ಗುರುವಾರ , ಮೇ 13, 2021
17 °C

ರಿಷಿಯ ಹೊಸ ಅವತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷ ತೆರೆಕಂಡ ಹೇಮಂತ್‌ ‌ರಾವ್‌ ನಿರ್ದೇಶನದ ‘ಕವಲುದಾರಿ’ ಚಿತ್ರದಲ್ಲಿ ನಟ ರಿಷಿ ನಿಭಾಯಿಸಿದ್ದ ‘ಶ್ಯಾಮ್’ ಪಾತ್ರ ಸಿನಿಪ್ರಿಯರ ಮನದಲ್ಲಿ ಅಚ್ಚೊತ್ತಿದೆ. ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ ಬಳಿಕ‌ ಅವರು, ‘ರಾಮನ ಅವತಾರ’ ಮತ್ತು ‘ಸಕಲ ಕಲಾವಲ್ಲಭ’ ಸಿನಿಮಾಗಳಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಈಗ ಪರದೆ ಮೇಲೆ ನೇಕಾರರ ಬದುಕಿನ ಚಿತ್ರಣ ಕಟ್ಟಿಕೊಡಲು ಮುಂದಾಗಿದ್ದಾರೆ.

ಮೋಹನ್ ‌ಸಿಂಗ್ ನಿರ್ದೇಶನದ ಈ ಹೊಸ ಚಿತ್ರಕ್ಕೆ ರಿಷಿ ಅವರೇ ಹೀರೊ. ಗ್ರಾಮೀಣ ಸೊಗಡಿನ ಚಿತ್ರ ಇದು. ‘ಈ ಸಿನಿಮಾ ನೇಕಾರರ ಬದುಕಿನ ಚಿತ್ರಣವನ್ನು ಕಟ್ಟಿಕೊಡಲಿದೆ. ಹಾಗೆಂದು ಇದು ಕಲಾತ್ಮಕ ಚಿತ್ರವಲ್ಲ. ಪಕ್ಕಾ ಕಮರ್ಷಿಯಲ್‌ ಸಿನಿಮಾ. ಲಾಕ್‌ಡೌನ್‌ ಮುಗಿದ ಬಳಿಕ ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ’ ಎಂದು ‘ಪ್ರಜಾ ಪ್ಲಸ್‌’ಗೆ
ಮಾಹಿತಿ ನೀಡಿದರು.

ಲಾಕ್‌ಡೌನ್‌ ಅವಧಿಯಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯುತ್ತಿರುವ ಅವರು, ಸಾಕಷ್ಟು ಹೊಸ ಸ್ಕ್ರಿಪ್ಟ್‌ಗಳನ್ನು ಕೇಳಿದ್ದಾರಂತೆ. ‘ಆದರೆ, ಯಾವುದೂ ನನಗೆ ಒಪ್ಪಿಗೆಯಾಗಿಲ್ಲ’ ಎನ್ನುತ್ತಾರೆ.

‘ನನಗೆ ಸ್ಕೂಲ್, ಕಾಲೇಜು ಶಿಕ್ಷಣ ಮುಗಿಸಿಕೊಂಡ ಬಳಿಕ ಇಷ್ಟೊಂದು ವಿರಾಮ ಸಿಕ್ಕಿರಲಿಲ್ಲ. ನಾನು ಸಿನಿಮಾಗಳನ್ನು ನೋಡುತ್ತಿರಲಿಲ್ಲ. ನೋಡಿರುವ ಸಿನಿಮಾಗಳ ಸಂಖ್ಯೆಯೂ ಕಡಿಮೆ. ಲಾಕ್‌ಡೌನ್‌ ಅವಧಿಯಲ್ಲಿ ಆ ಕೊರತೆ ನೀಗಿಸಿಕೊಂಡೆ. ಸಾಕಷ್ಟು ಚಿತ್ರಗಳನ್ನು ವೀಕ್ಷಿಸಿದೆ. ಇದರಿಂದ ನನ್ನ ಆ್ಯಕ್ಟಿಂಗ್‌ನಲ್ಲಿ ಏನನ್ನು ಅಳವಡಿಸಿಕೊಳ್ಳಬಹುದು ಎಂಬುದು ಅರ್ಥವಾಯಿತು’ ಎಂದು ವಿವರಿಸುತ್ತಾರೆ.

ಜೇಕಬ್‌ ವರ್ಗೀಸ್‌ ನಿರ್ದೇಶನದ ‘ಸಕಲ ಕಲಾವಲ್ಲಭ’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಪೂರ್ಣಗೊಂಡಿದೆ. ಚಿತ್ರದ ಬಿಡುಗಡೆಯ ಪೂರ್ವ ಪ್ರಚಾರ ಹಮ್ಮಿಕೊಳ್ಳಲು ಚಿತ್ರತಂಡ ನಿರ್ಧರಿಸಿದ್ದ ವೇಳೆಯೇ ಕೊರೊನಾ ಭೀತಿ ಕಾಣಿಸಿಕೊಂಡಿತಂತೆ. 

‘ಸಕಲ ಕಲಾವಲ್ಲಭ’ ಚಿತ್ರದ ಬಗ್ಗೆ ರಿಷಿ ವಿವರಿಸುವುದು ಹೀಗೆ: ‘ನನ್ನ ಇಲ್ಲಿಯವರೆಗಿನ ಸಿನಿಮಾಗಳನ್ನು ನೋಡಿದರೆ ಇದು ಮೊದಲ ಮುಖ್ಯವಾಹಿನಿಯ ಮನರಂಜನಾತ್ಮಕ ಸಿನಿಮಾ. ಚಿತ್ರದ ನಾಯಕನದು ರೋಡ್‌ ರೋಮಿಯೊನ ಮನಸ್ಥಿತಿ. ಆದರೆ, ಆತನ ಅಮ್ಮನಿಗೆ ಮಗನನ್ನು ಪೊಲೀಸ್‌ ಅಧಿಕಾರಿಯನ್ನಾಗಿ ಮಾಡುವ ಆಸೆ. ಅಮ್ಮನಿಗೆ ಮೋಸ ಮಾಡುತ್ತಲೇ ಇರುತ್ತಾನೆ’ ಎಂದು ತಮ್ಮ ಪಾತ್ರ ಕುರಿತು ವಿವರಿಸುತ್ತಾರೆ.

ಪ್ರಸ್ತುತ ಕನ್ನಡದಲ್ಲಿ ಪಿಆರ್‌ಕೆ ಪ್ರೊಡಕ್ಷನ್‌ನ ಎರಡು ಸಿನಿಮಾಗಳು ಒಟಿಟಿ ಮೂಲಕ ಬಿಡುಗಡೆಯಾಗುತ್ತಿವೆ. ‘ಸಕಲ ಕಲಾವಲ್ಲಭ’ ಚಿತ್ರತಂಡಕ್ಕೂ ಅಂತಹ ಆಲೋಚನೆ ಇದೆಯೇ ಎನ್ನುವ ಪ್ರಶ್ನೆಗೆ, ‘ಕೊರೊನಾ ಭೀತಿ ಕಾಣಿಸಿಕೊಂಡಾಗ ಅಂತಹ ಆಹ್ವಾನವಿತ್ತು. ನಿರ್ಮಾಪಕರು ಒಪ್ಪಲಿಲ್ಲ. ಥಿಯೇಟರ್‌ ಮೂಲಕವೇ ಬಿಡುಗಡೆಗೆ ನಿರ್ಧರಿಸಿದ್ದಾರೆ’ ಎನ್ನುತ್ತಾರೆ.

ರಿಷಿ ನಟಿಸುತ್ತಿರುವ ಮತ್ತೊಂದು ಚಿತ್ರ ‘ರಾಮನ ಅವತಾರ’ ಶೀರ್ಷಿಕೆಯಿಂದಲೇ ಗಮನ ಸೆಳೆದಿದೆ. ಇದು ನ್ಯೂಏಜ್‌ ಎಂಟರ್‌ಟೈನರ್‌ ಚಿತ್ರವಂತೆ. ಇದರಲ್ಲಿ ರೆಗ್ಯುಲರ್ ಕಮರ್ಷಿಯಲ್‌ ಅಂಶಗಳಿಲ್ಲ. ‘ರಾಮಾಯಣದ ಘಟನೆಗಳು ಮತ್ತು ಈಗಿನ ಸಮಾಜದಲ್ಲಿ ನಡೆಯುವ ಘಟನೆಗಳ ನಡುವೆ ಹೋಲಿಕೆಯಾಗುವ ಅಂಶಗಳ ಮೇಲೆ ಚಿತ್ರಕಥೆ ಸಾಗಲಿದೆ. ಹಾಗಾಗಿ, ಇದಕ್ಕೆ ಈ ಶೀರ್ಷಿಕೆ ಇಡಲಾಗಿದೆ. ಇದರ ಶೇಕಡ 40ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನೂ ನಲವತ್ತು ದಿನಗಳ ಶೂಟಿಂಗ್‌ ಬಾಕಿಯಿದೆ’ ಎಂದು ವಿವರಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು