ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

New Year Resolution| ಬಾಕ್ಸ್‌ ಆಫೀಸ್‌ ದೂಳಿನಿಂದ ದೂರ: ನಟ ಪೃಥ್ವಿ ಅಂಬಾರ್‌

Last Updated 31 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಪ್ರತಿ ಸಿನಿಮಾದಲ್ಲೂ ಭಿನ್ನವಾದ ಪಾತ್ರಗಳನ್ನು ನಿಭಾಯಿಸಬೇಕು, ಆ ಪಾತ್ರಗಳನ್ನು ನೋಡಿ ಪ್ರೇಕ್ಷಕರು ತಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ ಆಸೆ. ಇದೇ ಅಭಿಲಾಷೆ ಹೊತ್ತು ಮತ್ತೊಂದು ಹೊಸ ವರ್ಷಕ್ಕೆ ಹೆಜ್ಜೆ ಇಟ್ಟಿದ್ದೇನೆ.

ಕೋವಿಡ್‌ ಕಾರಣದಿಂದಾಗಿ 2020 ಹಾಗೂ 2021ರಲ್ಲಿ ಚಿತ್ರರಂಗ ಸಂಪೂರ್ಣ ಸ್ತಬ್ಧವಾಗಿತ್ತು. ಇದರ ಪರಿಣಾಮ 2022ರಲ್ಲಿ ನಾವು ಬಿಡುವಿಲ್ಲದ್ದಷ್ಟು ಕಾಲ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೆವು. ಕುಟುಂಬಕ್ಕೆ ಸಮಯವನ್ನು ಮೀಸಲಿಡಲು ಯಾರಿಗೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ನಿರ್ಧಾರಕ್ಕೆ ಬಂದಿದ್ದೇನೆ. ಕೇವಲ ನಮ್ಮ ಗುರಿಯ ಹಿಂದೆ ಓಡಾಡಿಕೊಂಡು ಇರುತ್ತೇವೆ. ಆದರೆ ಈ ಗುರಿಯನ್ನು ಮುಟ್ಟುವ ಅವಧಿಯಲ್ಲಿ ಜೀವನದಲ್ಲಿ ಪ್ರಮುಖವಾದ ಕೆಲ ಅಂಶಗಳನ್ನು ಕಳೆದುಕೊಂಡಿರುತ್ತೇವೆ. ಅದರಲ್ಲಿ ಪ್ರಮುಖವಾಗಿ ಕುಟುಂಬದೊಂದಿಗಿನ ಒಡನಾಟ. ಸಿನಿಮಾ ಹಾಗೂ ಕುಟುಂಬಕ್ಕೆ ಸಮಾನವಾದ ಸಮಯ ನೀಡಬೇಕು ಎನ್ನುವುದು ನನ್ನ ಈ ವರ್ಷದ ರೆಸೊಲ್ಯೂಷನ್‌.

ಚಿತ್ರರಂಗಕ್ಕೆ ಇಳಿದ ಬಳಿಕ ಒಂದಿಷ್ಟು ಹವ್ಯಾಸಗಳನ್ನು ಮೂಟೆಕಟ್ಟಿ ಬದಿಗಿರಿಸಿದ್ದೆ. ಅದನ್ನು ಎತ್ತಿಕೊಂಡು ಮತ್ತೆ ಹೆಜ್ಜೆ ಹಾಕಬೇಕು. ಹಿಮಾಲಯ, ಕೇದಾರನಾಥ ಚಾರಣ ಈ ವರ್ಷದ ಬಕೆಟ್‌ಲಿಸ್ಟ್‌ನಲ್ಲಿದೆ. ಜೊತೆಗೆ ತಂದೆಯೊಂದಿಗೆ ಲಾಂಗ್‌ಡ್ರೈವ್‌ ಹೋಗಬೇಕು ಎನ್ನುವ ಕನಸಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ಚಂದನವನದಲ್ಲಿ ನಾನಿನ್ನೂ ಹೊಸಮುಖ. ನನ್ನನ್ನು ನಾನು ಪ್ರಯೋಗಕ್ಕೆ ಒಡ್ಡಿಕೊಳ್ಳಲು ಅವಕಾಶವಿರುವ ಅವಧಿ ಇದು. ಹೀಗಾಗಿ ಇನ್ನೊಂದೆರಡು ವರ್ಷ ನಾನು ಪ್ರಯೋಗಾತ್ಮಕ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಇಚ್ಛಿಸುತ್ತೇನೆ. ‘ಸುಮ್ಮನೆ ಸಿನಿಮಾಗಳನ್ನು ಮಾಡುತ್ತಿದ್ದೀಯ, ಮಾರ್ಕೆಟ್‌ ನೋಡುವುದಿಲ್ಲ’ ಎಂದು ಹಲವರು ಭಯ ಹುಟ್ಟಿಸುತ್ತಾರೆ. ಆದರೆ ನಾನು ಸೋಲು, ಗೆಲುವುಗಳ ಲೆಕ್ಕಾಚಾರವಿಡದೆ, ಬಾಕ್ಸ್‌ ಆಫೀಸ್‌ ದೂಳಿನಿಂದ ದೂರವಿದ್ದು ನಟನಾಗಿ ಈ ಕ್ಷೇತ್ರವನ್ನು ಅನುಭವಿಸುವ ಆಸೆ ಹೊತ್ತಿದ್ದೇನೆ. ಭಾಷೆಯ ಗಡಿ ಹಾಕಿಕೊಂಡಿಲ್ಲ, ಮರಾಠಿ, ತಮಿಳು ಚಿತ್ರಗಳಲ್ಲೂ ನಟಿಸಿದ್ದೇನೆ. ಆದರೆ ಕನ್ನಡಕ್ಕೆ ಆದ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT