ಯಶ್‌ ಬಿಚ್ಚಿಟ್ಟ ’ಕೆಜಿಎಫ್‌‘ ಸತ್ಯಗಳು!

7

ಯಶ್‌ ಬಿಚ್ಚಿಟ್ಟ ’ಕೆಜಿಎಫ್‌‘ ಸತ್ಯಗಳು!

Published:
Updated:

ಮುಂಬೈನ ಕೊಳೆಗೇರಿಯಿಂದ ಕೋಲಾರದ ಚಿನ್ನದಗಣಿಯವರೆಗೆ ಹಬ್ಬಿಕೊಂಡಿರುವ ಕಥೆಯ ಎಳೆ ಹೊಂದಿರುವ ‘ಕೆಜಿಎಫ್‌’ ಸಿನಿಮಾ ಚಿನ್ನದ ಗಣಿಗಿಂತ ಜೋರಾಗಿ ಸದ್ದು ಮಾಡುತ್ತಿದೆ. ಡಿ. 21ಕ್ಕೆ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಕಾರಣಕ್ಕೆ ಇಡೀ ದೇಶದ ಸಿನಿರಸಿಕರು ‘ಚಂದನವನ’ದತ್ತ ಹೊರಳಿ ನೋಡುತ್ತಿದ್ದಾರೆ. ನಾಲ್ಕು ವರ್ಷಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿರುವ ಸಾರ್ಥಕಭಾವದಲ್ಲಿ ಚಿತ್ರತಂಡವಿದೆ. ನಾಲ್ಕು ವರ್ಷದ ಹಿಂದೆ ಮೊಳೆತ ಈ ಚಿನ್ನದ ಕನಸಿನ ಕುರಿತು ನಾಯಕನಟ ಯಶ್ ಮಾತನಾಡಿದ್ದಾರೆ. 

 * ’ಕೆಜಿಎಫ್‌‘ ಇಷ್ಟು ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡುತ್ತದೆ ಎಂದು ಸಿನಿಮಾ ಒಪ್ಪಿಕೊಳ್ಳುವಾಗಲೇ ಅನಿಸಿತ್ತಾ?
ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕಾಗಿಯೇ ಈ ಸಿನಿಮಾ ಮಾಡಿದ್ದು. ನಮ್ಮ ಚಿತ್ರರಂಗದ ಸಾಮರ್ಥ್ಯ ಏನು ಎನ್ನುವುದು ಇಡೀ ಜಗತ್ತಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ಈ ಚಿತ್ರ ಆರಂಭಿಸಿದ್ದು. ನಾಲ್ಕು ವರ್ಷಗಳ ಹಿಂದೆ ಈ ಚಿತ್ರದ ಕುರಿತು ಘೋಷಿಸಿದಾಗ ಎಲ್ಲರಿಗೂ ‘ಏನಪ್ಪ ಇದು‘ ಎಂದು ಅನಿಸಿತ್ತಲ್ವಾ? ಆ ಬಜೆಟ್, ಅಷ್ಟು ದೊಡ್ಡ ಸ್ಕೇಲು ಎಲ್ಲ ಸಾಧ್ಯವಾ ಎಂದೂ ಅನಿಸಿತ್ತಲ್ವಾ? ಆದರೆ ನನಗೆ ನಂಬಿಕೆ ಇತ್ತು. 

ಜನರು ನನ್ನ ಸಿನಿಮಾಗಳನ್ನು ಬ್ಯಾಕ್‌ ಟು ಬ್ಯಾಕ್‌ ಗೆಲ್ಲಿಸಿದ್ದಾರೆ. ಅವರ ಪ್ರೀತಿಗಾಗಿ ಇನ್ನೂ ದೊಡ್ಡಮಟ್ಟದಲ್ಲಿ ಏನಾದರೂ ಮಾಡಬೇಕು ಎಂದು ಅನಿಸುತ್ತಿತ್ತು. ಆ ಸಮಯದಲ್ಲಿಯೇ ಪ್ರಶಾಂತ್‌ ನೀಲ್‌ ಅವರ ಹಿಂದಿನ ಸಿನಿಮಾ ‘ಉಗ್ರಂ‘ ನೋಡಿದೆ. ಇಷ್ಟವಾಯ್ತು. ನನ್ನ ಮತ್ತು ವಿಜಯ ಕಿರಗಂದೂರು ಅವರ ಕಾಂಬಿನೇಷನ್‌ ‘ರಾಮಾಚಾರಿ’ಯಲ್ಲಿಯೇ ಸಫಲವಾಗಿತ್ತು. ಅವರು ಪ್ರಶಾಂತ್‌ ಅವರನ್ನು ಸಂಪರ್ಕಿಸಿ ಕಥೆ ಸಿದ್ಧಮಾಡುವಂತೆ ಹೇಳಿದರು. ಪ್ರಶಾಂತ್‌ ನನ್ನನ್ನು ಮನಸಲ್ಲಿಟ್ಟುಕೊಂಡು ಒಂದು ಕಥೆ ರೂಪಿಸಿದರು. ಅದು ಎಲ್ಲರಿಗೂ ಇಷ್ಟವಾಯ್ತು. ಈ ಸಿನಿಮಾನ ದೊಡ್ಡ ಸ್ಕೇಲ್‌ನಲ್ಲಿ ಮಾಡಬಹುದು ಎಂದು ಅನಿಸಿತು. ಕೆಜಿಎಫ್‌ ಹಾಗೆ ಶುರುವಾಯ್ತು.

ಇದನ್ನೂ ಓದಿ: 2 ಸಾವಿರ ಥಿಯೇಟರ್‌ಗೆ ‘ಕೆಜಿಎಫ್‌’; ಫೇಸ್‌ಬುಕ್‌ ಲೈವ್‌ ಮೇಲೆ ಹದ್ದಿನಕಣ್ಣು

* ’ಕೆಜಿಎಫ್‘ ಕಥೆ ಕೇಳಿದಾಗ ಅದರಲ್ಲಿನ ಯಾವ ಅಂಶಗಳು ನಿಮಗೆ ಇಷ್ಟವಾದವು?
ಚಿತ್ರದ ಪಾತ್ರ ಪೋಷಣೆ, ಕ್ಯಾನ್ವಾಸು ಎಲ್ಲವೂ ಇಷ್ಟವಾಯ್ತು. ಒನ್‌ಲೈನ್‌ ಕೇಳಿದಾಗಲೇ ಇಷ್ಟವಾಗಿತ್ತು. ನಂತರ ಬೆಳೆಯುತ್ತಾ ಹೋಯಿತು. ಈ ಚಿತ್ರದ ವಿನ್ಯಾಸವೇ ತುಂಬ ಭಿನ್ನವಾಗಿದೆ.

* ಒಂದು ಸಿನಿಮಾದ ಜತೆ, ಪಾತ್ರದ ಜತೆಗೆ ಸುಮಾರು ನಾಲ್ಕು ವರ್ಷ ಒಡನಾಡಿದ್ದೀರಿ. ಆ ಅನುಭವ ಹೇಗಿತ್ತು?
ಸಾಧಿಸಲು ಹೊರಟ ವಿಷಯ ತುಂಬ ದೊಡ್ಡದಾಗಿದ್ದರಿಂದ ಎಕ್ಸೈಟ್‌ಮೆಂಟೂ ಅಷ್ಟೇ ದೊಡ್ಡದಾಗಿತ್ತು. ಹಾಗಾಗಿ ಯಾವಾಗಲೂ ನಿರಾಸಕ್ತಿ ಕಾಡಲೇ ಇಲ್ಲ. ಎರಡು ವರ್ಷ ಚಿತ್ರೀಕರಣ ಮಾಡಿದೆವು. ಆದರೆ ಆ ಅವಧಿ ಯಾವತ್ತೂ ದೀರ್ಘ ಅನಿಸಲೇ ಇಲ್ಲ. ಖುಷಿಖುಷಿಯಾಗಿಯೇ ಕಳೆದೆವು. ಇದು ನಾನು ಈವತ್ತಿನವರೆಗೂ ಮಾಡದೇ ಇರುವ ಪಾತ್ರವಾಗಿದ್ದರಿಂದ ಆ ಖುಷಿಯೂ ಜತೆಗಿತ್ತು.

* ಕನ್ನಡ ಬಿಟ್ಟರೆ ಉಳಿದ ಭಾಷೆಗಳ ಪ್ರೇಕ್ಷಕರಿಗೆ ನೀವು ಹೊಸಬರು. ಐದು ಭಾಷೆಗಳಲ್ಲಿ ಬಿಡುಗಡೆ ಮಾಡುವುದು ರಿಸ್ಕ್‌ ಅನಿಸಿಲ್ವಾ?
ಪ್ರತಿ ಸಿನಿಮಾಕ್ಕೂ ಒಂದೊಂದು ಶಕ್ತಿ ಇರುತ್ತದೆ. ಈ ಚಿತ್ರದ ಕಥೆ ಯೂನಿರ್ಸಲ್‌. ಎಲ್ಲಿ ಹೋದರೂ ಮನುಷ್ಯನ ಭಾವನೆಗಳು, ಯೋಚನಾಕ್ರಮಗಳು ಹೆಚ್ಚೂಕಮ್ಮಿ ಒಂದೇ ರೀತಿಯದಾಗಿರುತ್ತವಲ್ವಾ? ಅಲ್ಲದೆ ಈ ಚಿತ್ರದಲ್ಲಿ ಎಲ್ಲ ಬಗೆಯ ಪ್ರೇಕ್ಷಕರಿಗೂ ಇಷ್ಟವಾಗುವ ಅಂಶಗಳಿವೆ. ಥ್ರಿಲ್ಲರ್ ಎಳೆಯೂ ಇದೆ. ಅವೆಲ್ಲವನ್ನೂ ಗಮನಿಸಿಯೇ ನಾವು ಐದು ಭಾಷೆಗಳಲ್ಲಿ ಮಾಡಲು ನಿರ್ಧರಿಸಿದ್ದು. 

* ಬಹುಭಾಷಾ ಸಿನಿಮಾ ಮಾಡುವಾಗ ಒಬ್ಬ ನಟನಾಗಿ ಎದುರಿಸಿದ ಸವಾಲುಗಳೇನು?
ಒಂದೊಂದು ಭಾಷೆಗೆ ಒಂದೊಂದು ರೀತಿ ನಟಿಸಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ಸಾಮ್ಯತೆ ಇದೆ. ಹಿಂದಿಯಲ್ಲಿ ಮಾತ್ರ ಕೊಂಚ ವ್ಯತ್ಯಾಸ ಇರುತ್ತದೆ. ಹಾಗಾಗಿಯೇ ಹಿಂದಿ ಅವತರಣಿಕೆಯಲ್ಲಿ ಒಂದು ಪ್ರತ್ಯೇಕ ಹಾಡು ಮಾಡುತ್ತಿದ್ದೇವೆ. ಅದು ಬಿಟ್ಟರೆ ನಾನು ನಟನೆ ಮಾಡುವಾಗ ಎಷ್ಟು ಭಾಷೆ ಎನ್ನುವುದನ್ನೆಲ್ಲ ಗಮನ ಇಟ್ಟುಕೊಂಡು ನಟಿಸುವುದಕ್ಕಾಗುವುದಿಲ್ಲ. ಒಂದು ಪಾತ್ರ, ಅದರ ಸನ್ನಿವೇಶ, ಅದು ಯಾವ ಭಾವವನ್ನು ಬೇಡುತ್ತಿದೆ ಎನ್ನುವುದನ್ನಷ್ಟೇ ಗಮನ ಇಟ್ಟುಕೊಂಡು ನಟಿಸಿದ್ದೇನೆ. ಆ ಭಾವಗಳು ಭಾಷೆಯಿಂದೇನೂ ವ್ಯತ್ಯಾಸ ಆಗುವುದಿಲ್ಲ. ಮೊದಲು ನಾವು ಕನ್ನಡಕ್ಕೊಂದು ದೊಡ್ಡ ಸಿನಿಮಾ ಮಾಡಬೇಕು ಎಂದೇ ಮಾಡಲು ಹೊರಟಿದ್ದು. ಆದರೆ ಎಲ್ಲ ಭಾಷೆಯ ವೀಕ್ಷಕನೂ ನೋಡುವ ಹಾಗಾಗಬೇಕು ಎಂಬ ಆಲೋಚನೆಯಂತೂ ಇದ್ದೇ ಇತ್ತು. 

ಇದನ್ನೂ ಓದಿ: ಕೆಜಿಎಫ್ ಸಿನಿಮಾದ ಹಾಡನ್ನು ಗುನುಗುವಂತೆ ಮಾಡಿದೆ ಕಿನ್ನಾಳದ ರಾಜ ಸಾಹಿತ್ಯ

* ನಿಮ್ಮೊಳಗಿನ ನಟ ’ಕೆಜಿಎಫ್‘ ಸಿನಿಮಾವನ್ನು, ಅದರ ಪಾತ್ರವನ್ನು ಹೇಗೆ ನೋಡುತ್ತಾನೆ?
ಸಾಕಷ್ಟು ಕಲಿತುಕೊಳ್ಳುವ ಅವಕಾಶ ಸಿಕ್ಕಿದೆ. ತುಂಬ ಕಡೆ ಮಾತು ಕಡಿಮೆ ಇದೆ. ಭಾವನೆಗಳ ಮೂಲಕವೇ ಎಲ್ಲವನ್ನೂ ಅಭಿವ್ಯಕ್ತಿಸುವ ಸವಾಲು ಇತ್ತು. ನಮ್ಮೊಳಗಿನ ನಟನಿಗೆ ಎಷ್ಟು ಸವಾಲುಗಳನ್ನು ಹಾಕುತ್ತೇವೆಯೋ ಅಷ್ಟು ಅವನು ಬೆಳೆಯುತ್ತಾ ಹೋಗುತ್ತಾನೆ. ನಮ್ಮ ಸುತ್ತಲಿನ ಜಗತ್ತನ್ನು, ಬದುಕನ್ನು ಎಲ್ಲವನ್ನೂ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೋ ಅಷ್ಟು ಒಳ್ಳೆಯ ನಟನಾಗುತ್ತ ಹೋಗುತ್ತೇನೆ ಎನ್ನುವುದು ನನ್ನ ನಂಬಿಕೆ. ನಾವು ಬದುಕನ್ನು ಅರ್ಥ ಮಾಡಿಕೊಂಡ ಬಗೆಯನ್ನು ನಮ್ಮ ಪಾತ್ರಗಳ ಮೂಲಕ ಹೇಗೆ ಪ್ರತಿಬಿಂಬಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಪ್ರತಿಭೆ ಮೌಲ್ಯಮಾಪನವಾಗುತ್ತಿರುತ್ತದೆ. ಇವೆಲ್ಲವೂ ನಡೆಯುವುದು ಮನಸಲ್ಲಿ. ಬದುಕಿನಲ್ಲಿ ಪ್ರಬುದ್ಧರಾದರೆ ನಟನಾಗಿಯೂ ಪ್ರಬುದ್ಧರಾಗಿರುತ್ತೇವೆ. 

*ಯಶ್‌ ಬಾಲಿವುಡ್‌ ಎಂಟ್ರಿಗೆ ಕೆಜಿಎಫ್‌ ಅನ್ನು ಮೆಟ್ಟಿಲಾಗಿಸಿಕೊಳ್ಳುತ್ತಿದ್ದಾರಾ?
ನನಗೆ ಆ ರೀತಿಯ ಯೋಚನೆಗಳೇನೂ ಇಲ್ಲ. ಕನ್ನಡದಲ್ಲಿಯೇ ಜನರು ನನ್ನನ್ನು ತುಂಬ ಚೆನ್ನಾಗಿಟ್ಟಿದ್ದಾರೆ. ಜನರು ಕೊಟ್ಟ ಪ್ರೀತಿಯಿಂದಲೇ ನಾನು ಇಷ್ಟು ದೊಡ್ಡ ಕೆಲಸ ಮಾಡಲು ಸಾಧ್ಯವಾಗುತ್ತಿರುವುದು. ನನ್ನ ಚಿತ್ರರಂಗದಿಂದ ಇಂಥದ್ದೊಂದು ಸಿನಿಮಾ ಮಾಡಿದ್ದೇವೆ ಎಂಬ ಹೆಮ್ಮೆ ನನಗೆ ಮುಖ್ಯ. 

ಬಾಲಿವುಡ್‌ಗೆ ಅಥವಾ ಬೇರೆ ಭಾಷೆಗೆ ಎಂಟ್ರಿ ಆಗುವುದು ನನಗೆ ದೊಡ್ಡ ವಿಷಯ ಅಲ್ಲ. ಅದು ಒಂದು ಸಾಧನೆ ಎಂದೂ ನನಗೆ ಅನಿಸುವುದಿಲ್ಲ. ನಟನಾಗಿ ಇಲ್ಲಿ ನಾನು ಪಡುತ್ತಿರುವ ಶ್ರಮವನ್ನು ಎಲ್ಲಿ ಹೋಗಿ ಪಟ್ಟರೂ ನಟನಾಗಿ ನಾನು ಬೆಳೆಯಬಹುದು ಎಂಬ ನಂಬಿಕೆ ಇದೆ. ಬೇರೆ ಚಿತ್ರರಂಗಗಳಿಗೆ ನಾನು ಹೊಸಬ ಇರಬಹುದು; ಆದರೆ ನಟನೆಯ ಕಸುಬಿಗೆ ಹೊಸಬನಲ್ಲ. ಕಸುಬು ಎಲ್ಲಿ ಹೋದರೂ ಒಂದೇ. 

* ಮತ್ಯಾಕೆ ಬೇರೆ ಭಾಷೆಗಳಲ್ಲಿಯೂ ‘ಕೆಜಿಎಫ್‌‘ ನಿರ್ಮಾಣ ಮಾಡಿದಿರಿ?
ವೆರಿ ಸಿಂಪಲ್‌. ಜಾಸ್ತಿ ಪ್ರೇಕ್ಷಕರಿಗೆ ತಲುಪಬೇಕು ಎಂಬ ಕಾರಣಕ್ಕೆ. ಮೂರು ತಿಂಗಳ ಮಾಡಲಿ, ಆರು ತಿಂಗಳ ಮಾಡಲಿ, ಎರಡು ವರ್ಷ ಮಾಡಲಿ, ನಾವು ಸಿನಿಮಾ ಮಾಡುವುದು ಜನರು ನೋಡಲಿ ಎಂದು. ಯಾವಾಗ ಜಾಸ್ತಿ ಜನರು ನೋಡಲು ಸಾಧ್ಯವಾಗುತ್ತದೆಯೋ ಆಗ ನಮ್ಮ ಕೆಲಸಕ್ಕೆ ಹೆಚ್ಚು ಸಾರ್ಥಕ್ಯ ಬರುತ್ತದೆ. ಹೆಚ್ಚು ಜನರಿಗೆ ರಂಜಿಸಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಬೇರೆ ಭಾಷೆಗಳಿಗೆ ಹೋಗಿದ್ದೇ ಹೊರತು ಬೇರೆ ಭಾಷೆಗಳಿಗೆ ಎಂಟ್ರಿ ಕೊಡಬೇಕು ಎಂಬ ಆಸೆ ಖಂಡಿತ ನನಗಿಲ್ಲ. ಹಾಗೊಮ್ಮೆ ಹೆಚ್ಚು ಜನರಿಗೆ ತಲುಪಲು ಸಾಧ್ಯ ಎಂದಾದರೆ, ಹಲವು ಭಾಷೆಗಳಲ್ಲಿ ನಿರ್ಮಾಣ ಆಗಬಹುದು ಎಂದಾದರೆ ಬೇರೆ ಭಾಷಾ ಸಿನಿಮಾಗಳಲ್ಲಿಯೂ ಮಾಡಬಾರದು ಎಂದೇನಿಲ್ಲ. ಅದೇನೇ ಇದ್ದರೂ ನಾನು ಕನ್ನಡದ ನಟ ಎಂದು ಹೇಳಿಕೊಳ್ಳಲಿಕ್ಕೆ ಯಾವಾಗಲೂ ಹೆಮ್ಮೆಪಡುತ್ತೇನೆ. 

* ಬೇರೆ ಭಾಷೆಗಳಲ್ಲಿ ಸ್ಪಂದನ ಹೇಗಿದೆ? 
ಎಲ್ಲ ಕಡೆಗಳಲ್ಲಿಯೂ ನಮ್ಮ ಕೆಲಸಗಳನ್ನು ನೋಡಿ ಕನ್ನಡ ಚಿತ್ರರಂಗದ ಬಗ್ಗೆ ಗೌರವ ಬೆಳೆಸಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಒಳ್ಳೆಯ ಸಿನಿಮಾಗಳು ಆಗುತ್ತವೆ ಎಂಬ ನಂಬಿಕೆ ಬಂದಿದೆ. ಭಾರತದಾದ್ಯಂತ ಎಲ್ಲ ಭಾಷೆಯ ನಿರ್ಮಾಪಕರು, ನಿರ್ದೇಶಕರು, ಸ್ಟಾರ್‌ ನಟರು ಪ್ರಶಂಸಿಸುತ್ತಿದ್ದಾರೆ. ‘ಎಲ್ಲ ಕಡೆಗಳಲ್ಲಿಯೂ ನಿಮ್ಮದೇ ಸುದ್ದಿ ಇದೆ’ ಎಂದು ಹೇಳಿದಾಗ ಖುಷಿಯಾಗುತ್ತದೆ. ನಮ್ಮ ಕೆಲಸವನ್ನು ಗುರ್ತಿಸಿದ್ದಾರಲ್ಲಾ ಎಂದು ಹೆಮ್ಮಯಾಗುತ್ತದೆ. 

* ನಿಮ್ಮ ಸಿನಿಮಾ ತಂಡದ ಬಗ್ಗೆ ಹೇಳಿ. 
ಎಲ್ಲರೂ ಅವರವರ ಕೆಲಸಗಳನ್ನು ಅದ್ಭುತವಾಗಿ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್‌ ನೀಲ್‌, ಛಾಯಾಗ್ರಾಹಕ ಭುವನ್ ಗೌಡ, ಕಲಾನಿರ್ದೇಶಕ ಶಿವಕುಮಾರ್‌, ಸಂಗೀತ ನಿರ್ದೇಶಕ ರವಿ ಬಸ್ರೂರು ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯ ತಂತ್ರಜ್ಞಾನದ ಬಳಕೆ ಆಗುತ್ತಿದೆಯೋ ಅದೇ ಇಲ್ಲಿಯೂ ಬಳಕೆಯಾಗಿದೆ. ಹಾಗಾಗಿಯೇ ಅಷ್ಟು ಸ್ಪೇಷಲ್‌ ಆಗಿ ಕಾಣಿಸುತ್ತಿದೆ. ಅಷ್ಟು ಗುಣಮಟ್ಟದ ಕೆಲಸವನ್ನು ನಮ್ಮಲ್ಲಿ, ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿಯೇ ಕೂತು ಮಾಡಿದ್ದಾರಲ್ಲವೇ? ಅದು ವಿಶೇಷ. 

* ‘ಸಲಾಂ ರಾಖಿ ಭಾಯ್’ ಹಾಡಿನಲ್ಲಿ ಹಿಂದಿ ಬಳಕೆಯೇ ಹೆಚ್ಚಾಗಿದೆ ಎಂಬ ಟೀಕೆಯೂ ಕೇಳಿಬರುತ್ತಿದೆಯಲ್ಲ?
ಇನ್ನೊಬ್ಬರಿಂದ ಕನ್ನಡ ಅಭಿಮಾನವನ್ನು ಕಲಿಯುವಂಥ ಸ್ಥಿತಿ ತಲುಪಿದರೆ ನಾನು ಚಿತ್ರರಂಗದಲ್ಲಿ ಇರುವುದೇ ಇಲ್ಲ. ನನ್ನ ಕನ್ನಡ ಅಭಿಮಾನ ಏನು ಎನ್ನುವುದು ನನಗೆ ಗೊತ್ತಿದೆ. ಜನರಿಗೂ ಗೊತ್ತಿದೆ. ಎಲ್ಲ ವಿಷಯಕ್ಕೂ ಒಂದು ದೃಷ್ಟಿಕೋನ ಎಂದಿರುತ್ತದಲ್ಲ; ಕೆಲವರ ದೃಷ್ಟಿಕೋನದಲ್ಲಿ ಅದು ತಪ್ಪು ಅನಿಸಿರಬಹುದು.

ನಾನು ಒಂದು ಹೆಜ್ಜೆಯಲ್ಲಿ ದಾರಿಯನ್ನು ಅಳೆಯುತ್ತ ಕೂಡುವವನಲ್ಲ. ಗುರಿಯ ಕುರಿತು ಯೋಚಿಸುವವನು. ದಾರಿಯಲ್ಲಿ ಎಲ್ಲ ರೀತಿಯ ಕಲ್ಲು ಮುಳ್ಳುಗಳಿರುತ್ತವೆ; ಎಡವಬಹುದು, ಮುಗ್ಗರಿಸಬಹುದು. ಇವೆಲ್ಲ ಬರುತ್ತದೆ ಎನ್ನುವುದು ನನಗೆ ಗೊತ್ತಿತ್ತು. ಅಂತಿಮವಾಗಿ ಚಿತ್ರ ಬಿಡುಗಡೆಯಾದಾಗ ಜನ ಏನು ಮಾತಾಡುತ್ತಾರೆ, ಯಾಕೆ ಮಾತಾಡುತ್ತಾರೆ ಎಂಬ ಅರಿವೂ ನನಗಿದೆ.

ಇಷ್ಟು ದೊಡ್ಡ ಕೆಲಸ ಮಾಡಿದವರಿಗೆ ಆ ಒಂದು ಹಾಡನ್ನು ಮಾಡುವಾಗ ಸರಿಯೋ ತಪ್ಪೋ ಎಂದು ಯೋಚಿಸದೇ ಮಾಡುವಷ್ಟು ದಡ್ಡರು ನಾವಲ್ಲ. ಎಲ್ಲವನ್ನೂ ಯೋಚಿಸಿಕೊಂಡು, ಗಮನದಲ್ಲಿಟ್ಟುಕೊಂಡೇ ಮಾಡಿರುವುದು. ಈ ಹಾಡಿನಿಂದ ಯಾವುದೇ ಕಾರಣಕ್ಕೂ ನಮ್ಮ ಭಾಷೆಗಾಗಲಿ, ಸ್ವಾಭಿಮಾನಕ್ಕಾಗಲಿ ಧಕ್ಕೆ ಬರುವುದಿಲ್ಲ. ಇನ್ನೂ ಖುಷಿಪಡುವ ಕೆಲಸಗಳು ಆಗಿವೆ. ಸೋ, ಎಲ್ಲವೂ ಟೆನ್ಶನ್‌ ತೆಗೆದುಕೊಳ್ಳದೆ ಆರಾಮಾಗಿ ಹಾಡನ್ನು ಎಂಜಾಯ್‌ ಮಾಡಲಿ.

ಇದನ್ನೂ ಓದಿ: ಕೆಜಿಎಫ್‌ ಆರಂಭಕ್ಕೂ ಮುನ್ನ ಅದರ ಹವಾ ಹೇಗಿತ್ತು ಗೊತ್ತಾ? 

* ಕೆಜಿಎಫ್ ಚಾಪ್ಟರ್ 2 ಕೆಲಸ ಯಾವಾಗ ಶುರುವಾಗುತ್ತದೆ?
ಮೊದಲನೇ ಭಾಗ ಬಿಡುಗಡೆಯಾದ ಸ್ವಲ್ಪ ದಿನಗಳಲ್ಲಿಯೇ ಎರಡನೇ ಭಾಗದ ಕೆಲಸ ಶುರುವಾಗುತ್ತದೆ. ಶೇ 10 ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. 

* ಅದೂ ಐದು ಭಾಷೆಗಳಲ್ಲಿಯೇ ಬರುತ್ತದೆಯೇ? 
ಖಂಡಿತ. ಮೊದಲ ಭಾಗವೇ ಇಷ್ಟು ದೊಡ್ಡ ಮಟ್ಟದಲ್ಲಿ ಆಗಿದೆ ಎಂದರೆ ಎರಡನೇ ಭಾಗ ಇನ್ನು ಹೇಗೆ ಇರಬಹುದು ಯೋಚನೆ ಮಾಡಿ. ಇದು ಆರಂಭವಷ್ಟೇ. ಎರಡನೇ ಭಾಗ ಇನ್ನೊಂದು ಹಂತ ಮೇಲೆಯೇ ಇರುತ್ತದೆ. 


ಶ್ರೀನಿಧಿ ಶೆಟ್ಟಿ

***

ಕೆಜಿಎಫ್‌ ವಿಶೇಷಗಳು
* ಮೊದಲ ಬಾರಿಗೆ ಕನ್ನಡ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. (ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ)

* ಯಶ್‌ ಮತ್ತು ಶ್ರೀನಿಧಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.

* ‘ಜೋಕೆ ನಾನು ಬಳ್ಳಿಯ ಮಿಂಚು’ ಎಂಬ ಹಾಡನ್ನು ಮರುಬಳಕೆ ಮಾಡಿಕೊಳ್ಳಲಾಗಿದ್ದು, ತಮನ್ನಾ ಭಾಟಿಯಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

* ಎಪ್ಪತ್ತು– ಎಂಬತ್ತರ ದಶಕದಲ್ಲಿ ನಡೆಯುವ ಕಥೆ

* ಸುಮಾರು ₹ 60 ಕೋಟಿ ಬಜೆಟ್‌ ಸಿನಿಮಾ

* ಹಿಂದಿ ಅವತರಣಿಕೆಯ ವಿತರಣೆ ಜವಾಬ್ದಾರಿಯನ್ನು ಖ್ಯಾತ ನಟ ಪರ್ಹಾನ್‌ ಅಖ್ತರ್‌, ರಿತೀಶ್‌ ಸಿದ್ವಾನಿ, ಅನಿಲ್‌ ತಡಾನಿ ವಹಿಸಿಕೊಂಡಿದ್ದಾರೆ.

*
ನಮ್ಮ ಸುತ್ತಲಿನ ಜಗತ್ತನ್ನು, ಬದುಕನ್ನು ಎಲ್ಲವನ್ನೂ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೋ ಅಷ್ಟು ಒಳ್ಳೆಯ ನಟನಾಗುತ್ತ ಹೋಗುತ್ತೇನೆ ಎನ್ನುವುದು ನನ್ನ ನಂಬಿಕೆ.
–ನಟ ಯಶ್‌

*
ಕೆಜಿಎಫ್‌ ಮೂಲಕ ನನ್ನ ನಟನಾವೃತ್ತಿಯನ್ನು ಆರಂಭವಾಗುತ್ತಿರುವುದು ನನ್ನ ಅದೃಷ್ಟ ಎಂದೇ ಭಾವಿಸಿದ್ದೇನೆ. ಐದು ಭಾಷೆಗಳ ಪ್ರೇಕ್ಷಕರಿಗೆ ಪರಿಚಿತಳಾಗುತ್ತಿದ್ದೇನೆ. ಇಂಥ ಆರಂಭ ಎಲ್ಲರಿಗೂ ಸಿಗುವುದಿಲ್ಲ. ನಾನು ಒಪ್ಪಿಕೊಳ್ಳುವಾಗ ಇದು ಕನ್ನಡದ ಸಿನಿಮಾ ಮಾತ್ರ ಎಂದೇ ಒಪ್ಪಿಕೊಂಡಿದ್ದು. ನಂತರ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಒಳ್ಳೆಯ ಸಿನಿಮಾಗೆ ಭಾಷೆ ಎಂದೂ ಒಂದು ತಡೆಯಾಗಲಾರದು ಎಂಬುದಕ್ಕೆ ’ಕೆಜಿಎಫ್‘ ಒಂದು ನಿದರ್ಶನ.
– ಶ್ರೀನಿಧಿ ಶೆಟ್ಟಿ, ಕೆಜಿಎಫ್ ಚಿತ್ರದ ನಾಯಕಿ

*
ಕೆಜಿಎಫ್‌ ಸಿನಿಮಾದಲ್ಲಿ ಇಂದು ಎಲ್ಲರೂ ಬಳಸುವ ತಂತ್ರಜ್ಞಾನವನ್ನೇ ಬಳಸಿಕೊಂಡು ಚಿತ್ರೀಕರಿಸಿದ್ದೇವೆ. ಆದರೆ ಸಾಧ್ಯವಾದಷ್ಟೂ ಸಹಜ ಬೆಳಕನ್ನೇ ಬಳಸಿಕೊಂಡು, ಒಂದೊಂದು ದೃಶ್ಯದ ಕುರಿತೂ ಚರ್ಚಿಸಿ ಚಿತ್ರೀಕರಿಸಿದ್ದೇವೆ. ಆದ್ದರಿಂದ ಆ ಚಿತ್ರದ ದೃಶ್ಯಗಳು ಅಷ್ಟು ಶ್ರೀಮಂತವಾಗಿ ಕಾಣಿಸುತ್ತಿವೆ.
–ಭುವನ್ ಗೌಡ, ಕೆಜಿಎಫ್‌ ಛಾಯಾಚಿತ್ರಗ್ರಾಹಕ

ಬರಹ ಇಷ್ಟವಾಯಿತೆ?

 • 54

  Happy
 • 6

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !