ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲಿ ನನ್ನ ಪಾಲಿನ ಗುರು: ನಟಿ ಅಮೃತಾ ಅಯ್ಯಂಗಾರ್‌

Last Updated 12 ಮಾರ್ಚ್ 2020, 19:39 IST
ಅಕ್ಷರ ಗಾತ್ರ

‘ನಾನು ರಿಯಲ್‌ ಲೈಫ್‌ನಲ್ಲೂ ಬಜಾರಿಯೇ; ಶಿವಾರ್ಜುನ ಚಿತ್ರದಲ್ಲೂ ಅಂತಹದ್ದೇ ಪಾತ್ರ ಸಿಕ್ಕಿದೆ’

–‘ಶಿವಾರ್ಜುನ’ ಚಿತ್ರದಲ್ಲಿನ ಪಾತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ಅಮೃತಾ ಅಯ್ಯಂಗಾರ್‌ ಹೇಳಿದ್ದು ಹೀಗೆ.

‘ಇದರಲ್ಲಿನ ನನ್ನ ಪಾತ್ರ ‘ಸಂಪತ್ತಿಗೆ ಸವಾಲ್’ ಸಿನಿಮಾದಲ್ಲಿನ ಮಂಜುಳಾ ಅವರ ಕ್ಯಾರೆಕ್ಟರ್‌ ಅನ್ನು ನೆನಪಿಸುತ್ತದೆ. ಅದೇ ರೀತಿಯೇ ಸಂಭಾಷಣೆಯಿದೆ. ಪಾತ್ರಕ್ಕೆ ಹೆಚ್ಚಿನ ತಯಾರಿಯ ಅಗತ್ಯವಿರಲಿಲ್ಲ. ಸ್ವಲ್ಪ ಹೈಡ್ರಾಮಾ ಬೇಕಿತ್ತು. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ’ ಎಂದು ನಕ್ಕರು.

ಅಮೃತಾ ನಟನೆಯ ‘ಪಾಪ್‌ಕಾರ್ನ್ ಮಂಕಿ ಟೈಗರ್‌’, ‘ಲವ್‌ ಮಾಕ್ಟೇಲ್‌’ ಚಿತ್ರಗಳಿಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಅವರ ಖುಷಿ ಇಮ್ಮಡಿಗೊಂಡಿದೆ. ‘ಶಿವಾರ್ಜುನದ ಪಾತ್ರ ಕೂಡ ಜನರಿಗೆ ಇಷ್ಟವಾಗಲಿದೆ. ಇದರಲ್ಲಿ ಕಾಮಿಡಿ ಕಲಾವಿದರ ದೊಡ್ಡ ದಂಡೇ ಇದೆ. ನೋಡುಗರಿಗೆ ಮನರಂಜನೆಯ ದೊಡ್ಡ ಪ್ಯಾಕೇಜ್‌ ಸಿಗಲಿದೆ’ ಎನ್ನುತ್ತಾರೆ ಅವರು.

‘ಮನೆಯಲ್ಲಿ ಕಟ್ಟುನಿಟ್ಟಾಗಿ ಬೆಳೆಸಿರುವ ಹುಡುಗಿ. ಅಪ್ಪನ ಮುಂದೆ ಸೈಲೆಂಟ್‌; ಬೀದಿಗೆ ಬಂದರೆ ವೈಲೆಂಟ್‌ ಆಗಿರುತ್ತಾಳೆ. ಅವಳು ಪ್ರೀತಿಸುವ ಹುಡುಗನೊಟ್ಟಿಗೆ ತುಂಬಾ ಒರಟಾಗಿಯೇ ವರ್ತಿಸುತ್ತಾಳೆ. ಆತನೇ ಅವಳ ಪಾಲಿಗೆ ಸರ್ವಸ್ವ. ಹೇಗಾದರೂ ಮಾಡಿ ಆತನನ್ನು ಪಡೆಯಬೇಕೆಂಬುದು ಅವಳ ಮಹದಾಸೆ. ಯಾರು ಹೇಳುವ ಮಾತನ್ನು ಕೇಳುವುದಿಲ್ಲ; ತನಗೆ ಏನು ಅನಿಸುತ್ತದೆಯೋ ಅದನ್ನೇ ಮಾಡುತ್ತಾಳೆ’ ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸುತ್ತಾರೆ.

ಧನಂಜಯ್‌ ಜೊತೆಗೆ ನಟಿಸಿರುವ ‘ಬಡವ ರಾಸ್ಕಲ್‌’ ಚಿತ್ರದ ಶೂಟಿಂಗ್‌ ಕೂಡ ಮುಕ್ತಾಯದ ಹಂತದಲ್ಲಿದೆ. ಇದರಲ್ಲಿ ಅವರು ಮೇಕಪ್‌ ಇಲ್ಲದೆ ನಟಿಸಿದ್ದಾರಂತೆ. ‘ಪಾಪ್‌ಕಾರ್ನ್‌’, ‘ಲವ್‌ ಮಾಕ್ಟೇಲ್‌’ನಲ್ಲೂ ಮೇಕಪ್‌ ಹಾಕಿರಲಿಲ್ಲವಂತೆ. ಶಿವಾರ್ಜುನದಲ್ಲಿ ಮೇಕಪ್‌ ಹಾಕಿದಾಗ ಕೊಂಚ ಇರುಸುಮುರುಸು ಆಯಿತಂತೆ.

‘ಬಡವ ರಾಸ್ಕಲ್‌ ಚಿತ್ರದ ಛಾಯಾಗ್ರಾಹಕಿ ಪ್ರೀತಾ ಜಯರಾಮನ್. ಅವರಿಗೆ ಬೆಳಕಿನಾಟದ ಬಗ್ಗೆ ಸಾಕಷ್ಟು ಅರಿವಿದೆ. ಹಾಗಾಗಿ, ಮೇಕಪ್‌ ಹಾಕಿಸಿಲ್ಲ. ಇದರಿಂದ ನ್ಯಾಚುರಲ್‌ ಆಗಿ ನಟಿಸಲು ಸಹಕಾರಿಯಾಯಿತು’ ಎನ್ನುತ್ತಾರೆ.

ಈ ಚಿತ್ರದಲ್ಲಿ ಅವರದು ಶಾಸಕನ ಪುತ್ರಿಯ ಪಾತ್ರ. ಧನಂಜಯ್‌ ಮಧ್ಯಮ ವರ್ಗದ ಹುಡುಗ. ಇಬ್ಬರ ಪಾತ್ರಗಳು ಚೆನ್ನಾಗಿ ಮೂಡಿಬಂದಿವೆಯಂತೆ. ಲೈಟಿಂಗ್‌, ಡೈಲಾಗ್‌ ಇದರ ಜೀವಾಳವಂತೆ.

ಧನಂಜಯ್‌ ಜೊತೆಗೆ ಕೆಲಸ ಮಾಡುವುದಕ್ಕೆ ಮೊದಲಿಗೆ ಅವರಿಗೆ ಭಯವಾಗುತ್ತಿತ್ತಂತೆ. ಅವರು ಹೊಸಬರಿಗೆ ನೀಡುವ ಗೌರವ ಕಂಡು ಖುಷಿಯಾಯಿತಂತೆ. ಅವರಿಂದ ಜೀವನದ ಪಾಠ ಕಲಿತಿದ್ದಾರಂತೆ. ಹಾಗಾಗಿ, ‘ಡಾಲಿ’ಯೇ ಅವರ ಗುರುವಂತೆ.

‘ಟಗರು ಚಿತ್ರದಲ್ಲಿನ ‘ಡಾಲಿ’ ಪಾತ್ರಕ್ಕೆ ಮನಸೋತಿದ್ದೆ. ಅವರ ಕಣ್ಣುಗಳು ತುಂಬಾ‍ಪವರ್‌ಫುಲ್‌. ಅವುಗಳನ್ನು ಎದುರಿಸಲು ತುಂಬಾ ಭಯವಾಗುತ್ತಿತ್ತು. ಹೊಸಬರೊಟ್ಟಿಗೆ ಅವರು ನಡೆದುಕೊಳ್ಳುವ ರೀತಿ ಎಲ್ಲರಿಗೂ ಬರುವುದಿಲ್ಲ. ಹೊಸಬರ ಎಂದಾಕ್ಷಣ ನಿರ್ಲಕ್ಷಿಸುವುದೇ ಹೆಚ್ಚು. ಗೌರವ ಕೊಡುವುದು ಅಪರೂಪ. ಶ್ರೀಮಂತಿಕೆಯ ಹಿನ್ನೆಲೆಯಿಂದ ಬಂದವರಿಗೆ ಅಂತಹ ಪರಿಸ್ಥಿತಿ ಎದುರಾಗುವುದಿಲ್ಲ. ಸಾಮಾನ್ಯ ಕುಟುಂಬದ ಹುಡುಗಿಯರ ಪಾಡು ಹೇಳತೀರದು. ಆದರೆ, ಎಂದಿಗೂ ಅವರು ನನ್ನನ್ನು ಹೊಸಬಳಂತೆ ಕಾಣಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ.

ಅಂದಹಾಗೆ ಶೀತಲ್‌ ಶೆಟ್ಟಿ ನಿರ್ದೇಶನದ ನಿರೂಪ್‌ ಭಂಡಾರಿ ಅವರ ಹೊಸ ಚಿತ್ರಕ್ಕೂ ಅಮೃತಾ ಅವರೇ ನಾಯಕಿ. ಇದರಲ್ಲಿ ಅವರದ್ದು ಸ್ವತಂತ್ರವಾಗಿ ಬದುಕುವುದನ್ನು ಇಷ್ಟಪಡುವ ಹುಡುಗಿಯ ಪಾತ್ರ. ಇದರ ಶೂಟಿಂಗ್‌ ಮತ್ತು ಡಬ್ಬಿಂಗ್‌ ಮುಗಿದಿದೆಯಂತೆ. ಇನ್ನೂ ಟೈಟಲ್‌ ಅಂತಿಮಗೊಂಡಿಲ್ಲ. ‘ಓ’ ಎಂಬ ಹಾರರ್‌ ಸಿನಿಮಾದಲ್ಲೂ ನಟಿಸಿದ್ದಾರೆ. ಇದು ಇನ್ನೂ ತೆರೆಕಾಣಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT