ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ಕಿರುಕುಳ ಆರೋಪ: ಸತ್ಯಕ್ಕಿಂತ ಸುಳ್ಳು ವೇಗವಾಗಿ ಹರಡುತ್ತದೆ– ನಟ ಜಯಸೂರ್ಯ

Published 1 ಸೆಪ್ಟೆಂಬರ್ 2024, 5:28 IST
Last Updated 1 ಸೆಪ್ಟೆಂಬರ್ 2024, 5:28 IST
ಅಕ್ಷರ ಗಾತ್ರ

ತಿರುವನಂತಪುರ: ತನ್ನ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿದಂತೆ ಮೌನ ಮುರಿದಿರುವ ನಟ ಜಯಸೂರ್ಯ, ಇದರಿಂದ ಕುಟುಂಬ, ಆಪ್ತರು ತೀವ್ರವಾಗಿ ‘ಘಾಸಿಗೊಂಡಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಕಳೆದೊಂದು ತಿಂಗಳಿನಿಂದ ವೈಯಕ್ತಿಕ ಕೆಲಸದ ನಿಮಿತ್ತ ನಾನು ಹಾಗೂ ಕುಟುಂಬಸ್ಥರು ಅಮೆರಿಕದಲ್ಲಿದ್ದೇವೆ. ನಾನು ಮರಳಿ ಸ್ವದೇಶಕ್ಕೆ ಬರುವವರೆಗೂ, ನನ್ನ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳಿಗೆ ಕಾನೂನು ಹೋರಾಟದ ಪ್ರಕ್ರಿಯೆಗಳನ್ನು ನೋಡಿಕೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.

‘ವಿದೇಶಕ್ಕೆ ತೆರಳಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಎರಡು ಸುಳ್ಳು ಆರೋಪ ಮಾಡಲಾಗಿದೆ. ಇದರಿಂದ, ಸಹಜವಾಗಿ ನಾನು ಹಾಗೂ ಕುಟುಂಬಸ್ಥರು ಆಘಾತಗೊಂಡಿದ್ದೇವೆ. ನ್ಯಾಯಾಂಗದ ಮೇಲೆ ಪೂರ್ಣ ನಂಬಿಕೆಯಿದೆ. ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಲು ನಿರ್ಧರಿಸಿದ್ದೇನೆ’ ಎಂದು ಫೇಸ್‌ಬುಕ್‌ ಪುಟದಲ್ಲಿ ಲಗತ್ತಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಆಗಸ್ಟ್‌ 31ರಂದು ತನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದ್ದಾರೆ.

‘ಆತ್ಮಸಾಕ್ಷಿ ಇಲ್ಲದವರು ಯಾರ ಮೇಲಾದರೂ ಸುಳ್ಳು ಆರೋಪ ಮಾಡಬಹುದು. ಅದು ತುಂಬಾ ಸುಲಭ. ಆದರೆ, ಕಿರುಕುಳದ ಸುಳ್ಳು ಆರೋಪವನ್ನು ಎದುರಿಸುವುದು ಕಿರುಕುಳದಷ್ಟೇ ನೋವುಂಟು ಮಾಡುತ್ತದೆ’ ಎಂದು ಹೇಳಿದ್ದಾರೆ.

ನ್ಯಾ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಜಯಸೂರ್ಯ ವಿರುದ್ಧ ನಟಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಕೇಳಿಬಂದಿದ್ದವು. ಅವರ ವಿರುದ್ಧ ತಿರುವನಂತಪುರದ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಾದರೆ, ಕರಮಾನಾ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು.

ಸುಳ್ಳು ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ. ಆದರೆ ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬುತ್ತೇನೆ. ಪಾಪ ಮಾಡದವರು ತಪ್ಪು ಮಾಡಿದವರತ್ತ ಕಲ್ಲು ಎಸೆಯಲಿ.
ಜಯಸೂರ್ಯ ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT