ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಲು ನಟ ಗಣೇಶ್‌ಗೆ ನೀಡಿದ್ದ ಅನುಮತಿ ರದ್ದು

Published 5 ಸೆಪ್ಟೆಂಬರ್ 2023, 15:45 IST
Last Updated 5 ಸೆಪ್ಟೆಂಬರ್ 2023, 15:45 IST
ಅಕ್ಷರ ಗಾತ್ರ

ಬೆಂಗಳೂರು: ಚಲನಚಿತ್ರ ನಟ ಗಣೇಶ್‌ ಅವರಿಗೆ ಬಂಡೀಪುರ ಅರಣ್ಯದ ಸಮೀಪ ಗುಂಡುಪ್ಲೇಟೆ ತಾಲೂಕಿನ ಜಕ್ಕಳ್ಳಿಯ ಪರಿಸರ ಸೂಕ್ಷ್ಮಪ್ರದೇಶದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಲು ನಿಯಮಬದ್ಧವಾಗಿ ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಆದರೆ ಅವರು ಶಾಶ್ವತ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಈಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಪ್ರಕರಣ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಅವರು ತಿಳಿಸಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಚಿತ್ರನಟ ಗಣೇಶ್ ಅವರು ಕಟ್ಟಡ ನಿರ್ಮಿಸುತ್ತಿರುವುದಕ್ಕೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

‘ವಾಸ ಹಾಗೂ ಕೃಷಿ ಉದ್ದೇಶಕ್ಕೆ ತಾತ್ಕಾಲಿಕ ಮನೆಯನ್ನು ನಿರ್ಮಿಸಲು ಗಣೇಶ್ ಅನುಮತಿ ಪಡೆದಿದ್ದಾರೆ. ಆದರೆ, ಅವರು ಬೃಹತ್ ಕಟ್ಟಡ ನಿರ್ಮಿಸುತ್ತಿದ್ದಾರೆ’ ಎಂಬ ಆರೋಪ ಕೇಳಿಬಂದಿತ್ತು. ಅದಕ್ಕೆ ಪೂರಕವೆಂಬಂತೆ, ಕಟ್ಟಡದ ಅಡಿಪಾಯಕ್ಕಾಗಿ ದೊಡ್ಡ ಕಾಂಕ್ರೀಟ್‌ ಪಿಲ್ಲರ್‌ಗಳನ್ನು ಹಾಕಿ, ಕಟ್ಟಡ ನಿರ್ಮಾಣ ಬಿರುಸಿನಿಂದ ಸಾಗಿದ್ದು, ಜೆಸಿಬಿಯನ್ನೂ ಬಳಸಲಾಗುತ್ತಿತ್ತು.

ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿಯ ಸರ್ವೆ‌ ನಂಬರ್ 105ರಲ್ಲಿ 1 ಎಕರೆ 24 ಗುಂಟೆ ಜಮೀನಿದ್ದು, ವಾಸಕ್ಕೆ ಮನೆ ಮತ್ತು ತೋಟಗಾರಿಕೆ ಉದ್ದೇಶದಿಂದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಅನುಮತಿ ನೀಡಬೇಕು ಎಂದು ಗಣೇಶ್ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು.


ಪರಿಸರ ಸೂಕ್ಷ್ಮ ವಲಯ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ  ಜಮೀನು ಇದೆ. ಅಧಿಸೂಚನೆ ಪ್ರಕಾರ, ಸೂಕ್ಷ್ಮ ವಲಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ಶಾಶ್ವತ ಕಟ್ಟಡಗಳನ್ನೂ ನಿರ್ಮಿಸುವಂತಿಲ್ಲ.

ತಾತ್ಕಾಲಿಕ ಕಟ್ಟಡಕ್ಕಷ್ಟೇ ಅನುಮತಿ

‘ತಾತ್ಕಾಲಿಕ ಕಟ್ಟಡವನ್ನು ವಸತಿ ಉದ್ದೇಶಕ್ಕಷ್ಟೇ ಬಳಸಬೇಕು. ವನ್ಯಜೀವಿಗಳ ಸಂಚಾರಕ್ಕೆ ಧಕ್ಕೆ ತರಕೂಡದು. ಸಮಿತಿ ಮುಂದೆ ಹಾಜರುಪಡಿಸಿದ್ದ ನೀಲನಕ್ಷೆಯಂತೆಯೇ ಮನೆ ಕಟ್ಟಬೇಕು. ಯಾವುದೇ ಕಾರಣಕ್ಕೂ ವಿಸ್ತೀರ್ಣ, ಮಾದರಿ ಬದಲಿಸುವಂತಿಲ್ಲ' ಎಂಬ ಷರತ್ತುಗಳನ್ನು ವಿಧಿಸಿ ಈ ವರ್ಷದ ಮಾರ್ಚ್‌ 15ರಂದು ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿಯು ಗಣೇಶ್‌ ಅವರಿಗೆ ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT