ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಮೈಸೂರು ಮೃಗಾಲಯಕ್ಕೆ ಭೇಟಿ

ಸುರಕ್ಷತೆ ನೋಡಿ ಥಿಯೇಟರಿಗೆ ಬರಲಿ: ನಟ ಶಿವರಾಜ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸಿನಿಮಾ ಮಂದಿರ ತೆರೆಯಲು ಅನುಮತಿ ನೀಡಿರುವುದು ಖುಷಿಯ ವಿಚಾರ. ಎಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬೇಕು ಎಂಬುದನ್ನು ನಟನಾಗಿ ಹೇಳಲಾರೆ. ಸಿನಿಮಾ ವೀಕ್ಷಿಸಲು ಧೈರ್ಯದಿಂದ, ಸುರಕ್ಷತೆ ಕ್ರಮ ವಹಿಸಿ ಬನ್ನಿ. ಆದರೆ, ಒತ್ತಾಯ ಮಾಡುವುದಿಲ್ಲ’ ಎಂದು ‍ನಟ ಶಿವರಾಜ್‌ ಕುಮಾರ್‌ ಗುರುವಾರ ಇಲ್ಲಿ ಹೇಳಿದರು.

‘ಜನರಲ್ಲಿ ಇನ್ನೂ ಕೋವಿಡ್‌ ಭಯವಿದೆ. ಹೀಗಾಗಿ, ಸಿನಿಮಾ ಮಂದಿರಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮ ಅನುಸರಿಸಬೇಕು. ಪ್ರೇಕ್ಷಕರಿಗೆ ಉತ್ತಮ ವಾತಾವರಣ ಕಲ್ಪಿಸುವುದು ನಮ್ಮ ಹಾಗೂ ನಿರ್ಮಾಪಕರ ಜವಾಬ್ದಾರಿ ಕೂಡ’ ಎಂದರು.

‘ಸಿನಿಮಾ ಬಿಡುಗಡೆ ಬಗ್ಗೆ ನಾನೇನು ಹೇಳಲು ಸಾಧ್ಯವಿಲ್ಲ. ನಿರ್ಮಾಪಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಟನಾಗಿ ಚಿತ್ರೀಕರಣದಲ್ಲಿ ಭಾಗಿಯಾ ಗಬಹುದು, ನಟಿಸಬಹುದು ಅಷ್ಟೆ’ ಎಂದು ತಿಳಿಸಿದರು.

ಶಿವರಾಜ್‌ ಕುಮಾರ್‌ ಅವರು ಗುರುವಾರ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ತಾವು ದತ್ತು ಪಡೆದಿರುವ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಸಂಭ್ರಮಿಸಿದರು. ಪತ್ನಿ ಗೀತಾ, ಇಬ್ಬರು ಮಕ್ಕಳು ಹಾಗೂ ಅಳಿಯನ ಜೊತೆ ಕೆಲಹೊತ್ತು ಮೃಗಾಲಯದಲ್ಲಿ ಸುತ್ತಾಡಿದರು.

‘ಮೃಗಾಲಯವೆಂದರೆ ನನಗೆ ತುಂಬಾ ಇಷ್ಟ. ಬಹಳ ವರ್ಷಗಳ ನಂತರ ಇಲ್ಲಿಗೆ ಬರುತ್ತಿದ್ದೇನೆ. ಕಾಡಿನಲ್ಲಿ ಓಡಾಡಿದ ಅನುಭವ ಆಯಿತು. ಪ್ರಾಣಿಗಳನ್ನು ನೋಡಿದ ತಕ್ಷಣ ಎಂ.ಪಿ.ಶಂಕರ್‌ ನೆನಪಾದರು. ಅಪ್ಪಾಜಿ ಜೊತೆಗಿನ ಗಂಧದ ಗುಡಿ ಸಿನಿಮಾ ನೆನಪಾಯಿತು’ ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದರು.

‘ಪ್ರಾಣಿಗಳ ಆಧಾರಿತ ಸಿನಿಮಾ ಮಾಡಲು ನನಗೂ ಇಷ್ಟ. ಆದರೆ, ಪ್ರಾಣಿಗಳ ಬಳಕೆ ವಿಚಾರದಲ್ಲಿ ಕೆಲವೊಂದು ನಿಯಮ ಇರುವುದರಿಂದ ಸ್ವಲ್ಪ ಕಷ್ಟ. ಗ್ರಾಫಿಕ್ಸ್‌ ಬಳಸಿ ಮಾಡಿ ಎನ್ನುತ್ತಾರೆ. ಈಗಿನ ಕಾಲದ ಮಕ್ಕಳಿಗೆ ಗ್ರಾಫಿಕ್ಸ್ ಎಂಬುದು ಬೇಗನೇ ಗೊತ್ತಾಗುತ್ತದೆ. ಪ್ರಾಣಿಗಳನ್ನು ಬಳಸಲು ಅನುಮತಿ ನೀಡಿದರೆ ಸಿನಿಮಾ ಮಾಡಲು ಸಿದ್ಧ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು