಂದು ಅಪರೂಪದ ಪ್ರಯೋಗ ಆಗುವುದರಲ್ಲಿ ಸಂಶಯ ಇಲ್ಲ’ ಎಂದೂ ಹೇಳಿದರು. ಮಧ್ಯಮವರ್ಗದ ಹುಡುಗಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. 

ನಾಯಕ ತೇಜಸ್‌ ಗೌಡ ಅವರು ತಮಗೆ ಅವಕಾಶ ಕೊಟ್ಟ ನಿರ್ದೇಶಕರು ಮತ್ತು ನಟನೆಯ ಪಟ್ಟುಗಳನ್ನು ಕಲಿಸಿದ ಯಶ್‌ ಶೆಟ್ಟಿ ಅವರಿಗೆ ಕೃತಜ್ಞತೆ ಹೇಳುವುದಕ್ಕೆ ನಮ್ಮ ಮಾತುಗಳನ್ನು ಸೀಮಿತಗೊಳಿಸಿದರು.

ಕರ್ನಾಟಕದಾದ್ಯಂದ ಕನಿಷ್ಠ 80 ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಮಾಡಲು ತಂಡ ಸಜ್ಜುಗೊಂಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !