ಪರಭಾಷೆ ನಟಿಮಣಿಯರ ಲಗ್ಗೆ

ಸೋಮವಾರ, ಮಾರ್ಚ್ 18, 2019
31 °C

ಪರಭಾಷೆ ನಟಿಮಣಿಯರ ಲಗ್ಗೆ

Published:
Updated:
Prajavani

‌‌ಚಂದನವನದಲ್ಲಿ ಬಾಂಬೆ ಹೀರೊಯಿನ್‌ಗಳಿಗೆ ಕೆಂಪುಹಾಸು ಹಾಕುವ ಪದ್ಧತಿ ಹೊಸದೇನಲ್ಲ. ಹಲವು ನಟಿಮಣಿಯರು ಇಲ್ಲಿಗೆ ಬಂದು ಕುಣಿದು ಹೋಗಿದ್ದಾರೆ. ಆದರೆ, ಕನ್ನಡ ಚಿತ್ರರಂಗದಲ್ಲಿಯೇ ಭದ್ರವಾಗಿ ನೆಲೆಯೂರಿ ಬದುಕು ಕಟ್ಟಿಕೊಂಡವರು ವಿರಳ. ಮತ್ತೆ ಮುಂಬೈ ಸೇರಿದಂತೆ ಹೊರರಾಜ್ಯದ ಬೆಡಗಿಯರಿಗೆ ಮಣೆಹಾಕುವ ಪದ್ಧತಿ ಮರುಕಳಿಸುತ್ತಿದೆ. ಈ ವರ್ಷ ತೆರೆಕಾಣಲು ಸಿದ್ಧವಾಗುತ್ತಿರುವ ಸ್ಟಾರ್‌ ನಟರ ಬಹುತೇಕ ಸಿನಿಮಾಗಳಲ್ಲಿ ಪರಭಾಷೆಯ ನಟಿಯರದ್ದೇ ಕಾರುಬಾರು.

ಕನ್ನಡದಲ್ಲಿಯೂ ಪ್ರತಿಭಾವಂತ ನಟಿಯರು ಇದ್ದಾರೆ. ಆದರೆ, ಅವರತ್ತ ಕೆಲವು ನಿರ್ಮಾಪಕರು ಅಪ್ಪಿತಪ್ಪಿಯೂ ಚಿತ್ತ ಹರಿಸುವುದಿಲ್ಲ. ಸ್ಟಾರ್‌ ನಟರ ಚಿತ್ರಗಳಲ್ಲಿ ಪರಭಾಷಾ ನಟಿಯರಿಗೇ ಅಗ್ರಸ್ಥಾನ. ಈ ನಟಿಯರ ಮೇಲಿನ ಮೋಹಕ್ಕೆ ಕಾರಣವೇನು? ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ.

ನಟ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ನಟಸಾರ್ವಭೌಮ’ ಚಿತ್ರದಲ್ಲಿ ಕೇರಳದ ಅನುಪಮಾ ಪರಮೇಶ್ವರನ್‌ ನಟಿಸಿದ್ದು ಹಳೆಯ ಸುದ್ದಿ. ಪುನೀತ್ ನಟನೆಯ ‘ಯುವರತ್ನ’ ಚಿತ್ರದ ಶೂಟಿಂಗ್‌ ಈಗಾಗಲೇ ಆರಂಭಗೊಂಡಿದೆ. ಮುಂಬೈ ಮೂಲದ ಸಯೇಶ ಸೆಹಗಲ್‌ ಈ ಸಿನಿಮಾದ ನಾಯಕಿ. 

ಈಗಾಗಲೇ, ನಟ ಸುದೀಪ್‌ ನಟನೆಯ ‘ಪೈಲ್ವಾನ್’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಇದರ ನಾಯಕಿ ಆಕಾಂಕ್ಷಾ ಸಿಂಗ್‌. ಹಿಂದಿ ಕಿರುತೆರೆಯಲ್ಲಿ ನಟಿಸಿರುವ ಅವರು ಜೈಪುರದ ಬೆಡಗಿ. ‘ಕೋಟಿಗೊಬ್ಬ 3’ ಚಿತ್ರಕ್ಕೆ ಬಾಲಿವುಡ್‌ನ ಶ್ರದ್ಧಾದಾಸ್‌ ಹೀರೊಯಿನ್ ಆಗಿದ್ದಾರೆ. ನಟ ಗಣೇಶ್‌ ನಟನೆಯ ‘ಗಿಮಿಕ್‌’ ಚಿತ್ರದ ಶೂಟಿಂಗ್‌ ಮುಗಿದಿದೆ. ಈ ಚಿತ್ರಕ್ಕೆ ಪಂಜಾಬಿನ ಬೆಡಗಿ ರೋನಿಕಾ ಸಿಂಗ್‌ ನಾಯಕಿ. ನಟ ಶಿವರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ‘ದ್ರೋಣ’ ಚಿತ್ರದ ನಾಯಕಿ ಇನಿಯಾ. ಅವರ ಮೂಲ ಕೇರಳ.

ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಚಿತ್ರದಲ್ಲಿ ಬಹುಭಾಷಾ ತಾರೆಯರ ದಂಡೇ ಇದೆ. ರಜನೀಕಾಂತ್‌ ನಟನೆಯ ‘ಕಬಾಲಿ’ ಚಿತ್ರದಲ್ಲಿ ಮಿಂಚಿದ್ದ ಸಾಯಿ ಧನ್ಸಿಕಾ ಈ ಚಿತ್ರದ ಹೀರೊಯಿನ್‌. ಅವರು ತಮಿಳುನಾಡಿನವರು. ಇದೇ ಚಿತ್ರದಲ್ಲಿ ಶ್ರದ್ಧಾ ದಾಸ್‌ ಕೂಡ ನಟಿಸಿದ್ದಾರೆ. ನಾಲ್ಕು ಭಾಷೆಯಲ್ಲಿ ಸಿನಿಮಾ ತೆರೆ ಕಾಣುತ್ತದೆ. ಹಾಗಾಗಿ, ಪರಭಾಷೆಯ ನಟ, ನಟಿಯರು ಅನಿವಾರ್ಯ ಎಂಬುದು ನಿರ್ದೇಶಕರ ಅಂಬೋಣ.

ಅಂದಹಾಗೆ ಕನ್ನಡದ ನಟಿಯರು ಪರಭಾಷೆಯಲ್ಲಿ ಛಾಪು ಮೂಡಿಸುವುವಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಅವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಶ್ರದ್ಧಾ ಶ್ರೀನಾಥ್‌ ಗಡಿ ದಾಟಿ ನೆರೆಯ ಭಾಷೆಗಳಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ವಿಚಾರ.

ಎರಡು ವರ್ಷದ ಹಿಂದೆ ‘ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಹದಿಹರೆಯದವರ ಎದೆಯೊಳಗೆ ಕಚಗುಳಿ ಇಟ್ಟಿದ್ದ ರಶ್ಮಿಕಾ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಶ್ರದ್ಧಾ ಶ್ರೀನಾಥ್‌ ತಮಿಳು, ತೆಲುಗು ಚಿತ್ರಗಳಲ್ಲಿ ಬ್ಯುಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !