ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸ್.ಪಿ.ಬಿ. ಎಂಬ ಶುದ್ಧ ರಾಮರಸ!’

Last Updated 25 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

‘ರಮೇಶ್ ನೀವು ಎಸ್‌.ಪಿ.ಬಿ ಅವರ ಕಾರ್ ಡ್ರೈವರ್ ಆಗಿ ಆ್ಯಕ್ಟ್ ಮಾಡ್ಬೇಕು’ ಅ೦ತ ಕರೆ ಮಾಡಿದ್ರು. ಸುಬ್ಬಿ! ಸುಬ್ರಹ್ಮಣ್ಯ!! ಕಿವಿ ನಿಮಿರಿತು. ಮಾಂಗಲ್ಯಂ ತಂತು ನಾನೇನಾ.. ಬಣ್ಣ ಹಚ್ಚಿ ಅವರ ಮುಂದೆ ನಿಂತಾಗ ಕಣ್ಣು ತೆರೆದೇ ನಿದ್ರಿಸುವ ದೃಶ್ಯ. ಅವರಿಗೆ ನಮಸ್ಕರಿಸಿ ನಿಂತೆ. ಪ್ರೀತಿಯಿಂದ ಮೈದಡವಿದರು.

ವಿಶ್ವಾಸವೇ ಮೈದುಂಬಿ ಬಂದಂತೆ ಮಾತನಾಡಿಸುವುದು ಒಂದು ಸಹಜ ಕಲೆ. ನಂಬಿಕೊಂಡರೆ ಮಾತ್ರ ಸಾಧ್ಯ. ಕನ್ನಡ ಜನಮಾನಸದಲ್ಲಿ ಕುವೆಂಪು, ರಾಜ್‌ಕುಮಾರ್ ನಂತರ ಅತಿ ಹೆಚ್ಚು ಹತ್ತಿರವಾದ ಕನ್ನಡಾಪ್ತ ವ್ಯಕ್ತಿತ್ವಗಳಲ್ಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರದ್ದು ಪ್ರಮುಖ ಸಾಲಿನ ಹೆಸರು. ಆ ಹೆಸರಿಗೆ ಒಂದು ಶಕ್ತಿ ಇದ್ದದ್ದು ಜಗತ್ತಿಗೇ ಗೊತ್ತು.

ಹಿರಿಯ ವಿದ್ವಾಂಸ, ನಿರ್ದೇಶಕ ಶ್ರೀ ಕೆ.ಎಸ್.ಎಲ್ ಸ್ವಾಮಿ ‘ರಮೇಶ್ ಮಹಾ ಎಡಬಿಡಂಗಿ ಅಂತ ಎಸ್‌ಪಿ ಹಾಕ್ಕೊಂಡು ಪಿಕ್ಚರ್ ಮಾಡ್ತಿದ್ದೀನಿ ಪುಟ್ಟ ಪಾತ್ರ ಮಾಡ್ತೀರೇನ್ರಿ ಅಂದರು. ತಪ್ಪಿಸಿಕೊಳ್ಳಲು ನೋಡಿದೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೇ ಹಾಡಿರುವ ‘ಪಿಬರೇ ರಾಮರಸಂ’ ಹಾಡುತ್ತಾರೆ. ನೀವು ಅವರ ಜೊತೆ ಇರ್ತೀರಿ. ಕುಡಿವ ಗೆಳೆಯರು’ ಅಂದರು. ನಕ್ಕೆ ಒಪ್ಪಿಕೊಂಡೆ. ಮೂರು ರಾತ್ರಿ ಚಿತ್ರೀಕರಣ. ಬೆಂಗಳೂರಿನ ಹತ್ತಿರದ ಕೃಷ್ಣ ರಥದ ಬಿಲ್ಡಿಂಗ್ ಎತ್ತರದ ಮೂರ್ತಿ ಇರುವ ದೇಗುಲದ ಬಳಿ.

ಅವರ ಜೊತೆ ಮಾತನಾಡುವುದೊ೦ದು ಅನುಭಾವದ ಲೋಕ. ರಾಗ, ಸಂದರ್ಭ, ತಮಾಷೆ, ಆತ್ಮವಿಮರ್ಶೆ, ಚುಡಾಯಿಸುವುದು ಮನುಷ್ಯ ಸ್ವಭಾವಗಳ ಚಿಂತನೆ - ಚರ್ಚೆಗಳ ಮಹಾಮೇಳೈಕೆ.

ಅವರ ಬದುಕಿನ ಅತಿ ದೊಡ್ಡ ಮೈಲಿಗಲ್ಲು ಲಕ್ಷಾಂತರ ಮಕ್ಕಳನ್ನು ಹಾಡಿನ ಭಾವಗಳಲ್ಲಿ, ರಾಗಗಳಲ್ಲಿ ‘ಎದೆ ತುಂಬಿಸಿ’ ರಿಯಾಲಿಟಿ ಶೋಗೆ ಘನತೆ ತುಂಬಿದಾತ!

ದೌರ್ಬಲ್ಯಗಳಿಲ್ಲದ ಮನುಷ್ಯನಿಲ್ಲ! ಆದರೆ ಅದನ್ನೂ ಮೀರಿ, ಕನ್ನಡದ ಅಸ್ಮಿತೆಗೆ, ಭಾವಕ್ಕೆ, ಕನ್ನಡದ ತೊದಲುನುಡಿಗಳಲ್ಲಿ ಮಾತನಾಡುತ್ತಾ ಭಾಷೆಗೆ ಮೀರಿದ ಅಂತಃಕರಣ ತುಂಬಿ, ಹಾಡುವಾಗ ಮಾಂತ್ರಿಕನಂತೆ ಕನ್ನಡವನ್ನು ನಿಜದ ಅರ್ಥದಲ್ಲಿ ನುಡಿಸುತ್ತಿದ್ದಾತ!

ಹಾಡಿದ ಪ್ರತೀ ಹಾಡು ಕ್ರಿಯಾಶೀಲವಾಗಿ, ಥಿಯೇಟ್ರಿಕಲ್ ಗುಣಗಳಿಂದ ಕೇಳುಗರ ಮೈ ರೋಮಾಂಚನಗೊಳಿಸಿದ ಎಸ್.ಪಿ. ಸರ್ ತಣ್ಣಗೆ ಮಲಗಿದ್ದಾರೆ.

ನಿಜದ ಅರ್ಥದಲ್ಲಿ ನಾಡು, ಕನ್ನಡದ ರಾಯಭಾರಿ ಯೊಬ್ಬರನ್ನು ಕಳೆದುಕೊಂಡಿದೆ.

ನನ್ನಂತಹ ಮಹಾ ಎಡಬಿಡಂಗಿಯ ಮನದಲ್ಲಿ ಮೂಡಿದ ಅವರ ತುಳುಕುತ್ತಿದ್ದ ನಗು ಮಾತ್ರ ಕನ್ನಡದ ಹಾಡು ಕೇಳುವವರೆಗೂ ಮರು ದನಿಸುತ್ತಲೇ ಇರುತ್ತದೆ. ಗುರುಗಳೇ ನಿಮ್ಮ ಸಾರ್ಥಕ ಬದುಕೇ ಮಾದರಿಯಾಗಲಿ!

- ಮಂಡ್ಯ ರಮೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT