ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷವೇ ಲವ್‌ಮಾಕ್ಟೆಲ್‌–2 ತೆರೆಗೆ

Last Updated 17 ಜೂನ್ 2021, 19:30 IST
ಅಕ್ಷರ ಗಾತ್ರ

‘ಲವ್‌ ಮಾಕ್ಟೆಲ್‌’ ಹಿಟ್‌ ಆದ ಬಳಿಕ ‘ಶುಗರ್‌ ಫ್ಯಾಕ್ಟರಿ’ ತೆರೆದ ‘ಮಿ.ಬ್ಯಾಚುಲರ್‌’ ಡಾರ್ಲಿಂಗ್‌ ಕೃಷ್ಣ, ‘ಲವ್‌ ಮಾಕ್ಟೆಲ್‌–2’ರತ್ತ ಗಮನಹರಿಸಿದ್ದಾರೆ. ಶೀಘ್ರದಲ್ಲೇ ಇದರ ಚಿತ್ರೀಕರಣ ಮುಗಿಸಿ ಈ ವರ್ಷವೇ ತೆರೆಗೆ ತರಲು ತಯಾರಿ ನಡೆಸಿದ್ದಾರೆ.

* ಹೇಗಿತ್ತು ಲಾಕ್‌ಡೌನ್‌ ಅವಧಿ. ಕೋವಿಡ್‌ ಬಂದ ಸಂದರ್ಭ ಅದನ್ನು ಹೇಗೆ ನಿಭಾಯಿಸಿದ್ರಿ?

ಮದುವೆಯಾದ ನಂತರದ ಮೊದಲ ಯುಗಾದಿ ಆಗಿದ್ದ ಕಾರಣದಿಂದಾಗಿ ಕಳೆದ ಏ.12ರಂದು ಹಾಸನದಲ್ಲಿರುವ ಮಿಲನಾ ಮನೆಗೆ ಹೋಗಿದ್ದೆವು. ಅಲ್ಲಿಗೆ ಹೋದ ಸಂದರ್ಭದಲ್ಲಿ ನನಗೂ, ಮಿಲನಾಳಿಗೂ ಕೋವಿಡ್‌ ದೃಢಪಟ್ಟಿತ್ತು. ಜೊತೆಗೆ ಮಿಲನಾ ಅವರ ತಂದೆಗೂ ಕೋವಿಡ್‌ ದೃಢಪಟ್ಟಿತ್ತು. ಹೀಗಾಗಿ ಅಲ್ಲೇ 15 ದಿನ ಕ್ವಾರಂಟೈನ್‌ ಆಗಿದ್ದೆವು. ಹೇಗೆ ಜೀವನ ನಡೆಸುತ್ತಿದ್ದೆವೋ ಹಾಗೆಯೇ ಇದ್ದೆವು. ಮೂರ್ನಾಲ್ಕು ದಿನ ಅನಾರೋಗ್ಯವಿತ್ತು, ಸೂಕ್ತ ಔಷಧದಿಂದ ಗುಣಮುಖರಾದೆವು. ಇದಾದ ನಂತರ ಮೈಸೂರಿನಲ್ಲಿರುವ ನನ್ನ ಮನೆಗೆ ಹೋಗಿದ್ದೆವು. ಅಲ್ಲಿ ಒಂದು ತಿಂಗಳು ಇದ್ದೆವು. ಅಲ್ಲಿ ಇದ್ದಾಗ ನಾಯಿಮರಿಯೊಂದನ್ನು ತೆಗೆದುಕೊಂಡೆವು. ಲಾಕ್‌ಡೌನ್‌ ಅವಧಿಯನ್ನು ತಂದೆ–ತಾಯಿಯ ಜೊತೆಗೇ ನಾವು ಕಳೆದೆವು. ಜೊತೆಗೆ ಲವ್‌ಮಾಕ್ಟೆಲ್‌ ಎರಡನೇ ಭಾಗದ ಮ್ಯೂಸಿಕ್‌ ರಿರೆಕಾರ್ಡಿಂಗ್‌ ನಡೆಯುತ್ತಿದ್ದು, ಆನ್‌ಲೈನ್‌ ವಿಡಿಯೊ ಕಾಲ್‌ ಕಾನ್ಫರೆನ್ಸ್‌ ಮುಖಾಂತರವೇ ಈ ಕೆಲಸದಲ್ಲಿ ತೊಡಗಿದ್ದೆವು.

* ಮೊದಲ ಲಾಕ್‌ಡೌನ್‌ನಲ್ಲಿ ಕೋವಿಡ್‌ ಜೊತೆಗೆ ಫೇಮಸ್‌ ಆಗಿದ್ದು ಲವ್‌ಮಾಕ್ಟೆಲ್‌? ಹೇಗನಿಸಿತ್ತು ಆಗ?

ಹೌದೌದು. ಆ ಸಂದರ್ಭದಲ್ಲಿ ಜನರ ಮಾತು ಕೇಳಿ ಖುಷಿಯಾಗಿತ್ತು. ಆ ಲಾಕ್‌ಡೌನ್‌ ಅವಧಿಯಲ್ಲೇ ಲವ್‌ಮಾಕ್ಟೆಲ್‌ ಎರಡನೇ ಭಾಗದ ಕರಡು ಸ್ಕ್ರಿಪ್ಟ್‌ ಸಿದ್ಧಪಡಿಸಿಕೊಂಡಿದ್ದೆವು. ಏಕೆಂದರೆ, ಚಿತ್ರಮಂದಿರಗಳಲ್ಲಿ ಮೊದಲನೇ ಭಾಗ ನೋಡಿದ ಜನ ಸಿನಿಮಾ ಮುಗಿದರೂ ಎದ್ದು ಹೋಗುತ್ತಿರಲಿಲ್ಲ. ಮುಂದೆ ಕಥೆ ಇದೆ ಎಂದು ಕೆಲವರು ಕುಳಿತೇ ಇದ್ದರು. ಈ ಸಂದರ್ಭದಲ್ಲೇ ಎರಡನೇ ಭಾಗ ಮಾಡಬಹುದೇ ಎಂಬ ಪ್ರಶ್ನೆ ನನ್ನಲ್ಲಿ ಎದ್ದಿತ್ತು. ಮೊದಲನೇ ಭಾಗದಲ್ಲಿ ಕಥೆ ಅಂತ್ಯವಾಗುವಂತೆ ಮಾಡಿದ್ದೆ. ಆದರೆ ಜನ ಇನ್ನೂ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಎರಡನೇ ಭಾಗ ಮಾಡಿದರೆ ಹೇಗೆ ಎಂದು ಮಿಲನಾಗೆ ಕೇಳಿದೆ. ‘ಕಥೆ ಮುಗಿದೇ ಹೋಗಿದೆಯಲ್ವಾ. ಹೇಗಾಗುತ್ತದೆ’ ಎಂದು ಆಕೆ ಕೇಳಿದ್ದರು. ಅದೇ ಪಾತ್ರಗಳ ಮುಂದಿನ ಜೀವನ ಹೇಗಿರಬಹುದು ಎಂದು ತೋರಿಸೋಣ ಎಂಬ ಯೋಚನೆ ಬಂದು ಮೊದಲನೇ ಲಾಕ್‌ಡೌನ್‌ನಲ್ಲೇ ನಾನು ಮೈಸೂರಿನಲ್ಲಿ ಇದ್ದುಕೊಂಡು ಮಿಲನಾ ಹಾಸನದಲ್ಲಿ ಇದ್ದುಕೊಂಡು ಕಥೆ ಬಗ್ಗೆ ಚರ್ಚೆ ನಡೆಸಿದ್ದೆವು. ಅನ್‌ಲಾಕ್‌ ಆದ ಮೇಲೆ ಬೆಂಗಳೂರಿಗೆ ಬಂದ ಬಳಿಕ ಸ್ಕ್ರಿಪ್ಟ್‌ ಅಂತಿಮಗೊಳಿಸಿದೆವು.

* ಒಟಿಟಿ ಬಗ್ಗೆ ನಿಮ್ಮ ಅಭಿಪ್ರಾಯ?

ಲವ್‌ಮಾಕ್ಟೆಲ್‌ ಮೊದಲ ಭಾಗದ ಸಿನಿಮಾಗೆ ನಮಗೆ ಚಿತ್ರಮಂದಿರಗಳಲ್ಲಿ 43 ದಿನ ಪ್ರದರ್ಶನಕ್ಕೆ ಅವಕಾಶ ದೊರೆಯಿತು. 44ನೇ ದಿನಕ್ಕೆ ಲಾಕ್‌ಡೌನ್‌ ಪ್ರಾರಂಭವಾಯಿತು. ಸಿನಿಮಾ ಹೌಸ್‌ಫುಲ್‌ ನಡೆಯುತ್ತಿತ್ತು. ಒಬ್ಬ ಚಿತ್ರ ನಿರ್ದೇಶಕನಾಗಿ ನಾನು ಚಿತ್ರಮಂದಿರಗಳಲ್ಲೇ ಬಯಸುತ್ತೇನೆ. ಏಕೆಂದರೆ ಜನರ ಪ್ರತಿಕ್ರಿಯೆ ಸಿಗುವುದು ಅಲ್ಲಿಯೇ. ಚಿತ್ರಮಂದಿರಗಳಲ್ಲಿ ಜನರ ಗಮನ ಬೇರೆಕಡೆಗೆ ಹೋಗುವುದಿಲ್ಲ. ಸಿನಿಮಾ ಮೂಲಕ ಇನ್ನೊಂದು ಪ್ರಪಂಚಕ್ಕೆ ಕರೆದೊಯ್ಯುತ್ತೇವೆ. ಆದರೆ ಒಟಿಟಿಯಲ್ಲಿ, ಮೊಬೈಲ್‌ನಲ್ಲಿ, ಟಿ.ವಿಯಲ್ಲಿ ಜನ ಸಿನಿಮಾ ನೋಡುತ್ತಾರೆ. ಗಮನವಿಟ್ಟು ಸಿನಿಮ ನೋಡಲು ಆಗುವುದಿಲ್ಲ. ಇದು ಸಮಸ್ಯೆ. ನಮ್ಮ ಕೆಲಸವನ್ನು ಸಂಪೂರ್ಣವಾಗಿ ಪ್ರೇಕ್ಷಕರಿಗೆ ತಲುಪಿಸುವುದು ಒಟಿಟಿಯಲ್ಲಿ ಸಾಧ್ಯವಿಲ್ಲ. ಈ ಅನುಭವವನ್ನು ಚಿತ್ರಮಂದಿರಗಳಲ್ಲಷ್ಟೇ ನೀಡಲು ಸಾಧ್ಯ.

* ಲವ್‌ಮಾಕ್ಟೆಲ್‌–2 ಪಯಣ ಎಲ್ಲಿಯವರೆಗೆ ಬಂದಿದೆ? ಯಾವಾಗ ತೆರೆಗೆ?

ಚಿತ್ರದ ಚಿತ್ರೀಕರಣ ಶೇ 60–65ರಷ್ಟು ಪೂರ್ಣಗೊಂಡಿದ್ದು, ಇನ್ನೂ 12 ದಿನ ಚಿತ್ರೀಕರಣ ಬಾಕಿ ಇದೆ. ಅನ್‌ಲಾಕ್‌ ಆದ ಬಳಿಕ ಚಿತ್ರಮಂದಿರಗಳನ್ನು ಯಾವಾಗ ತೆರೆಯುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ವರ್ಷದೊಳಗೆ ಖಂಡಿತವಾಗಿಯೂ ಎರಡನೇ ಭಾಗ ಬಿಡುಗಡೆಯಾಗಲಿದೆ. ಈ ಚಿತ್ರ ಮುಗಿಸಿಕೊಂಡರೆ ಇನ್ನೊಂದು ಕಥೆ ಬರೆಯಬಹುದು ಎನ್ನುವುದು ನನ್ನ ಆಲೋಚನೆ. ನಮ್ಮ ಶ್ರಮವನ್ನು ಆದಷ್ಟು ಬೇಗ ಜನರೆದುರಿಗೆ ಇಟ್ಟರೆ ಸಾರ್ಥಕ. ನಮ್ಮ ಮನಸ್ಸೂ ಮತ್ತಷ್ಟು ತೆರೆದುಕೊಳ್ಳುತ್ತದೆ, ಮತ್ತೊಂದು ಪಯಣಕ್ಕೆ ಇದು ನಾಂದಿಯಾಗಲಿದೆ.

*ರೋಮ್ಯಾಂಟಿಕ್‌ ಹೀರೊ ಪಾತ್ರಗಳೇ ಅರಸಿಕೊಂಡು ಬರುವಂತಿವೆ ಅಲ್ಲವೇ?

ಲವ್‌ಮಾಕ್ಟೆಲ್‌ ಆದ ಮೇಲೆ ರೊಮ್ಯಾಂಟಿಕ್‌ ಸಿನಿಮಾ ಕಥೆಗಳೇ ಬರುತ್ತಿವೆ. ಒಂದು ಸಿನಿಮಾದಲ್ಲಿನ ಪಾತ್ರ ಹಿಟ್‌ ಆದರೆ ಹಾಗೆಯೇ ಅಲ್ಲವೇ. ಒಂದು ಒಳ್ಳೆಯ ಸಿನಿಮಾ ಆಗಬೇಕು, ನನ್ನ ಪಾತ್ರ ಎರಡನೇ ವಿಷಯ ಎನ್ನುವುದು ನನ್ನ ಅಭಿಪ್ರಾಯ. ಕಥೆ ಒಳ್ಳೆಯದಿದ್ದರೆ, ಪಾತ್ರ ಹೇಗೆಯೇ ಇರಲಿ ಜನರಿಗೆ ಸಿನಿಮಾ ಇಷ್ಟವಾಗುತ್ತದೆ. ನಾವು ಯಾವುದೋ ವಿಭಿನ್ನ ಪಾತ್ರಮಾಡಿ ಸಿನಿಮಾದಲ್ಲಿ ಕಥೆಯೇ ಇಲ್ಲದಿದ್ದರೆ ಅದು ವ್ಯರ್ಥ. ಸಿನಿಮಾ ಗೆದ್ದರೆ ಪಾತ್ರ ಗೆಲ್ಲುತ್ತದೆ.

*ಒಪ್ಪಿಕೊಂಡಿರುವ ಸಿನಿಮಾಗಳ ಪಯಣ ಎಲ್ಲಿಯವರೆಗೆ ಬಂದಿದೆ?

ಶುಗರ್‌ ಫ್ಯಾಕ್ಟರಿ ಚಿತ್ರೀಕರಣ ಶೇ 50–60 ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ 15 ದಿನ ಹಾಗೂ ಗೋವಾದಲ್ಲಿ 25 ದಿನ ಚಿತ್ರೀಕರಣ ನಡೆದಿದೆ. ‘srikrishna@gmail.com’ ಚಿತ್ರದಲ್ಲಿ ನಾನು ಪಂಚತಾರ ಹೋಟೆಲ್‌ ವೈಟರ್‌ ಪಾತ್ರ ಮಾಡುತ್ತಿದ್ದೇನೆ. ಮಿ.ಬ್ಯಾಚುಲರ್‌ ಸಿನಿಮಾ ಶೇ 80ರಷ್ಟು ಚಿತ್ರೀಕರಣ ಮುಗಿದಿದೆ. ಮತ್ತೆ ಚಿತ್ರೀಕರಣಕ್ಕೆ ಇಳಿಯಲು ಅನ್‌ಲಾಕ್‌ ಆಗಲು ಕಾಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT