ಸುಧಾ ಜೊತೆಗಿನ ಸಂದರ್ಶನದಲ್ಲಿ ‘ಕೆರೆಬೇಟೆ’ ನಟ ಗೌರಿಶಂಕರ್

‘ಕಾಮನ್ ಮ್ಯಾನ್’ ಸಿನಿಮಾ ಹಾಗೂ ಸಿನಿಮಾದಲ್ಲಿನ ನಿಮ್ಮ ಪಾತ್ರದ ಕುರಿತಂತೆ...

‘ಕಾಮನ್ ಮ್ಯಾನ್’ ನನ್ನ ನಾಲ್ಕನೇ ಸಿನಿಮಾ. ಹಿಂದೆ ‘ಜೋಕಾಲಿ’, ‘ರಾಜಹಂಸ’, ‘ಕೆರೆಬೇಟೆ’ ಸಿನಿಮಾಗಳನ್ನು ಮಾಡಿದ್ದೆ. ‘ಕೆರೆಬೇಟೆ’ ಸಿನಿಮಾ ನಿರ್ಮಾಣ ನನ್ನದೇ ಆಗಿತ್ತು, ಜೊತೆಗೆ ನನಗೆ ಹೆಸರು ತಂದುಕೊಟ್ಟಿತು. ಸಿನಿಮಾಗೆ ಹಲವು ಪ್ರಶಸ್ತಿಗಳು ಅರಸಿ ಬಂದವು. ಕಥೆ ವ್ಯಾವಹಾರಿಕವಾಗಿಯೂ ಗೆದ್ದಿತ್ತು.

ಸಿನಿಮಾ ಮಾಡಿದರೆ ಅಚ್ಚುಕಟ್ಟಾಗಿ ಮಾಡಬೇಕು, ಏನಾದರೂ ಸ್ಟ್ರೈಕ್ ಆಗಬೇಕು ಎಂಬುದು ನನ್ನ ನಿರೀಕ್ಷೆ. ಓಂ ಸಾಯಿಪ್ರಕಾಶ್ ಸರ್ ಅವರ ‘ಕಾಮನ್ ಮ್ಯಾನ್’ ಕಥೆ ಕೇಳಿದಾಗ, ನನಗೆ ಈ ಪಾತ್ರ ಬಹಳ ಹತ್ತಿರ ಅನಿಸಿತು. ನಿಜ ಜೀವನದಲ್ಲಿ ವಕೀಲ ಆಗಬೇಕು ಅಂತಿತ್ತು, ಸಾಧ್ಯವಾಗಿರಲಿಲ್ಲ. ಜೊತೆಗೆ, ರಾಜಕೀಯಕ್ಕೆ ಸಂಬಂಧಿಸಿದಂತೆ ಜಾಹೀರಾತು ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದರಿಂದ ರಾಜಕೀಯದ ಒಡನಾಟ ಒಂದು ಹಂತಕ್ಕಿತ್ತು. ಆ ಎರಡೂ ಸೇರಿದ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿತು. ಕಥೆ ಕೂಡ ಬಹಳ ಚೆನ್ನಾಗಿದೆ ಎನ್ನಿಸಿತು. ಈ ಸಿನಿಮಾ ಕೈ ಹಿಡಿದರೆ ನನ್ನ ಪಾಲಿಗೆ ದೊಡ್ಡ ಯಶಸ್ಸು ಸಿಕ್ಕಂತಾಗುತ್ತದೆ.

ಓಂ ಸಾಯಿಪ್ರಕಾಶ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಸಾಯಿ ಸರ್ ಅವರಲ್ಲಿ ಒಂದು ಎನರ್ಜಿ, ಶಿಸ್ತಿದೆ. ಸಿನಿಮಾ ಎಂದರೆ ಅವರ ತಲೆಯಲ್ಲಿ ಒಂದು ಜಡ್ಜ್ಮೆಂಟ್ ಇರುತ್ತದೆ. ಸಿನಿಮಾದಲ್ಲಿ ಯಾವ ಅಂಶ ಎಷ್ಟಿರಬೇಕು, ಯಾವುದು ಇರಬಾರದು, ಯಾವ ಅಂಶ ಬಹಳ ಮುಖ್ಯ... ಹೀಗೆ ಕೆಲವು ವಿಚಾರಗಳನ್ನು ಅವರ ಅನುಭವದಿಂದ ಅಳೆದು, ಬಹಳ ವೇಗವಾಗಿ ಕೆಲಸ ಮುಗಿಸುತ್ತಾರೆ. ಬೇರೆಯವರು 60 ದಿನಕ್ಕೆ ಮಾಡುವ ಕೆಲಸವನ್ನು ಇವರು 30 ದಿನಕ್ಕೆ ಮಾಡುತ್ತಾರೆ. ಅವರ ಕ್ರಿಯಾಶೀಲತೆ ಅಂಥದ್ದು. ಒಬ್ಬ ಕಲಾವಿದ ಸಣ್ಣವರಿರಲಿ, ದೊಡ್ಡವರಿರಲಿ ಹೇಗೆ ಗೌರವವಾಗಿ ನಡೆಸಿಕೊಳ್ಳಬೇಕು ಎಂಬುದನ್ನೂ ಅವರಿಂದ ಕಲಿತಿದ್ದೇನೆ. ಸೂಪರ್ ಸ್ಟಾರ್ಗಳಿಗೆ ಸಿನಿಮಾ ಮಾಡಿದವರ ಬಾಯಿಂದ ನನ್ನನ್ನು ಹೀರೊ ಎಂದು ಕರೆಸಿಕೊಳ್ಳುವುದೇ ಬಹಳ ಖುಷಿ. ಅವರೊಂದಿಗೆ ಕೆಲಸ ಮಾಡಿದ್ದು ಸಾಕಷ್ಟು ಕಲಿಕೆಗಳನ್ನು ನೀಡಿದೆ.

ಸಿನಿಮಾ ಎಂದರೆ ಮನರಂಜನೆ. ಆ ಮನರಂಜನೆಯನ್ನು ಕಮರ್ಷಿಯಲ್ ಆಯಾಮದಲ್ಲಿ ತುಂಬಾ ಚೆನ್ನಾಗಿ, ಎಲ್ಲಿಯೂ ತಲೆಗೆ ಹುಳ ಬಿಡದೆ ಸುಲಭವಾಗಿ ಜನರ ಮನಸ್ಸಿಗಿಳಿಸಿ ಅವರು ಖುಷಿಯಾಗಿ ಥಿಯೇಟರ್ನಿಂದ ಎದ್ದು ಹೋಗಬೇಕು, ಅದಕ್ಕೊಂದು ಗಟ್ಟಿಕಥೆ ಬೇಕು– ಇದು ಸಾಯಿ ಸರ್ ಅವರ ಪ್ಯಾಟರ್ನ್. ಈ ಸಿನಿಮಾವನ್ನೂ ಅಷ್ಟೇ ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಜೊತೆಗೆ ಆರು ವರ್ಷದ ನಂತರ ಬರುತ್ತಿರುವ ಅವರ ಸಿನಿಮಾ ಇದಾಗಿದೆ.

ನಿರ್ದೇಶಕ, ನಿರ್ಮಾಪಕ ಹಾಗೂ ನಟ ಹೊಂದಾಣಿಕೆಯಿಂದಿದ್ದರೆ ಎಷ್ಟು ವೇಗವಾಗಿ ಸಿನಿಮಾ ಮುಗಿಸಬಹುದು ಎನ್ನುವುದಕ್ಕೆ ಈ ಸಿನಿಮಾ ಒಂದು ಉದಾಹರಣೆ. ಸುಮಾರು 45 ದಿನಗಳಲ್ಲಿ ಸಿನಿಮಾ ಮುಗಿಸಿದ್ದೇವೆ.

ನಿಮ್ಮ ಸಿನಿಪಯಣದ ಬಗ್ಗೆ...

ಸಹಾಯಕ ನಿರ್ದೇಶಕನಾಗಿ ಸಿನಿಮಾರಂಗದಲ್ಲಿ ಕೆಲಸ ಶುರುಮಾಡಿದ್ದು. ಪಿಯುಸಿಯಿದ್ದಾಗಲೇ ಇಲ್ಲಿಗೆ ಬಂದೆ. ‘ಆಕಾಶ್’, ‘ಅರಸು’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿದ್ದೆ. ಓದು ಮುಗಿಸಿ ಮತ್ತೆ ಸಿನಿಮಾದತ್ತಲೇ ಮರಳಿದೆ. ‘ಜೋಕಾಲಿ’ ಸಿನಿಮಾ ಮಾಡಿದೆ. ನಂತರ ‘ರಾಜಹಂಸ’ ಸಿನಿಮಾವನ್ನು ನಾನು, ಜಡೇಶ್ ಸೇರಿ ಮಾಡಿದೆವು. ‘ಕೆರೆಬೇಟೆ’ ಸಿನಿಮಾ ಸೋಲೊ ಪ್ರೊಡಕ್ಷನ್ ಮಾಡಿದೆ. ಈಗ ಮೊದಲ ಬಾರಿ ನನ್ನನ್ನು ನಟನಾಗಿ ಹೊರಗಿನ ಪ್ರೊಡಕ್ಷನ್ನಿಂದ ಆರಿಸಿಕೊಂಡಿರುವುದು ಬಹಳ ಖುಷಿಯಿದೆ. ಸುಮಾರು 20 ವರ್ಷಗಳ ಸಿನಿಮಾ ಜರ್ನಿಯಲ್ಲಿ ಇದೊಂದು ಖುಷಿ, ಸಾರ್ಥಕತೆ ಅನ್ನಿಸುತ್ತಿದೆ.

‘ಕಾಮನ್ ಮ್ಯಾನ್’ ಜನರ ಮನಸ್ಸಿಗೆ ಹೇಗೆ ಹತ್ತಿರವಾಗಬಲ್ಲದು?

ಸಿನಿಮಾ ಶೀರ್ಷಿಕೆಯೇ ಸೆಳೆಯುವಂತಿದೆ. ಹಾಡುಗಳು ಬಹಳ ಚೆನ್ನಾಗಿವೆ. ಬೇಗ ಇಷ್ಟವಾಗಿಬಿಡುತ್ತವೆ. ಮನರಂಜನೆಯೊಂದಿಗೆ ಆಲೋಚನೆಗೂ ಹಚ್ಚುವಂಥ ಸಿನಿಮಾ. ಖಾಕಿ, ಕಾವಿ, ಖಾದಿ ಪರಿಕಲ್ಪನೆಯ ಸಿನಿಮಾಗಳು ಆಗ ತುಂಬಾ ಬರುತ್ತಿದ್ದವು. ಈಗ ಈ ರೀತಿಯ ಸಿನಿಮಾಗಳ ಸಂಖ್ಯೆ ಕಡಿಮೆ. ಇದೇ ಪರಿಕಲ್ಪನೆಯಲ್ಲಿ ಸಾಯಿ ಸರ್ ಸಿನಿಮಾ ಕಟ್ಟಿದ್ದಾರೆ.

ಸಿನಿಮಾರಂಗದಲ್ಲಿ ನಿಮ್ಮ ಕನಸುಗಳೇನು?

ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂಬಾಸೆಯಿದೆ. ಒಂದು ಕೆಲಸ ಒಪ್ಪಿಕೊಂಡರೆ ತುಂಬಾ ಅಚ್ಚುಕಟ್ಟಾಗಿ ಮಾಡಬೇಕು. ಸಿನಿಮಾ ಆರಂಭದಿಂದ ಕೊನೆಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ನಿರೀಕ್ಷೆ. ಸಿನಿಮಾ ಗೆಲುವು– ಸೋಲು ಬೇರೆ ವಿಚಾರ. ಸಿನಿಮಾವನ್ನು ಶಿಸ್ತಿನಿಂದ ರೂಪಿಸಬೇಕು.

ಸಿನಿಮಾರಂಗದ ಜೊತೆಗೆ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳಬೇಕೆಂಬ ಇಚ್ಛೆಯಿದೆ. ಆದರೆ ಅದಕ್ಕೆ ದೊಡ್ಡ ಮಟ್ಟದಲ್ಲಿ ದುಡ್ಡು ಮಾಡುವುದೂ ಮುಖ್ಯ. ಈ ನಿಟ್ಟಿನಲ್ಲಿ ನನ್ನ ಪ್ರಯತ್ನಗಳನ್ನು ಮಾಡುತ್ತೇನೆ.

ಮುಂದಿನ ಸಿನಿಮಾಗಳು...

ಜೂನ್ ತಿಂಗಳಿನಲ್ಲಿ ‘ಕಾಮನ್ ಮ್ಯಾನ್’ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.ಇನ್ನಷ್ಟು ಕಥೆಗಳನ್ನು ಕೇಳುತ್ತಿದ್ದೇನೆ. ಸದ್ಯ ಎರಡು ಸಿನಿಮಾಗಳಿಗೆ ಒಪ್ಪಿಗೆ ನೀಡಿದ್ದೇನೆ. ‘ಕಾಮನ್ ಮ್ಯಾನ್’ ಜೀವನ, ‘ಕಾಮನ್ ಮ್ಯಾನ್’ ಸಿನಿಮಾ ಮೇಲೆ ನಿಂತಿದೆ.

‘ವಜ್ರಕಾಯ’ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದ ನಟಿ ಶುಭ್ರ ಅಯ್ಯಪ್ಪ, ಎರಡು ವರ್ಷಗಳ ನಂತರ ಕನ್ನಡದಲ್ಲಿ ಮತ್ತೆ ರುಜು ಹಾಕುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ‘ದೇವರು ರುಜು ಮಾಡಿದನು’ ಸಿನಿಮಾದಲ್ಲಿ ಶುಭ್ರ ನಟಿಸುತ್ತಿದ್ದು, ಈಚೆಗೆ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿರುವ ಪೋಸ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ತೆಲುಗಿನ ‘ಪ್ರತಿನಿಧಿ’, ತಮಿಳಿನ ‘ಸಗಪ್ತಂ’ ಚಿತ್ರಗಳಲ್ಲಿ ನಟಿಸಿ ಶಿವರಾಜಕುಮಾರ್ ಅಭಿನಯದ ‘ವಜ್ರಕಾಯ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಶುಭ್ರ. ಅದಾಗುತ್ತಿದ್ದಂತೆ ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’, ‘ರಾಮನ ಅವತಾರ’ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ‘ದೇವರು ರುಜು ಮಾಡಿದನು’ ಸಿನಿಮಾ ತಂಡ ಸೇರಿರುವುದಾಗಿ ತಿಳಿದುಬಂದಿದೆ.

ಚಿತ್ರತಂಡ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದೆ. ಇದೇ ಅಕ್ಟೋಬರ್ಗೆ ಸಿನಿಮಾವನ್ನು ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ. ಹೊಸ ಮುಖ ವಿರಾಜ್ ಮುಖ್ಯಭೂಮಿಕೆಯಲ್ಲಿದ್ದು, ಕೀರ್ತಿ ಕೃಷ್ಣ, ದಿವಿತಾ ರೈ ಜೋಡಿಯಾಗಿದ್ದಾರೆ. ಹೊಸದಾಗಿ ಶುಭ್ರ ಸೇರ್ಪಡೆಯಾಗಿದ್ದಾರೆ.

‘ಕನ್ನಡ ಸಿನಿಮಾರಂಗದಲ್ಲಿ ಒಂದು ರೀತಿ ಅನಿಶ್ಚಿತತೆಯ ವಾತಾವರಣವಿದೆ. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುವ ಪರಿಸ್ಥಿತಿಯಿದೆ. ನಿರ್ಮಾಪಕರು ಹೊಸ ಪ್ರಾಜೆಕ್ಟ್ಗಳಿಗೆ ಬಂಡವಾಳ ಹೂಡಲು ಹಿಂದೆಮುಂದೆ ನೋಡುತ್ತಿದ್ದಾರೆ’ ಎಂದು ಸ್ಯಾಂಡಲ್ವುಡ್ನ ಸದ್ಯದ ಪರಿಸ್ಥಿತಿಯ ಬಗ್ಗೆ ವಿಮರ್ಶಿಸಿದ್ದಾರೆ ನಟ ದಿಗಂತ್ ಮಂಚಾಲೆ.

ಕಲಾವಿದರಿಗೆ ಸಿಗುತ್ತಿರುವ ಸಿನಿಮಾ ಅವಕಾಶಗಳ ಕುರಿತು ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸಿರುವ ಅವರು, ‘ಸಿನಿಮಾರಂಗದೊಳಗೇ ಬೇರೆ ಬೇರೆ ಸವಾಲುಗಳಿವೆ. ಹೊಸಬರಿಗಿರಲಿ, ಅನುಭವಿಯಾದ, ಹೆಸರು ಮಾಡಿರುವ ಕಲಾವಿದರಿಗೂ ಅವಕಾಶಗಳು ಕಡಿಮೆಯಾಗಿವೆ’ ಎಂದಿದ್ದಾರೆ. ಈಚೆಗಷ್ಟೆ ದಿಗಂತ್ ಅಭಿನಯಿಸುತ್ತಿರುವ ‘ರುದ್ರಕಾಲ’ ಸಿನಿಮಾ ಘೋಷಣೆಯಾಗಿದೆ. ಕನ್ನಡದೊಂದಿಗೆ ಬೇರೆ ಭಾಷೆಯಲ್ಲೂ ತಮ್ಮ ರೆಕ್ಕೆ ವಿಸ್ತರಿಸುತ್ತಿರುವ ದಿಗಂತ್, ನಟಿ ಸಮಂತಾ ಜೊತೆಗೆ ‘ಮಾ ಇಂಟಿ ಬಂಗಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ತಮ್ಮ ವೃತ್ತಿಬದುಕಿಗೆ ಒಂದು ಹೊಸ ಆಯಾಮ ಒದಗಿಸಿಕೊಡುವ ನಿರೀಕ್ಷೆಯನ್ನೂ ದಿಗಂತ್ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾರಂಗದಲ್ಲಿ ತಾವು ಕಳೆದಿರುವ ಎರಡು ದಶಕಗಳಲ್ಲಿ ಸಾಕಷ್ಟು ಏಳುಬೀಳುಗಳನ್ನು, ಕಷ್ಟದ ಹಂತಗಳನ್ನು ಕಂಡಿದ್ದು, ಏನೆಲ್ಲಾ ಸವಾಲುಗಳ ಹೊರತಾಗಿಯೂ ಭರವಸೆಯನ್ನು ಎಂದಿಗೂ ಕಾಪಾಡಿಕೊಳ್ಳುವುದಾಗಿ ದಿಗಂತ್ ಹೇಳಿದ್ದಾರೆ.

‘ಥಿಯೇಟರ್ ಜೊತೆಗೆ ಒಟಿಟಿ ವೇದಿಕೆಗಳಿಂದಲೂ ಕನ್ನಡ ಸಿನಿಮಾಗಳಿಗೆ ಬೆಂಬಲ ದೊರಕದೆ ಇರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಒಟಿಟಿ ಮೂಲಕವಾದರೂ ಪ್ರೇಕ್ಷಕರನ್ನು ತಲುಪಿ ಹಣವನ್ನು ರಿಕವರ್ ಮಾಡಲು ಸಾಧ್ಯವಾಗುತ್ತಿಲ್ಲ’ ಎಂಬ ಬೇಸರವನ್ನು ಮಾತಿನ ಮಧ್ಯೆ ಸೇರಿಸಿದ್ದಾರೆ. ಈ ನಡುವೆ ತಮ್ಮ ಭರವಸೆಗೆ ತಕ್ಕಂತೆ ಸಿನಿಮಾಗಳು ಸಿಕ್ಕಿದ್ದು, ‘ರುದ್ರಕಾಲ’ ಹಾಗೂ ‘ಮಾ ಇಂಟಿ ಬಂಗಾರಂ’ ಸಿನಿಮಾಗಳು ಮತ್ತಷ್ಟು ಅವಕಾಶಗಳನ್ನು ಸೃಜಿಸುವ ನಂಬಿಕೆ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.