‘ಕೃಷ್ಣ’ನ ಮನದಾಳದ ಮಾತು

7

‘ಕೃಷ್ಣ’ನ ಮನದಾಳದ ಮಾತು

Published:
Updated:
Deccan Herald

ಸಿನಿಮಾ ನಟರು ಮತ್ತು ಕಾರುಗಳಿಗೆ ಬಿಡಿಸಲಾಗದ ನಂಟು. ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಡುವ ಕಾರುಗಳ ಮೇಲೆ ಕೆಲವು ಸ್ಟಾರ್‌ ನಟರಿಗೆ ವಿಪರೀತ ಮೋಹ. ಅವರ ಮನೆಯ ಅಂಗಳದಲ್ಲಿ ಪ್ರತಿಷ್ಠಿತ ಕಂಪನಿಗಳ ಕಾರುಗಳದ್ದೇ ದರ್ಬಾರು. ಆದರೆ, ಹಿರಿಯ ನಟ ರಾಮಕೃಷ್ಣ ಅವರು ಇದಕ್ಕೆ ಪೂರ್ತಿ ಭಿನ್ನ. ಮೂವತ್ತೊಂದು ವರ್ಷದ ಹಿಂದೆ ಖರೀದಿಸಿದ್ದ ಮಾರುತಿ ಕಾರಿಯಲ್ಲಿಯೇ ಅವರ ಬದುಕಿನ ಪಯಣ ಸಾಗಿದೆ.

ಕಾರು ಖರೀದಿಸಿದ ಹೊಸತು. ಅಂದಿನ ಬಹುತೇಕ ನಟರು ಆ ಕಾರಿನಲ್ಲಿಯೇ ದೂರದ ಊರುಗಳಿಗೆ ತೆರಳಿದ್ದು ಉಂಟು. ಆ ಕಾಲಕ್ಕೆ ಮಾರುತಿ ಕಾರು ಖರೀದಿಸಿದ ಮೊದಲ ನಟ ನಾನು ಎಂದು ಕಾರಿನ ‍ಪಕ್ಕಕ್ಕೆ ತೆರಳಿ ಅದರ ಮೇಲೆ ಮೆಲ್ಲನೆ ಕೈಯಾಡಿಸಿದರು. ಆಗ ಕಾರಿನ ಮುಂಭಾಗ ಅಂಟಿಕೊಂಡಿದ್ದ ಚಿಟ್ಟೆ ಪಟಪಟನೆ ರೆಕ್ಕೆಬಡಿದಂತಾಯಿತು. ಹಸಿರು ಬಣ್ಣ ಹೊದ್ದುಕೊಂಡಿರುವ ಆ ಕಾರಿನ ಮೇಲಿನ ಪ್ರೀತಿ ಅವರ ಮಾತಿಗಳಲ್ಲಿ ವ್ಯಕ್ತವಾಗುತ್ತಿತ್ತು.

‘ಬಿಂದಾಸ್‌ ಗೂಗ್ಲಿ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಚಿತ್ರದಲ್ಲಿ ಅವರದ್ದು ಉಪ ಪ್ರಾಂಶುಪಾಲರ ಪಾತ್ರ. ಮಾತಿಗಿಂತ ಮೌನವೇ ನನಗಿಷ್ಟ ಎಂದ ಅವರು, ಕಾರಿನ ಬಗ್ಗೆ ಕೆದಕಿದಾಗ ಮೌನ ಮುರಿದು ಮಾತಿಗೆ ಕುಳಿತರು.

‘ನಾನು ಈ ಕಾರನ್ನು ಬುಕ್‌ ಮಾಡಿರಲಿಲ್ಲ. ಗಾಂಧಿನಗರದ ಪರಿಚಯಸ್ಥರೊಬ್ಬರು ಬುಕ್‌ ಮಾಡಿದ್ದರು. ಕೊನೆಗೆ ಅವರು ಖರೀದಿಸಲಿಲ್ಲ. ನಾನು ಹದಿನೈದು ಸಾವಿರ ಕೊಟ್ಟು ಖರೀದಿಸಿದೆ. ನಟ ರವಿಚಂದ್ರನ್ ಆರು ಚಿತ್ರಗಳಲ್ಲಿ ಈ ಕಾರನ್ನು ಬಳಸಿದ್ದಾರೆ. ನಾನು ಕಾರು ಖರೀದಿಸಿದ ವೇಳೆ ನಟ ಶಿವರಾಜ್‌ಕುಮಾರ್ ‘ಆನಂದ್‌’ ಚಿತ್ರದಲ್ಲಿ ನಟಿಸುತ್ತಿದ್ದರು. ಅವರೂ ನಮ್ಮ ಮನೆಗೆ ಬಂದು ನೋಡಿಕೊಂಡು ಹೋದರು. ಹಿರಿಯ ನಟ ಅಂಬರೀಷ್‌ ಮೊದಲ ದಿನವೇ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದರು’ ಎಂದು ನೆನ‍ಪಿನ ಆಳಕ್ಕೆ ಜಾರಿದರು.

‘ನನ್ನ ಮಗ ಹೊಸ ಕಾರು ಖರೀದಿಸಿದ. ನನಗೆ ಹೊಸ ಕಾರು ಖರೀದಿಸಲು ಮನಸ್ಸಾಗಲಿಲ್ಲ. ನನ್ನೂರು ಶಿರಸಿ. ಅಲ್ಲಿಗೂ ಇದರಲ್ಲಿಯೇ ಹೋಗುತ್ತೇನೆ’ ಎಂದು ಕಾರಿನೊಂದಿಗಿನ ನಂಟನ್ನು ಹಂಚಿಕೊಂಡರು.

ರಾಮಕೃಷ್ಣ ಅವರು ಚಿತ್ರರಂಗ ಪ್ರವೇಶಿಸಿದ್ದು, 1974ರಲ್ಲಿ. ಅದಾದ ಎರಡು ವರ್ಷಕ್ಕೆ ‘ಬಬ್ರುವಾಹನ’ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ನಟಿಸಿದರು. ‘ನಾನು ಮೊದಲ ದಿನ ಬಬ್ರುವಾಹನ ಚಿತ್ರದ ಸೆಟ್‌ಗೆ ಹೋದೆ. ಅಣ್ಣಾವ್ರುಗೆ ಮೇಕಪ್‌ ಮಾಡುತ್ತಿದ್ದ ಕೇಶವ್‌ ನನಗೆ ಒಂದೂವರೆ ಗಂಟೆ ಮೇಕಪ್‌ ಮಾಡಿದ್ರು. ಬಳಿಕ ನೇರವಾಗಿ ಸೆಟ್‌ಗೆ ಕರೆದೊಯ್ದರು. ಹುಣಸೂರು ಕೃಷ್ಣಮೂರ್ತಿ ಅಲ್ಲಿದ್ರು. ಮೂರು ಬಾರಿ ‘ಕಲ್ಯಾಣಮಸ್ತು’ ಎಂದು ಹೇಳುವುದೇ ಈ ದಿನದ ನಿನ್ನ ಕೆಲಸ ಎಂದ್ರು. ಸರಿ ಹೇಳ್ತಿನಿ ಎಂದೆ. ನೀನು ಹೇಳುವಂತಿಲ್ಲ. ಅಣ್ಣ (ಡಾ.ರಾಜ್‌ಕುಮಾರ್‌) ಹೇಗೆ ಹೇಳಬೇಕೆಂದು ತಿಳಿಸ್ತಾರೆ. ಅವರು ಹೇಳಿದಂತೆ ನೀನು ನಟಿಸಬೇಕು ಎಂದ್ರು’ ಎಂದು ಥೇಟ್ ಕೃಷ್ಣನಂತೆ ನಕ್ಕರು.

‘ಬಬ್ರುವಾಹನ ಮತ್ತು ರಂಗನಾಯಕಿ ನನ್ನ ವೃತ್ತಿಬದುಕಿಗೆ ಹೊಸ ತಿರುವು ನೀಡಿದ ಚಿತ್ರಗಳು. ಬಬ್ರುವಾಹನದಲ್ಲಿ ನಟಿಸಿದ ಬಳಿಕ ಹಲವರು ತಮ್ಮ ಮನೆಗಳಿಗೆ ಕರೆದು ಹಾಲು, ಮೊಸರು ನೀಡುತ್ತಿದ್ದರು. ನನ್ನಲ್ಲಿ ಶ್ರೀಕೃಷ್ಣನನ್ನು ಕಾಣಲು ಯತ್ನಿಸಿದರೇ ಹೆಚ್ಚು. ರಂಗನಾಯಕಿಯ ಬಳಿಕ ಮಲ್ಲೇಶ್ವರಂನಲ್ಲಿನ ಕೆಲವರು ತಮ್ಮ ಮನೆಗಳಿಗೆ ಕರೆದು ಇವನೇ ನನ್ನ ಮಗ ಎಂದು ಊಟ ಬಡಿಸಿದವರು ಇದ್ದಾರೆ. ಅಂತಹ ಗೌರವ ಎಷ್ಟು ಮಂದಿ ಹೊಸ ಕಲಾವಿದರಿಗೆ ಸಿಗುತ್ತದೆ ನೀವೇ ಹೇಳಿ’ ಎಂದು ಮುಗ್ಧವಾಗಿ ಪ್ರಶ್ನಿಸಿದರು.

‘ನನಗೆ ಇಂತಹದ್ದೇ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆಯಿಲ್ಲ. ನನ್ನ ವೃತ್ತಿಬದುಕಿನ ಯಶಸ್ಸಿನಲ್ಲಿ ಪುಟ್ಟಣ್ಣ ಕಣಗಾಲ್‌, ಬಾಲಚಂದರ್, ಹುಣಸೂರು ಕೃಷ್ಣಮೂರ್ತಿ ಅವರ ಕೊಡುಗೆ ದೊಡ್ಡದಿದೆ. ಪುಟ್ಟಣ್ಣ ಅವರ ಮರ್ಯಾದೆಯನ್ನು ಮತ್ತಷ್ಟು ಹೆಚ್ಚಿಸಬೇಕಿತ್ತು. ಅದು ಆಗುತ್ತಿಲ್ಲ. ಅವರು ತೋರಿಸಿರುವ ದಾರಿಯಲ್ಲಿ ಸಾಗಬೇಕು. ಅವರ ಹೆಸರಿಗೆ ಚ್ಯುತಿಯಾಗದಂತೆ ಗೌರವದಿಂದ ನಡೆದುಕೊಳ್ಳುವುದೇ ನನ್ನ ಮುಂದಿರುವ ಗುರಿ’ ಎಂದು ಸ್ಮರಿಸಿದರು.

‘ರಂಗನಾಯಕಿ’ ಚಿತ್ರ ಯಶಸ್ಸು ಕಂಡ ಬಳಿಕ ಅವರಿಗೆ ಬರುತ್ತಿದ್ದ ಪತ್ರಗಳತ್ತ ಅವರ ಮಾತು ಹೊರಳಿತು. ಬೆಳ್ಳಿಯ ಕೈಗಡಗಗಳು, ಚಿನ್ನದ ಉಂಗುರಗಳು ಅವರಿಗೆ ಬರುತ್ತಿದ್ದವಂತೆ. ಇಂದಿಗೂ ಅವುಗಳನ್ನು ಜತನವಾಗಿ ಕಾಪಿಟ್ಟುಕೊಂಡಿದ್ದಾರಂತೆ. ‘ಪ್ರತಿದಿನ ಪತ್ರಗಳು ಬರುತ್ತಿದ್ದವು. ಅವುಗಳಲ್ಲಿ ಹೆಂಗಳೆಯರ ಪತ್ರಗಳೇ ಹೆಚ್ಚು. ಬರೆದವರು ಬೇರೆಯಾದರೂ ಪತ್ರದೊಳಗಿನ ಧ್ವನಿ ಒಂದೇ ಆಗಿರುತ್ತಿತ್ತು’ ಎಂದು ನಸುನಕ್ಕರು. ಈ ಪತ್ರಗಳನ್ನು ಅವರ ಪತ್ನಿ ಕೋಪದಿಂದ ಸುಟ್ಟುಹಾಕುತ್ತಿದ್ದುದ್ದನ್ನು ಹೇಳಲು ಅವರು ಮರೆಯಲಿಲ್ಲ. ಆ ಪತ್ರಗಳು ಈಗ ಇದ್ದಿದ್ದರೆ ಒಂದು ಪುಸ್ತಕವನ್ನೇ ತರಬಹುದಿತ್ತು ಎನ್ನುವ ಕೊರಗು ಅವರ ಮಾತುಗಳಲ್ಲಿತ್ತು.

‘ಹೋಟೆಲ್‌ ಐಲ್ಯಾಂಡ್‌ನ ಕೊಠಡಿಯಲ್ಲಿದ್ದೆ. ನನಗೆ ವಿಷಲ್‌ ಹಾಕುವ ಅಭಿಮಾನಿಗಳು ಕಡಿಮೆ. ಕನ್ನಡ ಚಿತ್ರಗಳನ್ನು ನೋಡುತ್ತಿದ್ದ ಹೆಂಗಳೆಯರು ಹೆಚ್ಚಿದ್ದರು. ಕೊಠಡಿಯತ್ತ ನನ್ನನ್ನು ಹುಡುಕಿಕೊಂಡು ಬರುತ್ತಿದ್ದ ಅವರನ್ನು ಸಂಭಾಳಿಸಲು ಸೆಕ್ಯುರಿಟಿ ಗಾರ್ಡ್‌ಗೆ ತಲೆನೋವಾಗುತ್ತಿತ್ತು. ಅವರೆಲ್ಲರೂ ರಾಮಕೃಷ್ಣನನ್ನು ನೋಡಲು ಬಂದಿದ್ದಾರೆ. ಒಂದತ್ತು ನಿಮಿಷ ಬಿಟ್ಟುಬಿಡು ಎಂದು ಸೆಕ್ಯುರಿಟಿ ಗಾರ್ಡ್‌ಗೆ ಮ್ಯಾನೇಜರ್‌ ಹೇಳಿದ್ದರು’ ಎಂದು ನೆನಪಿನ ಸುರುಳಿಗೆ ಜಾರಿದರು.

ಹೋಟೆಲ್‌ನ ಹೊರಾಂಗಣದಲ್ಲಿ ನಿಂತಿದ್ದ ಅವರ ಕಾರು ಒಡೆಯನ ಬರುವಿಕೆಗಾಗಿ ಕಾತರಿಸುತ್ತಿತ್ತು. ಜಮೀನಿನಲ್ಲಿ ಪ್ರೀತಿಯಿಂದ ಬೆಳೆಸಿದ್ದ ಗಂಧದ ಮರವೊಂದು ಕಳ್ಳರ ಪಾಲಾಗಿರುವ ಬಗ್ಗೆ ಹೇಳಿದರು. ಅವರ ಮೌನ ಗರಗಸದ ಹಾಗೆ ಹೋಗುತ್ತಲೂ, ಬರುತ್ತಲೂ ಜನರ ಬಗೆಗಿನ ಅವರ ನಂಬಿಕೆಯನ್ನು ಕೊಯ್ಯುತ್ತಲೇ ಇತ್ತು.

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !