ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಅಂತ್ಯಗೊಳಿಸುವ ಸಾಲು ಪ್ರಕಟಿಸಿದ್ದ ನಟಿ ಜಯಶ್ರೀ: ಸಾಂತ್ವನ ಹೇಳಿದ್ದ ಕಿಚ್ಚ

Last Updated 25 ಜನವರಿ 2021, 11:50 IST
ಅಕ್ಷರ ಗಾತ್ರ

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಫೇಸ್​ಬುಕ್​ನಲ್ಲಿ ಈ ಹಿಂದೆ ಪೋಸ್ಟ್​ ಮಾಡಿದ್ದ ಸ್ಯಾಂಡಲ್​ವುಡ್ ನಟಿ ಜಯಶ್ರೀ ರಾಮಯ್ಯ ಇದೀಗ ನಿಜವಾಗಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಗ್​ ಬಾಸ್ ಸೀಸನ್ 3ರಲ್ಲಿ ಖ್ಯಾತಿ ಗಳಿಸಿದ್ದ ಅವರು, ಕನ್ನಡ್ ಗೊತ್ತಿಲ್ಲ, ಉಪ್ಪು ಹುಳಿ ಖಾರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು.

ಇಂದು ಜಯಶ್ರೀ ರಾಮಯ್ಯ ಮಾಗಡಿ ರಸ್ತೆಯಲ್ಲಿರುವ ಗೊಲ್ಲರಹಟ್ಟಿಯ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ, ಜುಲೈ 22, 2020ರ ಬುಧವಾರ ಬೆಳಿಗ್ಗೆ ‘I Quit...’ ಎಂದು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ ಕನ್ನಡ ಚಿತ್ರರಂಗ ಮತ್ತು ಆಕೆಯ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಎಲ್ಲರೂ ಸಾಂತ್ವನ ಹೇಳಲು ಯತ್ನಿಸಿದ್ದರು. ಆ ಫೋಸ್ಟ್‌ ವೈರಲ್‌ ಆಗುತ್ತಲೇ ಆಕೆಯೇ ತನ್ನ ಫೇಸ್‌ಬುಕ್‌ನಲ್ಲಿ ‘I'm Alright and safe!! Love you all❤️’ ಎಂದು ಮತ್ತೊಂದು ಪೋಸ್ಟ್ ಹಾಕಿದ್ದರು.

ಕನ್ನಡದ ‘ಬಿಗ್‌ ಬಾಸ್‌ ಸೀಸನ್‌ 3’ರಲ್ಲಿ ಸ್ಪರ್ಧಿಸಿದ್ದ ಜಯಶ್ರೀ ಒಳ್ಳೆಯ ಡಾನ್ಸರ್‌ ಕೂಡ ಹೌದು. ಅವರು ಕೆಲವು ದಿನಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದರು. ಅವರನ್ನು ಪುನರ್ವಸತಿ ಕೇಂದ್ರವೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದಲೇ ಅವರು ಆ ರೀತಿಯ ಪೋಸ್ಟ್ ಮಾಡಿದ್ದರು ಎನ್ನಲಾಗಿತ್ತು.

ಜೀವ ಕಳೆದುಕೊಳ್ಳುವ ಮಾತಾಡಿದ್ದ ಜಯಶ್ರೀಗೆ ಬದುಕಿನ ಪಾಠ ಹೇಳಿದ ಸುದೀಪ್‌, ‘ಸಮಸ್ಯೆ ಇದೆ ಎಂದು ಆತ್ಮಹತ್ಯೆ ನಿರ್ಧಾರ ಮಾಡಬಾರದು. ನಿಮಗಿಂತಲೂ ದೊಡ್ಡ ಕಷ್ಟಗಳಲ್ಲಿರುವವರು ಇಲ್ಲಿ ಬದುಕುತ್ತಿದ್ದಾರೆ. ಅವರೆಲ್ಲ ಸಾಯುವ ಮಾತಾಡುತ್ತಿಲ್ಲ. ಅವರೆಲ್ಲರ ಸಮಸ್ಯೆಗಳ ಮುಂದೆ ನಿಮ್ಮವು ತೀರಾ ಚಿಕ್ಕವು. ಬದುಕುವ ದಾರಿಗಳು ತುಂಬಾ ಇವೆ’ ಎಂದು ಧೈರ್ಯ ತುಂಬಿದ್ದರು.

ಅದಾದ ಬಳಿಕ ‘ಸುದೀಪ್‌ ಸರ್‌ ನೀವು ಮತ್ತು ನಿಮ್ಮ ತಂಡ ಜತೆಯಾಗಿ ನನ್ನ ಜೀವ ಉಳಿಸಿದ್ದೀರಿ. ನೀವು ತೋರಿದ ಕಾಳಜಿಗೆ ಧನ್ಯವಾದಗಳು. ನನ್ನ ಪ್ರೀತಿಯ ಸ್ನೇಹಿತರು ಮತ್ತು ಅಭಿಮಾನಿಗಳು ನಿಮ್ಮನ್ನು ತುಂಬಾ ಪ್ರೀತಿಸಲಿದ್ದಾರೆ’ ಎಂದು ಕಿಚ್ಚನಿಗೆ ಧನ್ಯವಾದ ಅರ್ಪಿಸಿದ್ದರು.

ಇದಕ್ಕೂ ಮುನ್ನ ‘ಐದು ವರ್ಷದವಳಿದ್ದಾಗಲೇ ಅತ್ಯಾಚಾರಕ್ಕೆ ಒಳಗಾಗಿದ್ದೆ. ಹುಡುಗಿಯರಿಂದಲೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ತಾಯಿಯನ್ನು ನನ್ನ ಅಣ್ಣ ಹೊಡೆಯುತ್ತಾನೆ. ಸುದೀಪ್‌ ಚಾರಿಟಬಲ್‌ ಟ್ರಸ್ಟ್‌ ನನ್ನ ತಾಯಿಯನ್ನು ಸಲಹುವ ಜವಾಬ್ದಾರಿ ತೆಗೆದುಕೊಂಡರೆ, ನಾನು ನಿಶ್ಚಿಂತೆಯಿಂದ ಸಾಯುವೆ. ನನಗೆ ಬದುಕು ಬೇಡ, ಈಗಾಲೇ ಏಳು ಬಾರಿ ಆತ್ಮಹತ್ಯೆಗೆ ಯತ್ನಿಸಿರುವೆ. ನನಗೆ ಕೊರೊನಾ ಬರಲಿ, ಯಾರಾದರೂ ದಯಾಮರಣ ಕೊಡಿಸಿ. ಇದನ್ನು ನಾನು ಪ್ರಚಾರಕ್ಕಾಗಿ ಮಾಡುತ್ತಿಲ್ಲ’ ಎಂದು ಮಾಧ್ಯಮಗಳ ಎದುರು ಅಲವತ್ತುಕೊಂಡಿದ್ದರು.

ಆರಂಭದಲ್ಲಿ ಖಾಸಗಿ ಕಂಪೆನಿಯಲ್ಲಿ ಎಚ್​ಆರ್​ ಆಗಿದ್ದ ಜಯಶ್ರೀ, ಮಾಡೆಲಿಂಗ್ ಕ್ಷೇತದ ಕಡೆಗೆ ಆಕರ್ಷಿತರಾಗಿದ್ದರು. ಬಳಿಕ ಬಿಗ್ ಬಾಸ್​ಗೂ ಕಾಲಿಟ್ಟರು. ನಂತರ ಜಯಶ್ರೀ ನಟನೆ ಕಡೆಗೆ ಗಮನಹರಿಸಿದ್ದರು.

ಸದ್ಯ ನಟಿ ಆತ್ಮಹತ್ಯೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಜಯಶ್ರೀ ಅವರ ಆತ್ಮಹತ್ಯೆಗೆ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದು ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT