ಬಾಯ್ಸ್ ಸ್ಕೂಲ್‌ನಿಂದ ಗರ್ಲ್ಸ್ ಅಭಿಮಾನದ ಪರಿಧಿಗೆ

7

ಬಾಯ್ಸ್ ಸ್ಕೂಲ್‌ನಿಂದ ಗರ್ಲ್ಸ್ ಅಭಿಮಾನದ ಪರಿಧಿಗೆ

Published:
Updated:
Deccan Herald

‘ನನ್ನೊಳಗೆ ಇರುವುದು ಎರಡು ವ್ಯಕ್ತಿತ್ವ. ಮಾತಾಡುವಾಗ ಎದುರಲ್ಲಿ ಇರುವವರು ಏನಂದುಕೊಳ್ಳುವರೋ ಅಂತ ಯೋಚಿಸು, ಎಂದು ಒಂದು ವ್ಯಕ್ತಿತ್ವ ಹೇಳುತ್ತದೆ. ಇನ್ನೊಂದು, ಇರುವುದೊಂದೇ ಜನ್ಮ, ಮುನ್ನುಗ್ಗು ಎನ್ನುತ್ತೆ. ಸದಾ ನನ್ನೊಳಗಿನ ಈ ಇಬ್ಬರು ಕಾಡುತ್ತಲೇ ಇರುತ್ತಾರೆ’ ಹೀಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ನಟ ವಿಜಯ್ ದೇವರಕೊಂಡ ಈಗ ಅನೇಕ ತರುಣಿಯರ ‘ಕ್ರಶ್’. 

ವಿಜಯ್ ಓದಿದ್ದು ಪುಟ್ಟಪರ್ತಿಯ ಬಾಲಕರ ಶಾಲೆಯಲ್ಲಿ. ಐದನೇ ವಯಸ್ಸಿನಿಂದಲೇ ಕುಟುಂಬ ತೊರೆದು, ಅಲ್ಲಿ ವಸತಿಶಾಲೆ ಸೇರಿದ್ದು. ಶಾಲೆಯಲ್ಲಿ ಶಿಸ್ತಿನ ಬದುಕು. ಟಿ.ವಿ ಇರಲಿಲ್ಲ. ಓದಲು ಸಿಗುತ್ತಿದ್ದುದು ಒಂದೇ ದಿನಪತ್ರಿಕೆ. ಅದರ ಸಿನಿಮಾ ಪುಟಗಳನ್ನು ಸಿಗದಂತೆ ತೆಗೆದುಬಿಡುತ್ತಿದ್ದರು. ವಿಜಯ್ ಬರೆಯುವ ಹವ್ಯಾಸಕ್ಕೆ ಬಿದ್ದದ್ದೇ ಆಗ. ನಾಟಕಗಳನ್ನು ಬರೆದು, ತಿದ್ದಿ ತಿದ್ದಿ ಆ ಪಾತ್ರಗಳನ್ನು ಮನಸ್ಸಿನಲ್ಲೇ ಕಲ್ಪಿಸಿಕೊಂಡು ಒಳಗೊಳಗೇ ನಟನಾಗಿದ್ದುಂಟು. ಆದರೆ, ಈಗ ಆ ನಾಟಕಗಳು ಎಷ್ಟು ಬಾಲಿಶವಾಗಿದ್ದವು ಎನಿಸುತ್ತದಂತೆ.

ಶಾಲೆಯಲ್ಲಿ ತರಲೆ ಮಾಡುವುದೂ ಕಷ್ಟವಿತ್ತು. ಒಮ್ಮೆ ಸ್ನೇಹಿತ ಸಹಪಾಠಿಯನ್ನು ಕಿಚಾಯಿಸಿದ ಎಂಬ ಕಾರಣಕ್ಕೆ ಅವನ ಅಪ್ಪ-ಅಮ್ಮನನ್ನು ಕರೆಸಿಬಿಟ್ಟರು. ಇದನ್ನು ಕಂಡು ವಿಜಯ್ ಗಂಟಲು ಉಬ್ಬಿಬಂದಿತ್ತು.

ಶಾಲೆಯ ಶಿಸ್ತಿನ ಬೇಲಿ ಜಿಗಿದು ಕಾಲೇಜಿಗೆ ಬಂದಾಗ ಹೈದರಾಬಾದ್ ಬಣ್ಣ ಬಣ್ಣವಾಗಿ ಕಾಣತೊಡಗಿತು. ಚೇಷ್ಟೆ ಮಾಡಲು ಮುಕ್ತ ವಾತಾವರಣ. ನಗುವಿಗೆ ಪ್ರಸನ್ನತೆಯ ರುಜು ಹಾಕಲು ಸಹಪಾಠಿಗಳ ಸಾಲಿನಲ್ಲಿ ಹೆಣ್ಣುಮಕ್ಕಳೂ ಇದ್ದರು. ಮೊದ ಮೊದಲು ಬೇರೆಯದೇ ಜಗತ್ತಿಗೆ ಬಂದಂಥ ಅನುಭವ.

‘ಶರ್ಲಾಕ್ ಹೋಮ್’ ಹೆಸರಿನ ನಾಟಕದಲ್ಲಿ ವಿಜಯ್ ಮೊದಲು ಅಭಿನಯಿಸಿದ್ದು. ವಿಶ್ವನಾಥ ಕವಿರಾಜು ಬರೆದಿದ್ದ ‘ದೊಂಗಟಕಾಮು’ ಎಂಬ ತೆಲುಗು ಕೃತಿಯ ರೂಪಾಂತರ ಆ ನಾಟಕ. ಅದರಲ್ಲಿನ ಅಭಿನಯಕ್ಕೆ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕರಷ್ಟೇ ನಟನಾಗಿ ಉಳಿಯುವುದಾಗಿ ವಿಜಯ್ ಮನಸ್ಸಿನಲ್ಲೇ ಅಂದುಕೊಂಡರು. ಸಿಕ್ಕ ಪ್ರತಿಕ್ರಿಯೆ ನಟನಾಗಿ ಇನ್ನಷ್ಟು ದೊಡ್ಡ ಕನಸುಗಳನ್ನು ಕಾಣಲು ಪ್ರೇರಣೆಯಾಯಿತು. ಅಪ್ಪ ದೇವರಕೊಂಡ ಗೋವರ್ಧನ ರಾವ್ ಕೂಡ ರಂಗನಟರೇ.

ಪಾತ್ರಗಳನ್ನು ಹುಡುಕಿಕೊಂಡು ಸ್ಕ್ರೀನ್ ಟೆಸ್ಟ್‌ಗಳಿಗೆ ಹೋಗಲಾರಂಭಿಸಿದ್ದು ಹತ್ತು ವರ್ಷಗಳ ಹಿಂದೆ. ತೆಲುಗಿನ ‘ನವ್ವಿಲ’ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ನಟಿ ಯಾಮಿ ಗೌತಮ್ ಎದುರು ಕ್ರಿಕೆಟರ್ ಆಗಿ ನಟಿಸುವ ಸಣ್ಣ ಅವಕಾಶ ಸಿಕ್ಕಿತು. ನಿರ್ದೇಶಕ ಶೇಖರ್ ಕಮ್ಮುಲ ‘ಲೈಫ್ ಈಸ್ ಬ್ಯುಟಿಫುಲ್’ ಎಂಬ ಚಲನಚಿತ್ರದಲ್ಲಿ ಮತ್ತೊಂದು ಸಣ್ಣ ಪಾತ್ರ ಕೊಟ್ಟರು. ಅವೆರಡೂ ಸಿನಿಮಾಗಳಲ್ಲಿ ವಿಜಯ್ ಅಭಿನಯಿಸಿದ್ದು ಎಷ್ಟೋ ಮಂದಿಗೆ ನೆನಪೇ ಇರಲಿಕ್ಕಿಲ್ಲ.

2015ರಲ್ಲಿ ‘ಎವಡೇ ಸುಬ್ರಹ್ಮಣ್ಯಂ’ ಸಿನಿಮಾದಲ್ಲಿ ನಾನಿ ಜತೆಗೆ ವಿಜಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ಅದರಲ್ಲಿನ ಪಾತ್ರ ಈ ನಟನೊಳಗಿನ ಕಿಚ್ಚು, ಉತ್ಸಾಹವನ್ನು ಅನಾವರಣಗೊಳಿಸಿತು.

‘ಪೆಳ್ಳಿ ಚೂಪುಲು’ ತರುಣ್ ಭಾಸ್ಕರ್ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ. ಅದರಲ್ಲಿ ವಿಜಯ್ ನಾಯಕನಾಗಿ ಕಾಣಿಸಿಕೊಂಡು ಜನಮನ ಗೆದ್ದರು. ಶ್ರೇಷ್ಠ ತೆಲುಗು ಸಿನಿಮಾ ರಾಷ್ಟ್ರ ಪ್ರಶಸ್ತಿ ಕೂಡ ಅದಕ್ಕೆ ಸಂದಿತು. ಆಮೇಲೆ ‘ದ್ವಾರಕ’ ಎಂಬ ಸಿನಿಮಾದಲ್ಲಿ ನಟಿಸಿದ್ದು. ಅದು ಮಕಾಡೆಯಾಯಿತು.

ಕಳೆದ ವರ್ಷ ತೆರೆಕಂಡ ‘ಅರ್ಜುನ್ ರೆಡ್ಡಿ’ ನಟನಾಗಿ ವಿಜಯ್ ಪಾಲಿಗೆ ಲಿಟ್ಮಸ್ ಟೆಸ್ಟ್ ಆಯಿತು. ಅದರಲ್ಲಿ ಗೆದ್ದದ್ದೇ ಅಭಿಮಾನಿ ವೃಂದ ದೊಡ್ಡದಾಯಿತು. ಈಗ ‘ಗೀತ ಗೋವಿಂದಂ’ ತೆಲುಗು ಸಿನಿಮಾದಲ್ಲಿ ಅವರ ನಿಷ್ಕಲ್ಮಶ ನಗುವನ್ನು ಕಣ್ತುಂಬಿಕೊಳ್ಳುತ್ತಿರುವ ತರಳೆಯರ ಸಂಖ್ಯೆ ಇನ್ನೂ ದೊಡ್ಡದಾಗಿದೆ.

ಈಗಲೂ ಎದುರಲ್ಲಿ ಯಾವುದಾದರೂ ಸ್ಕ್ರಿಪ್ಟ್ ಬಂದರೆ, ಅವರೊಳಗಿನ ಎರಡು ವ್ಯಕ್ತಿತ್ವಗಳು ಜಾಗೃತವಾಗುತ್ತವೆಯಂತೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !