ಗುರುವಾರ , ಅಕ್ಟೋಬರ್ 6, 2022
27 °C

ಗಾಳಿಪಟ–2: ಭಟ್ರ ಜೊತೆ ಗಣಪ ಗೆದ್ದಿದ್ದಾನೆ! ನಟ ಗಣೇಶ್ ಜೊತೆ ಸಂದರ್ಶನ

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

ತೆರೆಯ ಮೇಲೆ ಯೋಗರಾಜ್‌ ಭಟ್‌ ಹಾಗೂ ಗಣೇಶ್‌ ಅವರ ಕಾಂಬಿನೇಷನ್‌ ಮತ್ತೆ ಒಂದಾಗುತ್ತದೆ. ‘ಗಣಿ’ಯಾಗಿ ತೆರೆಯ ಮೇಲೆ ಮಿಂಚಿದ್ದ ಗಣೇಶ್‌ ಮೊದಲ ಗಾಳಿಪಟದ ನೆನಪನ್ನು ಮೆಲುಕು ಹಾಕುತ್ತಾ ಹೊಸ ಗಾಳಿಪಟವನ್ನು ಹಾರಿಸಲು ಸಜ್ಜಾಗಿದ್ದಾರೆ...

‘ಗಾಳಿಪಟ’ ಅಷ್ಟು ಎತ್ತರಕ್ಕೆ ಹಾರುತ್ತದೆ ಎನ್ನುವ ಸುಳಿವಿತ್ತೇ?

ನನ್ನ ಹಾಗೂ ಯೋಗರಾಜ್‌ ಭಟ್‌ ಅವರ ಎರಡನೇ ಪ್ರೊಜೆಕ್ಟ್‌ ‘ಗಾಳಿಪಟ’. ನಮ್ಮ ಮೊದಲ ಪ್ರೊಜೆಕ್ಟ್‌ ‘ಮುಂಗಾರು ಮಳೆ’ ಬಿಡುಗಡೆಯಾದ ನಂತರ ಆ ಮಟ್ಟಿಗೆ ಮಳೆ (ಯಶಸ್ಸು) ಸುರಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆ ಮಳೆ ನಿಂತ ನಂತರ ‘ಗಾಳಿಪಟ’ ಹಾರಿಸುವ ಮನಸ್ಸಾಯಿತು. ಪ್ರೀತಿಯ ಜೊತೆಗೆ ಗೆಳೆಯರ ಸ್ನೇಹ, ತುಂಟಾಟ, ಭಾವನೆಗಳು ತುಂಬಿದ ಪಯಣವನ್ನು ಹೊತ್ತ ಕಥೆ ಅದಾಗಿತ್ತು. ಕಥಾಹಂದರ ವಿಭಿನ್ನವಾಗಿದೆ ಎನ್ನುವುದು ನನ್ನನ್ನು ಮೊದಲು ಸೆಳೆದ ಅಂಶ. ಚಿತ್ರದ ಕಥೆಯನ್ನು ಮೊದಲು ಭಟ್ರು ಹೆಣೆದರು. ನಂತರ ನಾನು ಸೇರ್ಪಡೆಯಾಗಿದ್ದು. ಗಾಳಿಪಟ–2 ಸಿನಿಮಾವೂ ಇದೇ ರೀತಿಯ ಕಥಾಹಂದರ ಹೊಂದಿದೆ. ಮೊದಲ ಗಾಳಿಪಟದಷ್ಟೇ ಎತ್ತರಕ್ಕೆ ಅಥವಾ ಅದಕ್ಕಿಂತ ಎತ್ತರಕ್ಕೆ ಎರಡನೇ ಭಾಗವೂ ಹಾರುವ, ಯಶಸ್ಸು ಕಾಣುವ ನಿರೀಕ್ಷೆ ಇದೆ.

ಗಣಪನ ಕೈಹಿಡಿದಾಗಲೆಲ್ಲ ಭಟ್ರು ಗೆದ್ದಿದ್ದಾರೆ ಅಲ್ಲವೇ?

ಅದೂ ಹೌದು. ಜೊತೆಗೆ ನಾನೂ ಭಟ್ರ ಕೈಹಿಡಿದಾಗ ಗೆದ್ದಿದ್ದೇನೆ. ನಾನು ಈ ಹಿಂದೆ ಒಮ್ಮೆ ಹೇಳಿದ್ದೆ, ಕಳೆದ ಜನ್ಮದಲ್ಲಿ ನಾನೂ ಭಟ್ರು ಗಂಡ–ಹೆಂಡ್ತಿ ಆಗಿದ್ದೆವು ಎನಿಸುತ್ತದೆ. ಗಣಗಳು ಆ ಜನ್ಮದಲ್ಲಿ ಕೂಡಿಬಂದಿಲ್ಲ. ಈ ಜನ್ಮದಲ್ಲಿ ರಾಶಿ–ನಕ್ಷತ್ರ ಕೂಡಿಬಂದಿದೆ. ಹೀಗಾಗಿ ಒಳ್ಳೊಳ್ಳೆಯ ಸಿನಿಮಾ ಮಾಡುತ್ತಿದ್ದೇವೆ. ಜನರು ಈ ಸಿನಿಮಾಗಳ ಕೈಹಿಡಿದಿದ್ದಾರೆ. ಪರಸ್ಪರ ಪ್ರೀತಿ, ಗೌರವ, ವಿಶ್ವಾಸವಿದೆ. ನಾವಿಬ್ಬರೂ ಆತ್ಮೀಯರು, ಜೊತೆಗೆ ಒಳ್ಳೆಯ ವಿಮರ್ಶಕರೂ ಹೌದು. ಒಬ್ಬರೊಬ್ಬರು ಕಾಲು ಎಳೆದುಕೊಂಡರೂ ಕೆಲಸದ ವಿಷಯದಲ್ಲಿ ಗಂಭೀರ. ‘ಈ ರೀತಿ ನಟನೆ ಮಾಡು ಗಣಪ’ ಎಂದು ಭಟ್ರು ಹೇಳಿದರೆ, ನಾನು ಕಣ್ಣುಮುಚ್ಚಿಕೊಂಡು ಅಭಿನಯಿಸುತ್ತೇನೆ. ಏಕೆಂದರೆ ಅವರ ಬರವಣಿಗೆಯ ಮೇಲೆ ನನಗೆ ಅಷ್ಟು ನಂಬಿಕೆ ಇದೆ. 

ಎರಡನೇ ಭಾಗದಲ್ಲಿ ಪಾತ್ರವಷ್ಟೇ ಮುಂದುವರಿದಿದೆಯೇ?

ಹೌದು. ಪಾತ್ರದ ವಿಚಾರ ಬಂದಾಗ ಗಾಳಿಪಟ–2 ಸಿನಿಮಾ ಸರಣಿ. ಅದೇ ಗಣಿ, ಅದೇ ತಿಂಡಿಪೋತ. ಆದರೆ ಇಲ್ಲಿ ಮೊದಲ ಭಾಗದಲ್ಲಿ ಇದ್ದ ಹಾಗೆ ತಿನ್ನುವುದಿಲ್ಲ. ಆದರೆ ಗುಂಡುಗುಂಡಾಗಿದ್ದೇನೆ. ಫ್ಲ್ಯಾಶ್‌ಬ್ಯಾಕ್‌ ಕಥೆಯಲ್ಲಿ ಕಾಲೇಜು ದಿನಗಳ ಮೆಲುಕಿದೆ. ಹಾಲಿವುಡ್‌ನ ಮಾರ್ವೆಲ್‌ ಸರಣಿಯಂತೆ ನಮ್ಮ ಈ ಸರಣಿಯಲ್ಲಿ ಅದೇ ಪಾತ್ರಗಳಿವೆ, ಆದರೆ ಕಥೆ ಬೇರೆ. ಕಥೆಯ ವಿಚಾರಕ್ಕೆ ಬಂದಾಗ ಮೊದಲ ಹಾಗೂ ಎರಡನೇ ಭಾಗಕ್ಕೆ ಯಾವುದೇ ಸಂಬಂಧ ಇಲ್ಲ.

ಚಿತ್ರದಲ್ಲಿ ನಾನು ಶಾಸಕ ‘ಬೈರೇಗೌಡ’ ಅವರ ಮಗ. ತಾಯಿ ‘ಕುಮುದಾ’ ಕಾದಂಬರಿಕಾರ್ತಿ. ಆಕೆಯ ಅಭಿಮಾನಿ ನಾಯಕಿ ‘ಶ್ವೇತ’. ಆಕೆಗೆ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತಿ. (ನಗುತ್ತಾ) ನನ್ನೆಲ್ಲ ಸಿನಿಮಾಗಳಂತೆ ನಾಯಕಿಯನ್ನು ನೋಡಿದ ತಕ್ಷಣ ನಾಯಕನಿಗೆ ಪ್ರೀತಿ ಹುಟ್ಟುತ್ತದೆ. ಕಥೆ ಇಲ್ಲಿಂದ ಆರಂಭ.  

ದಶಕ ಕಳೆದ್ರೂ ನಿಮಗೆ ಕನ್ನಡ ಕಲಿಸಲು ಭಟ್ರಿಗೆ ಆಗಲಿಲ್ಲವೇ!?

ನಾನು ಕನ್ನಡವನ್ನು ಚೆನ್ನಾಗಿ ಮಾತನಾಡಬಲ್ಲೆ, ಬರಿಯಬಲ್ಲೆ. ಕನ್ನಡ ಸಾಹಿತ್ಯವನ್ನು ಓದುತ್ತೇನೆ. ಕನ್ನಡದ ಪ್ರಮುಖ ಕಾದಂಬರಿಗಳನ್ನು ಓದಿದ್ದೇನೆ. ಆದರೆ ಭಟ್ರಿಗೆ ನನ್ನ ಮೇಲೆ ಯಾಕೋ ದ್ವೇಷ. ‘ಬಡ್ಡಿ ಮಗ ಮಾಡ್ತೀನಿ ಇರು ಇವನಿಗೆ’ ಎನ್ನುವ ಹಾಗೆ ಕನ್ನಡ ಬರದೇ ಇರುವ ಪಾತ್ರದಲ್ಲೇ ನನ್ನನ್ನು ಬಿಂಬಿಸುತ್ತಾರೆ. ಮೊದಲನೇ ಭಾಗದಲ್ಲಿ ‘ಟ’ಕ್ಕೂ ‘ಣ’ಕ್ಕೂ ವ್ಯತ್ಯಾಸ ಗೊತ್ತಿಲ್ಲದ ಗಣಿ, ಎರಡನೇ ಭಾಗದಲ್ಲಿ ದ್ರವ ಪದಾರ್ಥ ಹಾಕಿಕೊಂಡಾಗ ‘ರ’ಕ್ಕೂ ‘ಲ’ಕ್ಕೂ ವ್ಯತ್ಯಾಸ ಮಾಡಿಕೊಳ್ಳುತ್ತಾನೆ. ಆದರೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಹೋಗುವ ಪಾತ್ರ ನನ್ನದು. ನನ್ನ ಮೇಲಿನ ಪ್ರೀತಿಗೆ ಭಟ್ರು ಈ ರೀತಿಯ ಪಾತ್ರವನ್ನು ನನಗೆ ಬರೆಯುತ್ತಾರೆ. 

ಭಟ್ರು–ಕಾಯ್ಕಿಣಿ–ಗಣಪ–ಸೋನು ನಿಗಮ್‌... ಈ ಕಾಂಬಿನೇಷನ್‌ ಬಗ್ಗೆ...

ಜಯಂತಣ್ಣ, ಭಟ್ರ ಸಾಹಿತ್ಯಕ್ಕೆ ಮಾರುಹೋಗದವರಾರು. ಅದಕ್ಕೆ ಸೋನು ನಿಗಮ್‌ ಅವರ ಕಂಠ. ಇದು ನಮಗೂ ಸವಾಲು. ಹಾಡನ್ನು ಮುಗಿಲೆತ್ತರಕ್ಕೆ, ಮನಮುಟ್ಟುವಂತೆ ಬರೆದಾಗ ಅದಕ್ಕೆ ತಕ್ಕ ಹಾಗೆ ನಟಿಸುವುದು ಇದೆಯಲ್ಲ ಅದರಷ್ಟು ಕಷ್ಟ ಬೇರೇನಿಲ್ಲ. ನಟನಾಗಿ ನಾನೇನನ್ನು ಈ ಹಾಡಿಗೆ ನೀಡಬಹುದು ಎನ್ನುವುದೇ ಸವಾಲು. ಸಾಹಿತ್ಯದಲ್ಲಿ ತರ್ಲೆ ಇರುತ್ತದೆ, ತುಂಟತನ ಇರುತ್ತದೆ. ಪ್ರೀತಿಯಲ್ಲಿ ಉನ್ಮಾದದ ಹಾಡುಗಳನ್ನು ನನ್ನ ಎಲ್ಲ ಸಿನಿಮಾಗಳಿಗೆ ಇವರು ನೀಡಿದ್ದಾರೆ. ಈ ವಿಷಯದಲ್ಲಿ ನಾನು ಪುಣ್ಯ ಮಾಡಿದ್ದೇನೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು